ಸೋಮವಾರ, ಜೂನ್ 14, 2021
23 °C

ಸ್ಫುಟವಾದ ಮಾತು ಒಲಿದದ್ದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಫುಟವಾದ ಮಾತು ಒಲಿದದ್ದು...

ಮಾತೆಂದರೆ ಭಾವಾಭಿವ್ಯಕ್ತಿ ಮತ್ತು ಜ್ಞಾನದ ಸಮ್ಮಿಲನ. ಮನಸ್ಸು ಮನಸ್ಸುಗಳನ್ನು ಬೆಸೆಯುವ ಕೊಂಡಿ. ಮನದ ಮೂಲೆಯಲ್ಲಿ ಸದ್ದಿಲ್ಲದೇ ಗುದ್ದಾಡುವ ಅದೆಷ್ಟು ಭಾವಗಳು ಮಾತಿನ ಸ್ಪರ್ಶಕ್ಕೆ ಬಾಹ್ಯ ಪ್ರಪಂಚದಲ್ಲಿ ಸುದ್ದಿಯಾಗುತ್ತವೆ.ಮಾತು ಮಾಣಿಕ್ಯದಂತೆಯೇ ಆದರೂ ನನ್ನ ಮಟ್ಟಿಗೆ ಮಾತೆಂಬುದು ವೃತ್ತಿ, ಪ್ರವೃತ್ತಿಗಳ ಸಮಾಗಮ. ಮಾತಿನ ಮೇಲಿನ ಹಿಡಿತವೇ ನನ್ನೊಳಗಿನ ವೃತ್ತಿಪರತೆಗೆ ಸಾಕ್ಷಿ.

ಸತತ 18 ವರ್ಷಗಳಿಂದ ಆಕಾಶವಾಣಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಭಾವಗಳಿಗೆ ದನಿಯಾಗಿರುವುದು ನನಗೆ ತೃಪ್ತಿ ನೀಡಿದೆ.ನಾನು ಹುಟ್ಟಿ ಬೆಳೆದಿದ್ದು ಇದೇ ಉದ್ಯಾನನಗರಿಯಲ್ಲಿ. 5ನೇ ತರಗತಿಯಿಂದಲೇ ಆಕಾಶವಾಣಿಯಲ್ಲಿ ಬಾಲ ಕಾರ್ಯಕ್ರಮಗಳಿಗೆ ದನಿಯಾಗಿದ್ದೇನೆ. ನನಗೆ ಮೈಕ್ ಮುಂದೆ ಮಾತನಾಡುವುದೆಂದರೆ ಅಂದಿಗೂ ಇಂದಿಗೂ ಬಹಳ ಇಷ್ಟದ ಕೆಲಸ. ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಮೈಕ್ರೋ ಬಯೋಲಾಜಿಯಲ್ಲಿ ಪದವಿ ಪಡೆದಿದ್ದರೂ ಮೈಕ್ ಹಿಡಿದು ಮಾತನಾಡುವ ನಿರೂಪಣಾ ವೃತ್ತಿ ಅಚ್ಚುಮೆಚ್ಚು.ತೆರೆಯ ಮೇಲೆ ಮಾತನಾಡುವ ಕೆಲಸ ನನಗೆ ಅಷ್ಟಾಗಿ ಒಗ್ಗಿಲ್ಲ. ಆದರೆ ತೆರೆಮರೆಯಲ್ಲಿ ಧ್ವನಿಯ ಮೂಲಕವೇ ಲಕ್ಷಾಂತರ ಕೇಳುಗರನ್ನು ಹಿಡಿದಿಡುವ ಸವಾಲಿದೆಯಲ್ಲ; ಅದು ನನ್ನೊಳಗೆ ಹೊಸ ಬಗೆಯ ಹುರುಪು ತುಂಬುತ್ತದೆ. ಪ್ರತಿ ಬಾರಿಯೂ ಹೊಸ ಸಾಧ್ಯತೆಗಳ ಮೂಲಕವೇ ನಿರೂಪಣೆಯನ್ನು ಹೆಚ್ಚು ಆಪ್ತಗೊಳಿಸಲು ಪ್ರಯತ್ನಿಸುತ್ತೇನೆ.ಸುಖಾಸುಮ್ಮನೆ ಹರಟುವುದೇನೋ ಸುಲಭ. ಆದರೆ, ಮೈಕ್ ಮುಂದೆ ಹೊಸತನ ಮತ್ತು ಉತ್ಸಾಹದಿಂದಲೇ ಮಾತನಾಡಬೇಕಾಗುತ್ತದೆ. ಇದೊಂದು ಕಲೆಯಾದರೂ ಅದನ್ನು ಅರಗಿಸಿಕೊಳ್ಳುವುದು ಕಷ್ಟವೇನಲ್ಲ.ಈಗೀಗ ಆಕಾಶವಾಣಿ ಕಾರ್ಯಕ್ರಮಗಳ ಯುವ ನಿರೂಪಕರಲ್ಲಿ ಸಾಹಿತ್ಯ, ಸಂಗೀತ ಪ್ರಜ್ಞೆ ಅಷ್ಟಾಗಿ ಕಾಣದೇ ಇರುವುದು ಕೆಲವು ಕಾರ್ಯಕ್ರಮಗಳ ಶೈಲಿಯಲ್ಲಿಯೇ ವ್ಯಕ್ತವಾಗುತ್ತದೆ. ಇನ್ನು ಖಾಸಗಿ ಎಫ್‌ಎಂ ಚಾನೆಲ್‌ಗಳಲ್ಲಿ ಹಾಡಿನ ಅಬ್ಬರ ಮತ್ತು ಕಂಗ್ಲಿಷ್ ಬಳಕೆ ತುಸು ಹೆಚ್ಚೇ ಇರುವುದರಿಂದ ಜನ ಸಾಮಾನ್ಯರಿಗೆ ಇಷ್ಟವೆನಿಸಬಹುದು.ಆದರೆ, ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಭಾಷಾ ಪ್ರೌಢಿಮೆಗೇ ಆದ್ಯತೆ. ಹಾಗಾಗಿ ಶುದ್ಧ ಕನ್ನಡವನ್ನು ಸ್ಪಷ್ಟವಾಗಿ ಉಚ್ಚರಿಸುವುದು ಕಡ್ಡಾಯವಾಗಿರುತ್ತದೆ. ಭಾಷೆಗೂ, ಕಾರ್ಯಕ್ರಮಕ್ಕೂ ತುಸುವೂ ಕುಂದುಂಟಾಗದಂತೆ ಮಾತನಾಡುವುದೇ ಆಕಾಶವಾಣಿ ನಿರೂಪಕರ ಶೈಲಿ. ಸ್ವರ ವ್ಯಂಜನಗಳ ಏರಿಳಿತ, ಅಲ್ಪಪ್ರಾಣ ಮಹಾಪ್ರಾಣಗಳ ಸಮರ್ಪಕ ಬಳಕೆಯ ಮೂಲಕ ಕೇಳುಗರಿಗೆ ಭಾಷೆಯ ಹಿಂದಿನ ಭಾವವನ್ನು ಮುಟ್ಟಿಸಬೇಕಿದೆ.ಕೆಲವೊಮ್ಮೆ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿ ಹಾಗೂ ಬಿತ್ತರಿಸುವ ಹಾಡಿನ ನಡುವೆ ನಿರೂಪಕರ ಮಾತು ಸೇರಿಕೊಂಡಿರುತ್ತದೆ. ಎಫ್.ಎಂ. ರೇನ್‌ಬೊ ಆರಂಭಗೊಂಡ ದಿನಗಳಲ್ಲಿ ವಾರ್ತೆ ಓದಿದ್ದೂ ಇದೆ. ಯಾವುದೇ ಕಾರ್ಯಕ್ರಮ ನಿರೂಪಣೆಯಿರಲಿ, ಅದಕ್ಕೆ ಒಂದಷ್ಟು ಸಿದ್ಧತೆಗಳು ಮತ್ತು ಮಾಹಿತಿ ಕಲೆಹಾಕಿ, ಅದನ್ನು ಅರಗಿಸಿಕೊಳ್ಳುವ ಅಗತ್ಯ ನಿರೂಪಕರಿಗಿರುತ್ತದೆ.

