ಶುಕ್ರವಾರ, ಮೇ 27, 2022
30 °C

ಹಣದ ಬೆಳೆ ತಂಬಾಕು 2020ಕ್ಕೆ ಅಂತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ಪಾದನೆ ಕಡಿಮೆ ಆದರೂ ತೊಂದರೆಯಿಲ್ಲ; ಆದರೆ, ಹೆಚ್ಚು ಬೆಳೆ ಮಾತ್ರ ಬೇಡ'! ಇದು ತಂಬಾಕು ಮಂಡಳಿಯ ಇತ್ತೀಚಿನ ವರ್ಷಗಳ ಘೋಷ ವಾಕ್ಯ!ಒಂದು ಕಾಲದಲ್ಲಿ ತಂಬಾಕು ಬೆಳೆಯನ್ನು ಹೆಚ್ಚು ಹೆಚ್ಚಾಗಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದ ತಂಬಾಕು ಮಂಡಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) 2020ರೊಳಗೆ ತಂಬಾಕು ಉತ್ಪಾದನೆಯನ್ನು ಹತೋಟಿಗೆ ತರಬೇಕು ಎಂದು ನೀಡಿರುವ ಆದೇಶ ಚುರುಕು ಮುಟ್ಟಿಸಿದೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ತಂಬಾಕು ಬೆಳೆಯುವ ಮಿತಿಯನ್ನು ಕಡಿಮೆಗೊಳಿಸುವತ್ತ ಹಾಗೂ ಪರ್ಯಾಯ ಬೆಳೆಗಳತ್ತ ರೈತರನ್ನು ಸೆಳೆಯುವ ಮೂಲಕ `ಕ್ಯಾನ್ಸರ್ ಮಾರಿ' ಎಂದೇ ಬಿಂಬಿತವಾಗಿರುವ ತಂಬಾಕು ಬೆಳೆಯನ್ನು ಕಡಿಮೆ ಮಾಡುವತ್ತ ತಂಬಾಕು ಮಂಡಳಿ ಹೆಜ್ಜೆ ಇಟ್ಟಿದೆ.ರಾಜ್ಯದಲ್ಲಿ ಶಿವಮೊಗ್ಗ, ಚಾಮರಾಜನಗರ, ಮೈಸೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ವರ್ಜೀನಿಯಾ ತಂಬಾಕನ್ನು ಬೆಳೆಯಲಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 5 ಲಕ್ಷ ಕೆ.ಜಿ., ಚಾಮರಾಜನಗರ ಜಿಲ್ಲೆಯಲ್ಲಿ 2.20 ಲಕ್ಷ ಕೆ.ಜಿ ಹಾಗೂ ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ 90ರಿಂದ 100 ದಶಲಕ್ಷ ಕೆ.ಜಿ ತಂಬಾಕು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಅಧಿಕೃತ ತಂಬಾಕು ಬೆಳೆಗಾರರ ಸಂಖ್ಯೆ 42 ಸಾವಿರದಷ್ಟಿದೆ. ಆದರೆ, ಅನಧಿಕೃತ ಬೆಳೆಗಾರರ ಸಂಖ್ಯೆ ಮಾತ್ರ ಬರೋಬ್ಬರಿ 30 ಸಾವಿರ!