ಶುಕ್ರವಾರ, ಜೂಲೈ 10, 2020
21 °C

ಸೌಲಭ್ಯ ಮೇಲ್ದರ್ಜೆಗೇರದ ಸರ್ಕಾರಿ ಆಸ್ಪತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌಲಭ್ಯ ಮೇಲ್ದರ್ಜೆಗೇರದ ಸರ್ಕಾರಿ ಆಸ್ಪತ್ರೆ

ತರೀಕೆರೆ: ತರೀಕೆರೆ ಸಾರ್ವಜನಿಕ ಆಸ್ಪತ್ರೆ ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿದ ಭಾಗ್ಯ ಬಿಟ್ಟರೆ ವೈದ್ಯರ ಕೊರತೆ ಮುಂದುವರಿದಿದೆ. ಈ ಆಸ್ಪತ್ರೆಗೆ ನಿಯೋಜನೆಯಾಗುವ ವೈದ್ಯರು ಹೆಚ್ಚು ಸಮಯ ಇಲ್ಲಿ ಸೇವೆ ಸಲ್ಲಿಸುವುದೇ ಇಲ್ಲ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವುದಿಲ್ಲ. ಆದ್ದರಿಂದ ಪದೇ  ಪದೇ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗುವ ಪಾಡು ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಯದು.

ರಾಷ್ಟ್ರೀಯ ಹೆದ್ದಾರಿ ಇಲ್ಲಿ ಹಾದು ಹೋಗಿರುವುದರಿಂದ ಅಪಘಾತದ ಸಂಖ್ಯೆ ಕೂಡ ಹೆಚ್ಚು. ಗಾಯಾಳುಗಳಿಗೆ ಕೊನೆಪಕ್ಷ ಸೂಕ್ತ ಪ್ರಥಮ ಚಿಕಿತ್ಸೆಯೂ ದೊರೆಯದೆ ಅನೇಕ ಗಾಯಾಳುಗಳು ಪ್ರಾಣ ಬಿಡುವುದಕ್ಕೂ ಕೊರತೆ ಇಲ್ಲ.

ಇರುವ ಒಂದು (13 ವರ್ಷ ಹಳೆಯದಾದ ದುರಸ್ತಿ ಕಾಣದೆ ತುಕ್ಕು ಹಿಡಿದ ಸ್ಥಿತಿಯಲ್ಲಿರುವ) ಅಂಬುಲೆನ್ಸ್‌ನಿಂದ ಗಾಯಾಳುಗಳನ್ನು ಹತ್ತಿರದ ಶಿವಮೊಗ್ಗಕ್ಕೆ ಅಥವಾ ಮಣಿಪಾಲಕ್ಕೆ ಕರೆದ್ಯೊಯಲು ಸಾಧ್ಯವಿಲ್ಲ .ಆದ್ದರಿಂದ  ಖಾಸಗಿ ವಾಹನವನ್ನು ರೋಗಿಗಳು ಉಪಯೋಗಿಸುವ ಅನಿವಾರ್ಯತೆ ಇದೆ.

ಪ್ರತಿದಿನಕ್ಕೆ ಸರಿ ಸುಮಾರು ಮುನ್ನೂರಕ್ಕೂ ಹೆಚ್ಚು ರೋಗಿಗಳು ತಾಲ್ಲೂಕಿನ ವಿವಿಧ ಭಾಗಗಳಿಂದ ಇಲ್ಲಿಗೆ ತಪಾಸಣೆಗಾಗಿ ಬರುತ್ತಾರೆ. ಸರ್ಕಾರದ ವತಿಯಿಂದ ಉಚಿತ ಔಷಧೋಪಚಾರ ಮತ್ತು ದಿನವೊಂದಕ್ಕೆ ವ್ಯಯವಾಗುವ ಒಂದು ಸಾವಿರ ಸಿರಂಜ್‌ಗಳ ಪೂರೈಕೆಯಲ್ಲಿಯೂ ವ್ಯತ್ಯಯವಿದೆ.

