ಭಾನುವಾರ, ಮೇ 9, 2021
20 °C
ಉಚಿತವಾಗಿ ಮನೆ ಕೊಡಲು ಮಗನ ನಿರಾಕರಣೆ

ಸ್ಮಾರಕವಾಗಿ ಎಸ್ಸೆನ್ ನಿವಾಸ ಮರೀಚಿಕೆ?

ಪ್ರಜಾವಾಣಿ ವಾರ್ತೆ/ಸಚ್ಚಿದಾನಂದ ಕುರಗುಂದ Updated:

ಅಕ್ಷರ ಗಾತ್ರ : | |

ಸ್ಮಾರಕವಾಗಿ ಎಸ್ಸೆನ್ ನಿವಾಸ ಮರೀಚಿಕೆ?

ಚಿತ್ರದುರ್ಗ: ನಾಡು ಕಂಡ ಅಪರೂಪದ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪ ಅವರು ವಾಸವಿದ್ದ ಮನೆ ಈಗ ಹಾಳು ಕೊಂಪೆಯಾಗುವತ್ತ ಸಾಗುತ್ತಿದೆ.ನಿಜಲಿಂಗಪ್ಪ ಅವರ ಪುತ್ರ ಹಾಗೂ ಸರ್ಕಾರದ ನಡುವಣ ಹಗ್ಗಜಗ್ಗಾಟದಲ್ಲಿ ಮನೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸುವ ನಿಜಲಿಂಗಪ್ಪ ಅವರ ಅಭಿಮಾನಿಗಳ ಆಸೆ ಕೈಗೂಡುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ.ನಿಜಲಿಂಗಪ್ಪ ನೆಲೆಸಿದ್ದ ನಿವಾಸವನ್ನು ಉಚಿತವಾಗಿ ನೀಡಲು ಅವರ ಪುತ್ರ ಎಸ್.ಎನ್. ಕಿರಣ ಶಂಕರ್ ತಕರಾರು ಎತ್ತಿರುವುದರಿಂದ ರಾಜ್ಯ ಸರ್ಕಾರವು ಸ್ಮಾರಕಕ್ಕೆ ಬಿಡುಗಡೆ ಮಾಡಿದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲು ಆದೇಶ ಹೊರಡಿಸಿದೆ.ಜಿಲ್ಲಾಧಿಕಾರಿ ನಿವಾಸದ ಸಮೀಪದಲ್ಲಿರುವ ನಿಜಲಿಂಗಪ್ಪ ಅವರ ಮನೆಯಲ್ಲಿ ಈಗ ಯಾರೂ ವಾಸಿಸುತ್ತಿಲ್ಲ. ಮಕ್ಕಳು ಮತ್ತು ಸಂಬಂಧಿಕರು ಬೆಂಗಳೂರು, ಹುಬ್ಬಳ್ಳಿ, ಹೊರದೇಶದಲ್ಲಿ ನೆಲೆಸಿದ್ದಾರೆ. ಈ ನಿವಾಸವನ್ನು ಖಾಲಿ ಬಿಡುವುದಕ್ಕಿಂತ ಸ್ಮಾರಕ ಮಾಡಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿದ ಹಿಂದಿನ ಸರ್ಕಾರ (ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ) ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಉಚಿತವಾಗಿ ಮನೆ ನೀಡುವುದಿಲ್ಲ ಎಂದು ಪ್ರಾರಂಭದಿಂದಲೂ ಎಸ್ಸೆನ್ ಪುತ್ರ ಪಟ್ಟು ಹಿಡಿದಿದ್ದಾರೆ. `ಮನೆಯನ್ನು  ಸ್ಮಾರಕ ಮಾಡಬೇಕಾದರೆ ಪ್ರಸ್ತುತ ಮಾರುಕಟ್ಟೆ ದರದಲ್ಲೇ ಮನೆ ಖರೀದಿಸಿ' ಎನ್ನುವ ಬೇಡಿಕೆ ಇಟ್ಟಿರುವುದು ತೊಡಕಾಗಿ ಪರಿಣಮಿಸಿದೆ.ಈ ಮನೆಯನ್ನು ಖರೀದಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ರೂ 1.32 ಕೋಟಿ ಅಂದಾಜಿಗೆ ಮೌಲ್ಯಮಾಪನ ಮಾಡಿತ್ತು. ನಂತರ ಜಿಲ್ಲಾಧಿಕಾರಿ ಮತ್ತು ಕಿರಣ ಶಂಕರ್ ಅವರ ನಡುವೆ ಪತ್ರ ವ್ಯವಹಾರ ನಡೆದರೂ ಯಾವುದೇ ಪೂರಕ ಫಲಿತಾಂಶ ಹೊರಬರಲಿಲ್ಲ.ನಿಜಲಿಂಗಪ್ಪ ಅವರು ಬರೆದ ಮರಣ ಪೂರ್ವ ಉಯಿಲಿನಲ್ಲಿ ಈ ಮನೆಯನ್ನು ಮೊಮ್ಮಗ ವಿನಯನ ಹೆಸರಿಗೆ ಬರೆದಿದ್ದರು. ಈ ನಿವಾಸಕ್ಕೂ ಸಹ `ವಿನಯ' ಎಂದು ಕರೆಯಲಾಗುತ್ತಿದೆ. ಈ ಮನೆ ಉಚಿತವಾಗಿ ನೀಡಿದರೆ ಸ್ಮಾರಕ ಮಾಡಲು ಸರ್ಕಾರ ಸಿದ್ಧವಿದೆ. ಈ ಸಂಬಂಧ 2012ರ ಜೂನ್ 18ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಿರಣ ಶಂಕರ್, `ನನ್ನ ಮಗ ವಿನಯನ ಹೆಸರಿಗೆ ಉಯಿಲು  ಬರೆಯಲಾಗಿದೆ. ಮಾರುಕಟ್ಟೆ ದರದಂತೆ  ರೂ 2 ಕೋಟಿ ನೀಡಿ ಖರೀದಿಸಿ ನಂತರ ಸ್ಮಾರಕ ಮಾಡಿ' ಎಂಬ ಬೇಡಿಕೆ ಇಟ್ಟಿದ್ದಾರೆ.ಕಿರಣ ಶಂಕರ್ ಬೇಡಿಕೆಯನ್ನು ತಳ್ಳಿ ಹಾಕಿದ ಸರ್ಕಾರವು ಮನೆಯನ್ನು ಉಚಿತವಾಗಿ ನೀಡಲು ಅವರ ಮನ ಒಲಿಸುವಂತೆ ಜಿಲ್ಲಾಧಿಕಾರಿಗೆ ಸಲಹೆ ನೀಡಿತು.ನಿಜಲಿಂಗಪ್ಪ ಅವರ ನಿವಾಸವನ್ನು ಖರೀದಿಸಬಾರದು. ಉಚಿತವಾಗಿ ನೀಡಿದರೆ ಮಾತ್ರ ಸ್ಮಾರಕ ಮಾಡುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳು ಇದೀಗ ಆದೇಶ ಹೊರಡಿಸಿದ್ದಾರೆ.ಆದರೆ, ಮನೆಯು ಉಚಿತವಾಗಿ ಲಭ್ಯವಾಗದ ಹಿನ್ನೆಲೆಯಲ್ಲಿ ಬಿಡುಗಡೆಯಾದ ರೂ 1 ಕೋಟಿ ಹಣವನ್ನು  ಬೇರೆ ಉದ್ದೇಶಕ್ಕೆ ಬಳಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ನಿವೇಶನ ಲಭ್ಯತೆ ಆಧಾರದ ಮೇಲೆ ರೂ 40 ಲಕ್ಷ ರೂಪಾಯಿ ವೆಚ್ಚದಲ್ಲಿ ಒನಕೆ ಓಬವ್ವ ಸ್ಮಾರಕ ಹಾಗೂ ದಿ.ಟಿ.ಎಸ್. ವೆಂಕಣ್ಣಯ್ಯ ಅವರ ಜನ್ಮಸ್ಥಳವಾದ ಚಳ್ಳಕೆರೆ ತಾಲ್ಲೂಕಿನ ತಳಕಿನಲ್ಲಿ ಸ್ಮಾರಕಕ್ಕೆ ರೂ 25 ಲಕ್ಷ ಹಾಗೂ ಚಿತ್ರದುರ್ಗ ತಾಲ್ಲೂಕಿನ ಸೀಬಾರದ ಎಸ್ಸೆನ್ ಸ್ಮಾರಕದ ಅಭಿವೃದ್ಧಿಗೆ ರೂ 25 ಲಕ್ಷ  ಬಿಡುಗಡೆ ಮಾಡಲಾಗಿದೆ.

ಸರ್ಕಾರವೇ ಕ್ರಮ ಕೈಗೊಳ್ಳಬೇಕು

ಕಟ್ಟಡದ ಬಗ್ಗೆ ಸರ್ಕಾರ ಒಪ್ಪಿದರೆ ಮಾತ್ರ ಟ್ರಸ್ಟ್ ಮುಂದಿನ ಕ್ರಮ ಕೈಗೊಳ್ಳುತ್ತದೆ.  ಮನೆ  ಉಚಿತವಾಗಿ ನೀಡುವಂತೆ  ಸರ್ಕಾರ ಕೇಳಿದೆ. ನಿಜಲಿಂಗಪ್ಪ ಅವರ ಪುತ್ರ ಕಿರಣ ಶಂಕರ್ ಉಚಿತವಾಗಿ ನೀಡಲು ಒಪ್ಪುತ್ತಿಲ್ಲ. ಆರ್ಥಿಕ ಇಲಾಖೆ ಮನೆ ಖರೀದಿಗೆ ಒಪ್ಪುತ್ತಿಲ್ಲ. ಆದ್ದರಿಂದ ಸರ್ಕಾರದ ನೆರವು ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ'

-ಎಚ್. ಹನುಮಂತಪ್ಪ, ಎಸ್.ಎನ್. ಸ್ಮಾರಕ ಟ್ರಸ್ಟ್ ಕಾರ್ಯದರ್ಶಿನಿರ್ಧಾರದಲ್ಲಿ ಬದಲಾವಣೆ ಇಲ್ಲ

ಸರ್ಕಾರ ಮನೆಯನ್ನು ಖರೀದಿಸುತ್ತಿಲ್ಲ. ಉಚಿತವಾಗಿ ನೀಡುವ ಬಗ್ಗೆ ನಾವು ನಮ್ಮ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇವೆ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ'

-ಕಿರಣ ಶಂಕರ್,  ಎಸ್. ನಿಜಲಿಂಗಪ್ಪ ಪುತ್ರ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.