ಗುರುವಾರ , ಜೂನ್ 17, 2021
27 °C

ಹಳದಿ ಹೂಗಳ ಮೆರವಣಿಗೆ

ಜೆ.ಪಿ. Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಹಾದಿ ಬೀದಿಗಳಲ್ಲೆಲ್ಲಾ ಈಗ ಹಳದಿ ಹೂಗಳ ಮೆರವಣಿಗೆ. ವಿಧಾನಸೌಧಕ್ಕೆ ಹೋಗಿ, ಮಣೇಕ್ ಶಾ ಪೆರೇಡ್ ಗ್ರೌಂಡ್‌ನಲ್ಲಿ ಅಡ್ಡಾಡಿ ಬನ್ನಿ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಓಡಾಡಿ, ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳಲ್ಲಂತೂ ಕೇಳಲೇಬೇಡಿ.ಬೆಂಗಳೂರಿನ ಯಾವುದೇ ಭಾಗಕ್ಕೆ ಹೋದರೂ ಈಗ ಹಳದಿ ಹೂವುಗಳದೇ ಆಕರ್ಷಣೆ. ಇಡೀ ನಗರಕ್ಕೆ ಹಳದಿ ರಂಗು ಚೆಲ್ಲಿದಂತೆ ಕಾಣುವ ಈ ಹೂವು ಬಿಗ್‌ನಾನಿಯಸ್ ಮರಗಳ ಗುಂಪಿಗೆ ಸೇರುವ `ಟಾಬೆಬುಯಾಸ್~.ಚಳಿಯಲ್ಲಿ ಮುದುಡಿ ಹೋಗಿದ್ದ ಸಸ್ಯಲೋಕದಲ್ಲಿ ಈಗ ಜೀವ ಸಂಚಾರ. ನೇಸರನ ಪ್ರಖರತೆ ಹೆಚ್ಚುತ್ತಿದ್ದಂತೆ ಬೋಳು ಬೋಳಾಗಿದ್ದ ಮರ-ಗಿಡಗಳೆಲ್ಲ ಹೊಸ ಚಿಗುರು ಕಾಣಿಸಿಕೊಂಡು ಹೊಸ ರೂಪ ಪಡೆಯುತ್ತಿವೆ. ನೂತನ ವರ್ಷಾರಂಭದ ಮುನ್ಸೂಚನೆ ಈಗಾಗಲೇ ಕಾಣಿಸಿಕೊಂಡು ಹೇಮಂತ ಋತು ಕಳೆದು ಶಿಶಿ ಋತುವಿನ ಆಗಮನಕ್ಕೆ ಸ್ವಾಗತ ಶುರುವಾಗಿದೆ.ಮರ-ಗಿಡಗಳು ಮೈಮೇಲಿನ ಎಲೆಗಳನ್ನೆಲ್ಲ ಕೊಡವಿಕೊಂಡು ಮತ್ತೆ ಹೊಸ ಹಸಿರು ಉಡಲು ಆರಂಭಿಸುತ್ತಿದ್ದು ಇದಕ್ಕಾಗಿ ಹಳದಿ ಅಕ್ಕ ಎಲ್ಲ ಕಡೆ ಕಾಣಿಸಿಕೊಳ್ಳುತ್ತಿದ್ದಾಳೆ.ಪ್ರಪಂಚದ ಅಲಂಕಾರಿಕ ಹೂವುಗಳ ಜಾತಿಗೆ ಸೇರಿದ `ಟಾಬೆಬುಯಾಸ್ ಆರ್‌ಜೆಂಟಿಯಾ~ ಹೂವುಗಳು ಮರ, ಪೊದೆ, ಹಾಗೂ ಬಳ್ಳಿಗಳಲ್ಲಿಯೂ ಬೆಳೆಯುತ್ತದೆ. ಇವು ಸಾಮಾನ್ಯವಾಗಿ ಉಷ್ಣವಲಯದಲ್ಲಿ ಕಾಣಸಿಗುವ ಹೂವುಗಳು. ಗಂಟೆಯ ಆಕಾರದಲ್ಲಿರುವ ಈ ಹೂವುಗಳು ಕಾಡು ಹಳದಿ, ಬಿಳಿ, ಕೆಂಪು, ಮೊದಲಾದ ಬಣ್ಣಗಳಲ್ಲಿ ಹೂ ಬಿಡುತ್ತವೆ.ಅಮೆರಿಕಾದಲ್ಲಿ ಇದನ್ನು ಕರೆಯುವುದು `ಚಿನ್ನದ ಮರ~ ಎಂದು ಕರೆಯುತ್ತಾರೆ. ಸುಮಾರು 8 ಮೀಟರ್ ಎತ್ತರದವರೆಗೂ ಬೆಳೆಯುವ ಈ ಮರ ವಿಶಾಲವಾಗಿಯೂ ಹರಡುತ್ತದೆ.

