ಶುಕ್ರವಾರ, ಏಪ್ರಿಲ್ 16, 2021
31 °C

ಸ್ವಾಸ್ಥ್ಯ - ಸೌಖ್ಯ:

ಪ್ರೊ. ಬಿ.ಎಂ. ಹೆಗ್ಡೆ Updated:

ಅಕ್ಷರ ಗಾತ್ರ : | |

ಕೆ. ಎಸ್. ಚಂದ್ರಶೇಖರಯ್ಯ, ಚಾಂಪಲ್ಲಿ

 ನನಗೆ 63 ವರ್ಷ. ಹಿಂದಿನ ವರ್ಷ ಚಿಕೂನ್‌ಗುನ್ಯಾ ಬಂದಿದ್ದಾಗ ಆ ನೋವುಗಳನ್ನು ಭರಿಸಲಾಗದೆ ಆಸ್ಪತ್ರೆಗೆ ಎಡತಾಕುವಂತಾಯಿತು. ತುಸು ಹೆಚ್ಚೇ ಎನಿಸುವ ಮಟ್ಟಿಗೆ ಚುಚ್ಚು ಮದ್ದು ಹಾಗೂ ಮಾತ್ರೆಗಳನ್ನು ಉಪಯೋಗಿಸಬೇಕಾಯಿತು. ಹಾಗೆ ಭೇಟಿ ಕೊಡಲು ಆರಂಭಿಸಿದುದನ್ನು ಕಂಡು ವೈದ್ಯರು ನಿಮಗೆ ‘ರಕ್ತದ ಒತ್ತಡ’ ಇದೆಯೇ? ಎಂದರು. ‘ಅದರ ವಿಷಯವೇ ಗೊತ್ತಿಲ್ಲ’ ಅಂದೆ. ಅವರೇ ಪರೀಕ್ಷಿಸಿ ‘ಇದೆ, ಮಾತ್ರೆ ಉಪಯೋಗಿಸಿ’ ಅಂದರು. ಉಪಯೋಗಿಸಲು ತೊಡಗಿದ ಮೇಲೆ ‘ಇನ್ನೆಷ್ಟು ದಿನ ಈ ರೀತಿ ಸೇವಿಸಬೇಕು?’ ಎಂದೆ. ‘ಒಮ್ಮೆ ಆರಂಭಿಸಿದ ಮೇಲೆ ಪ್ರತೀ ದಿನ ತೆಗೆದುಕೊಳ್ಳಬೇಕು. ನಿಲ್ಲಿಸುವಂತೆಯೇ ಇಲ್ಲ’ ಎಂದರು. ರಕ್ತದೊತ್ತಡ ತಹಬಂದಿಗೆ ತರಲು ಮಾತ್ರೆಗಳನ್ನು ಸದಾ ಬಳಸಬೇಕೆ? ಸ್ಪಷ್ಟಪಡಿಸಿ.

  ರಕ್ತದೊತ್ತಡ ವಿಚಾರ ಸವಿಸ್ತಾರವಾಗಿ ತಿಳಿಸಬೇಕಾದರೆ ಒಂದು ಪುಸ್ತಕವನ್ನೇ ಬರೆಯಬೇಕು. ತಾವು ಒಂದು ತಿಂಗಳು ಈ ಕೆಳಗಿನ ಜಾಗ್ರತೆ ಮಾಡಿ ನಂತರ ಒಬ್ಬ ಹೃದಯವಂತ ವೈದ್ಯರನ್ನು ಕಂಡರೆ ರಕ್ತದೊತ್ತಡ ತಾನಾಗಿಯೇ ಕೆಳಗೆ ಬರಬಹುದು.  ಹಾಗೆ ಆದರೆ ನಂತರ ಈ ಮಾತ್ರೆಗಳನ್ನು ನಿಧಾನದಲ್ಲಿ ಕಡಿಮೆ ಮಾಡುತ್ತಾ ಹೋಗಿ. 2-3 ವಾರದ ನಂತರ ಬಿಡುವ ಸಾಧ್ಯತೆಯೂ ಬರಬಹುದು. ಇದನ್ನು ವೈದ್ಯರ ಸಲಹೆ ಮೇರೆಗೆ ಮಾಡಬೇಕು.

