ಶುಕ್ರವಾರ, ಜನವರಿ 17, 2020
20 °C

ಸೊಬಗು-ಬೆಡಗಿನ ಆಭರಣಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಭರಣ ಕೇವಲ ಆಭರಣವಷ್ಟೇ ಅಲ್ಲ. ಅದು ಸಂಸ್ಕೃತಿಯ ಲಾಂಛನ. ಚಿನ್ನ ಧರಿಸುವುದು ನಮ್ಮ ಸಂಸ್ಕೃತಿಯ ಒಂದು ಭಾಗ ಕೂಡ ಹೌದು. ಹಾಗೆಯೇ ಹೆಣ್ಣಿಗೂ ಆಭರಣಕ್ಕೂ ಅವಿನಾಭಾವ ಸಂಬಂಧವಿದೆ. ಹೆಣ್ಣಿನ ಭಾವನೆಗಳನ್ನು ಜೀವಂತವಾಗಿರಿಸುವ ನೆನಪುಗಳ ರಾಯಭಾರಿ.

ತಮ್ಮ ವಿಭಿನ್ನ ವಿನ್ಯಾಸ ಶೈಲಿಯಿಂದಲೇ ಖ್ಯಾತಿಗಳಿಸಿರುವ ವಿನ್ಯಾಸಕಿ ಆಶಾ ಕಮಲ್ ಮೋದಿ ದೇಶದ ಪ್ರಖ್ಯಾತ ಆಭರಣ ವಿನ್ಯಾಸಕರಲ್ಲಿ ಒಬ್ಬರು. ಆಶಾ ಅವರ ಕೈಗೆ ಸಿಕ್ಕ ಚಿನ್ನ, ಬೆಳ್ಳಿ, ರತ್ನ ಹಾಗೂ ಹವಳಗಳು ಆಕರ್ಷಕ ವಿನ್ಯಾಸದಲ್ಲಿ ಮೈದಳೆಯುತ್ತವೆ. ಇವರು ಬಾಲಿವುಡ್ ಚಿತ್ರ ದೇವದಾಸ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಜ್ಯುವೆಲರಿ ಡಿಸೈನ್ ಮಾಡಿಕೊಟ್ಟಿದ್ದಾರೆ.

ಆಶಾ ವಿನ್ಯಾಸಗೊಳಿಸಿರುವ ಅಪರೂಪದ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಈಗ ನಗರದಲ್ಲಿ ಜ.29ರ ವರೆಗೆ ನಡೆಯಲಿದೆ. ಪ್ರದರ್ಶನದ ಹೆಸರು `ಎಥರ್ನಲ್ ಬೈ ಆಶಾ~. ಅಂದಹಾಗೆ ನಟಿ ಜೂಹಿ ಚಾವ್ಲಾ ಇವರ ಆಭರಣಗಳಿಗೆ ರಾಯಭಾರಿ.

ಹೆಣ್ಣಿನೊಳಗೆ ಚೆಲುವು ಸಹಜವಾಗಿಯೇ ಮಿಳಿತಗೊಂಡಿರುತ್ತದೆ. ಆಭರಣಗಳನ್ನು ಧರಿಸಿದಾಗ ಹೆಣ್ಣಿನ ಸಹಜ ಚೆಲುವು ಇಮ್ಮಡಿಗೊಳ್ಳುತ್ತದೆ. ಇಲ್ಲಿರುವ ನೆಕ್ಲೆಸ್‌ಗಳು, ಉದ್ದನೆಯ ಕಿವಿಯೋಲೆ, ಬ್ರಾಸ್ಲೆಟ್ಸ್, ಬಜುಬಂಧ್ಸ್ ನಯನ ಮನೋಹರವಾಗಿವೆ. ಮನಸೂರೆಗೊಳ್ಳುವ ಇವರ ಆಭರಣ ವಿನ್ಯಾಸಕ್ಕೆ ಪ್ರಿನ್ಸೆಸ್ ಡಯಾನಾ ಹಾಗೂ ಗಾಯತ್ರಿದೇವಿ ಕೂಡ ಮನಸೋತಿದ್ದರಂತೆ. ಜತೆಗೆ ಈ ಆಭರಣಗಳು ನಟಿಯರಾದ ಮಾಧುರಿ ದೀಕ್ಷಿತ್, ರಾಣಿ ಮುಖರ್ಜಿ ಮತ್ತು ಐಶ್ವರ್ಯ ರೈ ಅವರ ಮನಕದ್ದಿವೆಯಂತೆ.

`ಸಂಸ್ಕೃತಿ ಎಂದರೇ ಹಿರಿಯರ ರೂಢಿ-ಸಂಪ್ರದಾಯಗಳನ್ನು ಕಿರಿಯರು ಮುಂದುವರಿಸಿಕೊಂಡು ಬರುವುದು. ಹಿರಿಯರು ಹಾಕುತ್ತಿದ್ದ ಆಕರ್ಷಕ ಶೈಲಿಯ, ವಿಭಿನ್ನ ಕುಸುರಿಯುಳ್ಳ ಆಭರಣಗಳು ಕಾಲಾಂತರದಲ್ಲಿ ಕಿರಿಯರಿಗೆ ದೊರೆಯುತ್ತವೆ. ಆಭರಣಗಳು ನಮ್ಮ ಅವಿಸ್ಮರಣೀಯ ನೆನಪುಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವುದು ಹೀಗೆ~ ಎನ್ನುತ್ತಾರೆ ಆಶಾ.

ದೇಸಿ ಸೊಗಡು ಹಾಗೂ ಅಂತರರಾಷ್ಟ್ರೀಯತೆಯ ಸೊಬಗು ಎರಡನ್ನು ಮಿಳಿತಗೊಳಿಸಿ ವಿನ್ಯಾಸಗೊಳಿಸಿರುವ ಈ ಆಭರಣಗಳು ಹಬ್ಬ, ಮದುವೆಯಂತಹ ಶುಭ ಸಮಾರಂಭದಲ್ಲಿ ಧರಿಸಲು ಹೇಳಿ ಮಾಡಿಸಿದಂತಿವೆ. ಸಮಕಾಲೀನ ವಿನ್ಯಾಸದಲ್ಲಿ ಮೈದಳೆದಿರುವ ಈ ಆಭರಣಗಳನ್ನು ಉದ್ಯೋಗಸ್ಥ ಮಹಿಳೆಯರು ಧರಿಸಿದರೆ ವ್ಯಕ್ತಿತ್ವಕ್ಕೆ ಹೊಸ ಮೆರುಗು ಬರುತ್ತದೆ.

ಸ್ಥಳ: ರೈನ್‌ಟ್ರೀ, ಹೈ ಗ್ರೌಂಡ್ಸ್, 4 ಸ್ಯಾಂಕಿ ರಸ್ತೆ, ಹೋಟೆಲ್ ವಿಂಡ್ಸರ್ ಮ್ಯಾನರ್ ಎದುರು. ಬೆಳಿಗ್ಗೆ 11ರಿಂದ ರಾತ್ರಿ 8.

ಪ್ರತಿಕ್ರಿಯಿಸಿ (+)