ಗುರುವಾರ , ಮೇ 28, 2020
27 °C

ಸ್ವಾರ್ಥ ಸಾಧನೆಗೆ ಏನಾದರೂ ಮಾಡಬಹುದೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಳುವ ಪಕ್ಷದವರಿಗಿಂತ ವಿರೋಧ ಪಕ್ಷದ ಜವಾಬ್ದಾರಿ ಬಹಳ ದೊಡ್ಡದು. ಆಳುವ ಪಕ್ಷ ಜನರ ಹಿತವನ್ನೂ ರಾಷ್ಟ್ರದ ಹಿತವನ್ನೂ ಮೂಲೆಗುಂಪು ಮಾಡಿ ಸ್ವಜನಪಕ್ಷಪಾತ, ಜಾತೀಯತೆ ಹಾಗೂ ದೇಶದ ಆರ್ಥಿಕ ಸಂಪತ್ತನ್ನು ಲೂಟಿ ಹೊಡೆಯುತ್ತಾ ಇದ್ದರೆ ಅದನ್ನು ಮತ್ತು ಅದರ ತಪ್ಪು ನಿರ್ಣಯಗಳನ್ನು ವಿರೋಧಿಸಿ ಸರಿದಾರಿಗೆ ತರಲು ವಿರೋಧ ಪಕ್ಷಕ್ಕಿರುವ ಹಕ್ಕನ್ನು ಯಾರೂ ಕಸಿಯಲು ಸಾಧ್ಯವಿಲ್ಲ.ಈಗ ದೇಶದಲ್ಲಿ ನಡೆದಿರುವ ಹಲವಾರು ಪ್ರಕರಣಗಳನ್ನು ನೋಡಿದರೆ ನಮ್ಮ ದೇಶದಲ್ಲಿ ಆಯ್ಕೆಯಾದ ಸದಸ್ಯರು, ಯಾವುದೇ ನೌಕರ, ಸಾಮಾನ್ಯ ಸಮಾಜದ ಯಾವುದೇ ಪೀಠದಲ್ಲಿರುವ ಸ್ವಾಮಿಗಳು, ಧರ್ಮಪೀಠದಲ್ಲಿರುವ ಧರ್ಮಗುರುಗಳು ಮತ್ತು ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧಿಸಲು ಏನು ಬೇಕಾದರೂ ಮಾಡಬಲ್ಲರು ಅನ್ನುವ ಪರಂಪರೆ ಕಳೆದ 15-20 ವರ್ಷಗಳಿಂದ ನಡೆದಿದೆ. ಇದು ನಮ್ಮ ದೇಶವನ್ನು ಅಧೋಗತಿಗೆ ತರುವಂಥ ಕೆಲಸವಾಗಿ ತೋರುತ್ತದೆ.ಹಿಂದಿನ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು 2020ರ ವೇಳೆಗೆ ನಮ್ಮ ರಾಷ್ಟ್ರ ಒಂದು ಬಲಾಢ್ಯ ರಾಷ್ಟ್ರವಾಗಿ ಜಗತ್ತಿಗೆ ಮಾರ್ಗದರ್ಶಕವಾಗಬೇಕು ಎನ್ನುವ ಕನಸನ್ನು ಕಂಡವರು. ಇಂದು ಹೊರಬೀಳುತ್ತಿರುವ ಹಗರಣಗಳನ್ನು ನೋಡಿದಾಗ ಈ ದೇಶವನ್ನು ಹಿಂದೆ ಆಳಿದಂತಹ ಯಾವುದೇ ಸಮಾಜದ ರಾಜರು  ಯುದ್ಧ ಮಾಡಿದಾಗ ಇಷ್ಟೊಂದು ದೊಡ್ಡ ಮೊತ್ತದ ಹಣ ಲೂಟಿ ಮಾಡಲು ಸಾಧ್ಯವಾಗಿರಲಿಕ್ಕಿಲ್ಲ.