ಗುರುವಾರ , ಫೆಬ್ರವರಿ 25, 2021
29 °C
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಆರ್‌. ನಿರಂಜನ ಹೇಳಿಕೆ

ಸ್ನಾತಕೋತ್ತರ ಪದವಿ ಪ್ರವೇಶಕ್ಕೂ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ನಾತಕೋತ್ತರ ಪದವಿ ಪ್ರವೇಶಕ್ಕೂ ಪರೀಕ್ಷೆ

ಬೀದರ್: ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಮಾದರಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಗೆ ಪ್ರವೇಶ ಕಲ್ಪಿಸುವ ಚಿಂತನೆ ನಡೆದಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ಆರ್‌. ನಿರಂಜನ ತಿಳಿಸಿದರು.ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗುಣಾತ್ಮಕ ಬದಲಾವಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳು ಅನೇಕ ವರ್ಷಗಳ ಹಿಂದೆಯೇ ಸಿಇಟಿ ಮೂಲಕ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ನೀಡುತ್ತಿವೆ. ಗುಲಬರ್ಗಾ ವಿಶ್ವವಿದ್ಯಾಲಯವು ಮೆರಿಟ್‌ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತ ಬಂದಿದೆ. ಬೇರೆ ವಿಶ್ವವಿದ್ಯಾಲಯಕ್ಕೆ ಹೋಲಿಸಿದರೆ ಇನ್ನೂ ಬಹಳಷ್ಟು ಪ್ರಗತಿ ಸಾಧಿಸಬೇಕಿದೆ ಎಂದು ಹೇಳಿದರು.ಪದವಿ ಹಂತದಲ್ಲೂ ಸಿಬಿಎಸ್‌ಸಿ ಮಾದರಿಯಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮೌಲ್ಯಮಾಪನ ನಡೆಯಬೇಕಿದೆ. ಹೀಗಾದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಯನ್ನು ಸುಲಭವಾಗಿ ಗುರುತಿಸಲು, ಆತನ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿದೆ. ಉಪನ್ಯಾಸಕರು ಬೋಧನಾ ಕೌಶಲವನ್ನು ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.ಬೋಧನಾ ತರಬೇತಿ: ಬೋಧನಾ ತರಬೇತಿ ಪಡೆದ ಉಪನ್ಯಾಸಕರು ಮಾತ್ರ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯ. ಆದ್ದರಿಂದ ಬೋಧನಾ ತರಬೇತಿ ಪಡೆಯದ ಅತಿಥಿ ಉಪನ್ಯಾಸಕರಿಗೆ ನೇಮಕಾತಿ ಪೂರ್ವದಲ್ಲಿಯೇ ತರಬೇತಿ ನೀಡುವ ಅಗತ್ಯವಿದೆ.ನ್ಯಾಯಾಧೀಶರು ಹಾಗೂ ಪೊಲೀಸ್‌ ಅಧಿಕಾರಿಗಳಿಗೂ ತರಬೇತಿ ನೀಡಲಾಗುತ್ತದೆ. ಆದರೆ, ಪದವಿ ಕಾಲೇಜುಗಳ ಉಪನ್ಯಾಸಕರು ತರಬೇತಿ ಇಲ್ಲದೆ ನೇರವಾಗಿ ನೇಮಕ ಹೊಂದುತ್ತಿದ್ದಾರೆ. ಹೀಗಾಗಿ ಬೋಧನಾ ವಿಧಾನದಲ್ಲಿ ಲೋಪಗಳು ಮುಂದುವರಿದಿವೆ ಎಂದು ಹೇಳಿದರು.