ರಾಜ್ಯದಲ್ಲಿ ಅನಧಿಕೃತ ತಂಬಾಕು ಬೆಳೆಗಾರರ ನಿಖರ ಸಂಖ್ಯೆ ಮಂಡಳಿಗೂ ಲಭ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಪ್ರತಿ ವರ್ಷ ತಂಬಾಕು ವಹಿವಾಟು ನಡೆಯುವ ಸಂದರ್ಭದಲ್ಲಿ ಬೆಲೆಯಲ್ಲಿ ವ್ಯತ್ಯಾಸವಾಗಿ ಅಧಿಕೃತ ಬೆಳೆಗಾರರು ಪರದಾಡುವಂತಾಗಿದೆ. ರಾಜ್ಯದಲ್ಲಿ ಒಟ್ಟು 57,500 ಬ್ಯಾರನ್(ಬೆಂಕಿ ಉರಿಸಿ ತಂಬಾಕು ಹದ ಮಾಡುವ ಕಟ್ಟಡ)ಗಳಿಗೆ ಪರವಾನಗಿ ಇದೆ. ಆದಾಗ್ಯೂ, ಅನಧಿಕೃತ ಬೆಳೆಗಾರರಿಗೆ ಮೂಗುದಾರ ಹಾಕಲು ಮಂಡಳಿ ಇಂದಿಗೂ ಬವಣೆ ಪಡುತ್ತಿದೆ.2012ರ ಅಂಕಿ-ಅಂಶಗಳನ್ನು ಗಮನಿಸಿದರೆ ಭಾರತವೂ ಸೇರಿದಂತೆ ವಿಶ್ವದ 117 ದೇಶಗಳಲ್ಲಿ 120 ಕೋಟಿ ಜನರು ತಂಬಾಕು ಸೇವನೆ ಮಾಡುತ್ತಿದ್ದು, ಈ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ಡಬ್ಲ್ಯುಎಚ್‌ಒ ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಿದೆ. ತಂಬಾಕು ಬೆಳೆಗೆ ನೀಡುತ್ತಿರುವ ಹಣಕಾಸು ನೆರವನ್ನು ನಿಲ್ಲಿಸುವಂತೆ ಭಾರತ ಸೇರಿದಂತೆ ವಿವಿಧ ದೇಶಗಳ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ಕ್ರಮ ಜಾರಿಗೆ ಬಂದರೆ ಬೆಳೆಗಾರರಿಗೆ ಪೆಟ್ಟು ಬೀಳುವುದು ಖಚಿತ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಂತರರಾಷ್ಟ್ರೀಯ ತಂಬಾಕು ಬೆಳೆಗಾರರ ಒಕ್ಕೂಟ `ಡಬ್ಲ್ಯುಎಚ್‌ಒ- ಕೇವಲ ಆರೋಗ್ಯ ಸಮಸ್ಯೆಗಳತ್ತ ಮಾತ್ರ ಗಮನ ಹರಿಸುತ್ತಿದೆ. ತಂಬಾಕು ಬೆಳೆಗಾರರ ಸ್ಥಿತಿಯನ್ನೂ ಗಮನಿಸಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದೆ.ತಂಬಾಕು ಮಂಡಳಿ

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು, ತಂಬಾಕು ಬೆಳೆಗಾರರಿಗೆ `ನ್ಯಾಯ'ಯುತ ಬೆಲೆ ಒದಗಿಸಲು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸಲು 1976ರ ಜನವರಿ 1ರಂದು ತಂಬಾಕು ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿ ಕಾರ್ಯ ನಿರ್ವಹಿಸುತ್ತಿದೆ. ವಾರ್ಷಿಕ ಬೆಳೆ ಪ್ರಮಾಣ, ದರ ನಿಗದಿ, ದೇಶ-ವಿದೇಶಗಳಲ್ಲಿ ವರ್ಜೀನಿಯಾ ತಂಬಾಕಿಗೆ ಇರುವ ಬೇಡಿಕೆ ಹಾಗೂ ದರವನ್ನು ರೈತರಿಗೆ ತಿಳಿಸುವ ಮೂಲಕ ಕೃಷಿ ಕ್ಷೇತ್ರಕ್ಕೂ, ರೈತರಿಗೂ ನೆರವಾಗುತ್ತಿದೆ.ಒಂದರ್ಥದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆ, ಮಾರಾಟಗಾರರು ಮತ್ತು ಖರೀದಿದಾರರ ನಡುವೆ ಮಧ್ಯಸ್ಥಿಕೆ ವಹಿಸುವ ತಂಬಾಕು ಮಂಡಳಿ ದೇಶ ಮತ್ತು ರಾಜ್ಯದ ಬೊಕ್ಕಸಕ್ಕೆ ಆದಾಯವನ್ನೂ ತಂದುಕೊಡುತ್ತಿದೆ. ಅಧಿಕೃತ ಪರವಾನಗಿ ಹೊಂದಿರುವ ರೈತರಿಗೆ ಬ್ಯಾಂಕುಗಳಲ್ಲಿ ಶೇ 4ರ ಬಡ್ಡಿ ದರದಲ್ಲಿ ಸಾಲವನ್ನೂ ಒದಗಿಸುತ್ತಿದೆ. ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಖರೀದಿಸುವ ಕಂಪೆನಿ ನೇರವಾಗಿ ರೈತರಿಗೆ ಹಣ ನೀಡದೇ ತಂಬಾಕು ಮಂಡಳಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತದೆ. ಇದರಲ್ಲಿ ಮಂಡಳಿಯ ಲಾಭವನ್ನು  ಪ್ರತ್ಯೇಕವಾಗಿ ಪಾವತಿಸಿ, ಉಳಿದ ಹಣವನ್ನು ಮಾತ್ರ ನೀಡಲಾಗುತ್ತದೆ. ಬ್ಯಾಂಕುಗಳು ರೈತರ ಸಾಲದ ಬಾಕಿ ಹಣವನ್ನು ಕಟಾವಣೆ ಮಾಡಿಕೊಂಡು ಉಳಿಕೆ ಹಣವನ್ನು ರೈತರಿಗೆ ನೀಡುತ್ತವೆ. ಹೀಗಾಗಿ, ಬ್ಯಾಂಕುಗಳು ರೈತರಿಗೆ ಸಾಲ ಕೊಡಲು `ಉದಾರ'  ಮನೋಭಾವ ತೋರಿಸುತ್ತಿವೆ.ಹರಾಜು ಕೇಂದ್ರಗಳು

ರೈತರಿಂದ ಕಂಪೆನಿಗಳಿಗೆ ತಂಬಾಕು ಮಾರಾಟ ಮಾಡಲು ಕೇಂದ್ರ ತಂಬಾಕು ಮಂಡಳಿಯು ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಹರಾಜು ಮಳಿಗೆಗಳನ್ನು (ಇವುಗಳನ್ನು ಪ್ಲಾಟ್‌ಫಾರ್ಮ ಎಂದು ಕರೆಯಲಾಗುತ್ತದೆ) ಸ್ಥಾಪಿಸಿದೆ. ಕರ್ನಾಟಕದಲ್ಲಿ ಹುಣಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ, ರಾಮನಗರ ಮತ್ತು ಕಂಪ್ಲಾಪುರ (ಹುಣಸೂರು ತಾಲ್ಲೂಕು) ಸೇರಿದಂತೆ ಒಟ್ಟು 11 ಪ್ಲಾಟ್‌ಫಾರ್ಮಗಳನ್ನು ತೆರೆದಿದೆ. ಇನ್ನು ಆಂಧ್ರಪ್ರದೇಶದಲ್ಲೂ ಅತ್ಯಧಿಕವಾಗಿ ವರ್ಜೀನಿಯಾ ತಂಬಾಕನ್ನು ಬೆಳೆಯಲಾಗುತ್ತಿದ್ದು, 19 ಹರಾಜು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಕೇಂದ್ರಗಳಲ್ಲೂ `ಇ-ಹರಾಜು' ಪದ್ಧತಿಯನ್ನು ಜಾರಿಗೆ ತರಲಾಗಿದೆ. 2012-13ನೇ ಸಾಲಿನಲ್ಲಿ ಆಂಧ್ರಪ್ರದೇಶದಲ್ಲಿ 169.73 ದಶಲಕ್ಷ ಕೆ.ಜಿ ತಂಬಾಕು ಉತ್ಪಾದನಾ ಗುರಿ ನಿಗದಿಪಡಿಸಲಾಗಿತ್ತು. ಒಂದು ಕೆ.ಜಿ.ಗೆರೂ120ರಿಂದ 173ರ ವರೆಗೆ ಮಾರಾಟವಾಗಿದೆ.ದಾಖಲೆ ವಹಿವಾಟು

