ಶನಿವಾರ, ಜನವರಿ 18, 2020
19 °C

ಸೌಲಭ್ಯಕ್ಕಾಗಿ ಕಾದಿರುವ ರಮ್ಯ ಪ್ರವಾಸಿ ತಾಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ: ತಾಲ್ಲೂಕಿನಲ್ಲಿ ವಿಶ್ವಪರಂಪರೆಯ ಶಿಲ್ಪಕಲೆ ಖ್ಯಾತಿಯ ಪ್ರವಾಸಿ ತಾಣ ಐಹೊಳೆ ಮತ್ತು ಲಕ್ಷಾಂತರ ಭಕ್ತರ ಸಂಗಮ ಸುಕ್ಷೇತ್ರ ಕೂಡಲಸಂಗಮ ಸ್ಥಳಗಳನ್ನು ಹೊರತುಪಡಿಸಿ ಇನ್ನೂ ಕೆಲವು ಚಿಕ್ಕ ಪ್ರವಾಸಿ ಸ್ಥಳಗಳಿವೆ ಎಂದರೆ ಒಂದು ಕ್ಷಣ ಆಶ್ಚರ್ಯವಾಗಬಹುದು. ಆದರೆ ಅವುಗಳಿಗೆ ಹೋಗಲು ಉತ್ತಮ ರಸ್ತೆ, ಸಾಕಷ್ಟು ಸಂಪರ್ಕ ಸಾಧನಗಳ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಹಾಗಾದಲ್ಲಿ ನಿತ್ಯ ಸಾವಿರಾರು ಜನರು ಅಲ್ಲಿಗೆ ಹೋಗಬಹುದು. ಆದರೆ ಈ ನಿಟ್ಟಿನಲ್ಲಿ ಕಿಂಚಿತ್ ಪ್ರಯತ್ನ ನಡೆದಿಲ್ಲ ಎಂಬುದು ಬೇಸರದ ಸಂಗತಿ.ಹುನಗುಂದದಿಂದ ಅಮೀನಗಡ ಮಾರ್ಗವಾಗಿ 10 ಕಿ.ಮೀ. ಹೋದರೆ ಕೆಲೂರ ಸಮೀಪದ ಗುಡ್ಡಬೆಟ್ಟಗಳ ಸಾಲಿನಲ್ಲಿ ಜನಪ್ರಪಂಚದ ಗೌಜುಗದ್ದಲವಿಲ್ಲದ ರಮ್ಯಸ್ಥಳ ಸಿದ್ಧನಕೊಳ್ಳ. ಸುತ್ತಲೂ ಕಾಡು, ಹಕ್ಕಿಗಳ ಕಲರವ, ಹಸಿರು ತುಂಬಿದ ದೊಡ್ಡ ಕೊಳ್ಳದ ಪ್ರಶಾಂತ ಸ್ಥಳ. ಸಿದ್ಧೇಶ್ವರನ ಗುಡಿ. ಸದಾ ಜಿನುಗುವ ಇಲ್ಲಿನ ಜರಿ ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತದ ಸ್ವರೂಪ ಪಡೆಯುತ್ತದೆ. ಈ ಸಂದರ್ಭದಲ್ಲಿ ಜನರ ಆಗಮನ, ಅವರು ಪಡುವ ಖುಷಿ, ಅದನ್ನು ನೋಡಬೇಕಷ್ಟೇ. ಇಂತಹ ರಮ್ಯಸ್ಥಳಕ್ಕೆ ಬರಲು ಸರಿಯಾದ ರಸ್ತೆ ಮತ್ತು ಸಂಪರ್ಕ ವ್ಯವಸ್ಥೆಯಿಲ್ಲದಿರುವುದು ಖೇದದ ಸಂಗತಿ.ಅದರಂತೆ ತಾಲ್ಲೂಕಿನ ಇನ್ನೊಂದು ರಮ್ಯ ಹಾಗೂ ಅಪ್ಪಟ ಮಲೆನಾಡ ನೆನಪನ್ನು ತರುವ ಸ್ಥಳ ದಮ್ಮೂರು ಕಿರು ಜಲಪಾತ. ಹುನಗುಂದ ಕಡೆಯಿಂದ ನಾಗೂರ ಮಾರ್ಗವಾಗಿ ಹೊರಟು ನಾಲ್ಕಾರು ಕಿ.