ಎಲ್ಲ ಮಂತ್ರಿಗಳು, ಶಾಸಕರು ಮತ್ತು ಸಂಸದರು, ಮೇಲ್ಮಟ್ಟದ ಮತ್ತು ಸಾಮಾನ್ಯ ಅಧಿಕಾರಿಗಳು, ಸಣ್ಣ ದೊಡ್ಡ ಧರ್ಮ ಪೀಠದ ಪೀಠಾಧಿಕಾರಿಗಳು ‘ನಾವು ಬಹಳಷ್ಟು ಶುಚಿ  ಇದ್ದೇವೆ’ ಅನ್ನುವ ಮಾತನ್ನು ಪದೇ ಪದೇ ಹೇಳುತ್ತಲೇ ಬಂದಿರುತ್ತಾರೆ. ಆದರೆ ದೇಶಕ್ಕೆ ಬೇಕಾಗುವ ಕೆಲ ಮಹತ್ವದ ಖಾತೆಗಳು ಭ್ರಷ್ಟಾಚಾರದಿಂದ ಮುಕ್ತವಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಮುಂಬೈಯಲ್ಲಿ ಕಟ್ಟಿಸಿರುವ ‘ಆದರ್ಶ’ ಕಟ್ಟಡ. ಅದರ ಜಾಗ ಯಾವ ಇಲಾಖೆಗೆ ಸೇರಿದೆ ಎನ್ನುವುದನ್ನೇ  ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅದರ ಎಲ್ಲ ಕಾಗದ ಪತ್ರಗಳು ನಾಶವಾಗಿವೆ. ಅದೇ ತರಹ ಕಾಮನ್‌ವೆಲ್ತ್ ಕ್ರೀಡಾಕೂಟದ ಭ್ರಷ್ಟಾಚಾರದ ಸಮಸ್ಯೆ, ದೊಡ್ಡವರನ್ನು ಹೊರ ದೇಶಕ್ಕೆ ಕಳುಹಿಸಿಕೊಡುವಾಗ ಪಕ್ಕದಲ್ಲಿ ಕುಳಿತಿರುವ ಹೆಣ್ಣು ಮಗಳು ತನ್ನ ಪತ್ನಿ ಎಂದು ಹೇಳಿ ಕರೆದುಕೊಂಡು ಹೋಗುವಂಥ  ಮಾನವ ಕಳ್ಳಸಾಗಣೆಯ ಜನ ಈ ದೇಶದಲ್ಲಿ ಹುಟ್ಟಿ ಬಂದಿರುತ್ತಾರೆ.ಅವನು ಯಾವುದೇ ಅಧಿಕಾರಿ ಇರಲಿ, ಇವತ್ತಿನ ರಾಜಕಾರಣಿಗಳ ಕೃಪಾದೃಷ್ಟಿ ಇಲ್ಲದೇ ಹೋದಲ್ಲಿ ಸಮಾಜದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದು ಸುಲಭವಿಲ್ಲ. ಸಮಾಜದಲ್ಲಿ ತೊಂದರೆಗೀಡಾಗಿರುವ ಜನ ಬೇರೆ ಬೇರೆ ಹೆಸರಿನಲ್ಲಿ ನಕ್ಸಲರಾಗಿ, ಮಾವೊವಾದಿಗಳಾಗಿ, ಆತಂಕವಾದಿಗಳಾಗುವುದು ಸಹಜ ಎನ್ನುವಂತೆ ಇವರ ವರ್ತನೆ. ಇಪ್ಪತ್ತು ದಿನಗಳ ಮೇಲ್ಪಟ್ಟು ದೇಶದ ಪಾರ್ಲಿಮೆಂಟಿನಲ್ಲಿ ಆಳುವ ಮತ್ತು ವಿರೋಧ ಪಕ್ಷದ ಒಂದು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ಬೇಕು ಅನ್ನುವ ಬೇಡಿಕೆ ಮುಂದಿಟ್ಟು ಇಡೀ ಸದನವನ್ನು  ತಮ್ಮ ಮುಷ್ಟಿಯಲ್ಲಿಟ್ಟುಕೊಂಡು ಕಾಲ ಕಳೆಯುವರು.ಬೇರೆ ದೇಶದಲ್ಲಿರುವ ಪ್ರಜಾಪ್ರಭುತ್ವ ರಾಜ್ಯಗಳು, ಭಾರತ ದೇಶದ ಪ್ರಜಾಪ್ರಭುತ್ವ ಒಂದು ಪ್ರಭುತ್ವವಾದಂತಹ ರಾಷ್ಟ್ರಗಳಲ್ಲಿ ಒಂದು ಅಂತ ಹೇಳುವ ಕಾಲ ಇನ್ನು ಮುಗಿದುಹೋಗಿದೆಯೇ ಅನಿಸುತ್ತದೆ. ನಾನು ಕೂಡಾ ಕರ್ನಾಟಕ ವಿಧಾನ ಸಭೆಯ ಸದಸ್ಯನಾಗಿ ಆಳುವ ಪಕ್ಷ ಮತ್ತು ವಿರೋಧ ಪಕ್ಷದಲ್ಲಿ ಕೆಲಸ ಮಾಡಿದವನು. ಸದನ ಸಮಿತಿಗಳ ಅಧಿಕಾರ ಇದ್ದಾಗ ಬೇರೆ ಬೇರೆ ಸದನ ಸಮಿತಿ ಮಾಡುವುದು ಯಾತಕ್ಕಾಗಿ? ಈಗಾಗಲೇ ದೂರಸಂಪರ್ಕ ಹಗರಣ ಸುಪ್ರೀಂ ಕೋರ್ಟ್‌ನಿಂದ ವಿಶೇಷ ನ್ಯಾಯಾಧೀಶರಿಂದ, ಸಿಬಿಐಯಿಂದ ತನಿಖೆ ಆಗುತ್ತಿದೆ. ಅಲ್ಲದೆ, ಸಂವಿಧಾನದ ಪ್ರಕಾರ ಇರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಲೋಪದೋಷಗಳನ್ನು ಎತ್ತಿ ಹಿಡಿಯಲು ವಿರೋಧಪಕ್ಷಗಳಿಗೆ ಅಧಿಕಾರ ಇದ್ದೇ ಇದೆ. ಅಲ್ಲಿ ದೂರಸಂಪರ್ಕ ಹಗರಣದ ಬಗ್ಗೆ ಸಂಪೂರ್ಣವಾಗಿ ಚರ್ಚಿಸಬಹುದು.ಪ್ರಜಾಪ್ರಭುತ್ವದಲ್ಲಿ ಜನರು ತಾವು ಏನೇ ತಪ್ಪು ಮಾಡಿದ್ದರೂ ಅದರಿಂದ ಜಾರಿಕೊಳ್ಳಲು ಎಲ್ಲ ಕಿತಾಪತಿಗಳನ್ನು ಮಾಡುತ್ತಾರೆ. ಆದರೆ ಸಾಮಾನ್ಯ ಜನರಿಗೆ ಆಗುವ ತೊಂದರೆಗಳನ್ನು ಲಘುವಾಗಿ ನೋಡುವುದು ಸರಿಯಲ್ಲ. ಇಲ್ಲಿ ನಾನು ಬಹಳ ದುಃಖದಿಂದ ಒಂದು ಮಾತನ್ನು ಹೇಳಬೇಕಾಗಿದೆ; ಇದು ಮನೆ ಮಾತಾಗಿರುವ ವಿಷಯ. ರಾಷ್ಟ್ರದ ರಕ್ಷಣೆ ಮಾಡುವ ಯುವಕರನ್ನು ಸೇನೆಗೆ ಭರ್ತಿ ಮಾಡಿಕೊಳ್ಳುವಾಗ ಯುವಕರಿಂದ ಲಂಚ ಪಡೆದು ಭರ್ತಿ ಮಾಡಿಕೊಳ್ಳುತ್ತಾ ಇದ್ದಾರಂತೆ. ದೇಶದ ರಕ್ಷಣೆಯ ವಿಷಯದಲ್ಲಿಯೂ ಸ್ವಾರ್ಥದ ಲೆಕ್ಕವೇ? ರಕ್ಷಣಾ ಮಂತ್ರಿಗಳು ಮತ್ತು ಪ್ರಧಾನಿಗಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು.ಭ್ರಷ್ಟಾಚಾರ ಇಷ್ಟು ವ್ಯಾಪಕವಾದರೆ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಹುತಾತ್ಮರ ಆತ್ಮಗಳು ನಮ್ಮನ್ನು ಎಂದಿಗೂ ಕೂಡ ಕ್ಷಮಿಸಲಾರವು. ಆಳುವ ಮತ್ತು ವಿರೋಧ ಪಕ್ಷಗಳು ಹಟಮಾರಿತನ ಬಿಟ್ಟು ದೇಶ ಕಟ್ಟುವ ಒಳ್ಳೆಯ ಕೆಲಸ ಮಾಡಲಿ. ಹಳ್ಳಿಗಾಡಿನಲ್ಲಿರುವ ಜನರ ಪರಿಸ್ಥಿತಿ ನೋಡಿ ಅವರ ಜೀವನ ವಿಧಾನವನ್ನು ಯಾವ ರೀತಿ ಸುಧಾರಿಸಬೇಕು ಎನ್ನುವ ವಿಷಯದಲ್ಲಿ ಗಂಭೀರವಾಗಿ ಆಲೋಚನೆ ಮಾಡಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.