ಸೋಮವಾರ, ಮೇ 23, 2022
20 °C

ಹಲ್ಲೆ ಪ್ರಕರಣ: ಇನ್ನಿಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಹಿರಿಯ ವಕೀಲ ಹಾಗೂ ಅಣ್ಣಾ ತಂಡದ ಸದಸ್ಯ ಪ್ರಶಾಂತ್ ಭೂಷಣ್ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಯುವಕರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ.ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಜನರನ್ನು ಬಂಧಿಸಲಾಗಿದ್ದು, ದೆಹಲಿ ಹೈಕೋರ್ಟ್ ಎಲ್ಲರನ್ನೂ ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ದೆಹಲಿ ಘಟಕದ ಅಧ್ಯಕ್ಷ ಎನ್ನಲಾದ ಇಂದ್ರ ವರ್ಮನನ್ನು ಘಟನಾ ಸ್ಥಳದಲ್ಲೇ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಪರಾರಿಯಾಗಿದ್ದ ಜೋಗೀಂದ್ರ ಪಾಲ್ ಸಿಂಗ್ ಬಗ್ಗ ಹಾಗೂ ವಿಷ್ಣು ಗುಪ್ತ ಎಂಬುವವರನ್ನು ನ್ಯಾಯಾಲಯಕ್ಕೆ ಶರಣಾಗಲು ತೆರಳುತ್ತಿದ್ದ ಸಂದರ್ಭದಲ್ಲಿ ಬಾಂಗ್ಲ ಸಾಹಿಬ್ ಗುರುದ್ವಾರದ ಬಳಿ ಗುರುವಾರ ಬಂಧಿಸಲಾಯಿತು.ಪ್ರದರ್ಶನಕ್ಕೆ ನಕಾರ: ಭೂಷಣ್ ಅವರ ಮುಂದೆ `ಗುರುತು ಪತ್ತೆ ಪ್ರದರ್ಶನ~ (ಟಿಐಪಿ) ನಡೆಸಲು ಮೂವರೂ ಆರೋಪಿಗಳು ನಿರಾಕರಿಸಿದ್ದಾರೆ. ತಾವು ಈಗಾಗಲೇ ಟಿ.ವಿ ವಾಹಿನಿಗಳಲ್ಲಿ ಸಾಕಷ್ಟು ಬಾರಿ ಕಾಣಿಸಿಕೊಂಡಿರುವುದರಿಂದ ಅದರ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.ಪಶ್ಚಾತ್ತಾಪ ಇಲ್ಲ: ಕಾಶ್ಮೀರಕ್ಕೆ ಸಂಬಂಧಿಸಿದ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಶಾಂತ್ ಭೂಷಣ್ ಗುರುವಾರ ಹೇಳಿದ್ದಾರೆ. ತಮ್ಮದು ವೈಯಕ್ತಿಕ ಹೇಳಿಕೆಯೇ ಹೊರತು ಅಣ್ಣಾ ತಂಡದ್ದಲ್ಲ. ಅಲ್ಲದೆ ಈ ಹೇಳಿಕೆಯ ಬಗ್ಗೆ ತಮಗೆ ಯಾವುದೇ ಪಶ್ಚಾತ್ತಾಪ ಸಹ ಇಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.ಅಣ್ಣಾ ಬೆಂಬಲಿಗರ ಮೇಲೆ ಹಲ್ಲೆ

 ನವದೆಹಲಿ, (ಪಿಟಿಐ):
ಹಲ್ಲೆಗೊಳಗಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಬೆಂಬಲ ಸೂಚಿಸುವ ಸಲುವಾಗಿ ಪಟಿಯಾಲ ನ್ಯಾಯಾಲಯದ ಆವರಣದಲ್ಲಿ ಗುರುವಾರ ಜಮಾಯಿಸಿದ್ದ ಅಣ್ಣಾ ತಂಡದ ಸದಸ್ಯರ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.ಭೂಷಣ್ ಹಲ್ಲೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ವಿಚಾರಣೆ ಆಲಿಸಲು ಎರಡೂ ತಂಡದ ಸದಸ್ಯರು ಆವರಣದಲ್ಲಿ ಸೇರಿದ್ದರು.

ಇದೇ ವೇಳೆ ಗೇಟ್ ಸಂಖ್ಯೆ 2ರ ಹೊರಭಾಗದಲ್ಲಿ ಸಂಜೆ 5ರ ವೇಳೆಗೆ ಶ್ರೀರಾಮ ಸೇನೆ ಕಾರ್ಯಕರ್ತರು ಅಣ್ಣಾ ಮತ್ತು ಪ್ರಶಾಂತ್ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾಗ ಅಣ್ಣಾ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಎರಡೂ ತಂಡಗಳ ನಡುವೆ ಪರಸ್ಪರ ವಾಗ್ವಾದ ನಡೆದಾಗ ಸೇನಾ ಕಾರ್ಯಕರ್ತರು ಹಲ್ಲೆ ನಡೆಸಿದರು ಎನ್ನಲಾಗಿದೆ.ಗಾಯಗೊಂಡ ಅಣ್ಣಾ ತಂಡದ ಮೊಹಮದ್ ಶಫಿ ಮತ್ತು ರಾಜ್‌ಕುಮಾರ್ ಎಂಬುವವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.