ಶುಕ್ರವಾರ, ಮೇ 14, 2021
21 °C

ಹಂದಿಗೋಡು ಕಾಯಿಲೆಯ ನೋವು

ಎಂ. ರಾಘವೇಂದ್ರ Updated:

ಅಕ್ಷರ ಗಾತ್ರ : | |

ಮನುಷ್ಯರ ಮಾತು ಹಾಗಿರಲಿ ದಲಿತರ ವಿಷಯದಲ್ಲಿ ನಿಸರ್ಗವೂ ಪಕ್ಷಪಾತಿಯೇ?

ಇಂತಹದೊಂದು ಭಾವನೆ ಮೂಡುವುದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಂದಿಗೋಡು ಗ್ರಾಮ ನೋಡಿದಾಗ.`ಹಂದಿಗೋಡು~ ಎಂಬ ಕಾಯಿಲೆ ಹೆಸರಿನಿಂದಲೇ ಗುರುತಿಸಿಕೊಳ್ಳಬೇಕಾದುದು ಈ ಹಳ್ಳಿಯ ದುರಂತ. ಈ ಗ್ರಾಮದ ದಲಿತರಾದ ಛಲವಾದಿ ಜನಾಂಗದವರ ಬದುಕನ್ನು ಹಂದಿಗೋಡು ಕಾಯಿಲೆ ಕಿತ್ತು ತಿನ್ನುತ್ತಿದೆ.ಎಂಟು ವರ್ಷದ ಬಾಲಕನಿಗೊ, ಬಾಲಕಿಗೊ ಆರಂಭದಲ್ಲಿ ಸಣ್ಣದಾಗಿ ಸಂದು ನೋವು ಕಾಣಿಸಿಕೊಳ್ಳುತ್ತದೆ. ನಂತರ ಅವರ ದೈಹಿಕ ಬೆಳವಣಿಗೆಯೇ ನಿಂತು ಹೋಗಿ ಕುಬ್ಜರಾಗುತ್ತಾರೆ. ಕೈ ಕಾಲುಗಳು ಸಣ್ಣದಾಗಿ ನಿಂತುಕೊಂಡೆ ಮಲ ವಿಸರ್ಜನೆ ಮಾಡಬೇಕಾದ ಸ್ಥಿತಿಗೆ ಅವರು ತಲುಪುತ್ತಾರೆ.ಇಂತಹದೊಂದು ಭೀಕರ ಕಾಯಿಲೆ ಇಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 1975ನೇ ಸಾಲಿನಲ್ಲಿ. ಆದರೆ, ಇಂದಿಗೂ ಈ ಕಾಯಿಲೆಗೆ ಕಾರಣವೇನೆಂಬುದು ನಿಗೂಢವಾಗಿಯೇ ಉಳಿದಿದೆ. ತನ್ಮೂಲಕ ವೈದ್ಯಕೀಯ ವಿಜ್ಞಾನಕ್ಕೆ  `ಹಂದಿಗೋಡು~ ಕಾಯಿಲೆ ದೊಡ್ಡ ಸವಾಲು ಎಸೆದಿದೆ.ಹಂದಿಗೋಡು ಕಾಯಿಲೆಗೆ ತುತ್ತಾದವರು ಪ್ರತಿನಿತ್ಯ ಅನುಭವಿಸುತ್ತಿರುವ ನೋವು, ನಿರಾಸೆ ಅವಮಾನಗಳನ್ನು ನೋಡಬೇಕೆಂದರೆ ನೀವು ಹಂದಿಗೋಡಿಗೆ ಬರಬೇಕು.ಇಲ್ಲೊಬ್ಬ ನಾಗರಾಜ ಎಂಬಾತನಿದ್ದಾನೆ. ಆತನ ತಂದೆ-ತಾಯಿ, ಅಕ್ಕ, ತಂಗಿ ಹೀಗೆ ಕುಟುಂಬದ ಎಲ್ಲರೂ ಹಂದಿಗೋಡು ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಈಗ ನಾಗರಾಜನಿಗೂ ಈ ಕಾಯಿಲೆ ಬಂದಿದೆ. ಎಲ್ಲರಂತೆ ಕೆಲಸ ಮಾಡಿಕೊಂಡು ಓಡಾಡಿಕೊಂಡು ಇರುವ ವಯಸ್ಸಿನಲ್ಲಿ ನಾಗರಾಜ ಮುದುಕನಂತೆ ಕೋಲು ಹಿಡಿದು ಕಟ್ಟೆಯ ಮೇಲೆ ಕುಳಿತಿರುತ್ತಾನೆ.