ಶುಕ್ರವಾರ, ಜೂನ್ 18, 2021
27 °C

ಸೌಲಭ್ಯಗಳಿಲ್ಲದೆ ನರಳುತ್ತಿರುವ ಏವೂರ ತಾಂಡಾ

ಪ್ರಜಾವಾಣಿ ವಾರ್ತೆ/ –ಪವನ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಕೆಂಭಾವಿ: ಜಿಲ್ಲೆಯ ಗಡಿ ಭಾಗದ ಅನೇಕ ಗ್ರಾಮಗಳು ಸಮಸ್ಯೆಯಿಂದ ಇಂದಿಗೂ ಬಳಲು­ತ್ತಿದ್ದು, ಅದರಲ್ಲೂ ಶಿಕ್ಷಣಕ್ಕಾಗಿ ಇರುವ ಸರ್ಕಾರಿ ಶಾಲೆಗಳ ಸ್ಥಿತಿಯಂತೂ ಹೇಳತೀರದಾಗಿದೆ.ಸುರಪುರ ತಾಲ್ಲೂಕಿನ, ಶಹಾಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಏವೂರ ದೊಡ್ಡ ತಾಂಡಾದ (ಸೇವಾ ನಗರ)ಲ್ಲಿ ಸೌಲಭ್ಯಗಳೇ ಇಲ್ಲದಾಗಿದೆ. ಗ್ರಾಮದಲ್ಲಿರುವ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅನೇಕರು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ. ಇಂತಹ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯೂ ಸೌಲಭ್ಯಗಳಿಲ್ಲದೇ ನರಳುವಂತಾಗಿದೆ.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಯಂತೂ ಹೇಳ­ತೀರದು. ಸುರಪುರ ತಾಲ್ಲೂಕಿನ ಶಹಾಪುರ ಮತಕ್ಷೇತ್ರದ ಬಹುತೇಕ ಗ್ರಾಮಗಳ ಶಾಲೆಗಳ ಸ್ಥಿತಿ ಇದೇ ರೀತಿ ಇದೆ.ತಾಂಡಾಗಳನ್ನು ಗ್ರಾಮಗಳಾಗಿ ಮಾಡಿದ ಸರ್ಕಾರ ಅವುಗಳಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವಿಫಲ­ವಾಗಿದೆ ಎನ್ನುವುದಕ್ಕೆ ಸೇವಾನಗರವೇ ಉದಾ­ಹರಣೆ ಎಂದು ನಿವಾಸಿಗಳ ದೂರು.ಒಂದೆಡೆ ಕುಡಿಯುವ ನೀರಿನಲ್ಲಿ ನೈಟ್ರೇಟ್ ರಾಸಾಯನಿಕ ವಸ್ತು ಹೆಚ್ಚಾಗಿದ್ದು, ತಾಂಡಾ ಜನರ ಆರೋಗ್ಯದ ಮೇಲೆ ಪ್ರಭಾವ ಬೀರು­ತ್ತಿದೆ. ನೀರು ಶುದ್ಧಿಕರಣ ಘಟಕ ಸ್ಥಾಪನೆಯಾಗಿಲ್ಲ. ಅಧಿಕಾರಿಗಳು ಬಂದು ಹೋಗಿದ್ದಾರೆ. ಅನು­ದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಮಾತ್ರ ಪ್ರಾರಂಭಗೊಂಡಿಲ್ಲ ಎನ್ನುತ್ತಾರೆ ಜನ.ಇನ್ನೊಂಡೆದೆ ತಾಂಡಾದಲ್ಲಿರುವ ಶಾಲೆ­ಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಸುಮಾರು 308 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ತರಗತಿಗಳು ನಡೆಯಲು ಐದು ಕೋಣೆಗಳಿವೆ. ಶಾಲೆಯಲ್ಲಿ ಶೇ 70ರಷ್ಟು ಹಾಜರಾತಿಯೂ ಇದೆ.  ಆದರೆ, ಕೇವಲ ಇಬ್ಬರು ಶಿಕ್ಷಕರು ಮಾತ್ರ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇರುವ ಐದೂ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. ಇದರಿಂದ ಯಾವಾಗ ಮೇಲ್ಛಾವಣಿ ಸೇರಿದಂತೆ ಗೋಡೆ ಕುಸಿದು ಅನಾಹುತ ಸಂಭವಿಸುತ್ತದೆ ಎಂಬ ಭಯದ ನೆರಳಿನಲ್ಲಿಯೇ ತರಗತಿಗಳು ನಡೆಯುತ್ತಿವೆ.ಐದು ಕೋಣೆಗಳಲ್ಲಿ ಎರಡು ಕೋಣೆಗಳು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದು, ಬೀಗ ಹಾಕಲಾಗಿದೆ. ಉಳಿದ ಮೂರು ಕೋಣೆಗಳಲ್ಲಿ ಒಂದನ್ನು ಕಚೇರಿಗೆ, ಉಳಿದ ಎರಡು ಕೋಣೆಗಳಲ್ಲಿಯೇ ಏಳೂ ತರಗತಿಗಳನ್ನು ನಡೆ­ಸುವ ಅನಿವಾರ್ಯತೆ ಇದೆ. ಎಲ್ಲ ಮಕ್ಕಳನ್ನು ಒಂದೆಡೆ ಸೇರಿಸಿ ತರಗತಿಗಳು ನಡೆಸುತ್ತಿದ್ದು, ಮಕ್ಕಳಿಗೆ ಸರಿಯಾದ ಪಾಠ ಕೇಳಿಸದಂತಾಗಿದೆ. ಆ ಎರಡು ಕೋಣೆಯ ಮೇಲ್ಛಾವಣಿ ರಾಡ್‌ಗಳು ಅಸ್ಥಿಪಂಜರದಂತೆ ಕಾಣುತ್ತಿವೆ. ಮಳೆ ಬಂದರೆ ಶಾಲೆಗೆ ಅಘೋಷಿತ ರಜೆ ನೀಡಬೇಕಾಗುತ್ತದೆ. ಇದರಿಂದ ಮಕ್ಕಳ ವಿದ್ಯಾ­ಭ್ಯಾಸಕ್ಕೆ ತೀವ್ರ ಹಿನ್ನಡೆ ಆಗುತ್ತಿದೆ ಎನ್ನುವ ಭೀತಿ ಪಾಲಕರನ್ನು ಕಾಡುತ್ತಿದೆ.ಈ ಶಾಲೆಯ ಕಟ್ಟಡವನ್ನು ಸಂಪೂರ್ಣ ನೆಲಸಮಗೊಳಿಸಬೇಕು ಎಂದು ಶಿಕ್ಷಣ ಇಲಾಖೆಯು ಲೋಕೋಪಯೋಗಿ ಇಲಾಖೆಗೆ ವರದಿ ನೀಡಿದೆ ಎನ್ನಲಾಗಿದೆ. ಆದರೂ ಈ ಕಟ್ಟಡದಲ್ಲೇ ಶಾಲೆ ನಡೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಇಲ್ಲಿಯ ಜನರು ಕೇಳುತ್ತಿದ್ದಾರೆ.ಈಗಾಗಲೇ 2010-–11 ನೇ ಸಾಲಿನಲ್ಲಿ ಎರಡು ಕೋಣೆಗಳ ನಿರ್ಮಾಣಕ್ಕಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ₨4.28 ಲಕ್ಷ ಮುಖ್ಯಶಿಕ್ಷಕರ ಖಾತೆಯಲ್ಲಿ ಜಮಾ ಇದೆ ಎನ್ನಲಾಗಿದ್ದು, ಆದಾಗ್ಯೂ ಈ ಶಾಲೆಯ ಗತಿ ನೋಡಿದರೆ ಅಯ್ಯೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುತ್ತಾರೆ. ಆದರೆ ಶಾಲೆಯಲ್ಲಿ ಮಕ್ಕಳಿಗೆ ಏನಾದರೂ ಅನಾಹುತವಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಬಡ ತಾಂಡಾ ನಿವಾಸಿಗಳದ್ದು.‘ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’

