ಶನಿವಾರ, ಜುಲೈ 31, 2021
24 °C

ಹಮಾಲಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯ ಕೆಎಫ್‌ಸಿ ಗೋದಾಮಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರನ್ನು ಗುತ್ತಿಗೆದಾರರು ಮತ್ತು ವ್ಯವಸ್ಥಾಪಕರು ಕಡೆಗಣಿಸುತ್ತಿದ್ದಾರೆಂದು ಆರೋಪಿಸಿ ರಾಜ್ಯ ಹಮಾಲರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಕೆಎಫ್‌ಸಿ ಗೋದಾಮಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲಿ ಕಾರ್ಮಿಕರಿಗೆ ಈವರೆಗೆ ಗುರುತಿನಚೀಟಿ ನೀಡಿಲ್ಲ. ಅವರ ಕೂಲಿ ದರವನ್ನು ಏಕಪಕ್ಷೀಯವಾಗಿ ನಿರ್ಧರಿಸಿ, ಪಾವತಿಸುತ್ತಿದ್ದಾರೆ. ಕಾರ್ಮಿಕರ ಒಟ್ಟು ಕೂಲಿಯಲ್ಲಿ ಶೇ.30 ತೆರಿಗೆ ಕಡಿತಗೊಳಿಸಿ ವಂಚಿಸಲಾಗುತ್ತಿದೆ. ಹೀಗೆ ಗುತ್ತಿಗೆದಾರರು ಮತ್ತು ವ್ಯವಸ್ಥಾಪಕರು ನಿರಂತರವಾಗಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.ಹಮಾಲಿ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸೇವಾ ಸೌಲಭ್ಯಗಳಾದ ಭವಿಷ್ಯನಿಧಿ, ಇಎಸ್‌ಐ, ವಿಮಾ ಯೋಜನೆಗಳನ್ನು ನೀಡದೆ ವಂಚಿಸಲಾಗುತ್ತಿದೆ. ದಲ್ಲಾಳಿ ಮತ್ತು ತುಂಡುಗುತ್ತಿಗೆ ಹೆಸರಿನಲ್ಲಿ ಹಮಾಲರಿಗೆ ನ್ಯಾಯಸಮ್ಮತ ಕೂಲಿಯಿಂದಲೂ ವಂಚಿಸಲಾಗುತ್ತಿದೆ ಎಂದು ಆರೇಪಿಸಿದರು.ಈ ಬಗ್ಗೆ ಅನೇಕ ಬಾರಿ ಹೋರಾಟಗಳಿಂದ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದರು.

ಹಮಾಲಿ ಕಾರ್ಮಿಕರ ಕುಂದು-ಕೊರತೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಮಿತಿ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಭೆ ಕರೆದು, ಪರಿಹಾರ ಕಂಡುಕೊಳ್ಳಬೇಕು. ಕಾರ್ಮಿಕರಿಗೆ ನೀಡುವ ಜನಶ್ರೀ ವಿಮಾ ಸೌಲಭ್ಯವನ್ನು ಅಪಘಾತ ಮರಣಕ್ಕೆ 1.50ಲಕ್ಷ ಹಾಗೂ ಸಹಜ ಮರಣಕ್ಕೆ 1ಲಕ್ಷ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.ನಂತರ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಸಂಘದ ಟಿ. ಅನಿಲ್ ಕುಮಾರ್, ಬೋರೇಗೌಡ, ಎಸ್. ರವಿಕುಮಾರ್, ಎನ್. ಪುಟ್ಟಸ್ವಾಮಿ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.