ಶುಕ್ರವಾರ, ಫೆಬ್ರವರಿ 26, 2021
18 °C
ಕನಕಗಿರಿ: ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯದ ಕೊರತೆ

ಸೌಲಭ್ಯ ವಂಚಿತ ಬಸ್ ನಿಲ್ದಾಣ

ಪ್ರಜಾವಾಣಿ ವಾರ್ತೆ/ಮೆಹಬೂಬ ಹುಸೇನ ಕನಕಗಿರಿ Updated:

ಅಕ್ಷರ ಗಾತ್ರ : | |

ಸೌಲಭ್ಯ ವಂಚಿತ ಬಸ್ ನಿಲ್ದಾಣ

ಕನಕಗಿರಿ: ಇಲ್ಲಿನ ಬಸ್ ನಿಲ್ದಾಣ ಮೂಲಸೌಲಭ್ಯಗಳಿಂದ ವಂಚಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪಟ್ಟಣದಿಂದ ದಿನ ನಿತ್ಯ ದೂರದ ಸ್ಥಳಗಳಿಗೆ ಹತ್ತಾರು ಬಸ್ ಓಡಾಡುತ್ತಿದ್ದು ಪ್ರಯಾಣಿಕರು ಸೌಲಭ್ಯ ಇಲ್ಲದ ಕಾರಣ ಪರದಾಡುವಂತಾಗಿದೆ.ಕಳೆದ ಎಂಟು ವರ್ಷಗಳ ಹಿಂದೆ ಬಸ್ ನಿಲ್ದಾಣದ ಆವರಣದಲ್ಲಿ ನಿರ್ಮಾಣಗೊಂಡಿರುವ ವೈಯಕ್ತಿಕ ಶೌಚಾಲಯ ಪ್ರಯಾಣಿಕರ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ. ಜನರು ವಿಧಿ ಇಲ್ಲದೆ ಬಸ್ ನಿಲ್ದಾಣದ ಆವರಣದೊಳಗಿನ ಜಾಗವನ್ನು ಬಹಿರ್ದೆಸೆಗೆ ಬಳಕೆ ಮಾಡುತ್ತಿದ್ದಾರೆ.ವಿಧಾನಸಭಾ ಕ್ಷೇತ್ರವಾಗಿರುವ ಇಲ್ಲಿಂದ ರಾಜಧಾನಿ ಬೆಂಗಳೂರಿಗೆ ಹೊರಡುವ ಬಸ್ ಸಂಚಾರ  ಸ್ಥಗಿತಗೊಂಡು ವರ್ಷ ಉರುಳಿದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಬಸ್  ಪುನರ್ ಆರಂಭಿಸುವಲ್ಲಿ ನಿರ್ಲಕ್ಷ್ಯ ತಾಳಿದ್ದಾರೆ.ಜನರ ಬಳಕೆಗೆ ನೀರು ಇದ್ದರೂ ಕುಡಿಯಲು ಯೋಗ್ಯವಾಗಿಲ್ಲ. ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ಮನವಿ ಸಲ್ಲಿಸಿದರೂ ಉಪಯೋಗವಾಗಿಲ್ಲ ಎಂದು ಗ್ರಾಮಸ್ಥ ಅಂಬಣ್ಣ ಮಹಿಪತಿ ದೂರಿದರು.ಎರಡು ತಿಂಗಳಿಂದಲೂ ಬಸ್ ನಿಲ್ದಾಣ ಕತ್ತಲಲ್ಲಿ ಮುಳುಗಿದೆ. ಆವರಣದಲ್ಲಿರುವ ಎಲ್ಲಾ ವಿದ್ಯುತ್ ದೀಪಗಳು ಉರಿಯದ ಕಾರಣ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸಮಸ್ಯೆಯಾಗಿದ್ದು, ರಾತ್ರಿ ವೇಳೆ ಬಸ್ ನಿಲ್ದಾಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಮಹಿಪತಿ ತಿಳಿಸಿದರು.ಇಲ್ಲಿ ಬಸ್ ಡಿಪೊ ವ್ಯವಸ್ಥೆ ಇಲ್ಲ. ಸಮರ್ಪಕವಾಗಿ ಬಸ್ ಓಡಾಡದ ಕಾರಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಕಲಕೇರಿ, ಗುಡದೂರು, ಶಿರಿವಾರ, ಬಂಕಾಪುರ, ಕನ್ನೇರಮಡಗು, ಅಡವಿಬಾವಿ ತಾಂಡ, ದೇವಲಾಪುರ, ಬೈಲಕ್ಕುಂಪುರ, ಕರಡೋಣ ಸೇರಿದಂತೆ ಅನೇಕ ಗ್ರಾಮಗಳಿಗೆ ಸಾರಿಗೆ ಸಂಪರ್ಕ ಇಲ್ಲದಂತಾಗಿದೆ.ಸಚಿವ ಶಿವರಾಜ ತಂಗಡಗಿ ಅವರು ಪ್ರತಿಯೊಂದು ಜನ ಸ್ಪಂದನ ಸಭೆಯಲ್ಲಿ ಜನರು ಬಸ್ ಸೌಲಭ್ಯದ ಕುರಿತು ಪ್ರಶ್ನೆ ಮಾಡಿದಾಗ ಹೆಸರಿಗೆ ಮಾತ್ರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಬಿಟ್ಟರೆ ಸೌಲಭ್ಯ ಕಲ್ಪಿಸುವಲ್ಲಿ ಕಾಳಜಿ ತೋರಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ವಿದ್ಯಾರ್ಥಿಗಳು ಖಾಸಗಿ ವಾಹನಗಳನ್ನು ಅವಲಂಬಿಸಿದ್ದು, ಹಣ ನೀಡಿ ಓಡಾಡುವಂತಾಗಿದೆ. ಕನಕಗಿರಿ, ಹುಲಿಹೈದರ, ಸೂಳೇಕಲ್ ಇತರೆ ಗ್ರಾಮದ ನೌಕರರು, ವಿದ್ಯಾರ್ಥಿಗಳು ಗಂಗಾವತಿಗೆ ತೆರಳಬೇಕಾದರೆ ಸೀಮಿತ ಬಸ್‌ಗಳನ್ನು ನಂಬಿದ್ದು ಸಮಸ್ಯೆಯಾಗಿದೆ ಎಂದು ಹಸೇನಸಾಬ ಆಪಾದಿಸಿದರು.ಮುಖ್ಯಾಂಶಗಳು

* ಬಸ್ ಡಿಪೊ ಮಂಜೂರಿಗೆ ಆಗ್ರಹ

* ರಾತ್ರಿ ವೇಳೆ ನಿಲ್ದಾಣಕ್ಕೆ ಬಾರದ ಬಸ್

* ನಿಲ್ದಾಣದಲ್ಲಿ ವೃದ್ಧರು, ಮಕ್ಕಳ ಪರದಾಟಶೌಚಾಲಯ ಟೆಂಡರ್ ಪಡೆದವರು ಲಾಭವಿಲ್ಲದ ಕಾರಣ ಬೀಗ ಹಾಕಿದ್ದಾರೆ. ವಿದ್ಯುತ್ ದೀಪ ಅಳವಡಿಸುವಂತೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಚಂದ್ರಶೇಖರಯ್ಯ, 
ಸಾರಿಗೆ ನಿಯಂತ್ರಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.