ಭಾನುವಾರ, ಫೆಬ್ರವರಿ 28, 2021
23 °C

ಹಂಪಿಯ ಮೌನ ಕಥೆಗಳು

ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಹಂಪಿಯ ಮೌನ ಕಥೆಗಳು

ಕರ್ನಾಟಕದಲ್ಲಿ ಸಾಂಸ್ಕೃತಿಕ, ಐತಿಹಾಸಿಕ ಸ್ಥಳವಾದ  ಹಂಪಿ ಅದೆಷ್ಟೋ ಕಥೆಗಳನ್ನು ಒಡಲಲ್ಲಿಟ್ಟುಕೊಂಡಿದೆ. ಜೀವಂತ ಕಲೆಗೆ ಸಾಕ್ಷ್ಯವಾಗಿರುವ ಈ ಸ್ಥಳ ಒಬ್ಬೊಬ್ಬರಿಗೆ ದಕ್ಕುವುದು ಒಂದೊಂದು ರೀತಿ. ಛಾಯಾಗ್ರಾಹಕ ಪ್ರಬುದ್ಧ ದಾಸ್‌ಗುಪ್ತಾ ಅವರಿಗೂ ಹಂಪಿ ಕಂಡಿದ್ದು ಭಿನ್ನವಾಗಿ.