ಮೀ. ಹೋದರೆ ದಮ್ಮೂರು ಊರಾಚೆ ಅನತಿ ದೂರದಲ್ಲಿ ದಟ್ಟ ಕಾಡು. ಗುಡ್ಡದ ಮೇಲೆ ನಿಂತು ಕಣ್ಣುಹಾಯಿಸಿದರೆ ಮನಮೋಹಕ ಹಸಿರು ಕಣ್ಣು ತುಂಬುತ್ತದೆ. ಮಳೆ ಬಂದಾಗ ಇಲ್ಲಿನ ಕಲ್ಲುಗಳ ಸಂದಿಯಿಂದ ಬೀಳುವ ಜಲಪಾತ ನೋಡುವುದೇ ಹಬ್ಬ. ಕೆಲವು ಗಾವುದ ನಡೆದು ಹೋಗಿ ಜಲಪಾತಕ್ಕೆ ಮೈಕೊಟ್ಟರೆ ಅದರ ಮಜವೇ ಬೇರೆ.ರಾಷ್ಟ್ರೀಯ ಹೆದ್ದಾರಿಯ ಬೆಳಗಲ್ಲ ಕ್ರಾಸಿನಿಂದ ಒಂದು ಕಿ.ಮೀ. ಕಾಲು ದಾರಿಯ ತೀರ್ಥಗುಡಿ ಮಲಪ್ರಭೆ ನದಿಗೆ ಹೊಂದಿಕೊಂಡ ಶಾಂತ ಸ್ಥಳ. ಯಾವುದೇ ನಾಗರಿಕ ಜಗತ್ತಿನ ಸ್ಪರ್ಶ ಅದಕ್ಕಿಲ್ಲ. ಇಲ್ಲಿ ಸರಿಯಾದ ಸರ್ವಋತು ರಸ್ತೆಯಾಗಬೇಕು. ಅದರಂತೆ ಇದೇ ಹೆದ್ದಾರಿಯ ಇಲಕಲ್ಲ ಆಚೆ ಐದಾರು ಕಿಮೀ ದೂರದಲ್ಲಿ ಕೊಡಗಲಿ ಗವಿ ಬೃಹತ್ ಕಲ್ಲು ಬಂಡೆಗಳ ಗುಡ್ಡದಲ್ಲಿ ಕಂಗೊಳಿಸುವ ಸ್ಥಳ. ಊರಗದ್ದಲದಿಂದ ದೂರಯಿರುವ ಈ ಜಾಗಗಳಲ್ಲಿದ್ದು ಹೊತ್ತು ಕಳೆಯುವುದು ಒಂದು ವಿಶಿಷ್ಟ ಅನುಭವ.`ತಾಲ್ಲೂಕಿನ ಶಾಲಾ-ಕಾಲೇಜು ಮಕ್ಕಳ ಒಂದು ದಿನದ ಪಿಕ್‌ನಿಕ್ ಸುಂದರ ತಾಣಗಳಾದ ಈ ನಾಲ್ಕು ಸ್ಥಳಗಳಿಗೆ ರಸ್ತೆಗಳಿದ್ದರೂ ಅವು ಚೆನ್ನಾಗಿರಬೇಕು. ಮುಖ್ಯವಾಗಿ ಸಾಕಷ್ಟು ಸಂಪರ್ಕ ವ್ಯವಸ್ಥೆಯಾಗಬೇಕು. ಯಾವುದೇ ನಾಗರಿಕ ಗೌಜು ಗದ್ದಲ ಮತ್ತು ಮೋಜಿನ ಪಾರ್ಟಿಗಳು ನಡೆಯದಂತೆ ಎಚ್ಚರ ವಹಿಸಬೇಕು.

 

ಆಧುನಿಕತೆ ನುಸಳಿ ನೈಸರ್ಗಿಕ ರಮ್ಯತೆ ಹಾಳಾಗಬಾರದು. ಕೊಡಗಲಿ ಗವಿ ಸುತ್ತ ನಡೆದ ಗಣಿ ಸ್ಫೋಟ ತಡೆದು ಕ್ಷೇತ್ರ ರಕ್ಷಣೆಯ ಕಾರ್ಯಕ್ಕೆ ಇಂಬು ಸಿಗಬೇಕು~ ಎಂದು ಪತ್ರಕರ್ತ ಬಸವರಾಜ ಕಮ್ಮಾರ, ಛಾಯಾಗ್ರಾಹಕ ಶ್ರೀಶೈಲ ಹೊಸಮನಿ, ಕಲಾವಿದ ಕಾಸಿಂ ಕನಸಾವಿ ಮತ್ತು ಉದ್ಯಮಿ ಪ್ರಫುಲ್ ಪಟೇಲ್ ಅಭಿಪ್ರಾಯಪಡುತ್ತಾರೆ.

ಪ್ರತಿಕ್ರಿಯಿಸಿ (+)