ಹಳೇ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹ

7

ಹಳೇ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹ

Published:
Updated:

ದಾವಣಗೆರೆ: ಸರ್ಕಾರದ ವಿವಿಧ ಇಲಾಖೆಗಳಿಗೆ ಏಪ್ರಿಲ್ 2006ರ ನಂತರ ನೇಮಕಕೊಂಡು ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಜಾರಿಗೊಳಿಸುತ್ತಿರುವ ಹೊಸ ಪಿಂಚಣಿ ಯೋಜನೆ ಕೈಬಿಟ್ಟು ಹಳೇ ಪಿಂಚಣಿ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಹೊಸ ಪಿಂಚಣಿ ಯೋಜನೆಯ ನೌಕರರ ಜಿಲ್ಲಾ ಸಂಘದ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನೌಕರರ ಮೂಲ ವೇತನ ಹಾಗೂ ತುಟ್ಟಿಭತ್ಯೆಯಲ್ಲಿ ಕಡಿತಗೊಳಿಸುವ ಶೇ. 10ರಷ್ಟು ಹಣವನ್ನು ಷೇರು ಕಂಪೆನಿಯಲ್ಲಿ ಹೂಡಬಾರದು. ನೌಕರರಿಂದ ಕಡಿತಗೊಳಿಸಿರುವ ಹಾಗೂ ಸರ್ಕಾರ ಕೊಡುವ ಶೇ. 10ರಷ್ಟು ಹಣದಲ್ಲಿ ಒಟ್ಟು 60ರಷ್ಟು ಹಣವನ್ನು ನಿವೃತ್ತಿ ನಂತರ ನೌಕರರಿಗೆ ನೀಡುವ ಹಾಗೂ ಉಳಿದ ಶೇ. 40ರಷ್ಟು ಹಣಕ್ಕೆ ಬರುವ ಬಡ್ಡಿಯನ್ನು ಪಿಂಚಣಿಯಾಗಿ ನೀಡಬೇಕು ಎಂಬ ಹೊಸ ಯೋಜನೆ ಅವೈಜ್ಞಾನಿಕವಾಗಿದೆ ಎಂದು ದೂರಿದರು.ಯೋಜನೆಗೆ ಒಳಪಡುವ ನೌಕರರು ಸೇವೆಯಲ್ಲಿದ್ದಾಗ ಆಕಸ್ಮಿಕ ಮರಣಕ್ಕೆ ತುತ್ತಾದರೆ ಷೇರು ಮಾರುಕಟ್ಟೆಯಲ್ಲಿ ಹೂಡಿರುವ ಒಟ್ಟು ಹಣದಲ್ಲಿ ಶೇ. 80ರಷ್ಟು ಹಣವನ್ನು ಕಂಪೆನಿಗೆ ಬಿಟ್ಟು ಉಳಿದ ಶೇ. 20ರಷ್ಟು ಹಣವನ್ನು ಮೃತರ ಕುಟುಂಬ ಪಡೆಯಬೇಕಿದೆ. ಷೇರುಪೇಟೆಯ ಏರಿಳಿತ ನೋಡಿದರೆ ಹೂಡಿಕೆದಾರರ ಕುಟುಂಬಕ್ಕೆ ಯಾವುದೇ ಖಾತ್ರಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಈ ಎಲ್ಲ ಕಾರಣಗಳಿಂದಾಗಿ ಹೊಸ ಯೋಜನೆ ಕೈಬಿಟ್ಟು ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಕುರಿತು ಮುಖ್ಯಮಂತ್ರಿ ಈ ತಿಂಗಳು ಮಂಡಿಸಲಿರುವ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.ಸಂಘದ ಜಿಲ್ಲಾ ಅಧ್ಯಕ್ಷ ಅಣಬೇರು ಶಿವಮೂರ್ತಿ, ಕಾರ್ಯದರ್ಶಿ ಎಚ್.ಎಸ್. ರವಿ, ಪದಾಧಿಕಾರಿಗಳಾದ ನಂದಿಬಸಪ್ಪ, ರಾಜೇಶ್, ವಿ. ಸುಮಾ, ಗೀತಾಬಾಯಿ, ರೂಪಾ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry