ಶನಿವಾರ, ಜನವರಿ 25, 2020
28 °C

ಹದಗೆಟ್ಟ ಬಟಗೇರಾ–ಕೊಹಿನೂರ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದಗೆಟ್ಟ ಬಟಗೇರಾ–ಕೊಹಿನೂರ ರಸ್ತೆ

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದಿಂದ ಕೊಹಿನೂರಿಗೆ ಹೋಗುವ ರಸ್ತೆ ಹದಗೆಟ್ಟಿದ್ದು, ಡಾಂಬರು ಎದ್ದುಹೋಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ವಾಹನ ಸಂಚಾರ ದುಸ್ತರವಾಗಿದೆ.ಬೀದರ್‌ ಮತ್ತು ಗುಲ್ಬರ್ಗ ಜಿಲ್ಲೆಗಳ ಸರಹದ್ದಿನಲ್ಲಿರುವ ಈ ರಸ್ತೆಯು ಹೋಬಳಿ ಕೇಂದ್ರ ಕೊಹಿನೂರಿನಿಂದ ಹತ್ತರಗಾ ಮತ್ತು ಹಿಪ್ಪರಗಾ ಗ್ರಾಮಗಳ ಮೂಲಕ ಆಳಂದಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಭಾಗದವರಿಗೆ  ವಿಜಾಪುರ ಮತ್ತು ಮಹಾರಾಷ್ಟ್ರದ ಸೊಲ್ಲಾಪುರ, ಪುಣೆಗೆ ಹೋಗಲು ಈ ರಸ್ತೆ ಬಹು ಅನುಕೂಲಕರವಾಗಿದೆ.ರಸ್ತೆಯು ಕೆಲವು ವರ್ಷದಿಂದ ಇದೇ ಸ್ಥಿತಿಯಲ್ಲಿ ಇದ್ದರೂ, ಪ್ರತಿ ವರ್ಷ ಇಲ್ಲಿನ ಗುಂಡಿಗಳನ್ನು ತುಂಬ­ಲಾಗುತ್ತಿಲ್ಲ. ಆದರೆ ರಸ್ತೆ ಈಚೆಗೆ ಇದು ತೀರ ಹದಗೆಟ್ಟಿದೆ.  ಡಾಂಬರೀಕರಣ ನಡೆಸಿ ಅನೇಕ ವರ್ಷಗಳಾಗಿವೆ, ಕನಿಷ್ಠ ಗುಂಡಿಗಳನ್ನು ಭರ್ತಿ ಮಾಡಿ ಸಂಚಾರಕ್ಕೆ ಯೋಗ್ಯ ಮಾಡಿಲ್ಲ. ಕೆಲ ಸ್ಥಳಗಳಲ್ಲಿ ಆಳವಾದ ತಗ್ಗುಗಳು ಬಿದ್ದಿರುವುದರಿಂದ ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡಬೇಕಾಗಿದೆ.‘ಕತ್ತಲಲ್ಲಿ ಗುಂಡಿಗಳು ಕಾಣದೆ ವಾಹನಗಳು ಬಿದ್ದು, ಸವಾರರು ಗಾಯಗೊಂಡ ಹಲವು ಘಟನೆಗಳು ಸಂಭವಿಸಿವೆ. ರಸ್ತೆ ದುರಸ್ತಿಗಾಗಿ ಈ ಭಾಗದ ಜನತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿಲ್ಲ. ನಿರಂತರ ನಿರ್ಲಕ್ಷ್ಯ ವಹಿಸಿದೆ. ಜನಪ್ರತಿನಿಧಿಗಳೂ ಸಂಚಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಗ್ರಾಮದ ಮಹಾದೇವ ವಿ. ಸ್ವಾಮಿ  ದೂರುತ್ತಾರೆ.ಕೆಲ ಸ್ಥಳಗಳಲ್ಲಿ ಕೆಂಪು ಮಣ್ಣು ಹಾಕಿ ತೇಪೆ ಹಚ್ಚುವ ಕಾರ್ಯ ಮಾಡ­ಲಾಗಿದ್ದು, ಮಳೆ ಬಂದಾಗ ಓಡಾಡಲು ತೊಂದರೆಯಾಗುತ್ತಿದೆ. ಇನ್ನು ಮುಂದಾ­ದರೂ ಶೀಘ್ರ ರಸ್ತೆ ಡಾಂಬರೀಕರಣ ಕೈಗೊಳ್ಳಬೇಕು ಎಂದು ರಸ್ತೆಯ ಬಳಕೆ­ದಾರರ ಪರವಾಗಿ ಅವರು ಒತ್ತಾಯಿ­ಸಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರತಿಕ್ರಿಯಿಸಿ (+)