ಗುರುವಾರ , ಜನವರಿ 23, 2020
22 °C

ಹತ್ತು ಸಾಧಕರಿಗೆ ನಾಳೆ ‘ಅವ್ವ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರಿಗೆ ಅವ್ವ ಸೇವಾ ಟ್ರಸ್ಟ್ ವತಿಯಿಂದ ನೀಡಲಾಗುವ ‘ಅವ್ವ’ ಪ್ರಶಸ್ತಿಯನ್ನು ಈ ಬಾರಿ 10 ಮಂದಿಗೆ ನಗರದ ಗುಜರಾತಭವನದಲ್ಲಿ ಇದೇ 14ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯಾಗಿ ಬೆಳ್ಳಿ ಲೇಪಿತ ಫಲಕ ನೀಡಿ ಗೌರವಿಸಲಾಗುವುದು’ ಎಂದು ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದರು.ಸಕ್ಕರೆ ಉದ್ದಿಮೆಯನ್ನು ವಿಶ್ವಮಟ್ಟಕ್ಕೆ ಏರಿಸಿದ ವಿದ್ಯಾ ಮುರಕುಂಬಿ, ದಕ್ಷ ಮಹಿಳಾ ಪೊಲೀಸ್‌ ಅಧಿಕಾರಿ ಯಶೋಧಾ ಒಂಟಗೋಡಿ, ಯಶಸ್ವಿ ಉದ್ಯಮಿ ಕಾಡಪ್ಪ ಕೃಷ್ಣಪ್ಪ ಮೈಸೂರು, ಅಂಕಣಗಾರ ಎ.ಆರ್‌. ಮಣಿಕಾಂತ್‌, ಕ್ರೀಡಾಪಟು, ಅಂಗವಿಕಲ ಗಿರೀಶ ನಾಗರಾಜ­ಗೌಡ, ಎಮ್ಮೆ ಕಾಯುವ ವೃತ್ತಿಯಿಂದ ಕಂಪ್ಯೂಟರ್‌ ಮಾಂತ್ರಿಕನಾಗಿ ಬದಲಾದ ರಮೇಶ ಬಲ್ಲಿದ್‌, ವಿಶ್ವ ಸಂಸ್ಥೆಯ ಗಮನಸೆಳೆದ ಸುಜಾತಾ ಆನಿಶೆಟ್ಟರ, ಚುರುಮರಿ ಮಾರುವವನ ಮಗಳು, ಎಂ.ಎ.ಯಲ್ಲಿ ಎಂಟು ಚಿನ್ನದ ಪದಕ ಪಡೆದ ಎಂ. ಅಕ್ಷತಾ, ವಿಶ್ವಸಂಸ್ಥೆಯಲ್ಲಿ ಮೆಚ್ಚುಗೆಗೆ ಪಾತ್ರಳಾದ ಗ್ರಾಮೀಣ ಪ್ರತಿಭೆ ಮಂಜುಳಾ ಮುನವಳ್ಳಿ, ಏಷ್ಯನ್‌ ಕ್ರೀಡಾಕೂಟಕ್ಕೆ ಆಯ್ಕೆಯಾದ ಹಳ್ಳಿ ಪ್ರತಿಭೆ ನಿವೇದಿತಾ ಸಾವಂತ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‘2011ರಲ್ಲಿ ಮೂವರಿಗೆ, ಕಳೆದ ವರ್ಷ ಏಳು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಗಿತ್ತು. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರಮಠದ ರಾಘವೇಂದ್ರ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸುವರು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ವಿ. ಗೋಪಾಲಗೌಡ, ಕಿರುತೆರೆ ನಟಿ ಜಯಲಕ್ಷ್ಮೀ ಪಾಟೀಲ ಮುಖ್ಯಅತಿಥಿಯಾಗಿ ಭಾಗವಹಿಸುವರು’ ಎಂದರು.‘ಅಂದು ಅವ್ವನ ಮಹತ್ವದ ಕುರಿತು ಗಣ್ಯರಿಂದ ಚಿಂತನ– ಮಂಥನ, ರೋಣ ತಾಲ್ಲೂಕು ಹೊಳೆಆಲೂರ ಜ್ಞಾನಸಿಂಧು ಅಂಧ ಮಕ್ಕಳ ಶಾಲೆಯ ಪ್ರತಿಭಾವಂತ 11 ಅಂಧ ವಿದ್ಯಾರ್ಥಿಗಳಿಗೆ ಅವ್ವನ ಆಸರೆ, ರಾಷ್ಟ್ರಮಟ್ಟದ ಪ್ರತಿಭಾವಂತ, ಬಡ ಸೈಕ್ಲಿಂಗ್‌ ಪಟು, ವಿಜಾಪುರದ ಶೈಲಾ ಮಟ್ಟ್ಯಾಳಗೆ ಅಂತರರಾಷ್ಟ್ರೀಯ ಗುಣಮಟ್ಟದ ಸೈಕಲ್‌ ವಿತರಣೆ, ರಾಮಣ್ಣ ಮುಳ್ಳೂರ ರಚಿಸಿದ ‘ಅವ್ವನ ಕವನ ಸಂಕಲನ’ ಮತ್ತು 2014ರ ದಿನದರ್ಶಿ ಬಿಡುಗಡೆ ಮತ್ತಿತರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ’ ಎಂದರು.‘ಸಮಾಜದಲ್ಲಿ ನೊಂದವರಿಗೆ, ಬೆಂದವರಿಗೆ ಸಾಧ್ಯವಾದಷ್ಟು ನೆರವಾಗಬೇಕು ಎಂಬ ಉದ್ದೇಶದಿಂದ ಅವ್ವನ ನೆನಪಿಗಾಗಿ ಈ ಟ್ರಸ್‌್ಟ ಸ್ಥಾಪಿಸಲಾಗಿದೆ.  ಪ್ರತಿಭಾವಂತರ ಬೆನ್ನಿಗೆ ನಿಲ್ಲುವುದೂ ಟ್ರಸ್ಟ್‌ನ ಧ್ಯೇಯ. ಎಲ್ಲರೂ ತಮ್ಮ ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಆಶಯ. ಅನೇಕರು ಸ್ವಯಂಪ್ರೇರಿತರಾಗಿ ನೀಡಿದ ದೇಣಿಗೆಯಿಂದ ಟ್ರಸ್‌್ಟ ಚಟುವಟಿಕೆ ನಡೆಯುತ್ತಿದೆ. ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಅವ್ವಂದಿರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದರು.‘ಟ್ರಸ್ಟ್‌ ವತಿಯಿಂದ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಹಲವರ ಮೊಗದಲ್ಲಿ ಸಂತಸ ಮೂಡಿಸಲು ಸಾಧ್ಯವಾಗಿದೆ. ಹಲವು ಕುಟುಂಬಗಳು ದೂರವಿದ್ದ ತಂದೆ–ತಾಯಿಯರನ್ನು ತಮ್ಮೊಂದಿಗೆ ಇಟ್ಟುಕೊಂಡು ಪ್ರೀತಿಯಿಂದ ಸಾಕುತ್ತಿದ್ದಾರೆ. ಪ್ರತಿಯೊಬ್ಬರಲ್ಲೂ ಮಾನವೀಯ ಸಂಬಂಧ ಬೆಳೆಸುವ ಪ್ರಯತ್ನವನ್ನು ಟ್ರಸ್ಟ್‌ ಮೂಲಕ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು. ಶಾಸಕ ಎನ್‌.ಎಚ್‌. ಕೋನರಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ವಸಂತ ಹೊರಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)