ಮೂರು ದಶಕಗಳಿಂದಲೂ ಫ್ಯಾಷನ್ ಫೋಟೊಗ್ರಫಿಯಲ್ಲಿ ಗುರುತಿಸಿಕೊಂಡಿದ್ದ ದಾಸ್‌ಗುಪ್ತಾ ಅವರದ್ದು ಮೂಲತಃ ಕೋಲ್ಕತ್ತ. ಕಪ್ಪು–ಬಿಳುಪಿನ ಚಿತ್ರಗಳಲ್ಲೇ ಬದುಕಿನ ವಿವಿಧ ಬಣ್ಣಗಳನ್ನು ತೆರೆದಿಟ್ಟವರು. ಆ ಮೂಲಕವೇ ಕಲಾ ಕೌಶಲ ಪ್ರದರ್ಶಿಸಿದವರು.  ಹಲವು ಆಯಾಮಗಳ ತಮ್ಮ ಚಿತ್ರಗಳ ಮೂಲಕ ಹಂಪಿಯನ್ನು ಹಿಡಿದಿಟ್ಟವರು. 2012ರಲ್ಲಿ ಅವರು ಸಾವನ್ನಪ್ಪಿದರು. ‘ದಿ ಸೈಲೆನ್ಸ್ ಆಫ್ ಹಂಪಿ’ ಎಂಬ ಹೆಸರಿನಲ್ಲಿ ಗಂಜಾಂ,  ಚಿತ್ರಗಳ ಪ್ರದರ್ಶನ ಆಯೋಜಿಸಿದೆ. ಐದಾರು ವರ್ಷಗಳ ಹಿಂದೆ ದಾಸ್‌ಗುಪ್ತಾ ತೆಗೆದ ಹಂಪಿಯ ಚಿತ್ರಗಳನ್ನು ಕಲೆಹಾಕಿ ಪ್ರದರ್ಶನ ಏರ್ಪಡಿಸಲಾಗಿದೆ. ಪ್ರಬುದ್ಧ ದಾಸ್‌ಗುಪ್ತ ಅವರು ಸ್ವಯಂ ಕಲಿಕೆ ಮೂಲಕ ಛಾಯಾಗ್ರಾಹಕರಾಗಿ ಬೆಳೆದವರು.  ಇತಿಹಾಸವನ್ನು ಅಧ್ಯಯನ ಮಾಡಿದರೂ, ಕಾಪಿರೈಟರ್ ಆಗಿ ವೃತ್ತಿ ಆರಂಭಿಸಿ, ಛಾಯಾಗ್ರಹಣದತ್ತ ವಾಲಿದವರು.ವ್ಯಕ್ತಿಗತ ಸಂವೇದನೆಗಳ  ಛಾಯಾಚಿತ್ರಗಳ ಮೂಲಕ ಅತ್ಯಲ್ಪ ಕಾಲದಲ್ಲಿ ದೇಶದ ಪ್ರಮುಖ ಛಾಯಾಗ್ರಾಹಕ ಎನಿಸಿಕೊಂಡರು. ಅಷ್ಟೇ ಅಲ್ಲ, ಅವರದ್ದೇ ಪುಸ್ತಕಗಳನ್ನೂ ಹೊರತಂದಿದ್ದರು. ಅವರ  ‘ವುಮೆನ್’, ಭಾರತದ ಮಹಿಳೆಯರ ನಗ್ನ ಚಿತ್ರಗಳನ್ನು ಹೊಂದಿದೆ ಎಂಬ ಕಾರಣಕ್ಕೆ ವಿವಾದಾತ್ಮಕ ಪುಸ್ತಕವಾಗಿ ಸುದ್ದಿ ಮಾಡಿತ್ತು. ಅವರ ‘ಲಡಾಖ್‌’ ಭಾರತದ ಗಡಿ ಭಾಗದ ವನ್ಯಜೀವಿಗಳ ಅನ್ವೇಷಣೆಯನ್ನು ಬಿಂಬಿಸುವ ಚಿತ್ರಗಳ ಸಂಗ್ರಹ. ‘ಎಡ್ಜ್ ಆಫ್ ಫೇಯ್ತ್’ ಅವರ ಇನ್ನೊಂದು ಕೃತಿ.ಪ್ರಬುದ್ಧ ಅವರ ಛಾಯಾಚಿತ್ರಗಳು ಭಾರತ ಮತ್ತು ವಿದೇಶಗಳಲ್ಲಿ  ಹಲವು ಪ್ರದರ್ಶನಗಳನ್ನು ಕಂಡಿವೆ. ಇದೀಗ ಬೆಂಗಳೂರಿನಲ್ಲಿ ಹಂಪಿ ಕುರಿತಾದ ಅವರ ಛಾಯಾಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಈ ಪ್ರದರ್ಶನದ ಉದ್ದೇಶದ ಕುರಿತು ಗಂಜಾಂನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಗಂಜಾಂ ಅವರು ವಿವರಣೆ ನೀಡಿದ್ದು ಹೀಗೆ...‘ಗಂಜಾಂಗೂ ಕಲೆಗೂ ಹಲವು ವರ್ಷಗಳ ನಂಟಿದೆ. ಸಂಗೀತ, ಕಲೆಗೆ ಎಂದಿಗೂ ಪ್ರೋತ್ಸಾಹ ಇದ್ದೇ ಇದೆ. ಹಾಗೆಯೇ ಛಾಯಾಚಿತ್ರ ಕಲೆಯನ್ನು ಪ್ರೋತ್ಸಾಹಿಸಲೆಂದೇ ನೂತನ ಕಲಾ ಗ್ಯಾಲರಿಯನ್ನು ತೆರೆಯಲಾಗಿದೆ. ಪ್ರಬುದ್ಧ ದಾಸ್‌ಗುಪ್ತಾ ಅವರ ಛಾಯಾಚಿತ್ರಗಳ ಮೂಲಕ ಮೊದಲ ಪ್ರದರ್ಶನ ಉದ್ಘಾಟನೆ ಮಾಡಲಾಗಿದೆ. ಅವರ ಛಾಯಾಗ್ರಹಣದಲ್ಲಿನ ಹಿಡಿತಕ್ಕೆ ಒಂದು ಉದಾಹರಣೆ ಈ ಫೋಟೊಗಳು.‘ದಿ ಸೈಲೆನ್ಸ್ ಆಫ್ ಹಂಪಿ’  ಎಂಬ ಛಾಯಾಚಿತ್ರ ಪ್ರದರ್ಶನವಷ್ಟೇ ಅಲ್ಲದೆ, ಹಂಪಿಯ ಸುಮಾರು ನೂರು ಛಾಯಾಚಿತ್ರಗಳನ್ನೊಳಗೊಂಡ ‘ಹಂಪಿ’ ಎಂಬ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು. ಪುಸ್ತಕವನ್ನು ಪ್ರಬುದ್ಧ ದಾಸ್‌ಗುಪ್ತಾ ಅವರ ಮಗಳು ಮಾಯಾ ದಾಸ್‌ಗುಪ್ತಾ ಅವರು ಬಿಡುಗಡೆ ಮಾಡಿದರು.ಹಂಪಿಯ ವಿವಿಧ ಆಯಾಮವನ್ನು, ಸೌಂದರ್ಯವನ್ನು, ಅದರೊಳಗಿನ ಭಾವಗಳನ್ನು ಕಪ್ಪು ಬಿಳುಪಿನ ಚಿತ್ರಗಳು ತೆರೆದಿಟ್ಟಿದ್ದವು. ದಾಸ್‌ಗುಪ್ತಾ ಅವರ ಅನನ್ಯ ಕಲಾಗ್ರಹಿಕೆಗೂ ಇವು ಸಾಕ್ಷ್ಯವಾಗಿದ್ದವು.  ಹಂಪಿ ಹಾಗೂ ಅದರ ಮೌನದ ನಡುವಣ ಸಂವಾದವನ್ನು ಈ ಚಿತ್ರಗಳು ಕಟ್ಟಿಕೊಡುತ್ತವೆ. ಪ್ರದರ್ಶನವು ಜನವರಿ 21ಕ್ಕೆ ಆರಂಭಗೊಂಡಿದ್ದು,  ಮಾರ್ಚ್ 30ರವರೆಗೆ ಮುಂದುವರೆಯುತ್ತದೆ.   ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 11ರಿಂದ ಸಂಜೆ 7ರವರೆಗೂ ಪ್ರದರ್ಶನವಿರುತ್ತದೆ.ಸ್ಥಳ: ಗಂಜಾಂ, 22/12, ವಿಠ್ಠಲ್‌ ಮಲ್ಯ ರಸ್ತೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.