ಭಾನುವಾರ, ಏಪ್ರಿಲ್ 18, 2021
24 °C

ಸ್ವವಿಮರ್ಶೆ ಬೆಳೆದರೆ ಸದಭಿರುಚಿ ಸಿನಿಮಾ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ವಿಜ್ಞಾನದ ನೂತನ ಅವಿಷ್ಕಾರವಾಗಿ ಬೆಳಕಿಗೆ ಬಂದ ಸಿನಿಮಾ ನಂತರ ಕಲಾಮಾಧ್ಯಮವಾಗಿ ಬೆಳೆದ ಬಗೆ ವಿಸ್ಮಯಕಾರಿಯಾದದ್ದು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಎಚ್.ಎನ್. ನರಹರಿರಾವ್ ಹೇಳಿದರು.ಇಲ್ಲಿನ ಸ್ಪಂದನ ರಂಗತಂಡ, ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹಯೋಗದೊಂದಿಗೆ ಭಾನುವಾರ ಏರ್ಪಡಿಸಿದ್ದ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ಉದ್ಘಾಟಿಸಿ ‘ಸಿನಿಮಾದ ಹುಟ್ಟು, ಇತಿಹಾಸ, ಬೆಳವಣಿಗೆ, ಮೌಲ್ಯಗಳು ಹಾಗೂ ಇಂದಿನ ಸವಾಲು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.ಸ್ಥಿರ ಚಿತ್ರಗಳನ್ನು ಚಲಿಸುವ ಚಿತ್ರಗಳಾಗಿ ಮಾರ್ಪಡಿಸುವ ಮೂಲಕ ಆರಂಭವಾದ ಸಿನಿಮಾಕ್ಕೆ ಕತೆ ಅಳವಡಿಸಬಹುದು ಎಂಬ ಕಲ್ಪನೆಯೆ ಇರಲಿಲ್ಲ. 1904ರ ಹೊತ್ತಿಗೆ ಸಿನಿಮಾಕ್ಕೆ ಕತೆ ಅಳವಡಿಸಬಹುದು ಎಂಬ ಪ್ರಯೋಗ ಆರಂಭವಾಗಿ ಈಗ ಅದು ಕತೆಯನ್ನು ಪರಿಣಾಮಕಾರಿಯಾಗಿ ಹೇಳುವ ಮಾಧ್ಯಮವಾಗಿ ಬೆಳೆದಿರುವ ಬಗೆ ವಿಶಿಷ್ಟವಾದದ್ದು ಎಂದರು.ಪ್ರೇಕ್ಷಕರಲ್ಲಿ ಸ್ವವಿಮರ್ಶೆ ಬೆಳೆದಾಗ ಮಾತ್ರ ಸದಭಿರುಚಿಯ ಚಲನಚಿತ್ರಗಳು ಹೊರಬರಲು ಸಾಧ್ಯ. ನಮಗೆ ಎಂತಹ ಚಿತ್ರಗಳು ಬೇಕು ಎಂಬುದನ್ನು ನಾವೇ ನಿರ್ಧರಿಸುವಂತಾಗಬೇಕು. ಚಿತ್ರ ನೋಡಿ ಬಂದ ನಂತರ ಅದು ಬೀರುವ ಪರಿಣಾಮ ಏನು ಎಂಬುದು ಅತ್ಯಂತ ಮುಖ್ಯ ಎಂದು ಹೇಳಿದರು.ಸಿನಿಮಾ ನೋಡಿ ಆನಂದಿಸುವ ಜತೆಗೆ ಅದರ ವಸ್ತುವಿನ ಅರ್ಥದ ಬಗ್ಗೆ ಚಿಂತನೆ ನಡೆಸುವ ಪ್ರವೃತ್ತಿ ಪ್ರೇಕ್ಷಕರಲ್ಲಿ ಹೆಚ್ಚಾಗಬೇಕು. ವಿಭಿನ್ನ ವಸ್ತುಗಳನ್ನೊಳಗೊಂಡ ಚಿತ್ರಗಳನ್ನು ನಾವು ನೋಡಬೇಕಾದರೆ ಕೇವಲ ಸಿನಿಮಾ ಮಂದಿರಗಳನ್ನು ಆಶ್ರಯಿಸದೇ ಚಿತ್ರ ಸಮಾಜ ಕಟ್ಟಿಕೊಳ್ಳುವ ಮೂಲಕ ವಿವಿಧ ಪ್ರದರ್ಶನಗಳನ್ನು ಖಾಸಗಿಯಾಗಿ ಏರ್ಪಡಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಇಬ್ರಾಹಿಂ ಬ್ಯಾರಿ ಮಾತನಾಡಿ, ಸಿನಿಮಾ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದೆ. ಅದರ ಪ್ರಭಾವಕ್ಕೆ ಒಳಗಾಗದವರ ಸಂಖ್ಯೆ ಕಡಿಮೆ. ಚಲನಚಿತ್ರವನ್ನು ಕೇವಲ ಮನೋರಂಜನೆಯ ದೃಷ್ಟಿಯಿಂದ ಮಾತ್ರ ನೋಡದೆ ವಿಚಾರಾತ್ಮಕ ದೃಷ್ಟಿಯಿಂದಲೂ ನೋಡಬೇಕು ಎಂದು ಹೇಳಿದರು.ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಬಿ.ಎಚ್. ರಾಘವೇಂದ್ರ ಹಾಜರಿದ್ದರು. ಪಲ್ಲವಿಕೃಷ್ಣ ಪ್ರಾರ್ಥಿಸಿದರು. ಸಣ್ಣಹನುಮಪ್ಪ ಸ್ವಾಗತಿಸಿದರು. ಎಂ.ವಿ. ಪ್ರತಿಭಾ ಪ್ರಾಸ್ತಾವಿಕ ಮಾತನಾಡಿದರು. ಎಚ್.ಕೆ. ಕುಲಕರ್ಣಿ ವಂದಿಸಿದರು. ವಿಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.