ವರ್ಷಕ್ಕೆ ರೂ 20 ಲಕ್ಷ ಹಣದಲ್ಲಿ ತರೀಕೆರೆ ಸಾರ್ವಜನಿಕ ಆಸ್ಪತ್ರೆಗೆ ಔಷಧ ಮತ್ತು ಇತರೆ ಪರಿಕರಗಳನ್ನು ನೀಡಲು ಅವಕಾಶವಿದ್ದರೂ ಅವಶ್ಯ ಮತ್ತು ಅಗತ್ಯವಿರುವ ಔಷಧ ಪೂರೈಕೆಯಾಗುತ್ತಿಲ್ಲವೆಂದು ಇಲ್ಲಿನ ಸಿಬ್ಬಂದಿ ಅಲವತ್ತು ಕೊಳ್ಳುತ್ತಾರೆ. ಸಿರಂಜ್, ಹತ್ತಿ, ಬ್ಯಾಂಡೇಜ್ ಬಟ್ಟೆ ಮತ್ತು ಐವಿ ದ್ರಾವಣಗಳ ಕೊರತೆ ಈ ಆಸ್ಪತ್ರೆಯಲ್ಲಿ ನಿರಂತರ. ಅತಿ ಅಗತ್ಯವಿರುವ ಔಷಧ ಮತ್ತು ನಾಯಿ ಕಡಿತದ ಚುಚ್ಚುಮದ್ದನ್ನು ಆಸ್ಪತ್ರೆಯ ಬಳಕೆದಾರರ ನಿಧಿಯ ಹಣದಿಂದ ಖರೀದಿಸುತ್ತೇವೆ ಎಂದು ಹೇಳುತ್ತಾರೆ ಇಲ್ಲಿನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ .

ಕೊರತೆಯ ಪಟ್ಟಿ ದೊಡ್ಡದು:  ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕ, ಮಕ್ಕಳ ತಜ್ಞ, ದಂತ ವೈದ್ಯ, ಔಷಧ ತಜ್ಞ(ಫಿಜೀಷಿಯನ್)ಮೂಳೆ ತಜ್ಞ ಮತ್ತು ಅರವಳಿಕೆ ತಜ್ಞರು ಸೇರಿದಂತೆ ಒಟ್ಟು 9  ತಜ್ಞ ವೈದ್ಯರ್ದ್ದಿದಾರೆ.

ಕಿವಿ, ಮೂಗು ಮತ್ತು ಗಂಟಲು ತಜ್ಞವೈದ್ಯರು ಸದ್ಯದಲ್ಲೇ ವರ್ಗವಾಗಿ ಹೋಗಲಿದ್ದು, ಚರ್ಮವೈದ್ಯರು ಉನ್ನತ ವ್ಯಾಸಂಗಕ್ಕೆ ತೆರಳುವ ಕಾರಣ ಮತ್ತಷ್ಟು ವೈದ್ಯರ ಕೊರತೆ ಕಾಡಲಿದೆ.

19 ಜನ ದಾದಿಯರು ಇರಬೇಕಾದ ಆಸ್ಪತ್ರೆಯಲ್ಲಿ 13 ದಾ ದಿಯರು, ಒಬ್ಬರು ಎನ್‌ಆರ್‌ಎಚ್‌ಎಂ ಯೋಜನೆಯಡಿ 4 ದಾದಿಯರು, ಲ್ಯಾಬ್ ಟೆಕ್ನೀಷಿಯನ್, ಒಬ್ಬರು ಎಕ್ಸ್‌ರೇ ಟೆಕ್ನಿಷಿಯನ್ ಮತ್ತು 30 `ಡಿ~ಗ್ರೂಪ್ ನೌಕರರ ಬದಲಿಗೆ ಕೇವಲ 10 ನೌಕರರು ಮಾತ್ರ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲಿನ ವೈದ್ಯರು ಮತ್ತು ದಾದಿಯರಲ್ಲಿ ಕೆಲವರು ಹಣಕೊಟ್ಟರೆ ಮಾತ್ರ ಸೇವೆಗೆ ಸಿದ್ಧರೆಂದರೆ ಕೆಲವರು ತಾವಾಯಿತು ತಮ್ಮ ಕೆಲಸವಾಯಿತು ಎಂಬ ಭಾವನೆಯಿಂದ ದಿನದೂಡುತ್ತಿದ್ದಾರೆ ಎಂಬ ದೂರು ಕೇಳಿಬರುತ್ತದೆ. ಹಳೆಯ ಕಟ್ಟಡದಲ್ಲಿ ಉಪಯೋಗಿಸುತ್ತಿದ್ದ ಪೀಠೋಪಕರಣಗಳನ್ನು ಹೊಸ ಕಟ್ಟಡದಲ್ಲಿ ಉಪಯೋಗಿಸಲಾಗುತ್ತಿದ್ದು, ಅವುಗಳು ಅಳಿವಿನ ಅಂಚಿನಲ್ಲಿವೆ.

