ಮಂಗಳವಾರ, ಮೇ 17, 2022
27 °C

ಸೋನಿಯಾ, ಮಿಶ್ರಾ ಪ್ರತಿಕೃತಿ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋನಿಯಾ, ಮಿಶ್ರಾ ಪ್ರತಿಕೃತಿ ದಹನ

ದೊಡ್ಡಬಳ್ಳಾಪುರ: ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆಯನ್ನು ವಿರೋಧಿಸಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಹಾಗೂ ಸೋನಿಯಾ ಗಾಂಧಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು, ರಾಷ್ಟ್ರೀಯ ಸಂಚಾಲಕ ಈಶ್ವರ್ ವಿಶ್ವಕರ್ಮ ಕಾಂಗ್ರೆಸ್ ನೇತೃತ್ವದ `ಯುಪಿಎ ಸರ್ಕಾರ ಜಾರಿಗೆ ತರಲು ಹೊರಟಿರುವ ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆ ಅಲ್ಪ ಸಂಖ್ಯಾತರನ್ನು ಓಲೈಸಲು ಮಾಡಿರುವ ತಂತ್ರವಾಗಿದೆ~.`ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಹಿಂದುಳಿದವರಿಗೆ ಹಾಗೂ ದಲಿತರಿಗೆ ನೀಡಲಾಗಿರುವ ಮೀಸಲಾತಿಯನ್ನು ಕಿತ್ತುಕೊಂಡು ಅಲ್ಪ ಸಂಖ್ಯಾತರಿಗೆ ನೀಡುವ ಹುನ್ನಾರ ಅಡಗಿದೆ. ಭಾರತವನ್ನು ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಹೊರಟಿರುವ ಸೋನಿಯಾ ಗಾಂಧಿ, ಈ ದೇಶದ ಪೌರತ್ವ ಸ್ವೀಕರಿಸಲು 14 ವರ್ಷ ತೆಗೆದುಕೊಂಡಿದ್ದನ್ನು ಇಲ್ಲಿ ನೆನಯಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹಲವು ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲಿಗೆ ಪೂರಕವಾಗಿ, ಅಲ್ಪ ಸಂಖ್ಯಾತರ ಮತಗಳನ್ನು ಪಡೆಯುವ ಉದ್ದೆೀಶದಿಂದ ಮತ ಬ್ಯಾಂಕ್‌ಗಾಗಿ ಹಿಂದು ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ. ಇದು ಕಾಂಗ್ರೆಸ್‌ನ ಹಿಂದು ವಿರೋಧಿ ಕ್ರಮಕ್ಕೆ ಮತ್ತೊಂದು ನಿದರ್ಶನವಾಗಿದೆ~.`ವಿಧೇಯಕದಲ್ಲಿ ಹಲವು ವಿಷಯಗಳು ವಿವಾದಾಸ್ಪದವಾಗಿವೆ. ಇದರಿಂದ ಕೋಮು ಸೌಹಾರ್ದಕ್ಕೆ ದಕ್ಕೆಯಾಗುತ್ತದೆ. ಭಾರತದ ಸಂವಿಧಾನದಲ್ಲಿ ಹೇಳಲಾದ ರಾಷ್ಟ್ರೀಯ ಭಾಕ್ಯತೆ ಮತ್ತು ಭ್ರಾತೃತ್ವವನ್ನು ನಾಶ ಮಾಡುವುದು ಈ ಮಸೂದೆಯ ಉದ್ದೆೀಶವಾಗಿದೆ. ದೇಶ ವಿಭಜನೆಯ ಕಾಲದಲ್ಲಿ ಭಾರತ ಬಿಟ್ಟು  ಹೋದವರಿಗೆ ಮರಳಿ ಆಸ್ತಿ ಕೊಡುವ ಪ್ರಸ್ತಾವನೆಯನ್ನು ಕೈ ಬಿಡಬೇಕು ಹಾಗೂ ದಲಿತ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಡಿತಗೊಳಿಸಿ ಅಲ್ಪ ಸಂಖ್ಯಾತರಿಗೆ ಹೆಚ್ಚಿನ ಮೀಸಲಾತಿ ನೀಡುವಂತೆ ಮಂಡಿಸಿರುವ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ವರದಿಯನ್ನು ತಿರಸ್ಕರಿಸಬೇಕು. ಇದನ್ನು ಈಗಲೇ ವಿರೋಧಿಸದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಅಧಿವೇಶನದಲ್ಲಿ ಯಾವ ಕಾರಣಕ್ಕೂ ಮಸೂದೆ ಮಂಡನೆಯಾಗದಂತೆ ತಡೆಯಬೇಕಿದೆ~ ಎಂದರು.ಪ್ರತಿಭಟನೆಯಲ್ಲಿ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಚನ್ನಿಗರಾಯಪ್ಪ, ತಾಲ್ಲೂಕು ಸಮಿತಿಯ ಬಾಲಕೃಷ್ಣನಾಯಕ್, ನಾರಾಯಣಸ್ವಾಮಿ, ಸರೋಜಮ್ಮ ಮುಂತಾದವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.