ಬುಧವಾರ, ಏಪ್ರಿಲ್ 14, 2021
26 °C

ಸೌಲಭ್ಯ ಕಾಣದ ಮಂಗಲಹೊಸೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಚರಂಡಿ ವ್ಯವಸ್ಥೆಯನ್ನೇ ಕಾಣದ ಬಡಾವಣೆ, ಮನೆ ಮುಂಭಾಗ ನಿಲ್ಲುತ್ತಿರುವ ತ್ಯಾಜ್ಯದ ನೀರು, ರಸ್ತೆಯಲ್ಲಿ ಬೆಳೆದಿರುವ ಗಿಡ-ಗಂಟೆ, ಕಲುಷಿತ ವಾತಾವರಣದಲ್ಲಿ ಬದುಕುತ್ತಿರುವ ನಿವಾಸಿಗಳು. ಕಾವೇರಿ ಕುಡಿಯುವ ನೀರಿನಿಂದ ವಂಚಿತ. ಇದು ಮಂಗಲಹೊಸೂರು ಗ್ರಾಮದ ಸ್ಥಿತಿ.ಗ್ರಾಮವು ಕಾವೇರಿ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಕೂಗಳತೆಯ ದೂರದಲ್ಲಿದೆ. ಪೈಪ್‌ಲೈನ್ ಅಳವಡಿಸಿ 4 ವರ್ಷ ಕಳೆದಿದೆ. ಆದರೇ, ಕುಡಿಯುವ ನೀರಿನ ವ್ಯವಸ್ಥೆಗೆ ಮಾತ್ರ ಚಾಲನೆ ನೀಡಿಲ್ಲ. ಗ್ರಾಮದ ಜನತೆಯ ಕುಡಿಯುವ ನೀರಿನ ಸಂಕಷ್ಟ ಹೇಳತೀರದು.ಗ್ರಾಮದಲ್ಲಿರುವ 1.300 ರಷ್ಟು ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಲಭ್ಯತೆ ಇಲ್ಲ. ಇರುವ 1 ಓವರ್‌ಹೆಡ್ ಟ್ಯಾಂಕ್‌ಗೆ 1 ಕೊಳವೆ ಬಾವಿಯಿಂದ ನೀರು ತುಂಬಿಸಲಾಗುತ್ತಿತ್ತು. ಗ್ರಾಮದ ಎಲ್ಲಾ ಬಡಾವಣೆಗಳಿಗೂ ಸಮರ್ಪಕವಾಗಿ ನೀರು ದೊರೆಯದ ಪರಿಣಾಮ ಕಿರುನೀರು ಸರಬರಾಜು ಘಟಕದ ಕೊಳವೆ ಬಾವಿಯಿಂದ ಓವರ್‌ಹೆಡ್ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲಾಯಿತ್ತು. ಆದರೂ, ಟ್ಯಾಂಕ್ ಸಂಪೂರ್ಣವಾಗಿ ನೀರು ತುಂಬುತ್ತಿಲ್ಲ. ಅಂತರ್ಜಲ ಸಮಸ್ಯೆಯಿಂದ 2 ಕೊಳವೆ ಬಾವಿಗಳಿಂದಲೂ ಪೂರ್ಣಪ್ರಮಾಣದಲ್ಲಿ ನೀರು ದೊರಕುತ್ತಿಲ್ಲ. ಕಿರುನೀರು ಸರಬರಾಜು ಘಟಕದ 5 ತೊಂಬೆಗಳು ನೀರು ಕಾಣದೇ ಅನಾಥವಾಗಿ ನಿಂತಿವೆ.ಗ್ರಾಮದಲ್ಲಿ 6 ಕೈಪಂಪುಗಳಿವೆ. 3 ದುರಸ್ತಿಗೊಂಡಿವೆ. ಉಳಿದ 3 ರಲ್ಲಿ ಸಾಧಾರಣವಾಗಿ ನೀರು ಬರುತ್ತಿದ್ದು, ಸಪ್ಪೆಯಾಗಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ.ಹೊಸಬಡಾವಣೆ ನಿರ್ಮಾಣಗೊಂಡು 25 ವರ್ಷ ಕಳೆದಿದೆ. ಇದುವರೆಗೂ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ಮನೆಗಳ ಮುಂಭಾಗವೇ ತ್ಯಾಜ್ಯ ನೀರು ಹರಿಯುತ್ತಿದೆ. ಮಳೆ ಗಾಲದಲ್ಲಿ ಕೊಚ್ಚೆಯ ನೀರನ್ನು ತುಳಿದುಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನೆ ಮುಂಭಾಗ ಗುಂಡಿ ತೆಗೆದು ತ್ಯಾಜ್ಯನೀರು ಸಂಗ್ರಹಿ ಸಲಾಗುತ್ತಿದೆ. ಇದು ಸೊಳ್ಳೆ, ಕ್ರಿಮಿ ಕೀಟಗಳ ವಾಸಸ್ಥಾನವಾಗಿ ರೋಗ, ರುಜಿನಗಳಿಗೆ ಕಾರಣವಾಗುತ್ತಿದೆ. ಹೊಸಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗಿಡ-ಗಂಟೆಗಳು ಬೆಳೆದು ಬೇಲಿಯಾಗಿ, ರಸ್ತೆ ಮುಚ್ಚಿಹೋಗಿದೆ. ಈ ಸ್ಥಳದಲ್ಲಿ ತ್ಯಾಜ್ಯಗಳು ಹೆಚ್ಚಾಗಿ ಅನೈರ್ಮಲ್ಯಕ್ಕೂ ಕಾರಣವಾಗಿದೆ.ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಪಡಿಸಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಗ್ರಾ.ಪಂ.ಸದಸ್ಯ ರಾಜಶೇಖರ್ ದೂರುತ್ತಾರೆ. ಬಡಾವಣೆಗೆ ಉದ್ಯೋಗ ಖಾತ್ರಿಯೋಜನೆಯಡಿಯಲ್ಲಿ ರಸ್ತೆ ಮಾಡಿಸಬೇಕು ಜತೆಗೆ ಚರಂಡಿ ವ್ಯವಸ್ಥೆ ಮಾಡಿಸಬೇಕು ಎಂದು ನಿವಾಸಿ ದನರಾಜ್ ಒತ್ತಾಯಿಸಿದ್ದಾರೆ.ನೀರಿನ ಸಂಪರ್ಕ ಕಲ್ಪಿಸಲು ನಗರಸಭೆಯವರು ಅಡ್ಡಿಪಡಿಸುತ್ತಿದ್ದಾರೆ. ಶಾಸಕರು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದು ಕಾವೇರಿ ಕುಡಿ ಯುವ ನೀರು ಸಂಪರ್ಕ ಕಲ್ಪಿಸಲು ಪ್ರಯತ್ನ ಪಡುತ್ತೇನೆ. ನೀರಿನ ಸಮಸ್ಯೆ ಪರಿಹಾರಕ್ಕೆ ಮತ್ತೊಂದು ಕೊಳವೆ ಕೊರೆಯಿಸುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.