ಸ್ನೇಹಿತರ ಉಪಸ್ಥಿತಿಯಲ್ಲಿ...
ವೇದಿಕೆಯಲ್ಲಿ ಭರ್ತಿ ಜನ. ತೆರೆಯ ಮೇಲೆ ಕಾಣಿಸಿಕೊಂಡವರು, ತೆರೆ ಹಿಂದೆ ಕೆಲಸ ಮಾಡಿದವರು, ಜೊತೆಗೆ ಅತಿಥಿಗಳು. ಅಲ್ಲಿ ಮಾತಿನದೇ ಮಳೆ.
ಸ್ವರಗಳಿಗೆ ಪದ ಜೋಡಿಸುತ್ತಿದ್ದ ಸಿನಿ ಸಾಹಿತಿ ರಾಮ್ನಾರಾಯಣ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರ `ಸ್ನೇಹಿತರು~ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭವದು. ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರ ಮಗ ನಟ ಮಾಸ್ಟರ್ ಸ್ನೇಹಿತ್ರ ಜನ್ಮದಿನ ಕೂಡ.
ಆಡಿಯೋ ಸೀಡಿ ಬಿಡುಗಡೆಯಾದ್ದರಿಂದ ಎಲ್ಲರ ಗಮನ ಇದ್ದದ್ದು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಮೇಲೆ. ಹೊಸ ಟ್ರೆಂಡ್ ಹುಟ್ಟುಹಾಕಿರುವ ಹರಿಕೃಷ್ಣರನ್ನು ಹಂಸಲೇಖಾರಿಗೆ ಹೋಲಿಸಿದರು ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಹರಿಕೃಷ್ಣ ಅವರ ಮಗ ಆದಿತ್ಯ ಹರಿಕೃಷ್ಣ ಮೊದಲ ಬಾರಿಗೆ ಹಾಡಿರುವುದು ಚಿತ್ರದ ವಿಶೇಷ.
ಆರಂಭದಲ್ಲಿ ಆತ ಚೆನ್ನಾಗಿ ಹಾಡುತ್ತಾನೋ ಇಲ್ಲವೋ ಎಂಬ ಭಯ ಹರಿಕೃಷ್ಣರನ್ನು ಕಾಡಿತ್ತಂತೆ. ಆದರೆ ಅದು ಹಾಡು ಕೇಳಿದ ಬಳಿಕ ನಿವಾರಣೆಯಾಯಿತು ಎಂದರು.
ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ನಿರ್ದೇಶಕ ರಾಮ್ನಾರಾಯಣ್. ಈ ಹಾಡುಗಳು ಹೊಸ ಅಲೆ ಸೃಷ್ಟಿಸಲಿವೆ. ಚಿತ್ರ ಗೆಲ್ಲಲು ಸಹ ಕಾರಣವಾಗಲಿವೆ ಎಂಬ ವಿಶ್ವಾಸ ಅವರದು. ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರ ಸಿನಿಮಾ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಅವರು ಮೆಲುಕು ಹಾಕಿದರು.
ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ರವಿಶಂಕರ್ ಹಾಗೂ ತರುಣ್ ಚಿತ್ರದ ನಾಲ್ವರು ನಾಯಕರು. ನಾಯಕಿ ಪ್ರಣೀತಾ. ಚಿತ್ರದಲ್ಲಿ ಈ ನಾಲ್ವರಿಗೂ ನಾಯಕಿಯ ಪ್ರೀತಿ ಒಲಿಯದಂತೆ ಅಡ್ಡಬರುವುದು ಮಾಸ್ಟರ್ ಸ್ನೇಹಿತ್.
ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕ- ಈ ನಾಲ್ವರು ಚಿತ್ರದ ನಿಜವಾದ ನಾಯಕರು ಎಂಬ ಬಣ್ಣನೆ ನಟ ಸೃಜನ್ ಲೋಕೇಶ್ರದ್ದು. ಗೆಲುವಿಗಾಗಿ ಎದುರು ನೋಡುತ್ತಿರುವ ನಾಯಕರುಗಳು ನಾವು ಎಂಬ ನೋವಿನ ನುಡಿ ರವಿಶಂಕರ್ರದ್ದು.
ಗಾಯಕಿ ವಾಣಿ ಹರಿಕೃಷ್ಣ, ವಿತರಕ ಪ್ರಸಾದ್, ಸಾಹಿತಿ ಕವಿರಾಜ್ ಮುಂತಾದವರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.