ಭಾನುವಾರ, ಫೆಬ್ರವರಿ 28, 2021
23 °C

ಸ್ನೇಹ ಎಂಬ ಸಾಗರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ನೇಹ ಎಂಬ ಸಾಗರ...

ಸ್ನೇಹ ಸಾಗರವೆಂಬುದು ಅತ್ಯಂತ ಆಳವಾದದ್ದು. ಮೊಗೆದಷ್ಟೂ ನಮಗೆ ಅಲ್ಲಿಂದ ಆನಂದ, ತೃಪ್ತಿ, ನೆಮ್ಮದಿ, ಸಂತೋಷ ಎಂಬ ಅನೇಕ ಮುತ್ತು ರತ್ನಗಳು ದೊರಕುವುದರಲ್ಲಿ ಸಂದೇಹವಿಲ್ಲ. ಸ್ನೇಹವು ಒಂದು ಅಮೃತ ಬಿಂದು; ಒಂದು ಮಧುರ ಅನುಭವ. ಬೇಕು ಎಂದಾಗಲೆಲ್ಲ ನಮಗೆ ಸುಲಭವಾಗಿ ದಕ್ಕುವ ಪದಾರ್ಥವಲ್ಲ.ಮಾರುಕಟ್ಟೆಯಿಂದ ಕೊಂಡು ತರುವಂತಹದ್ದೂ ಅಲ್ಲ. ಸ್ನೇಹವನ್ನು ಪಡೆಯಲು, ದಕ್ಕಿಸಿಕೊಳ್ಳಲು  ತಾಳ್ಮೆಯಿಂದ ಮುನ್ನಡೆಯಬೇಕು. ಇದು ಅನೇಕ ವರುಷಗಳ ಫಲ.  ಸ್ನೇಹದ ವಿಷಯದಲ್ಲಿ ಒಬ್ಬೊಬ್ಬರದ್ದು ಒಂದೊದು ರೀತಿಯ ಅನುಭವ. ಒಬ್ಬರು ಇದನ್ನು ಅಮೃತದ ಸೆಲೆ ಎಂದರೆ ಮಗದೊಬ್ಬರಿಗೆ ಇದು ಕಹಿ ಕಹಿ ಅನುಭವ. ಆತ್ಮಾರ್ಥವಾದ, ನಿಷ್ಕಪಟವಾದ ಗೆಳೆತನ ಸಿಗುವುದು ಅಪರೂಪವೇ ಆದರೂ ನನಗೆ ಆ ಪುಣ್ಯ ದಕ್ಕಿದೆ.ನನ್ನ ಜೀನವದ ಸಂಧ್ಯೆಯಲ್ಲಿ, ಹಿಂತಿರುಗಿ ನೋಡಿದಾಗ ನನಗೆ ಕಾಣ ಬರುವುದು ಅನೇಕ  ಶುದ್ಧ, ಶಾಶ್ವತ, ಸ್ಥಿರ, ಆತ್ಮೀಯ ಸ್ನೇಹಿತೆಯರ ಬಳಗ. ಒಂದೊಂದೂ ಒಂದು ಆಣಿಮುತ್ತು.  ಹಾಗಾದರೆ ಅವರೆಲ್ಲರೂ ಅತಿ ಉತ್ತಮರೇ? ಸಂಪೂರ್ಣ ವ್ಯಕ್ತಿಗಳೇ? ಅವರಲ್ಲಿ ಯಾವ ದೋಷವೂ ಇಲ್ಲವೇ ಎಂದು ನೀವು ಕೇಳಬಹುದು.