ಕಳೆದ ಐದು ವರ್ಷಗಳಲ್ಲೇ 2012ರಲ್ಲಿ ದಾಖಲೆ ವಹಿವಾಟು ನಡೆದಿದ್ದು,ರೂ10,870.87 ಕೋಟಿ ವಹಿವಾಟು ನಡೆದಿದೆ. ಉತ್ಪಾದನೆ ಮತ್ತು ದರ ಹೆಚ್ಚಳದಿಂದಾಗಿ ಸಹಜವಾಗಿ ವಹಿವಾಟು ಹೆಚ್ಚಾಗಿದೆ. 2008ರಲ್ಲಿರೂ1250.63 ಕೋಟಿ, 2009ರಲ್ಲಿರೂ1282.50 ಕೋಟಿ, 2010ರಲ್ಲಿರೂ1180.09 ಕೋಟಿ ಹಾಗೂ 2011ರಲ್ಲಿರೂ 966.68 ಕೋಟಿ ವಹಿವಾಟು ನಡೆದಿದೆ.ಮೂರು ಪ್ರಕಾರ

ವರ್ಜೀನಿಯಾ ತಂಬಾಕನ್ನು ಉತ್ಕೃಷ್ಟ ದರ್ಜೆ, ಮಧ್ಯಮ ಮತ್ತು ಸಾಧಾರಣ ಎಂಬ 3 ವಿಭಾಗಗಳಾಗಿ ವಿಂಗಡಿಸಲಾಗುತ್ತದೆ. 2012-13ರಲ್ಲಿ ಉತ್ಕೃಷ್ಟ ದರ್ಜೆಯ ಒಂದು ಕೆ.ಜಿ. ತಂಬಾಕಿಗೆ ಸರಾಸರಿರೂ119, ಮಧ್ಯಮ ದರ್ಜೆಗೆರೂ101 ಹಾಗೂ ಸಾಧಾರಣ ಗುಣಮಟ್ಟದ ಹೊಗೆಸೊಪ್ಪಿಗೆರೂ60 ದರ ನಿಗದಿಪಡಿಸಲಾಗಿತ್ತು. ತಂಬಾಕಿನ ಇ-ಹರಾಜು ಪ್ರಕ್ರಿಯೆಯಲ್ಲಿ ಐಟಿಸಿ ಸೇರಿದಂತೆ ಹತ್ತಾರು ಕಂಪೆನಿಗಳು ಭಾಗವಹಿಸುತ್ತವೆ. 2012ರಲ್ಲಿ ಐಟಿಸಿ 30.98 ದಶಲಕ್ಷ ಕೆ.ಜಿ (ಶೇ 33), ಜಿಪಿಐ 13.33 ದಶಲಕ್ಷ ಕೆ.ಜಿ (ಶೇ 14), ಪಿಎಸ್‌ಎಸ್‌ಎಚ್ 5.54 ದಶಲಕ್ಷ ಕೆ.ಜಿ (ಶೇ 6), ಡಿಟಿಇ 7.83 ದಶಲಕ್ಷ ಕೆ.ಜಿ (ಶೇ 8), ಐಟಿಟಿ 2.88 ದಶಲಕ್ಷ ಕೆ.ಜಿ (ಶೇ 2), ಎಂಎಲ್ 2.56 ದಶಲಕ್ಷ ಕೆ.ಜಿ (ಶೇ 9) ಹಾಗೂ ಎಥಿನಿಕ್ 8.25 ದಶಲಕ್ಷ ಕೆ.ಜಿ (ಶೇ 9) ಮತ್ತು ಇತರೆ ಕಂಪೆನಿಗಳು 13.61 ದಶಲಕ್ಷ ಕೆ.ಜಿ (ಶೇ 15) ವರ್ಜೀನಿಯಾ ತಂಬಾಕನ್ನು ಹರಾಜು ಸಮಯದಲ್ಲಿ ಖರೀದಿಸಿವೆ.ತಂಬಾಕು ಬೆಳೆ ರೈತರು, ಮಧ್ಯವರ್ತಿಗಳು, ತಂಬಾಕು ಮಂಡಳಿ, ಬ್ಯಾಂಕುಕುಗಳು, ಸಿಗರೇಟ್ ತಯಾರಿಕಾ ಕಂಪೆನಿಗಳು ಹಾಗೂ ಸರ್ಕಾರಕ್ಕೆ ಲಾಭ ತರುತ್ತಿದೆ. ಇದರ ಬೆನ್ನಲ್ಲೇ ಸಾವಿರಾರು ಧೂಮಪಾನಿಗಳ ಜೀವಕ್ಕೂ ಎರವಾಗುತ್ತಿದೆ.

