ಮಂಗಳವಾರ, ಮಾರ್ಚ್ 2, 2021
23 °C

ಹಲಸಿನ ಸಂಸ್ಕರಣೆ ಹೊಸ ವಿಧಾನ

ಗಣಪತಿ ಭಟ್ ಹಾರೋಹಳ್ಳಿ Updated:

ಅಕ್ಷರ ಗಾತ್ರ : | |

ಹಲಸಿನ ಸಂಸ್ಕರಣೆ ಹೊಸ ವಿಧಾನ

ಹಲಸಿನ ಹಣ್ಣಿನ ತೊಳೆಗಳನ್ನು ಅವುಗಳ ಬಣ್ಣ ಕೆಡದಂತೆ ಎಷ್ಟು ದಿನ ಇಡಬಹುದು? ಹೆಚ್ಚೆಂದರೆ ಒಂದೆರಡು ದಿನಗಳಷ್ಟೇ. ಫ್ರಿಜ್‌ನಲ್ಲಿಟ್ಟರೆ ಒಂದು ವಾರ ಇಡಬಹುದು. ಅದಕ್ಕಿಂತ ಜಾಸ್ತಿ ದಿನ ಇಡುವ ತಂತ್ರಜ್ಞಾನ ನಮ್ಮಲ್ಲಿಲ್ಲ.ಕರ್ನಾಟಕದ  ಮಲೆನಾಡು, ಕರಾವಳಿ ಮತ್ತು ಕೇರಳದಲ್ಲಿ  ಹಣ್ಣಿನ ತೊಳೆಯನ್ನು ಸಣ್ಣ ಉರಿಯಲ್ಲಿ ಬೇಯಿಸಿ ಇಡುವ ಪದ್ಧತಿಯಿದೆ. ಇದಕ್ಕೆ ಹಲಸಿನ ಬೆರಟಿ (ಚಕ್ಕ ವರಟ್ಟಿ) ಅನ್ನುತ್ತಾರೆ. ಹೀಗೆ ಬೇಯಿಸಿದ ತೊಳೆಗಳು ತಮ್ಮ ಸಹಜ ಬಣ್ಣ ಕಳೆದುಕೊಂಡು ಕಂದು ಬಣ್ಣಕ್ಕೆ ತಿರುಗಿ ಮುದ್ದೆಯಂತಾಗುತ್ತವೆ. ಇವು ಹಲಸಿನ ತೊಳೆಗಳು ಎಂದು ಗೊತ್ತೇ ಆಗುವುದಿಲ್ಲ. ಮುದ್ದೆ ರೂಪದ ತೊಳೆಗಳನ್ನು ಐದಾರು ತಿಂಗಳು ಫ್ರಿಜ್‌ಗಳಲ್ಲಿ ಇಟ್ಟು ಬೇಕಾದಾಗ ತಿನ್ನಬಹುದು.ಇತ್ತೀಚೆಗೆ ಡ್ರೈಯರ್‌ಗಳ ಮೂಲಕ ಹಣ್ಣಿನ ತೊಳೆಗಳನ್ನು ನಿರ್ಜಲೀಕರಿಸಿ ಇಡುವ ಪ್ರಯತ್ನ ನಡೆಯುತ್ತಿದೆ. ಹೀಗೆ ಮಾಡಿದರೆ ತೊಳೆಗಳು ಬಣ್ಣ ಕಳೆದುಕೊಳ್ಳುತ್ತವೆ.ತೇವಾಂಶ ತೆಗೆದು ಒಣಗಿಸಿದ ತೊಳೆಗಳು ರಸವತ್ತಾಗಿರುವುದಿಲ್ಲ. ಇವುಗಳ ಬಾಳಿಕೆ ಒಂದು ವರ್ಷಕ್ಕಿಂತ ಹೆಚ್ಚು ಸಾಧ್ಯವಿಲ್ಲ. ಡ್ರೈಯರ್‌ಗಳನ್ನು ಹಾಕಿಕೊಳ್ಳಲು ಸುಮಾರು ಒಂದು ಲಕ್ಷ ರೂಪಾಯಿ ಬಂಡವಾಳ ಬೇಕು. ಸಣ್ಣ ರೈತರಿಗೆ ಇದು ಹೊರೆಯೇ ಸರಿ.