ಮತ್ತೊಬ್ಬರು ಸುಬ್ಬಮ್ಮ. ಇವರ ತಂದೆ-ತಾಯಿ ಅಣ್ಣ, ತಮ್ಮ ಹಂದಿಗೋಡಿಗೆ ಬಲಿಯಾಗಿದ್ದು, ಅವರ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಬದುಕಿನಲ್ಲಿ ಭರವಸೆಯ ಆಶಾಕಿರಣವೇ ಈ ರೋಗಿಗಳ ಪಾಲಿಗೆ ಇಲ್ಲವಾಗಿದೆ. ಏಕೆಂದರೆ ಒಂದಲ್ಲ ಒಂದು ದಿನ ಕಾಯಿಲೆ ವಾಸಿಯಾಗಿ ನೀವು ಸಹಜ ಸ್ಥಿತಿಗೆ ಮರಳುತ್ತೀರಿ ಎಂದು ಸಾಂತ್ವನ ಹೇಳುವ ಧೈರ್ಯ ಯಾವ ವೈದ್ಯರಲ್ಲೂ ಇಲ್ಲವಾಗಿದೆ. ನೋವು ನಿವಾರಕ ಮಾತ್ರೆ ನುಂಗುತ್ತಾ ಕೊನೆಗೆ ಅಕ್ಷರಶಃ ಹುಳುವಿನಂತೆ ತೆವಳುವ ಸ್ಥಿತಿಗೆ ಅವರು ತಲುಪುತ್ತಾರೆ.ಹಾಗೆಂದು ಈ ಕಾಯಿಲೆ ಕುರಿತು ಯಾವುದೇ ಸಂಶೋಧನೆ ನಡೆದಿಲ್ಲ ಎನ್ನುವಂತಿಲ್ಲ. ಈವರೆಗೆ ರಾಜ್ಯ ಸರ್ಕಾರದ 9 ತಂಡಗಳು ಕೇಂದ್ರ ಮಟ್ಟದ 12 ತಂಡಗಳು ಈ ಕಾಯಿಲೆಗೆ ಕಾರಣ ಮತ್ತು ಪರಿಹಾರ ಕಂಡು ಹಿಡಿಯುವ ಸಂಬಂಧ ಸಂಶೋಧನೆ ನಡೆಸಿವೆ.1986ರಿಂದ ನವದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಂದಿಗೋಡು ಕಾಯಿಲೆ ಬಗ್ಗೆ ನಿರಂತರವಾಗಿ ಸಂಶೋಧನೆ ಕೈಗೊಂಡಿದೆ. ಆದಾಗ್ಯೂ ಇಂದಿಗೂ ಈ ಕಾಯಿಲೆಗೆ ನಿಖರ ಕಾರಣವೇನೆಂಬುದು ಪತ್ತೆಯಾಗಿಲ್ಲ.ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹಂದಿಗೋಡು ಕಾಯಿಲೆ ಸಂತ್ರಸ್ತರಿಗಾಗಿಯೇ ವಿಶೇಷ ಘಟಕವನ್ನು ತೆರೆಯಲಾಗಿದೆ. ಹಂದಿಗೋಡು ಗ್ರಾಮದಲ್ಲಿ ರೋಗಪೀಡಿತ ಕುಟುಂಬದ ಮಕ್ಕಳಿಗಾಗಿ ಸರ್ಕಾರ ಹಾಸ್ಟೆಲ್ ಆರಂಭಿಸಿದೆ. ರೋಗ ತಗುಲಿರುವ ವ್ಯಕ್ತಿಗಳ ಮತ್ತು ಆ ಕೇರಿಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಅವರಿಗೆ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಕ್ರಮ ಹಾಸ್ಟೆಲ್ ಮೂಲಕ ನಡೆದಿದೆ.ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಹೂಡಿದ ಗ್ರಾಮಗಳ ಪೈಕಿ ಹಂದಿಗೋಡು ಕೂಡ ಒಂದು. ಇದರಿಂದ ಗ್ರಾಮದ ರಸ್ತೆಯ ಗುಣಮಟ್ಟ ಸುಧಾರಿಸಿತೇ ವಿನಃ ರೋಗಪೀಡಿತರಿಗೆ ಯಾವುದೇ ಪ್ರಯೋಜನವಾಗಿಲ್ಲ. ವಿಧಾನಸೌಧದ ಬಾಂಕ್ವೆಟ್‌ಹಾಲ್‌ನಲ್ಲಿ ಉನ್ನತ ಅಧಿಕಾರಿಗಳ, ತಜ್ಞ ವೈದ್ಯರ ಸಭೆ ಕರೆದು ಹಂದಿಗೋಡು ಕಾಯಿಲೆ ಬಗ್ಗೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಅಂದು ಕುಮಾರಸ್ವಾಮಿ ನೀಡಿದ್ದ ಭರವಸೆ ಹಾಗೆ ಉಳಿದಿದೆ.ಜಾತಿ ಕಾರಣಕ್ಕಾಗಿ ಪ್ರತ್ಯೇಕ ಕೇರಿ ಹೊಂದುವ ಜೊತೆಗೆ ಕಾಯಿಲೆಯಿಂದಾಗಿ ಪಡೆದಿರುವ ಕುಬ್ಜತನದ ಅವಮಾನವನ್ನೂ ಸಹಿಸಿಕೊಂಡು ಹಂದಿಗೋಡು ಸಂತ್ರಸ್ತರು ಬದುಕಬೇಕಾಗಿದೆ. ಎಲ್ಲವನ್ನೂ ವೋಟಿನ ದೃಷ್ಟಿಯಿಂದ ನೋಡುವ ನಮ್ಮ ರಾಜಕಾರಣಿಗಳು ರೋಗದ ತೀವ್ರತೆಗಿಂತ ರೋಗಿಗಳ ಸಂಖ್ಯೆಯ ಮೇಲೆ ಕಣ್ಣಿಟ್ಟಿರುವುದರಿಂದ ಅವರಿಗೆ ಇದು ದೊಡ್ಡ ಸಮಸ್ಯೆಯೇ ಅಲ್ಲ.ಹಂದಿಗೋಡು ಕಾಯಿಲೆ ಸಂತ್ರಸ್ತರಿಗೆ ನೋವು ನಿವಾರಕ ಔಷಧ, ಅಂಗವಿಕಲರ ವೇತನದ ಹೆಸರಿನಲ್ಲಿ ಪುಡಿಗಾಸು, ಅವರ ಸಂತ್ರಸ್ತರ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಇವಿಷ್ಟೇ ತನ್ನ ಕೆಲಸ ಎಂದು ಸರ್ಕಾರ ಭಾವಿಸಿದಂತಿದೆ. ಆದರೆ, ಮುಖ್ಯವಾಗಿ ಆಗಬೇಕಾಗಿರುವುದು ಕಾಯಿಲೆಗೆ ಸಂಬಂಧಪಟ್ಟಂತೆ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳು ಚುರುಕುಗೊಳ್ಳುವಂತೆ ಮಾಡುವುದು.ಬದುಕನ್ನೇ ಕತ್ತಲು ಮಾಡುವ ಕಾಯಿಲೆಗೆ ಕಾರಣ ಗೊತ್ತಾಗಿ, ಔಷಧ ಕಂಡುಹಿಡಿದಲ್ಲಿ ಮಾತ್ರ ಹಂದಿಗೋಡಿನ ದಲಿತರಿಗೆ ಅಂಟಿರುವ ಶಾಪ ವಿಮೋಚನೆ ಆಗಲು ಸಾಧ್ಯ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಷ್ಟೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.