ಹೌದು; ಅದೇ ಸ್ನೇಹದ ಗೂಡಾರ್ಥ! ನಾವು ಹಲವರನ್ನು ನಮ್ಮ ಸ್ನೇಹ ಬಳಗಕ್ಕೆ ಸೇರಿಸಿಕೊಂಡಾಗ ನಮಗೆ ಆಗಾಗ ಅವರಲ್ಲಿ ಯವುದೋ ದೋಷ ಕಂಡು ಬರಬಹುದು; ಅದನ್ನು ಮನ್ನಿಸಿ, ಮರೆತು ಅವರ ಉತ್ತಮ ಗುಣಗಳನ್ನು ಆಯ್ದುಕೊಂಡು ನಮ್ಮ ಸ್ನೇಹ ಮುಂದುವರಿಸಿಕೊಂಡು ಹೋಗುವುದರಲ್ಲಿ ಜಾಣತನವಿದೆ.  ಇದೇ ಸ್ನೇಹದ ಮಾಪನ.ನನ್ನ ಗೆಳತಿ ರಜನಿ; ನಾವಿಬ್ಬರೂ ಬಾಲ್ಯ ಸ್ನೇಹಿತೆಯರು. ಒಟ್ಟಿಗೆ ಶಾಲೆಗೆ ಹೋಗಿ ಮಗ್ಗಿ ಕಲಿತು, ಆಟವಾಡುತ್ತಾ ಬೆಳೆದವರು. ಮಧ್ಯಾಹ್ನ ಊಟದ ಸಮಯ ಬಂತೆಂದರೆ ಇಬ್ಬರ ಡಬ್ಬಿ ಒಂದಾಗುತ್ತಿತ್ತು. ಜಾತಿ ಬೇಧ ನಮ್ಮನ್ನು ಅಗಲಿಸಲಿಲ್ಲ. ಇದಕ್ಕೆ ನಮ್ಮ ತಂದೆ ತಾಯಿಯರಿಗೆ ನಾವು ಋಣಿಗಳು.ಅವಳಿಗೆ 12 ವರುಷವಾದಾಗ ಅವಳ  ತಂದೆತಾಯಿ ಅವಳನ್ನು ಶಾಲೆಯಿಂದ ಬಿಡಿಸಿದರು. ಇದರಿಂದ ಹೌಹಾರಿದ ನಾನು ಶಾಲೆಯ ಮುಖ್ಯೋಪಾಧ್ಯಾಯರನ್ನೇ ಅವರ ಮನೆಗೆ ಕರೆದುಕೊಂಡು ಹೋದೆ. ಅವರ ಮನ ಒಲಿಸಿ, ಒಪ್ಪಿಸಿ, ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಒಂದು ಚಿಕ್ಕ ಭಾಷಣವನ್ನೂ ಬಿಗಿದು ಅವಳನ್ನು ಪುನಃ ಶಾಲೆಗೆ ಕರೆತಂದೆ. ನಮ್ಮಿಬ್ಬರ ಕಂಬೈನ್ಡ್ ಸ್ಡಡಿಯ ಸುಂದರ ಕ್ಷಣಗಳನ್ನು ಮರೆಯಲಾಗುವುದಿಲ್ಲ. ಆ ಸವಿ ನೆನೆಪುಗಳು ಇನ್ನೂ ಮಾಸಿಲ್ಲ. ಅಷ್ಟೂ ಸಾರ್ಥಕವೆಂಬಂತೆ ಅವಳು 10ನೆಯ ತರಗತಿ ಮುಗಿಸಿದಳು.ಆದರೆ ಇದಾದ ಕೂಡಲೇ ಅವಳ ಮದುವೆ. ಇದನ್ನು ತಡೆಯಲು ನಾನಾರು? ಮದುವೆಯಾಗಿ ಅವಳು ಮುಂಬೈಗೆ ಹೊರಟಳು; ನಾನು ಮುಂದಿನ ವಿದ್ಯಾಭ್ಯಾಸಕ್ಕೆಂದು ಮೈಸೂರು ಸೇರಿದೆ. ಆಗಾಗ್ಗೆ ಪತ್ರ ವ್ಯವಹಾರ ಕುಂಟುತ್ತಾ ನಡೆದರೂ ಕೊಂಡಿ ಭದ್ರವಾಗಿತ್ತು. ಪತಿ, ಮಕ್ಕಳು ಸಂಸಾರ ಈ ಬಗ್ಗೆ ಅವಳು ಬರೆದರೆ ನಾನು ಕಾಲೇಜು, ಪಾಠ, ಇತರ ಚಟುವಟಿಕೆಗಳು ಈ ವಿಷಯಗಳನ್ನು ಬರೆದು ತಿಳಿಸುತ್ತಿದ್ದೆ.