ಒಂದು ಅಂದಾಜಿನಂತೆ ತಂಬಾಕು ಮಾರಾಟದಿಂದ ಸರ್ಕಾರಕ್ಕೆ ಬರುವ ತೆರಿಗೆಯ ಹಣಕ್ಕಿಂತಲೂ ಹೆಚ್ಚು ಹಣವನ್ನು ತಂಬಾಕು ಸೇವನೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ಸರ್ಕಾರ ಖರ್ಚು ಮಾಡುತ್ತಿದೆ.ಇ-ಹರಾಜು ಪ್ರಕ್ರಿಯೆ ಜಾರಿ

ತಂಬಾಕು ಮಾರಾಟ ಮಾಡುವ ರಾಜ್ಯದ 11 ಪ್ಲಾಟ್‌ಫಾರ್ಮಗಳಲ್ಲಿ 2012ರ ನವೆಂಬರ್‌ನಿಂದ `ಇ-ಹರಾಜು' ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇ-ಹರಾಜು ಪದ್ಧತಿಯು ಅತ್ಯಂತ ಪಾರದರ್ಶಕವಾಗಿದ್ದು, ಈ ಮೊದಲು ಕೂಗುವ ಮೂಲಕ ಮಾಡಲಾಗುತ್ತಿದ್ದ ಬಿಡ್ ಮತ್ತು ಹರಾಜು ದರಗಳು ಡಿಜಿಟಲ್ ಫಲಕದ ಮೇಲೆ ಪ್ರದರ್ಶನಗೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ರೈತರು ಗರಿಷ್ಠ ಬಿಡ್ ದರವನ್ನು ತಿಳಿಯಬಹುದಾಗಿದೆ. ಪ್ರತಿಯೊಬ್ಬ ಬಿಡ್‌ದಾರರಿಗೂ ಹ್ಯಾಂಡ್‌ಹೆಲ್ಡ್ ಟರ್ಮಿನಲ್ ನೀಡಲಾಗುತ್ತದೆ. ಅದರಲ್ಲಿ ಅವರು ಬಿಡ್ ದರ ನಮೂದಿಸಿದರೆ ಸಾಕು. ಅತಿ ಹೆಚ್ಚಿನ ಬಿಡ್ ಮಾಡಿದವರ ನಿಗದಿಪಡಿಸಿದ ಮೊತ್ತ ಡಿಜಿಟಲ್ ಫಲಕದ ಮೇಲೆ ಮೂಡುತ್ತದೆ. ಇದರಿಂದ ರೈತರು ತಮ್ಮ ತಂಬಾಕು ಬೇಲ್‌ಗೆ ನಿಗದಿಯಾದ ದರವನ್ನು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ನೋಡಬಹುದಾಗಿದೆ.`ಅರಣ್ಯ' ರೋದನ

ಒಂದೆಡೆ ವಿಶ್ವ ಸಂಸ್ಥೆ ತಂಬಾಕು ಉತ್ಪನ್ನಗಳ ಬಳಕೆದಾರರ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಇನ್ನೊಂದೆಡೆ ಅರಣ್ಯ ಇಲಾಖೆ ತಂಬಾಕು ಹದಗೊಳಿಸಲು ಕಾಡಿನಲ್ಲಿಲ್ಲಿ ಕಟ್ಟಿಗೆಯ ಅವ್ಯಾಹತ ಬಳಕೆಯಿಂದ ಕಂಗಾಲಾಗಿದೆ.ತಂಬಾಕು ಹದಗೊಳಿಸಲು 170ರಿಂದ 180 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಬೇಕು. ಇಷ್ಟು ಪ್ರಮಾಣದ ಉಷ್ಣಾಂಶ ಸೃಷ್ಟಿಸಲು ಹಾಗೂ ಒಂದು ಕೆ.ಜಿ. ತಂಬಾಕು ಹದಗೊಳಿಸಲು ಕನಿಷ್ಠ 8 ಕೆ.ಜಿ. ಉರುವಲು ಬೇಕೇ ಬೇಕು. ಒಂದು ಕೆ.ಜಿ.ಗೆ 8 ಕೆ.ಜಿ ಉರುವಲು ಎಂದಾದರೆ ರಾಜ್ಯದಲ್ಲಿ ಈ ವರ್ಷ ತಂಬಾಕು ಬೆಳೆಯ ಗುರಿ ನಿಗದಿ ಮಾಡಿರುವುದು 102 ದಶಲಕ್ಷ ಕೆ.ಜಿ. ಇಷ್ಟು ತಂಬಾಕನ್ನು ಹದಗೊಳಿಸಲು ಬರೋಬ್ಬರಿ 5 ಲಕ್ಷ ಟನ್ ಉರುವಲು ಬೇಕಾಗುತ್ತದೆ. ತಂಬಾಕು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಅರಣ್ಯ ನಾಶಕ್ಕೂ ಕಾರಣವಾಗುತ್ತಿದೆ. ಈ ಕಾರಣಕ್ಕಾಗಿಯೇ ಪರ್ಯಾಯ ವಾಣಿಜ್ಯ ಬೆಳೆಗಳಾದ ಹತ್ತಿ, ಬಾಳೆ, ಗುಲಾಬಿಯಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆಯುವಂತೆ ರೈತರ ಮನವೊಲಿಸಲಾಗುತ್ತಿದೆ.

`ಮಿತಿ'ಯೂ `ಉತ್ತೇಜನ'ವೂ..

2020ರ ವೇಳೆಗೆ ತಂಬಾಕು ಉತ್ಪಾದನೆುನ್ನು ಸೊನ್ನೆಗೆ ಇಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, `ರೈತರಿಗೆ ಉತ್ಪಾದನೆ ಕಡಿಮೆ ಆದರೂ ತೊಂದರೆಯಿಲ್ಲ; ಆದರೆ, ಹೆಚ್ಚು ಮಾತ್ರ ಬೇಡ' ಎಂದು ಪ್ರತಿ ವರ್ಷ ಹೇಳುತ್ತ ಬರುತ್ತಿದೆ. ಆದರೆ, ಇನ್ನೊಂದೆಡೆ ತಂಬಾಕು ಬೆಳೆಗಾರರ ಹಿತಕಾಯಲು ಸಾವಿರಾರು ರೂಪಾಯಿ ಪ್ರೋತ್ಸಾಹ ಧನ ನೀಡುತ್ತಿದೆ. 2013-14ನೇ ಸಾಲಿಗೂ ಪ್ರೋತ್ಸಾಹಧನ ಮುಂದುವರಿಸಲಾಗಿದೆ.ವೆಂಚುರಿ ಒಲೆ

