ಶುಕ್ರವಾರ, ಮೇ 27, 2022
27 °C

ಹಳೆಯ ಸಹಕಾರ ಕಾಯ್ದೆ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಹಕಾರಿ ಸಂಘ-ಸಂಸ್ಥೆಗಳಿಗೆ ಸಂಬಂಧಿಸಿದಂತೆ 1957ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯನ್ನು ರದ್ದು ಮಾಡಬೇಕೆಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮನೋಹರ ಮಸ್ಕಿ ಒತ್ತಾಯಿಸಿದರು.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.ಹತ್ತು ವರ್ಷಗಳ ಹಿಂದೆ ರಾಜ್ಯದಲ್ಲಿ ‘ ಸೌಹಾರ್ದ ಸಹಕಾರಿ ಕಾಯ್ದೆ’ ಜಾರಿಗೆ ಬಂದಿದೆ. ಇದರ ಜೊತೆಗೆ ಹಳೆಯದಾದ 1957ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯೂ ಅಸ್ತಿತ್ವದಲ್ಲಿ ಇದೆ. ಸಹಕಾರ ಸಂಘ- ಸಂಸ್ಥೆಗಳಿಗೆ ಸಂಬಂಧಿಸಿದಂತೆ ಎರಡು ಸಮಾನಾಂತರ ಕಾಯ್ದೆಗಳಿರುವುದು ಸೂಕ್ತವಲ್ಲ. ಹಳೆಯ ಕಾಯ್ದೆಯನ್ನು ಕೈಬಿಡಬೇಕೆಂದು ಯೋಜನಾಆಯೋಗ ಕೂಡ ಹೇಳಿದೆ ಎಂದರು.ಸೌಹಾರ್ದ ಕಾಯ್ದೆಯ ಅನುಸಾರ ಹಲವಾರು ಅನುಕೂಲಗಳು ಒದಗಿಬರುತ್ತವೆ. ಈ ಕಾಯ್ದೆ ವ್ಯಾಪ್ತಿಗೆ ಬರುವ ಸಹಕಾರ ಸಂಘಗಳಿಗೆ ಬಂಡವಾಳ ಕ್ರೋಢೀಕರಣ ಸುಲಭವಾಗುತ್ತದೆ. ಸಂಘದ ಸದಸ್ಯನಿಗೆ ಹೆಚ್ಚಿನ ಜವಾಬ್ದಾರಿ ದೊರೆತು, ಆತ ಜಾಗೃತನಾಗುತ್ತಾನೆ. ಆಡಳಿತ ಮಂಡಳಿ ಸದಸ್ಯರ ವಿರುದ್ಧ ನೇರವಾಗಿ ಅಪರಾಧ ಪ್ರಕರಣ ದಾಖಲಿಸಲು ಅವಕಾಶವಿದೆ. ಆದರೆ, ಹಳೆಯ ಕಾಯ್ದೆಯಲ್ಲಿ ಸಂಘದ ಸದಸ್ಯರಿಗೆ ಯಾವುದೇ ಜವಾಬ್ದಾರಿ ಇಲ್ಲ ಹಾಗೂ ಆಡಳಿತ ಮಂಡಳಿ ಸದಸ್ಯರ ವಿರುದ್ಧ ನೇರವಾಗಿ ಅಪರಾಧ ಪ್ರಕರಣ ದಾಖಲಿಸಲು ಆಸ್ಪದವಿಲ್ಲ ಎಂದು ಅವರು ಹೇಳಿದರು.ಪಟ್ಟಣ ಸಹಕಾರ ಬ್ಯಾಂಕುಗಳು ಈ ಮೊದಲು ಶೇ. 