ಕೆನ್ ಲವ್ ವಿಧಾನ: ಇತ್ತೀಚೆಗೆ ಕೇರಳದ ತಿರುವನಂತಪುರದಲ್ಲಿ ರಾಷ್ಟ್ರೀಯ ಹಲಸು ಉತ್ಸವ ನಡೆಯಿತು. ಅದರಲ್ಲಿ ಹವಾಯಿ ದ್ವೀಪದ ಹಣ್ಣು ಬೆಳೆಗಾರ ಕೆನ್ ಲವ್ ಭಾಗವಹಿಸಿದ್ದರು. ಅವರು ತೋರಿಸಿದ ಹಲಸಿನ ಹಣ್ಣಿನ ತೊಳೆಯನ್ನು ಸಂಸ್ಕರಿಸಿಡುವ ವಿಧಾನದ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು.ಒಂದು ಕೆ.ಜಿ. ಬೀಜ ಬಿಡಿಸಿದ ಹಣ್ಣಿನ ತೊಳೆಗಳನ್ನು ಎರಡು ಲೀಟರ್ ನೀರಲ್ಲಿ ಹಾಕಿ  ಸಣ್ಣಗೆ ಕುದಿಸಬೇಕು. ಅದಕ್ಕೆ ಒಂದು ಕೆ.ಜಿ. ಸಕ್ಕರೆ ಸೇರಿಸಿ ತಿರುಗಿಸಬೇಕು. ಸಕ್ಕರೆ ಕರಗುತ್ತಿದ್ದಂತೆ  200 ಗ್ರಾಂ ಪೆಕ್ಟಿನ್ (ಇತರೆ ಹಣ್ಣುಗಳಿಂದ ಶೋಧಿಸಿದ ನಾರಿನ ಪದಾರ್ಥ) ಸೇರಿಸಬೇಕು.ಅದು ಕುದಿಯುತ್ತಿದ್ದಂತೆ ಬಿಗಿ ಮುಚ್ಚಳವಿರುವ ಗಾಜಿನ ಬಾಟಲ್‌ಗಳಿಗೆ ತುಂಬಬೇಕು. ತುಂಬುವುದಕ್ಕೆ ಮೊದಲು ಮತ್ತು ನಂತರ ಬಾಟಲ್‌ಗಳನ್ನು ಕುದಿಯುವ ನೀರಿನಲ್ಲಿ ಮುಳುಗಿಸುವುದು ಅವಶ್ಯ. ಪೆಕ್ಟಿನ್ ಬದಲು ನಿಂಬೆ ಹಣ್ಣಿನ ರಸವನ್ನು ಬಳಸಬಹುದು.ಬಾಟಲ್ ಒಳಗೆ ಇರುವ ದ್ರಾವಣದಲ್ಲಿನ ಹುಳಿಯ ಪ್ರಮಾಣ (ಪಿಎಚ್3.5)ದ ಆಧಾರದ ಮೇಲೆ ಈ ರೀತಿ ಸಂಸ್ಕರಣೆ ಸಾಧ್ಯ ಅನ್ನುತ್ತಾರೆ ಕೆನ್ ಲವ್. ಆರು ವರ್ಷಗಳ ಕಾಲ ಇಟ್ಟರೂ ಈ  ತೊಳೆಗಳು ತಾಜಾ ಬಣ್ಣ ಉಳಿಸಿಕೊಳ್ಳುತ್ತವೆ.ತಿನ್ನುವವರಿಗೂ ಹಣ್ಣು ತಾಜಾ ಎಂಬ ಅನುಭವ ಆಗುತ್ತದೆ. ಹಲಸಿನ ಹಣ್ಣು ಮಾತ್ರವಲ್ಲ ಎಲ್ಲಾ ಹಣ್ಣುಗಳನ್ನೂ ಹೀಗೇ ಸಂಸ್ಕರಿಸಬಹುದು. ಯಾವುದೇ ರಾಸಾಯನಿಕಗಳನ್ನು ಬಳಸುವ ಅಗತ್ಯ ಬೀಳುವುದಿಲ್ಲ.ಇದು ಪರಿಸರ ಸ್ನೇಹಿ ವಿಧಾನ. ಆಯಾ ಋತುಗಳಲ್ಲಿ ಹೇರಳವಾಗಿ ಸಿಗುವ ಹಣ್ಣುಗಳನ್ನು ಹೀಗೆ ಸಂಸ್ಕರಿಸಿ ಅಕಾಲದಲ್ಲಿ ತಿನ್ನಬಹುದು. ಮಾರಾಟ ಮಾಡಲೂ ಅನುಕೂಲ. ವಿದೇಶಗಳಿಗೆ ರಪ್ತು ಮಾಡಲೂ ಇದು ಸಹಾಯಕಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.