ಬುಧವಾರ, ಏಪ್ರಿಲ್ 21, 2021
23 °C

ಸ್ಫೋಟ: ಸೈಕಲ್ ಅಂಗಡಿ ಮಾಲೀಕ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ):  ಇಲ್ಲಿನ ಜನನಿಬಿಡ ಜಂಗ್ಲಿ ಮಹಾರಾಜ ರಸ್ತೆಯಲ್ಲಿ ಬುಧವಾರ ನಡೆದ ಸ್ಫೋಟಕ್ಕೆ ಸಂಬಂಧಿಸಿ ಸೈಕಲ್ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ವಶಕ್ಕೆ ತೆಗೆದುಕೊಂಡಿದೆ.`ಸ್ಫೋಟದ ಹಿನ್ನೆಲೆಯಲ್ಲಿ ಕಸ್ಬಾಪೇಟೆ ಪ್ರದೇಶದ ಸೈಕಲ್ ಮಾರಾಟ ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿಯನ್ನು ಪ್ರಶ್ನಿಸುವ ಸಲುವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರಿಂದ ಕೆಲವು ದೃಢವಾದ ಮಾಹಿತಿಗಳು ದೊರೆಯುವ ನಿರೀಕ್ಷೆ ಇದೆ~ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.ಸ್ಫೋಟಕ್ಕೆ ಬಳಸಲಾದ ಮೂರು ಸೈಕಲ್‌ಗಳಲ್ಲಿ ಎರಡನ್ನು ಈ ಅಂಗಡಿಯಿಂದ ಖರೀದಿಸಲಾಗಿದೆ ಎಂಬುದಾಗಿ ತಮಗೆ ಪ್ರಥಮ ಮಾಹಿತಿ ದೊರೆತಿರುವುದಾಗಿ ಅಧಿಕಾರಿಗಳು ತಿಳಿಸಿದರೂ, ಮೂರನೇ ಸೈಕಲ್ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಲಿಲ್ಲ. ಹೊಸದಾಗಿ ಖರೀದಿಸಿದ ಎರಡು ಸೈಕಲ್‌ಗಳಲ್ಲಿ ಸ್ಫೋಟಕಗಳನ್ನು ಇಡಲಾಗಿತ್ತು. ಅಲ್ಲದೆ ಸ್ಫೋಟಕ್ಕೆಂದೇ ಸೈಕಲ್‌ಗಳನ್ನು ಹೊಸದಾಗಿ ಖರೀದಿಸಲಾಗಿತ್ತು ಎಂದು ಸಂಶಯ ವ್ಯಕ್ತಪಡಿಸಿದ್ದ ತನಿಖಾಧಿಕಾರಿಗಳು, ಇದರ ಹಿನ್ನೆಲೆಯಲ್ಲಿ ಸೈಕಲ್ ಅಂಗಡಿ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದರು.ಸುಮಾರು 45 ನಿಮಿಷಗಳ ಅಂತರದಲ್ಲಿ ಕಡಿಮೆ ತೀವ್ರತೆಯ ನಾಲ್ಕು ಸ್ಫೋಟಗಳು ಬುಧವಾರ ಇಲ್ಲಿ ಸಂಭವಿಸಿತ್ತು.ಶಂಕೆ: `ಸ್ಫೋಟದ ಹಿಂದೆ `ಇಂಡಿಯನ್ ಮುಜಾಹಿದ್ದೀನ್ (ಐಎಂ)~ ಸಂಘಟನೆ ಅಥವಾ `ಹಿಂದೂ ಬಲಪಂಥೀಯ~ ಸಂಘಟನೆಯ ಕೈವಾಡವಿರುವುದನ್ನು ನಾವು ತಳ್ಳಿಹಾಕುತ್ತಿಲ್ಲ~ ಎಂದು ತನಿಖೆಯಲ್ಲಿ ಭಾಗಿಯಾಗಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಮಧ್ಯೆ, ಇದೊಂದು `ಪೂರ್ವ ನಿಯೋಜಿತ~ ಹಾಗೂ  `ಸಂಘಟಿತ~ ಕೃತ್ಯ ಎಂದು ವಿವರಿಸಿದ ತನಿಖಾಧಿಕಾರಿಗಳು ಸ್ಫೋಟಕ್ಕೆ ಸಂಬಂಧಿಸಿ ಇನ್ನಷ್ಟು ಸಾಕ್ಷ್ಯಗಳನ್ನು ಕಲೆಹಾಕುವ ಪ್ರಯತ್ನ ಮುಂದುವರಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ರಾಷ್ಟ್ರೀಯ ಭದ್ರತಾ ಪಡೆ ತಂಡಗಳು ಮಹಾರಾಷ್ಟ್ರ ಪೊಲೀಸರ ಜೊತೆ ಕೈಜೋಡಿಸಿ ತೀವ್ರ ತನಿಖೆ ನಡೆಸುತ್ತಿವೆ.ದೇನಾ ಬ್ಯಾಂಕ್, ಮೆಕ್‌ಡೊನಾಲ್ಡ್ ಮತ್ತು ಬಾಲ ಗಂಧರ್ವ ಸಂಚಾರಿ ವೃತ್ತದ ಬಳಿ ಸ್ಥಾಪಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಿಂದ ಮಹತ್ವದ ಸುಳಿವು ದೊರೆಯದೇ ಇದ್ದ ಹಿನ್ನೆಲೆಯಲ್ಲಿ ಹಾಗೂ ಕೆಲವು ಕ್ಯಾಮೆರಾಗಳು ಕಾರ್ಯ ನಿರ್ವಹಿಸದೇ ಇದ್ದ ಕಾರಣ ತನಿಖಾ ಸಂಸ್ಥೆಗಳು ಸಾಕ್ಷ್ಯಗಳಿಗೆ ತೀವ್ರ ಶೋಧನೆ ಮುಂದುವರಿಸಿದ್ದವು ಎಂದು ಮೂಲಗಳು ತಿಳಿಸಿವೆ.ಅಮೋನಿಯಂ ನೈಟ್ರೇಟ್ ಜೊತೆಗೆ ಕಪ್ಪು ಬಣ್ಣದ ಜಿಗುಟು ವಸ್ತುವನ್ನು ಬೆರೆಸಿ ಸ್ಫೋಟ ನಡೆಸಲಾಗಿತ್ತು ಎಂದು ವರದಿಗಳು ತಿಳಿಸಿದ್ದು ವಿಧಿವಿಜ್ಞಾನ ಪರಿಣತರು ಸ್ಫೋಟಕಗಳ ತೀವ್ರತೆಯ ಪ್ರಮಾಣವನ್ನು ಕಂಡುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ. ಡಿಜಿಟಲ್ ಟೈಮರ್‌ಗಳನ್ನು ಹೊಂದಿರುವ ಬ್ಯಾಟರಿ ಚಾಲಿತ ಡಿಟೋನೇಟರ್ ಬಳಸಿ ಸ್ಫೋಟ ನಡೆಸಿರಬಹುದು ಎಂದು ವರದಿಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.