ಭಾನುವಾರ, ಮೇ 22, 2022
22 °C

ಹದಗೆಟ್ಟ ರಸ್ತೆ ಸಂಚಾರ ನರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ: ರಸ್ತೆಯ ಒಂದು ತುದಿಯಲ್ಲಿ ಹಾಕಿರುವ ಡಾಂಬರು ವರ್ಷ ಕಳೆಯುವ ಮುನ್ನವೇ ಕಿತ್ತು ಹೋಗಿ ಕೆಟ್ಟ ಸ್ಥಿತಿಯಲ್ಲಿದ್ದರೆ, ಇನ್ನೊಂದು ತುದಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಸುರಿದ ಜಲ್ಲಿ ಕಲ್ಲುಗಳು ಅನೇಕ ತಿಂಗಳುಗಳ ಪಳೆಯುಳಿಕೆಯಂತೆ ಕಾಣಸಿಗುತ್ತವೆ. ಇದು ತಾಲ್ಲೂಕಿನ ಕನ್ನಪ್ಪನಹಳ್ಳಿ ಮತ್ತು ಸದ್ದಳ್ಳಿ ಗ್ರಾಮಗಳ ನಡುವಿನ ಸಂಪರ್ಕ ರಸ್ತೆಯ ದುಃಸ್ಥಿತಿ. ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ಎದುರಿನಿಂದ ನಾಲ್ಕು ಚಕ್ರದ ವಾಹನವೊಂದು ಬಂದರೆ, ಎಡ ಅಥವಾ ಬಲ ಬದಿಗಳಲ್ಲಿ ತಿರುವು ತೆಗೆದುಕೊಳ್ಳಲು ಆಗುವುದಿಲ್ಲ. ರಸ್ತೆಯುದ್ದಕ್ಕೂ ಇರುವ ಗುಂಡಿಗಳಂತೂ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ಭಯ ಹುಟ್ಟಿಸುತ್ತವೆ. ಕೆಲ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ.ಒಂದು ವರ್ಷದ ಹಿಂದೆಯಷ್ಟೇ  ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಗುಣಮಟ್ಟ ಸರಿಯಿಲ್ಲದ ಕಾರಣ ರಸ್ತೆಯಲ್ಲಿ ಹಳ್ಳ, ದಿಣ್ಣೆಗಳು ಆಗಿವೆ. ಇದು ಕಳಪೆ ಕಾಮಗಾರಿಯಲ್ಲದೇ ಮತ್ತೇನೂ ಅಲ್ಲ. ರಸ್ತೆ ಹದಗೆಟ್ಟಿದ್ದರೂ ಅದನ್ನು ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ ‘ಸದ್ದಳ್ಳಿಯಿಂದ ಮುಂದೆ ಬಚ್ಚೇಗೌಡನ ಕೆರೆ ನೀರು ಹರಿದು ಹೋಗುವ ಮೋರಿಯಿದೆ. ಅಲ್ಲಿ ನೀರು ಹರಿದು, ರಸ್ತೆ ಕೊರೆದು ಹೋಗಿದ್ದು ಅಪಾಯಕಾರಿಯಾಗಿದೆ.ದುರಸ್ತಿ ಕಾರ್ಯ ಕೈಗೊಳ್ಳದಿದ್ದರೆ ಕತ್ತಲಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಮೃತ್ಯುವಿಗೆ ಆಹ್ವಾನ ನೀಡುವಂತಿದೆ. ಕಳಪೆ ಕಾಮಗಾರಿಯ ರಸ್ತೆ ದುರಸ್ತಿಗೊಳಿಸಬೇಕು. ಸರಿಯಾಗಿ ಡಾಂಬರೀಕರಣ ಮಾಡಬೇಕು. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸದ್ದಳ್ಳಿಯ ನಿವಾಸಿ ಎಸ್‌ಎಲ್‌ವಿ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.