ಶನಿವಾರ, ಮೇ 8, 2021
19 °C

ಸ್ನಾತಕೋತ್ತರ ವೈದ್ಯಕೀಯ ಪ್ರವೇಶ: ಅವಕಾಶ ವಂಚನೆ ?

- ಶರಶ್ಚಂದ್ರ ನಾಯಕ,ಕುಮಟಾ . Updated:

ಅಕ್ಷರ ಗಾತ್ರ : | |

ಸ್ನಾತಕೋತ್ತರ ವೈದ್ಯಕೀಯ ಪ್ರವೇಶವನ್ನು ಸುಪ್ರಿಂಕೋರ್ಟ್ ಆದೇಶದಂತೆ ಮೇ 31 ರೊಳಗೆ ಪೂರ್ಣಗೊಳಿಸಬೇಕಾಗಿತ್ತು. ಈ ಕಾರಣಕ್ಕಾಗಿ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಮೇ 27 ಹಾಗೂ 28 ರಂದು ನಡೆಸಿದ ಅವಸರದ ಕೌನ್ಸೆಲಿಂಗ್‌ನಲ್ಲಿ  ಸೀಟು ಹಂಚಿಕೆ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈಗ  ಬೇರೆ ಅರ್ಹ ಅವಕಾಶಗಳಿಂದ ವಂಚಿತರಾಗಿ ಪರಿತಪಿಸುವಂತಾಗಿದೆ.ರಾಜೀವ್ ಗಾಂಧಿ ವೈದ್ಯಕೀಯ ವಿ.ವಿ. ನಡೆಸಿದ ಪಿಜಿಸಿಇಟಿ (ವೈದ್ಯಕೀಯ)- 2013 ರ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದವರಿಗೆ ಇದೇ ಮೊದಲ ಹಾಗೂ ಅಂತಿಮ ಕೌನ್ಸೆಲಿಂಗ್ ಎಂದು ತಿಳಿಸಲಾಗಿತ್ತು. ಇದರಿಂದಾಗಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಸಿಕ್ಕ ಸೀಟುಗಳನ್ನು ಪಡೆದುಕೊಂಡವರು ವಿ.ವಿ. ಯ ವಿದ್ಯಾರ್ಥಿ ವಿರೋಧಿ ನೀತಿಯಿಂದಾಗಿ ಇದೀಗ ಅಸಹಾಯಕರಾಗಿದ್ದಾರೆ. ಈಗಿನ ಅನಿವಾರ್ಯ ಆಯ್ಕೆಯನ್ನು ಮುಂದುವರಿಸುವುದೋ ? ಅಥವಾ ಇನ್ನೊಂದು ಬದಲಾವಣೆಯ ಆಯ್ಕೆಗೆ ಅವಕಾಶ ದೊರೆಯುವುದೋ ? ಎನ್ನುವ ಗೊಂದಲಕ್ಕೆ ಸಿಲುಕಿದಾರೆ.ಮೇ 27 ಹಾಗೂ 28 ರಂದು ಸೀಟು ಹಂಚಿಕೆ ಪಡೆದವರಿಂದ ರಾಜೀವ್ ಗಾಂಧಿ ವೈದ್ಯಕೀಯ ವಿವಿ ಎಲ್ಲ ಮೂಲ ದಾಖಲೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲದೇ ತತ್‌ಕ್ಷಣದಲ್ಲಿ ಹಂಚಿಕೆಯಾದ ಕಾಲೇಜಿಗೆ ಸಂಬಂಧಿಸಿದ ಎಲ್ಲ ರೀತಿಯ ಪ್ರವೇಶ ಶುಲ್ಕವನ್ನು ಪಡೆದುಕೊಂಡು ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಇನ್ನುಳಿದ ಉತ್ತಮ ಆಯ್ಕೆ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ ಎನ್ನುವ ಗಂಭೀರ ಆರೋಪ ವಿದ್ಯಾರ್ಥಿ ವಲಯದಿಂದ ಕೇಳಿಬಂದಿದೆ.