ನೂರು ಹಾಸಿಗೆ ಆಸ್ಪತ್ರೆಯಾಗಿದ್ದರಿಂದ ರೋಗಿಗಳ ಶುಶ್ರೂಷೆಗೆ ಅತಿ ಅವಶ್ಯಕವಾಗಿ 50 ಕಿ.ವಾ.ನ ಜನರೇಟರ್ ಅಗತ್ಯವಿದೆ. ಬ್ಲಡ್ ಬ್ಯಾಂಕ್ ವ್ಯವಸ್ಥೆ ಕಲ್ಪಿಸಲು ಅವಕಾಶವಿದ್ದು, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿಗಳ ಅನುಮತಿಗಾಗಿ ಕಾಯಲಾಗುತ್ತಿದೆ.

ಈಗಲೋ, ಆಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಇರುವ ಅಡುಗೆ ಮನೆಯಿಂದಲೇ ಒಳರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲು ಅಡುಗೆ ಸಿಬ್ಬಂದಿ ಪರದಾಡುತ್ತಿದ್ದಾರೆ. ಈಗಿರುವ ಎಕ್ಸ್‌ರೇ ಯಂತ್ರ ಹಳೆಯ ಮಾದರಿಯದಾಗಿದ್ದು, ಎಕ್ಸ್‌ರೇ ಮಾಡಿಸಿಕೊಳ್ಳುವವರೆ ಎಕ್ಸ್‌ರೇ ಫಿಲ್ಮ್ ಹಣವನ್ನು ಭರಿಸಬೇಕಾದ ಅನಿವಾರ್ಯತೆಯಿದೆ.

ಹೊಸದಾದ ಅಡುಗೆ ಮನೆ, ಆಸ್ಪತ್ರೆಯ ಬಟ್ಟೆಗಳನ್ನು ತೊಳೆಯಲು ಲ್ಯಾಂಡ್ರಿ, ಫಿಲ್ಮ್ ರಹಿತ ವಿನೂತನ ಎಕ್ಸ್‌ರೇ ಘಟಕ, ಶವಪರಿಕ್ಷೆ ಮಾಡುವ ನೂತನ ಶೀತಲೀಕರಣ ಗೃಹ ಅಗತ್ಯವಾಗಿದ್ದು, ಸುಮಾರು 6.5 ಕೋಟಿ ಹಣದಲ್ಲಿ ನಿರ್ಮಾಣವಾಗಿರುವ ನೂತನ ಆಸ್ಪತ್ರೆಯ ಒಳಗೆ ಅನಧಿಕೃತವಾಗಿ ಪ್ರವೇಶಿಸುವ ವಾಹನ ಮತ್ತು ಜನರನ್ನು ನಿಯಂತ್ರಿಸಲು ಕಾಂಪೌಂಡ್ ನಿರ್ಮಾಣ ಆಗಬೇಕಿದೆ ಎಂಬ ಬೇಡಿಕೆ ಪಟ್ಟಿ ದೊಡ್ಡದೇ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.