* ಆಹಾರದಲ್ಲಿ ಉಪ್ಪು ತುಂಬಾ ಕಡಿಮೆ.

* ಸಸ್ಯಾಹಾರ, ಹಣ್ಣು ಹಂಪಲು ಸೇವನೆ, ದಿನಕ್ಕೆ ಕಡಿಮೆ ಎಂದರೆ 6 ಸಲ ಸ್ವಲ್ಪ ಸ್ವಲ್ಪ ಆಹಾರ ತೆಗೆದುಕೊಳ್ಳಬೇಕು. ಹೊಟ್ಟೆ ತುಂಬಾ ಊಟ ಮಾಡಬಾರದು.

* ಸಕ್ಕರೆ, ಕೊಬ್ಬು ಇತ್ಯಾದಿ ಆದಷ್ಟು ಕಮ್ಮಿ ಸೇವನೆ.

* ಮನಸ್ಸಿನಲ್ಲಿ ನೆಮ್ಮದಿ ನೆಲೆಸಿರಬೇಕು. ದ್ವೇಷ, ಅಹಂಕಾರ, ಅಸೂಯೆ, ದರ್ಪ ಇದ್ದರೆ ಅದನ್ನು ಬಿಡುವ ಪ್ರಯತ್ನ ಮಾಡಿ ಇದರಿಂದ ರಕ್ತದೊತ್ತಡ ತಾನಾಗಿಯೇ ಕಡಿಮೆ ಯಾಗುವುದು.

* ಎಲ್ಲರನ್ನೂ ಪ್ರೀತಿಸುವ ಮನೋಭಾವ ಇಟ್ಟುಕೊಳ್ಳಿ.

* ಹೊಗೆಸೊಪ್ಪು, ಬೀಡಿ, ಸಿಗರೇಟು ವರ್ಜ್ಯ.

* ದಿನಕ್ಕೆ 6-8 ಗಂಟೆ ನಿದ್ರೆಯಿರಲಿ.

* ದಿನಕ್ಕೆ ಕನಿಷ್ಠ ಒಂದು ಗಂಟೆ ವ್ಯಾಯಾಮ (ನಡಿಗೆ) ಮಾಡಿ.

ಚೇತನ ಜಿ., ದಾವಣಗೆರೆ

ನನಗೆ 21 ವರ್ಷ. ನಾನು ಪದವಿ ಅಂತಿಮ ವರ್ಷ ಓದುತ್ತಿರುವ ವಿದ್ಯಾರ್ಥಿ. ನನಗೆ ತುಂಬಾ ಚಿಕ್ಕಪ್ರಾಯದಲ್ಲಿ  ಕೈ, ಕಾಲು, ಭುಜ, ಹೊಟ್ಟೆ, ಎದೆಯ ಮೇಲೆ  ವಿಪರೀತ ಕೂದಲು (ರೋಮ) ಬೆಳೆದುಕೊಂಡಿದೆ. ಇದರಿಂದ ತುಂಬಾ ನೊಂದಿದ್ದೇನೆ. ಜಿಗುಪ್ಸೆ ಆಗುತ್ತಿದೆ.

ನಿಮ್ಮ ದೇಹದ ಕೂದಲು ಉತ್ತಮ ಆರೋಗ್ಯದ ಸಂಕೇತ. ಅದನ್ನು ತೆಗೆಯಲು ಏನಾದರೂ ಲೇಪ ಹಾಕಬೇಕೇ ವಿನಃ ತೆಗೆಯುವ ಪ್ರಯತ್ನ ಮಾಡಬಾರದು.

ಬವಸಲಿಂಗಪ್ಪ, ತಿಮ್ಮನಹಳ್ಳಿ.