ಖಾಸಗಿ ವೈದ್ಯಕೀಯ ಹಾಗೂ ತಾಂತ್ರಿಕ  ಶಿಕ್ಷಣ ಸಂಸ್ಥೆಗಳ ಒಕ್ಕೂಟವಾದ ಕಾಮೆಡ್ ಕೆ ಮೇ 30 ರಂದು ತನ್ನ ವ್ಯಾಪ್ತಿಯ ಸ್ನಾತಕೋತ್ತರ  ವೈದ್ಯಕೀಯ ಸೀಟುಗಳಿಗಾಗಿ ಕೌನ್ಸೆಲಿಂಗ್ ನಡೆಸಿತು. ಬೇಡಿಕೆಯ ಹಾಗೂ ಪ್ರತಿಷ್ಠಿತವೆನಿಸಿಕೊಂಡ ವೈದ್ಯಕೀಯ ಸ್ನಾತಕೋತ್ತರ ಸೀಟುಗಳು ಇಲ್ಲಿ ಹಂಚಿಕೆಯಾಗಲಿದ್ದವು. ಆದರೆ  ರಾಜ್ಯ ಸರ್ಕಾರದ ಪಿ.ಜಿ.ಸಿಇಟಿ-  2013 ರಲ್ಲಿ ಪ್ರವೇಶ ಪಡೆದುಕೊಂಡವರ  ಮೂಲ ದಾಖಲೆಗಳನ್ನು ವಿವಿ ಅದಾಗಲೇ ತನ್ನ ವಶಕ್ಕೆ ಪಡೆದುಕೊಂಡಿತ್ತು. ಪರಿಣಾಮವಾಗಿ ಮೂಲ ದಾಖಲೆಗಳನ್ನು ಹೊಂದಿಲ್ಲದ ಕಾರಣಕ್ಕೆ ಇವರಿಗೆ ಕಾಮೆಡ್ ಕೆ ನಲ್ಲಿ ಉತ್ತಮ ರ‌್ಯಾಂಕ್ ಹೊಂದಿದ್ದರೂ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿ  ನಿರಾಸೆ ಅನುಭವಿಸಬೇಕಾಯಿತು.ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶದ ಕೊನೆಯ ದಿನವನ್ನು ವಿಸ್ತರಿಸುವಂತೆ ಅದಾಗಲೇ ಸುಪ್ರಿಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ಸುಪ್ರಿಂಕೋರ್ಟ್ ತನ್ನ 28 -05-2013 ರ ಆದೇಶದಲ್ಲಿ  (ಸಂಖ್ಯೆ: ಟಿಸಿ ಸಿವಿಲ್ 98/2012) ಪ್ರವೇಶದ ಕೊನೆಯ ದಿನವನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಈ ಕಾರಣದಿಂದಾಗಿಯೇ ಎರಡನೇ ಸುತ್ತಿನ ಕೌನ್ಸೆಲಿಂಗ್ ನಡೆಸುವುದಾಗಿ  ಕಾಮೆಡ್ ಕೆ ಪ್ರಕಟಿಸಿದೆ. ಆದರೆ ಆರೋಗ್ಯ ವಿವಿ ಈ ವಿಷಯದಲ್ಲಿ  ಮೌನವಾಗಿದ್ದು ವಿದ್ಯಾರ್ಥಿಗಳಲ್ಲಿ ಆತಂಕ ಇನ್ನಷ್ಟು ಹೆಚ್ಚಿಸಿದೆ.ಆದರೆ ರಾಜೀವ್ ಗಾಂಧಿ ವಿವಿ ನಡೆಸಿದ ಪಿಜಿಸಿಇಟಿ (ವೈದ್ಯಕೀಯ) ಪ್ರವೇಶ ಪಡೆದವರಿಗೆ ಕಾಮೆಡ್ ಕೆ ನಡೆಸಲಿರುವ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ಅವಕಾಶ ದೊರೆಯುವ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಇದರಲ್ಲಿ ಭಾಗವಹಿಸಲು ಮೂಲ ದಾಖಲೆಗಳನ್ನು ಕಾಮೆಡ್ ಕೆ ಅಪೇಕ್ಷಿಸುತ್ತದೆ. ಇಲ್ಲವಾದರೆ ಅವಕಾಶ ನೀಡುವುದಿಲ್ಲ. ಮೂಲ ದಾಖಲೆಗಳನ್ನು ವಾಪಸ್ ಪಡೆಯಬೇಕೆಂದರೆ 5 ಲಕ್ಷ ರೂ ದಂಡ ಹಾಗೂ ಕೋರ್ಸ್‌ನ ಉಳಿದ ಅವಧಿಯ ಶುಲ್ಕ ಸಂದಾಯ ಮಾಡುವಂತೆ ರಾಜೀವ್ ಗಾಂಧಿ ವೈದ್ಯಕೀಯ ವಿವಿ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ. ಪರಿಣಾಮವಾಗಿ ಉತ್ತಮ ರ‌್ಯಾಂಕ್ ಹೊಂದಿದ್ದರೂ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲಾಗದ ಆತಂಕಕಾರಿ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ಎದುರಾಗಿದೆ.ಪ್ರವೇಶದ ಕೊನೆಯ ದಿನ ವಿಸ್ತರಿಸುವಂತೆ ಸ್ವತಃ ರಾಜ್ಯ ಸರ್ಕಾರವೇ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಸಂಬಂಧ ಸುಪ್ರಿಂಕೋರ್ಟ್ ನೀಡಬಹುದಾದ ಆದೇಶವನ್ನು ಕನಿಷ್ಠ ಒಂದು ದಿನವಾದರೂ ಕಾದು ನೋಡಬೇಕಾಗಿತ್ತು. ಆದರೆ ರಾಜೀವ್ ಗಾಂಧಿ ವಿವಿ ಅವಸರದಲ್ಲಿ ಕೌನ್ಸೆಲಿಂಗ್ ಮಾತ್ರವಲ್ಲ ಪ್ರವೇಶ ಪ್ರಕ್ರಿಯೆಯನ್ನು ಸಹ ಮೇ 28 ರೊಳಗೆ ಪೂರ್ಣಗೊಳಿಸಿತು. ಆದೇಶದ ನಂತರವಾದರೂ ಮೂಲ ದಾಖಲೆಗಳನ್ನು ವಿದ್ಯಾರ್ಥಿಗಳಿಗೆ ಮರಳಿಸಿ ಕಾಮೆಡ್‌ಕೆ ಮೇ 30 ರಂದು ನಡೆಸಿದ ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ  ಭಾಗವಹಿಸಲು ಅವಕಾಶ ಮಾಡಿಕೊಡಬಹುದಾಗಿತ್ತು. ಇವರ ಅವಸರದ ನಿರ್ಧಾರದಿಂದ ವಿದ್ಯಾರ್ಥಿಗಳು ನಿರಾಸೆ ಅನುಭವಿಸಬೇಕಾಗಿದೆ. ಮೂಲ ದಾಖಲೆಗಳನ್ನು ಹಿಡಿದಿಟ್ಟುಕೊಳ್ಳುವ ಅಕ್ರಮ ನೀತಿಯಿಂದಾಗಿ ಕಾಮೆಡ್ ಕೆ, ಡೀಮ್ಡ ವಿವಿ  ಹಾಗೂ ಇನ್ನಿತರೇ ಪ್ರತಿಷ್ಠಿತ  ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಅವಕಾಶದಿಂದ ಅರ್ಹರು ವಂಚಿತರಾಗಿದ್ದಾರೆ.ಈ ಹಿಂದಿನ ವರ್ಷಗಳಲ್ಲಿ ಪಿಜಿಸಿಇಟಿ ವೈದ್ಯಕೀಯ ಪ್ರವೇಶಕ್ಕೆ ಕೌನ್ಸೆಲಿಂಗ್ ಒಂದಕ್ಕಿಂತ ಹೆಚ್ಚು  ಬಾರಿ ನಡೆಯುತ್ತಿತ್ತು. ವಿದ್ಯಾರ್ಥಿಗಳು ತಾತ್ಕಾಲಿಕ ಸೀಟು ಹಂಚಿಕೆ ಪಡೆದು ಪ್ರವೇಶ ಪಡೆಯದೇ ಮುಂದಿನ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶವಿತ್ತು. ಇದರೊಂದಿಗೆ ಕಾಮೆಡ್ ಕೆ ಹಾಗೂ ಇನ್ನಿತರೇ ವೈದ್ಯಕೀಯ ಸಂಸ್ಥೆಗಳ ಕೌನ್ಸೆಲಿಂಗ್‌ನಲ್ಲೂ ಸಹ ಭಾಗವಹಿಸಿ  ಸೀಟು ಹಂಚಿಕೆ ಪಡೆಯಲು ಮುಕ್ತ ಅವಕಾಶವಿತ್ತು. ಆದರೆ ರಾಜ್ಯ ಸರ್ಕಾರ ಅನುಸರಿಸಿದ ಆರಂಭಿಕ ವಿಳಂಬ  ಹಾಗೂ ನಂತರದ ಅವಸರದ ನೀತಿಯಿಂದಾಗಿ ವಿದ್ಯಾರ್ಥಿಗಳು ನಿಸ್ಸಹಾಯಕರಾಗಿದ್ದು ಹತಾಶೆ ಅನುಭವಿಸುವಂತಾಗಿದೆ.ಅಖಿಲ ಭಾರತ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪ್ರಕ್ರಿಯೆಯಲ್ಲಿ ರಾಜ್ಯದ ಹಲವು ವಿದ್ಯಾರ್ಥಿಗಳು ಆಯ್ಕೆಯಾಗುವ ಸಾಧ್ಯತೆಗಳಿವೆ. ಆಗ ಕೆಲವು ಸೀಟುಗಳು ಸಹಜವಾಗಿ ತೆರವಾಗಲಿವೆ. ಇದಕ್ಕಾಗಿ ನಡೆಯಲಿರುವ ಇನ್ನೊಂದು ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ತಮಗೆ ಅವಕಾಶ ದೊರೆಯುವುದೇ? ಎನ್ನುವ ಆತಂಕ ಈಗಾಗಲೇ ಸೀಟುಗಳನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಮೂಲ ದಾಖಲೆಗಳು ಇಲ್ಲದಿದ್ದರೂ ಕಾಮೆಡ್ ಕೆ ನ ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು. ಅದರ ನಂತರವೇ ರಾಜ್ಯ ಸರ್ಕಾರ ಪಿಜಿಸಿಇಟಿ (ವೈದ್ಯಕೀಯ) 2013 ರ ಅಂತಿಮ ಕೌನ್ಸೆಲಿಂಗ್ ನಡೆಸಬೇಕು ಎನ್ನುವುದು ಅವರ ಒತ್ತಾಸೆಯಾಗಿದೆ.ರಾಜೀವ್ ಗಾಂಧಿ ವೈದ್ಯಕೀಯ ವಿವಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು `ಸೀಟ್ ಬ್ಲಾಕಿಂಗ್' ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ನೆಪ ಹೇಳಬಹುದು. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ಆಯ್ಕೆಗೆ ಅವಕಾಶವಿರಬೇಕು. ಆದರೆ ಯಾವುದೋ ನೆಪದಲ್ಲಿ ಅದನ್ನು ನಿಯಂತ್ರಿಸುವುದಾಗಲಿ ಅಥವಾ ಮೊಟಕುಗೊಳಿಸುವುದಾಗಲಿ ಸಮರ್ಥನೀಯವಲ್ಲ. ಮೂಲದಾಖಲೆಗಳನ್ನು ಹಿಡಿದಿಟ್ಟುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಆಯ್ಕೆಯ ಅವಕಾಶವನ್ನು ನಿರಾಕರಿಸುವ ಕ್ರಮ ಸರಿಯೆ?

- ಶರಶ್ಚಂದ್ರ ನಾಯಕ ,ಕುಮಟಾ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.