ವಿದ್ಯಾರ್ಥಿಗಳ ಗೋಳು ಕೇಳಬೇಕಾದ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನವೇ ಶಾಲೆಯ ದು:ಸ್ಥಿತಿಗೆ ಕಾರಣ. ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಅವರು ಗ್ರಾಮಕ್ಕೆ ಬಂದು ಹೋದರೂ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಿಂದ ನೀರು ಶುದ್ಧಿಕರಣ ಘಟಕ ಅಸಾಧ್ಯವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.

–ತಿಪ್ಪಣ್ಣ ಚವ್ಹಾಣ, ಗ್ರಾಮ ಪಂಚಾಯತಿ ಸದಸ್ಯ ‘ಶಾಲೆ ಸ್ಥಳಾಂತರಕ್ಕೆ ಮನವಿ’

ತಾಂಡಾದ ಶಾಲೆಯಲ್ಲಿ ಐದು ಕೋಣೆಗಳಿದ್ದು, ಎರಡು ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವುದರಿಂದ ಅಲ್ಲಿ ಪಾಠ ಮಾಡದಂತೆ ಆದೇಶಿಸಲಾಗಿದೆ. ಈಗ ಈ ಕಟ್ಟಡವನ್ನು ನೆಲಸಮಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದ್ದು, ಈ ಶಾಲೆಯನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲು ಸ್ಥಳ ಒದಗಿಸಿಕೊಡುವಂತೆ ಎಸ್‌ಡಿಎಂಸಿ ಮತ್ತು ಸ್ಥಳೀಯರಿಗೆ ಮನವಿ ಮಾಡಲಾಗಿದೆ.

–ಕೆಂಪರಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ‘ಮಕ್ಳು ಸಾಲಿಕಿಂತಾ ಮನ್ಯಾಗ ಇರ್ಲಿ’

‘ನಮ್ಮ ತಾಂಡಾದ ಮಕ್ಕಳು ಸಾಲಿ ಕಲಿಬೇಕು, ಶ್ಯಾಣ್ಯಾ ಆಗಬೇಕು ಅಂತ ನಮ್ಮ ಕನಸು ಆದ. ಆದರ ಸಾಲಿ ಸ್ಥಿತಿ ನೋಡಿದ್ರ ನಮ್ಮ ಮಕ್ಕಳಿಗೆ ಅಲ್ಲಿ ಕಳಿಸಿ ಜೀವಾ ಹೋಗುದಕಿನ ಮನ್ಯಾಗೆ ಇದ್ದು ಹೊಲಾ, ಮನಿ ಕೆಲಸ ಮಾಡ್ಲಿ’.

–ಕುಬುರಾಮ, ಸ್ಥಳೀಯ ನಿವಾಸಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.