ಶುಕ್ರವಾರ, ಜುಲೈ 30, 2021
28 °C

ಸೌಲಭ್ಯಕ್ಕೆ ಹೋರಾಡುವ ದುಃಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂಡ್ಲಿಗಿ: ದೇಶದಲ್ಲಿ ಪ್ರಥಮ ದರ್ಜೆ ನಾಗರಿಕನ ಸ್ಥಾನಮಾನ ಪಡೆಯಬೇಕಾದ ರೈತನ ಸ್ಥಿತಿ ಹೋರಾಟ ಮಾಡಿ ಸೌಲಭ್ಯಗಳನ್ನು ಪಡೆಯುವ ದುಃಸ್ಥಿತಿ ತಲುಪಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಹನುಮನಗೌಡ ಆಕ್ರೋಶ ವ್ಯಕ್ತಪಡಿಸಿದರು.ಅವರು ಸೋಮವಾರ ತಾಲ್ಲೂಕಿನ ಗುಡೇಕೋಟೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕಗಳ ಆಶ್ರಯದಲ್ಲಿ ಏರ್ಪಡಿಸಿದ್ದ  ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.ರೈತರು ದೇಶದ ಬೆನ್ನೆಲುಬು, ಅನ್ನದಾತರು ಎನಿಸಿಕೊಂಡಿದ್ದು, ಆತನ ತುತ್ತಿಗೇ ಸಂಚಕಾರ ಬಂದಿರುವುದು ವಿಷಾದನೀಯ ಎಂದರು. ಶೋಚನೀಯ ಸ್ಥಿತಿಗೆ ತಲುಪಿರುವ ರೈತರ ಉದ್ಧಾರಕ್ಕೆ ಯಾರೂ ಪ್ರಯತ್ನಿಸದಿರುವುದು ಖಂಡನೀಯ ಎಂದರು. ಯಾವಾಗಲೂ ಕೈಕೊಡುವ ವಿದ್ಯುತ್ ಸಮಸ್ಯೆಯಲ್ಲಿ ರೈತರು ದುಡಿಯುವುದಾದರೂ ಹೇಗೆ  ಅವರು ಪ್ರಶ್ನಿಸಿದರು.ಬಗರ್ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ಮಾಡಿಸಿಕೊಡದಿರುವುದು ಅನ್ಯಾಯ ಎಂದು ಖಂಡಿಸಿದರು. ರೈತರಿಗೆ ಹೋರಾಟವೊಂದೇ ಮಾರ್ಗವಾಗಿದ್ದು, ಹೋರಾಟ ನಡೆಸಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.ವಿಧಾನಸಭೆಯ ಯಾವೊಬ್ಬ ಶಾಸಕರೂ ಬಗರ್ ಹುಕುಂ ಸಮಸ್ಯೆ ಕುರಿತು ದನಿಯೆತ್ತದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಲಕ್ಷ್ಮೀಕಾಂತರೆಡ್ಡಿ, ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆ ಹಾಗೂ ರೈತರಿಗಿರುವ ಸೌಲಭ್ಯಗಳನ್ನು ಕುರಿತು ಉದಾಹರಿಸಿದರು. ನಗರ ಪ್ರದೇಶದ ರೀತಿಯಲ್ಲಿ ಗ್ರಾಮೀಣ ಭಾಗದ ರೈತರಿಗೆ ವಿದ್ಯುತ್ ಇಲ್ಲ, ಮಾರುಕಟ್ಟೆ ಇಲ್ಲ, ಬೆಂಬಲ ಬೆಲೆ ಇಲ್ಲ, ಸಾರಿಗೆ ಸಂಪರ್ಕದ ಕೊರತೆ, ತೂಕ ಹಾಗೂ ಅಳತೆಗಳಲ್ಲಿ ದಲ್ಲಾಳಿಗಳಿಂದಾಗು ತ್ತಿರುವ ಮೋಸ ಕುರಿತು ವಿವರಿಸಿದರು.ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರವೆಂದು ಗಾಂಧೀಜಿ ತಿಳಿಸಿದ್ದರು. ಆದರೆ ಈಗಿನ ದಿನಗಳಲ್ಲಿ ಹೇಳಿಕೆಗೆ ವ್ಯತಿರಿಕ್ತವಾಗಿದೆ. ನಗರಗಳ ಉದ್ಧಾರವೇ ದೇಶದ ಉದ್ಧಾರವೆಂದು ಜನಪ್ರತಿನಿಧಿಗಳು ತಿಳಿದುಕೊಂಡಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.ಜಾತಿ, ಮತ, ವರ್ಣ, ವರ್ಗಗಳನ್ನು ಮೀರಿ ರೈತ ಸಂಘ ಕಟ್ಟಬೇಕಾಗಿದೆ, ಎಲ್ಲರೂ ಸಹಕರಿಸಬೇಕೆಂದು ಅವರು ಕರೆ ನೀಡಿದರು.ಸಿದ್ಧಯ್ಯನಕೋಟೆಯ ಚಿತ್ತರಗಿ ಮಠದ ಬಸವಲಿಂಗ ಸ್ವಾಮೀಜಿ, ಬಸವಣ್ಣನವರ ಕಾಯಕ ಸಿದ್ಧಾಂತವನ್ನು ಕುರಿತು ಮಾತನಾಡಿದರು.ವೇದಿಕೆಯಲ್ಲಿ ಜಿಲ್ಲಾ ರೈತ ಮುಖಂಡ ಎಂ.ಬಸವರಾಜ್, ತಾಲ್ಲೂಕು ಅಧ್ಯಕ್ಷ ಎಸ್.ಬಾಷಾಸಾಬ್, ತಾಲ್ಲೂಕು ಅಧ್ಯಕ್ಷ ಎಂ.ತಿಪ್ಪಣ್ಣ, ಎಂ.ಕೊಟ್ರೇಶಪ್ಪ, ಮರುಳಸಿದ್ದಪ್ಪ, ವಿ.ನಾಗರಾಜ್, ಕೆ.ಎಂ.ಚಂದ್ರಸ್ವಾಮಿ, ಗ್ರಾ.ಪಂ ಉಪಾಧ್ಯಕ್ಷ ನೀಲಕಂಠಪ್ಪ, ಸದಸ್ಯರು, ತಾ.ಪಂ ಸದಸ್ಯೆ ವಿಶಾಲಾಕ್ಷಿ ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಜಿ.ವೀರಣ್ಣ ಅಧ್ಯಕ್ಷತೆ ವಹಿಸಿದ್ದರು.ಪ್ರಾಸ್ತಾವಿಕವಾಗಿ ರೈತ ಸಂಘದ ಖಜಾಂಚಿ ವಿರೂಪಾಕ್ಷಿ ಮಾತನಾಡಿ ದರು. ವಿ.ಪಂಚಾಕ್ಷರಿ ಸ್ವಾಗತಿಸಿದರು.ಬಸವರಾಜ ಕಕ್ಕುಪ್ಪಿ ನಿರೂಪಿಸಿದರು. ವೈ.ಸೂರ್ಯನಾರಾಯಣ ವಂದಿಸಿದರು. ಇದಕ್ಕೂ ಮುನ್ನ ನೂರಾರು ರೈತರು, ರೈತ ಮುಖಂಡರು ಗ್ರಾಮದ ಪ್ರವಾಸಿ ಮಂದಿರದಿಂದ ಮೆರವಣಿಗೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.