ರಾಜ್ಯದಲ್ಲಿ 42 ಸಾವಿರ ತಂಬಾಕು ಬೆಳೆಗಾರರಿದ್ದು, ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾಗಿ ತಂಬಾಕನ್ನು ಬೆಳೆಯುತ್ತಿದ್ದಾರೆ. ಹೀಗೆ ಬೆಳೆದ ತಂಬಾಕನ್ನು ಹದಗೊಳಿಸಲು ಸುಮಾರು 56 ಸಾವಿರ ಒಲೆಗಳಿವೆ ಎಂದು ಅಂದಾಜಿಸಲಾಗಿದ್ದು, ಪ್ರತಿ ವರ್ಷ 5 ಲಕ್ಷ ಟನ್ ಕಟ್ಟಿಗೆಯನ್ನು ಉರಿಸಲಾಗುತ್ತಿದೆ. ಇದರಿಂದ ಸಾಕಷ್ಟು ಪ್ರಮಣದ ಅರಣ್ಯ ನಾಶವಾಗುತ್ತಿದೆ ಎಂಬ ಕೂಗು ಪರಿಸರವಾದಿಗಳಿಂದ ಕೇಳಿ ಬಂದಿತ್ತು. ಅಂತಿಮವಾಗಿ ತಂಬಾಕು ಮಂಡಳಿ ಮತ್ತು ಐಟಿಸಿ ಕಂಪೆನಿ ಸಹಯೋಗದಲ್ಲಿ ರೈತರಿಗೆ `ವೆಂಚುರಿ ಒಲೆ'ಗಳನ್ನು ನಿರ್ಮಿಸಿಕೊಡಲಾಗುತ್ತಿದೆ. ಪ್ರತಿ ಒಲೆಗೆರೂ 5 ಸಾವಿರ ಪ್ರೋತ್ಸಾಹಧನವನ್ನೂ ನೀಡಲಾಗುತ್ತಿದೆ.

`ವೆಂಚುರಿ ಒಲೆ' ಬಳಕೆಯಿಂದ ಶೇ 20ರಷ್ಟು ಕಟ್ಟಿಗೆ ಉಳಿತಾಯವಾಗುತ್ತದೆ. ಇದಕ್ಕೆ ಅರಣ್ಯ ಇಲಾಖೆ ಸಾಥ್ ನೀಡಿದ್ದು, ತಂಬಾಕು ಕೃಷಿ ಇರುವ ಗ್ರಾಮಗಳಲ್ಲಿ ವೆಂಚುರಿ ಒಲೆಗಳ ಬಳಕೆ ಬಗ್ಗೆ ತಂಬಾಕು ಬೆಳೆಗಾರರಲ್ಲಿ ಜಾಗೃತಿ ಮೂಡಿಸುತ್ತಿದೆ.ರೂ13 ಸಾವಿರ ವೆಚ್ಚದಲ್ಲಿ ಈ ಒಲೆಗಳನ್ನು ನಿರ್ಮಿಸಲು ಸಾಧ್ಯವಿದ್ದು, ಇವು 8ರಿಂದ 10 ವರ್ಷಗಳ ಕಾಲ ಬಾಳಿಕೆ ಬರಲಿವೆ. ಕಟ್ಟಿಗೆ ಹಾಕುವ ಒಲೆಯ ಮುಂಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಕಲ್ಪಿಸಲಾಗಿದ್ದು, ಬ್ಯಾರನ್‌ಗಳಿಗೆ ಗಾಳಿ ಚೆನ್ನಾಗಿ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸಾಂಪ್ರದಾಯಿಕ ಒಲೆಗಳಲ್ಲಿ ಒಂದು ಕೆ.ಜಿ ಹೊಗೆಸೊಪ್ಪು ಹದಗೊಳಿಸಲು ಕನಿಷ್ಠ 6 ರಿಂದ 8 ಕೆ.ಜಿ ಕಟ್ಟಿಗೆ ಬೇಕಾಗುತ್ತದೆ. ಆದರೆ, ವೆಂಚುರಿ ಒಲೆಗೆ 4 ಕೆ.ಜಿ ಕಟ್ಟಿಗೆ ಸಾಕು. ಹೀಗಾಗಿ, ಎಲ್ಲ ರೈತರ ಚಿತ್ತ ಇದೀಗ ವೆಂಚುರಿ ಒಲೆಗಳತ್ತ ನೆಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.