 ನನಗೆ ಈಗ 77 ವರ್ಷ. 25 ವರ್ಷಗಳಿಂದ ಬಿ.ಪಿ. ಇದೆ. ಇದಕ್ಕೆ ದಿನಕ್ಕೆ ಒಂದು ಮಾತ್ರೆ ತೆಗೆದು ಕೊಳ್ಳುತ್ತಿದ್ದೇನೆ. ಈಗ ಒಂದು ವರ್ಷದಿಂದ ಸೊಂಟದ ಸುತ್ತ ಉರಿ. ಇದು ಒಮ್ಮೆ ಬೆನ್ನಿನಲ್ಲೂ, ಒಮ್ಮೆ ಹೊಟ್ಟೆಯಲ್ಲಿ ಇರುತ್ತದೆ. ನಡೆಯುವಾಗ ಗಂಟಲಿನ ಕೆಳಭಾಗದಲ್ಲಿ ಸ್ವಲ್ಪ ಉರಿಯಾಗುತ್ತದೆ. ಇದಕ್ಕೆ ತಕ್ಕ ಚಿಕಿತ್ಸೆಯನ್ನು ತಿಳಿಸಬೇಕಾಗಿ ವಿನಂತಿ.

ದಯವಿಟ್ಟು ನಿಮ್ಮ ವೈದ್ಯರನ್ನು ನೋಡಿ. ನಿಮಗೆ ಇನ್ನೂ ಈ ಔಷಧಿಯ ಅಗತ್ಯವಿದೆಯೇ  ಎಂದು ತಿಳಿದುಕೊಳ್ಳಿ. ನಿಮ್ಮ ಕಷ್ಟ ನಿವರಣೆಯಾಗುತ್ತದೆ.ಎಚ್. ಟಿ. ರಾಜಣ್ಣ, ಬೆಂಗಳೂರು

 ನನಗೆ 76 ವರ್ಷಗಳು, ಕೆಲವು ದಿವಸದಿಂದ ಬೆಳಿಗ್ಗೆ ಎದ್ದ ತಕ್ಷಣ ತಲೆಸುತ್ತುತ್ತದೆ. ಆದರೆ ನಾನು ತಕ್ಷಣ ಏಳುವುದಿಲ್ಲ. (ಇದು ಬೆಳಿಗ್ಗೆ ಎದ್ದ ಕೂಡಲೇ ಆಗುತ್ತದೆಯೇ ಹೊರತು ಮಧ್ಯಾಹ್ನ ಅಥವಾ ಬೇರಾವ ಸಮಯದಲ್ಲಿ ಆಗುವುದಿಲ್ಲ) ಈ ಸಮಸ್ಯೆಗೆ ದಯವಿಟ್ಟು ಪರಿಹಾರ ತಿಳಿಸಿ.

 ಇದು ಒಂದು ದೊಡ್ಡ ಕಾಯಿಲೆ ಅಲ್ಲ. ನೀವು ಬೆಳಿಗ್ಗೆ ಏಳುವಾಗ ನಿಧಾನವಾಗಿ ಎದ್ದು ಮತ್ತು ಕುಳಿತುಕೊಳ್ಳುವಾಗ ನಿಧಾನವಾಗಿ ಕುಳಿತು ಹಾಗೆಯೇ ನಿಂತು ನಿಧಾನವಾಗಿ ಚಲಿಸಿರಿ. ಇದಕ್ಕೆ ಕೆಲವು ಸುಲಭದ ವ್ಯಾಯಾಮಗಳಿದೆ. ಉತ್ತಮ ನರ ರೋಗ ತಜ್ಞರನ್ನು ನೋಡಿ. ಹೆದರಿಕೆ ಬೇಡ. ಕೊಲೆಸ್ಟ್ರಾಲ್ ಒಂದು ಕಾಯಿಲೆ ಅಲ್ಲ. ಮಾಂಸಾಹಾರ ಅದನ್ನು ಹೆಚ್ಚಿಸುತ್ತದೆ. ನನಗೆ ತಿಳಿದಂತೆ ಕೊಲೆಸ್ಟ್ರಾಲಿಗೆ ಔಷಧಿ ಅಗತ್ಯವಿಲ್ಲ. ಆದರೆ ನಿಮ್ಮ ವೈದ್ಯರ ಸಲಹೆಯನ್ನು ಪಾಲಿಸಿ. ದಿನಾ ಒಂದು ಗಂಟೆ ನಡೆಯಿರಿ. ಸಸ್ಯಾಹಾರಿಗಳಾಗಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.