28ರಷ್ಟು ಹಣವನ್ನು ಡಿಸಿಸಿ ಅಥವಾ ಅಪೆಕ್ಸ್ ಬ್ಯಾಂಕ್‌ನಲ್ಲಿ ಮೀಸಲು ಇಡಬೇಕಾಗಿತ್ತು. ಆದರೆ, ಮುಂಬರುವ ಮಾರ್ಚ್‌ನಿಂದ ಈ ಶೇ. 28ರಷ್ಟು ಹಣವನ್ನು ಸರ್ಕಾರಿ ಸೆಕ್ಯೂರಿಟಿಗಳಲ್ಲಿ ತೊಡಗಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಈ ಹಿಂದೆ ಸಹಕಾರ ಬ್ಯಾಂಕುಗಳಲ್ಲಿ ಆಗುತ್ತಿದ್ದ ತೊಂದರೆ ಹಾಗೂ ನಷ್ಟ ತಪ್ಪಿಸಲು ಇದು ಅನುಕೂಲವಾಗಲಿದೆ ಎಂದು ಅವರು ಹೇಳಿದರು.ಸೌಹಾರ್ದ ಸಹಕಾರಿ ಕಾಯ್ದೆ ಅನುಸಾರವಾಗಿ ರಾಜ್ಯದಲ್ಲಿ 1600ಕ್ಕೂ ಅಧಿಕ ನೋಂದಣಿಯಾಗಿವೆ. ಈ ವರ್ಷದಲ್ಲಿ ಈ ಸಂಖ್ಯೆ 2000 ತಲುಪುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಸತೀಶಚಂದ್ರ ಹೇಳಿದರು.ಸೌಹಾರ್ದ ಸಹಕಾರಿ ಕಾಯ್ದೆಯಡಿ ನೋಂದಣಿಯಾದ ಸಂಘ-ಸಂಸ್ಥೆಗಳನ್ನು ಗುಣಾತ್ಮಕವಾಗಿ ಬೆಳೆಸುವ ಗುರಿ ನಮ್ಮದಾಗಿದೆ. ಈಗಾಗಲೇ 330 ಇ-ಸ್ಟ್ಯಾಂಪಿಂಗ್ ಕೇಂದ್ರಗಳನ್ನು ಸೌಹಾರ್ದ ಸಹಕಾರಿಗಳ ಸಂಸ್ಥೆಗಳ ಮೂಲಕ ತೆರೆಯಲಾಗಿದೆ ಎಂದರು.ಹಳೆಯ ಕಾಯ್ದೆಗೆ ಹೋಲಿಸಿದರೆ ಹೊಸ ಕಾಯ್ದೆಯಲ್ಲಿ ನೋಂದಣಿಯಾದ ಸಂಘ-ಸಂಸ್ಥೆಗಳು ವೃತ್ತಿಪರವಾಗಿ ಕಾರ್ಯನಿರ್ವಹಿಸುತ್ತಿವೆ. ಹೊಸ ಪ್ರಯೋಗಗಳನ್ನು ಮಾಡುತ್ತಿವೆ. ತುಂಗಭದ್ರ ನದಿ ತಟದ ಪ್ರದೇಶದಲ್ಲಿ ಬಿತ್ತನೆ ಯಂತ್ರಗಳು, ಬಾಗಲಕೋಟೆಯಲ್ಲಿ ಕಬ್ಬು ಕಟಾವಿಗೆ ಯಂತ್ರಗಳನ್ನು ಸೌಹಾರ್ದ ಸಹಕಾರಿ ಸಂಸ್ಥೆಗಳ ಮೂಲಕ ಒದಗಿಸುವ ಚಿಂತನೆ ನಡೆದಿದೆ ಎಂದು ನಿಯಮಿತದ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಹಿರೇಮಠ ಹೇಳಿದರು.ನಿಯಮಿತದ ಹಾವೇರಿ ಜಿಲ್ಲಾ ನಿರ್ದೇಶಕ ಎಂ.ಎ.ಕಲಾಲ, ಗದಗ ಜಿಲ್ಲೆ ನಿರ್ದೇಶಕ ದೇಶಪಾಂಡೆ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.