 

ಮೊನ್ನೆಯಷ್ಟೇ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮೂರು ಗಂಟೆಯ ಕಾರ್ಯಕ್ರಮ ನಡೆಸಿಕೊಟ್ಟೆ. ಇಂತಹ ದೀರ್ಘಾವಾಧಿಯ ಕಾರ್ಯಕ್ರಮಗಳಲ್ಲಿ ನಿರೂಪಕರು ವಸ್ತುವಿಷಯದ ಸಂಪೂರ್ಣ ಹಿನ್ನಲೆ ಅರಿತಿರಬೇಕು. ಆಗ ಮಾತ್ರ ಕೇಳುಗರಿಗೆ ಹೊಸತನ್ನು ನೀಡಲು ಸಾಧ್ಯ. ಆಕಾಶವಾಣಿ ಕಾರ್ಯಕ್ರಮಗಳ್ಲ್ಲಲಿ ನಿರೂಪಕರಿಗೆ ಮಾತಿನ ಮೇಲೆ ಹಿಡಿತವಿದ್ದಂತೆ ಸಮಯಮಿತಿಯ ಪರಿಜ್ಞಾನವೂ ಇರಬೇಕು. ಕೆಲವೇ ಸೆಕೆಂಡು ಮತ್ತು ನಿಮಿಷಗಳಲ್ಲಿ ಹೇಳಬೇಕಾದ್ದನ್ನು ಪರಿಣಾಮಕಾರಿಯಾಗಿ ಹೇಳುವ ಚಾಕಚಕ್ಯತೆಯ ಅಗತ್ಯವಿದೆ.

 

ಈ ಮಧ್ಯೆ ಸಾಹಿತ್ಯ ಮತ್ತು ಅರಣ್ಯ ಇಲಾಖೆಯ ಅನೇಕ ಸಾಕ್ಷ್ಯಚಿತ್ರಗಳಿಗೂ ಹಿನ್ನಲೆ ಧ್ವನಿ ಒದಗಿಸಿದ್ದೇನೆ. ಈಚೆಗಷ್ಟೆ ನಿರೂಪಣೆ ಕುರಿತು `ನಿರೂಪಣೆ ಮಾತಲ್ಲ ಗೀತೆ~ ಎಂಬ ಪುಸ್ತಕವನ್ನು ಬರೆದಿದ್ದೇನೆ. ವೃತ್ತಿಯೊಂದಿಗೆ ಪ್ರವೃತ್ತಿಯಾಗಿ ಸಾಹಿತ್ಯ ಸಮಾರಂಭಗಳಿಗೆ ನಿರೂಪಕಿಯಾಗಿ ಕಾರ್ಯನಿರ್ವಹಿಸುವ ಮೂಲಕ ಆತ್ಮಸಂತೋಷ ಪಡೆಯುತ್ತಿದ್ದೇನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.