 

ಗಟ್ಟಿ ಕಾಂಡ ಹೊಂದಿಲ್ಲದ ಟಾಬೆಬುಯಾಸ್ ಒರಟಾದ ತೊಗಟೆಯನ್ನು ತೆಳುವಾದ ಕಾಂಡವನ್ನು ಹೊಂದಿದ್ದು ಭೂಮಿಯೊಳಕ್ಕೆ ಹೆಚ್ಚು ಆಳಕ್ಕೆ ಹೋಗದ ಗಟ್ಟಿ ಕಾಂಡ ಇಲ್ಲದ ಗಿಡ.ವರ್ಷ ಪೂರ್ತಿ ತನ್ನಷ್ಟಕ್ಕೆ ತಾನಿರುವ ಈ ಗಿಡಕ್ಕೆ ಜೀವಕಳೆ ಬರುವುದು ಹೂ ಬಿಟ್ಟಾಗ ಮಾತ್ರ. ಅಷ್ಟೇನೂ ಆಕರ್ಷಕವಲ್ಲದ ಈ ಮರ ಫೆಬ್ರುವರಿಯಿಂದ ಮಾರ್ಚ್ ಕೊನೆಯವರೆಗೂ ಎಲ್ಲರನ್ನು ಸೆಳೆಯುವ ಹಳದಿ ಹೂಗಳ ಗೊಂಚಲುಗಳನ್ನು ಹೊಂದಿರುತ್ತದೆ.

 

ಸುಮಾರು ಒಂದು ತಿಂಗಳ ಕಾಲ ಕಡು ಹಳದಿ ಹೂಗಳಿಂದ ಸೆಳೆಯುವ ಈ ಗಂಟೆಯಾಕಾರದ ಹೂಗಳು ಹೋಳಿ ಹಬ್ಬದ ಆಸುಪಾಸಿನಲ್ಲಿ ಉಜ್ವಲವಾಗುತ್ತವೆ.ವಸಂತ ಋತುವಿನ ಆಗಮನಕ್ಕೆ ಭವ್ಯ ಪರದೆ ನಿರ್ಮಿಸಿಕೊಡುವ ಹಳದಿ ಗಂಟೆ ಹೂಗಳು ಜೇನುನೊಣಗಳಿಗೆ ಬಹುಪ್ರಿಯ. ಈ ಹೂಗಳ ಮಧುಪಾತ್ರೆಯಿಂದ ಮಧು ಹೀರಲು ಜೇನುನೊಣಗಳ ಗುಂಪು ಈ ಮರಗಳಿಗೆ ದಾಳಿ ಇಡುತ್ತವೆ.ಬೆತ್ತಲಾಗಿರುವ ಮರಗಳಿಗೆ ಹೊಸ ಉಡುಗೆ ಹೊದಿಸುವ ಜೊತೆಗೆ ರಂಗು ರಂಗಿನ ಹೂಗಳ ಓಕುಳಿಯಾಟ ನಡೆಯುವ ಸಂದರ್ಭಕ್ಕೆ ಹಳದಿ ಗಂಟೆ ಹೂಗಳು ಆಹ್ವಾನ ನೀಡುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.