ದ್ವಿತೀಯ ಪಿಯುಸಿ ವರೆಗೂ ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳು ಪದವಿಯಲ್ಲಿ ಕಡಿಮೆ ಅಂಕ ಪಡೆಯುತ್ತ ಹೋಗುತ್ತಿದ್ದಾರೆ. ಪ್ರಾಧ್ಯಾಪಕರು ಪೂರ್ವ ಸಿದ್ಧತೆ ಮಾಡಿಕೊಂಡು ಬೋಧನೆ ಮಾಡುತ್ತಿಲ್ಲ. ವಿದ್ಯಾರ್ಥಿಗಳು ಟಿಪ್ಪಣಿ ಬರೆದುಕೊಳ್ಳುತ್ತಿಲ್ಲ. ಇಂಟರ್‌ನೆಟ್‌ನಿಂದ ಯಥಾವತ್ತಾಗಿ ನಕಲು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಸಾಮರ್ಥ್ಯವೇ ಕಡಿಮೆಯಾಗುತ್ತಿದೆ ಎಂದು ಹೇಳಿದರು.ವಿದ್ಯಾರ್ಥಿಗಳು ಟಿಪ್ಪಣಿಗಳನ್ನು ಏಕೆ ಬರೆದುಕೊಳ್ಳುತ್ತಿಲ್ಲ. ಅವರಿಗೆ ಉಪನ್ಯಾಸಕರ ಬೋಧನೆ ಸರಿಯಾಗಿ ಅರ್ಥವಾಗುತ್ತಿಲ್ಲವೋ, ಬೇರೆ ಕಡೆ ಟ್ಯೂಷನ್‌ಗೆ ಹೋಗುತ್ತಿದ್ದಾರೆಯೋ ಎನ್ನುವುದನ್ನು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ನಡುವಿನ ಅಂತರ ಹೆಚ್ಚಾಗಿದೆ.ಒಬ್ಬ ಉಪನ್ಯಾಸಕ ತಾನು ಬೋಧನೆ ಮಾಡುವ ವಿಷಯದ ಬಗೆಗೆ ಆಳವಾದ ಅಧ್ಯಯನ ಮಾಡಬೇಕು. ಬೋಧನಾ ಸಾಮರ್ಥ್ಯ ಹಾಗೂ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇದು ಸಹ ಗುಣಮಟ್ಟದ ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ಕಾರ್ಯಾಗಾರ ಉದ್ಘಾಟಿಸಿದ ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌, ಹೈದರಾಬಾದ್ ಕರ್ನಾಟಕದಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಪ್ರತಿಯೊಂದು ವಿಷಯವನ್ನು ಇಲ್ಲಿಯ ವಿದ್ಯಾರ್ಥಿಗಳು ಚೆನ್ನಾಗಿ ಅರಿತುಕೊಂಡಿದ್ದಾರೆ. ಆದರೆ, ಪ್ರತಿಭಾ ಪ್ರದರ್ಶನ ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯ ಪಟ್ಟರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಜಿ. ಪಾಟೀಲ ಮಾತನಾಡಿದರು. ಮೌಲ್ಯಮಾಪನ ಕುಲಚಿವ ಡಾ.ಸಿ.ಎಸ್.ಪಾಟೀಲ್, ಸಿಂಡಿಕೇಟ್‌ ಸದಸ್ಯ ರಮೇಶ ಪಾಟೀಲ್, ಪ್ರೊ.ಬಿ.ಎಲ್. ಹೂವಿನಭಾವಿ, ಪ್ರೊ.ಚನ್ನಬಸಪ್ಪ ಹಾಲಹಳ್ಳಿ, ವಿಜಯಕುಮಾರ ಗೊರನಳ್ಳಿ ಇದ್ದರು.  ಕರ್ನಾಟಕ ಕಾಲೇಜು ಪ್ರಾಚಾರ್ಯ ಡಾ.ಬಿ.ಎಸ್.ಬಿರಾದಾರ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಹಂಗರಗಿ ನಿರೂಪಿಸಿದರು.

*

ಉಪನ್ಯಾಸಕರು ಕನಿಷ್ಠ ಆರು ಗಂಟೆಯಾದರೂ ಅಧ್ಯಯನ ಮಾಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಾಧ್ಯ.

-ಪ್ರೊ. ಎಸ್‌.ಆರ್‌. ನಿರಂಜನ,

ಗುಲಬರ್ಗಾ ವಿ.ವಿ ಕುಲಪತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.