ದೈವ ನಿಯಮಮೋ ಎಂಬಂತೆ ನಾನೂ ಮದುವೆಯಾಗಿ ಮುಂಬೈ ಸೇರಿದೆ! ಅಲ್ಲಿಯ ವೇಗದ ಜೀವನಕ್ಕೆ ಹೊಂದಿಕೊಂಡು, ನಮ್ಮ ಮನೆಗಳು ಎಷ್ಟೇ ದೂರವಾದರೂ ಆಗಾಗ್ಗೆ ಭೇಟಿ ಯಾಗುತ್ತಿದ್ದೆವು. ಕಂಬೈನ್ಡ್ ಸ್ಟಡಿ ಮಾಡಿದಂತೆ ಅಲ್ಲೂ ಒಟ್ಟೊಟ್ಟಿಗೇ ಮಾವಿನಕಾಯಿ ಉಪ್ಪಿನಕಾಯಿ ಹಾಕಿದೆವು; ಸಂಡಿಗೆ ಹಪ್ಪಳ ತಯಾರಿಸಿದೆವು.ನಾನು ಒಮ್ಮೆ ಅನಾರೋಗ್ಯ ಪೀಡಿತಳಾದಾಗ ಅವಳು ನಮ್ಮ ಮನೆಗೆ ಬಂದು ನಮ್ಮ ಅತ್ತೆ ಹಾಗೂ ಪತಿಯ ಒಪ್ಪಿಗೆ ಪಡೆದು, ನನ್ನನ್ನೂ, ಮಕ್ಕಳನ್ನೂ  ಅವರ ಮನೆಗೆ ಕರೆದುಕೊಂಡುಹೋಗಿ ಆರೈಕೆ ಮಾಡಿದ ಬಗೆ ಮರೆಯಲು ಸಾಧ್ಯವೇ? ಹೀಗೆ ಕಷ್ಟ, ಸುಖಗಳನ್ನು ಹಂಚಿಕೊಳ್ಳುತ್ತ ನಮ್ಮ ಸ್ನೇಹ ಅವಿರತವಾಗಿ ನಡೆದು ಬಂದಿತು. ನಮ್ಮಿಬ್ಬರ ಗಂಡಂದಿರ ವಿಶ್ರಾಂತಿ ಜೀವನದ ಘಟ್ಟವೂ ಬಂದೇ ಬಿಟ್ಟಿತು.ನಾನು ಮೈಸೂರು, ಅವಳು ಧಾರವಾಡ ಸೇರಿದೆವು. ಪರಸ್ಪರ ಭೇಟಿಗೇನೂ ಯಾವುದೂ ಅಡ್ಡಿ ಬರಲಿಲ್ಲ.  ಆದರೆ ಅವಳ ಅಕಾಲ ಮರಣದಿಂದ  ನನ್ನ ದೇಹದ ಒಂದು ಅಂಗವೇ ಕಳಚಿ ಬಿದ್ದಂತೆ ಭಾಸವಾಯಿತು. ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು.  ಆದರೆ ನಾವು ಒಟ್ಟಿಗೇ ಕಳೆದ ಆ ಮಧುರ ಕ್ಷಣಗಳು ನನ್ನ ಜೀವನದ ಅತ್ಯಮೂಲ್ಯ ಗಳಿಗೆಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.