ಹಕ್ಕಿಹಾರಿ ಹೋಯಿತು; ಹಾವು ಪಂಜರ ಸೇರಿತು!

ಕಾರವಾರ: ಇದು ಆಹಾರ ಹುಡುಕಿಕೊಂಡು ಬಂದ ಕೆರೆ ಹಾವಿನ ದುರಂತ ಕಥೆ.
ನಗರದ ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಪಕ್ಕದಲ್ಲಿದ್ದ ಗಟಾರಿನಲ್ಲಿ ಎರಡು ಹಕ್ಕಿಗಳಿದ್ದ ಪಂಜರವನ್ನು ಯಾರೋ ಎಸೆದು ಹೋಗಿದ್ದರು. ಗಟಾರಿನಲ್ಲಿ ನೀರು ಹರಿಯುತ್ತಿರುವುದನ್ನು ಲೆಕ್ಕಿಸದೆ ಪಂಜರ ಎಸೆದಿದ್ದರು.
ಈ ಪಂಜರ ಎಸೆದ ಕೆಲವೇ ಕ್ಷಣದಲ್ಲಿ ಹಕ್ಕಿಗಳನ್ನು ಬೇಟೆಯಾಡಲು ಕೆರೆ ಹಾವು ಅಲ್ಲಿಗೆ ಬಂದಿತು. ಹಾವನ್ನು ನೋಡಿ ಪಕ್ಷಿಗಳು ಚೀರಲು ಪ್ರಾರಂಭಿಸಿದವು. ಹಾವು ಹತ್ತಿರ ಹತ್ತಿರ ಬರುತ್ತಿದ್ದಂತೆ ಅವುಗಳ ಚೀರಾಟ ಮುಗಿಲು ಮುಟ್ಟಿತು.
ಪಕ್ಷಿಗಳ ಚೀರಾಟ ಕೇಳಿ ಅಲ್ಲಿ ಸಮೀಪದಲ್ಲಿಯೇ ಇದ್ದ ಅಟೊ ಚಾಲಕರು, ಸಾರ್ವಜನಿಕರು ಓಡಿ ಬಂದರು. ಹಕ್ಕಿಗಳ ಗೋಳು ನೋಡಿದ ಚಾಲಕರು ಹೊಸ ಕಟಿಂಗ್ ಪ್ಲೆಯರ್ ಖರೀದಿಸಿ ಪಂಜರಕ್ಕೆ ಬಳಸಿದ ತಂತಿಯನ್ನು ಕತ್ತರಿಸಿ ಹಕ್ಕಿಗಳನ್ನು ಅಪಾಯದಿಂದ ರಕ್ಷಿಸಿದರು.
ಆದರೆ, ಪಕ್ಷಿಗಳನ್ನು ಬೇಟೆಯಾಡಲು ಬಂದ ಹಾವು ಮಾತ್ರ ಪಂಜರದೊಳಗೆ ದೇಹ ತೂರಿಕೊಂಡು ಅಲ್ಲೇ ಸಿಕ್ಕಿಹಾಕಿಕೊಂಡಿತು. ಹಾವು ಪಂಜರದಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಲೇ ಇತ್ತು ಆದರೆ ಹಾವಿನ ಪ್ರಯತ್ನ ಫಲಿಸಲಿಲ್ಲ. ಅದನ್ನು ಪಂಜರದಿಂದ ತಪ್ಪಿಸಲು ಹೋದರೆ ಹಾವಿನ ದೇಹಕ್ಕೆ ಅಪಾಯವಿದ್ದಿದ್ದರಿಂದ ಸುತ್ತಲೂ ನೆರೆದ ಸಾರ್ವಜನಿಕರು ಮೂಕ ಪ್ರೇಕ್ಷಕರಾದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.