ಬುಧವಾರ, ಜನವರಿ 29, 2020
30 °C

ಹಳ್ಳಿಗಳಿಗೂ ಬೇಕು ಉದ್ಯಾನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆಯೇನೋ ಅನ್ನಿಸಲು ಶುರುವಾಗಿದೆ. ಊರಿಗೊಂದು ಕಣ, ಊರಿಗೊಂದು ಆಟದ ಮೈದಾನ ರೂಪಿಸುವ ಯೋಜನೆ ಯಾವಾಗಲೋ ಆಗ­ಬೇಕಿದ್ದ ಕೆಲಸ. ಈಗಲಾದರೂ ಆಗಬಹು­ದೇನೋ ಅನ್ನುವ ನಿರೀಕ್ಷೆಯ ಜೊತೆಗೆ ಹೋಬಳಿಗೊಂದು  ಉದ್ಯಾನವೂ  ಬೆಳೆಸುವು­ದರತ್ತ ಚಿಂತನೆ ನಡೆಸಿದ್ದರೆ ಇನ್ನೆಷ್ಟು ಚೆನ್ನಾಗಿ­ರುತ್ತಿತ್ತು ಅಂತ ಅನ್ನಿಸುತ್ತದೆ. ಬೆಂಗಳೂರು, ಮೈಸೂರು ಮಾತ್ರ ಉದ್ಯಾನ ನಗರಿಗಳು ಎಂದು ಕರೆಸಿಕೊಂಡರೆ ಸಾಕೆ? ಉದ್ಯಾ­ನಗಳು ಹಾಸನಕ್ಕೂ, ಕೊಪ್ಪಳಕ್ಕೂ, ಅರಸೀ­ಕೆರೆಗೂ, ಗ್ರಾಮಾಂತರ ಪ್ರದೇಶಗಳಿಗೂ ಬೇಕು ಹಾಗೂ ಅವಶ್ಯಕ.  ‘ಗಾರ್ಡನ್ ಸಿಟಿ’ ಎಂಬ ನಾಮಧೇಯ  ಹೈದರ್ ಅಲಿ, ಟಿಪ್ಪು ಮತ್ತು ಮೈಸೂರು ಅರಸರ  ಕಾಲದ ಬೆಂಗಳೂರಿಗೆ ಅನ್ವಯಿಸುತ್ತಿತ್ತೇನೋ.ಕೆಲವರಂತೂ ಬೆಂಗಳೂ­ರಿಗಿಂತ ಮೈಸೂರಿಗೇ ಈ ‘ಗಾರ್ಡನ್ ಸಿಟಿ’ ಎಂಬ ನಾಮಧೇಯ ಒಪ್ಪುತ್ತದೆ ಎಂಬ ಅಭಿಪ್ರಾಯ ಕೊಡುತ್ತಾರೆ. ಆದರೆ  ಮೈಸೂರು ಅರಸರ ಆಡಳಿತ ಕೊನೆಗೊಂಡ  ಮೇಲೆ ಗಾರ್ಡನ್ ಬಗ್ಗೆ ತಲೆ ಕೆಡಿಸಿಕೊಂಡವರೇ ಇಲ್ಲಾಂತ ಕಾಣುತ್ತದೆ. ಅರಸರ ಕಾಲದಲ್ಲಿ ಉದ್ಯಾನಗಳ, ಪಾರ್ಕುಗಳ ನಿರ್ಮಾಣಕ್ಕಾಗಿ, ಉಸ್ತುವಾರಿಗೆಂದೇ ಪ್ರತ್ಯೇಕ ನಿರ್ದೇಶನಾಲಯ ಇತ್ತು.ಮೈಸೂರು ನಗರದ ವ್ಯಾಪ್ತಿಯಲ್ಲಿ ಅಂದರೆ ನಗರದ ಹಳೆಯ ಭಾಗದ ಸುತ್ತಮುತ್ತ ಸುಮಾರು ಪಾರ್ಕುಗಳು ಇವೆ. ಅವು ಲಾಲ್ ಬಾಗ್, ಕಬ್ಬನ್ ಪಾರ್ಕುಗಳಷ್ಟು ದೊಡ್ಡದ­ಲ್ಲದಿದ್ದರೂ, ಜನರಿಗೆ ಉಸಿರಾಟಕ್ಕೆ ಒಂದಷ್ಟು ಒಳ್ಳೆಯ ಗಾಳಿಯಾದರೂ ಸಿಗುತ್ತದೆ. ಆದರೆ ಹೊಸ ಬಡಾವಣೆಗಳಲ್ಲಿ  ಉದ್ಯಾನಗಳ  ಸಂಖ್ಯೆ ತೀರ ಕಡಿಮೆ.ಅಲ್ಲಲ್ಲಿ ಒಂದೊಂದು ಟ್ರಾಫಿಕ್ ಐಲ್ಯಾಂಡ್ ನಂತಹ ಜಾಗಗಳನ್ನು ಇಟ್ಟಿರುವುದು ಬಿಟ್ಟರೆ ನಗರಗಳ ಹೊಸ ಬಡಾವಣೆಗಳಲ್ಲಿ  ಗಿಡ ಮರಗಳು ಸಾಲದು. ಬೆಳಗಿನ ಗಾಳಿ ಸೇವನೆಗೆ ಹೋದವರು ಅತೀ ಜನದಟ್ಟಣೆ ಕಾರಣ ದೇಹ­ದಲ್ಲಿ ಆಮ್ಲಜನಕ ತುಂಬಿಕೊಳ್ಳುವ ಬದಲು ಜನರ ಉಸಿರಿನ ಅಂಗಾರಾಮ್ಲ ತುಂಬಿ­ಕೊಂಡು ಬರುತ್ತಾರೆ.  ಅಲ್ಲಲ್ಲಿ ಕನಿಷ್ಠವೆಂದರೆ ಒಂದು ಇಪ್ಪತ್ತು  ಏಕರೆ ಪ್ರದೇಶವಾದರೂ ಪಾರ್ಕುಗಳಿಗೆ ಮೀಸಲು ಇಡಬೇಕು.  ಬಿಡದಿ, ರಾಮನಗರದಿಂದ ದಿನನಿತ್ಯ ಲಾಲ್‌ಬಾಗ್‌ಗೆ ವಾಕಿಂಗ್ ಹೋಗಲಿಕ್ಕಾಗುತ್ತದೆಯೇ?    

  

ಆಡಳಿತದ ಚುಕ್ಕಾಣಿ ಹಿಡಿದವರು ಜನತೆಯ ಹೊಟ್ಟೆ, ಬಟ್ಟೆಯ ಬಗ್ಗೆ  ಚಿಂತನೆ ಮಾಡಲೇ­ಬೇಕಾದ ಅನಿವಾರ್ಯ ಇದೆ. ಆದರೆ, ಜನರ ಆರೋಗ್ಯದ ದೃಷ್ಟಿಯಿಂದ, ಪರಿಸರವನ್ನು ಬೆಳೆಸಿ, ಉಳಿಸುವ ನಿಟ್ಟಿನಲ್ಲಿ ಹಾಗೂ ಜನರು ತಮ್ಮ ದೈನಂದಿನ ಜೀವನದಲ್ಲಿ ಒಂದಿಷ್ಟು ಸೌಂದರ್ಯ ಪ್ರಜ್ಞೆ ಬೆಳೆಸಿಕೊಳ್ಳಲೂ ನೆರವಾಗ­ಬೇಕಾಗಿದೆ. ಒಂದು ಕಾಲದಲ್ಲಿ ಅಂತಹ ಆಡಳಿತ­ಗಾರರು ನಮ್ಮ ರಾಜ್ಯದಲ್ಲೇ ಇದ್ದರು.  ಮೈಸೂರು ಸಂಸ್ಥಾನದ  ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು  ಸೌಂದರ್ಯ ಪ್ರಜ್ಞೆ  ಇದ್ದವರಾಗಿದ್ದು, ಅಂದಿನ ಕಾಲಕ್ಕೆ ತಕ್ಕಂತೆ ಕೃಷ್ಣರಾಜ ಸಾಗರದಲ್ಲಿ  ಮೊಘಲ್  ಉದ್ಯಾ­ನಗಳ ಮಾದರಿಯಲ್ಲಿ ಉದ್ಯಾನ ನಿರ್ಮಿಸಲು  ಕಾರಣರಾದರು.  ಹೂ ತೋಟಗಳಲ್ಲಿ ಇವತ್ತಿಗೂ ಬೆಳೆಸುವ ಕ್ಯಾನದಂತಹ ಸುಂದರ­ವಾದ ಹೂವಿನ ಗಿಡಗಳನ್ನು ಮೈಸೂರಿಗೆ ಪರಿಚಯಿ­ಸಿದವರು ಮಿರ್ಜಾ ಅವರು. ಬ್ರಿಟಿಷರು ಬೆಂಗಳೂರಿಗೆ  ಹೊರ ದೇಶಗಳಿಂದ ತರಿಸಿದ ಕೆಲವು ಗಿಡ ಮರಗಳು ಆಸ್ತಮಾದಂತಹ ಕಾಯಿಲೆಗೆ ಕಾರಣವಾಗಿದ್ದರೂ, ಬೆಂಗಳೂ­ರಂತೂ ಎಪ್ಪತ್ತರ ದಶಕದವರೆಗೂ  ಒಂದು ಸುಂದರವಾದ ಉದ್ಯಾನ ನಗರಿಯಾಗಿತ್ತು.  ನಮಗೆ ಸ್ವಾತಂತ್ರ್ಯ ಬಂದಾದ ಮೇಲೆ ನಮ್ಮದೇ  ದೇಸಿ ಸರ್ಕಾರ ಎಷ್ಟು ಜಾಗಗಳನ್ನು ಹೂವಿನ ತೋಟ, ಪಾರ್ಕುಗಳಿಗೆ ಮೀಸಲಾಗಿಟ್ಟಿದೆ? ಒಂದು ಕಾಲದಲ್ಲಿ ಸರ್ಕಾರ ವನ ಮಹೋತ್ಸವ ಎಂದು ಗಿಡ ಮರಗಳನ್ನು ನೆಡುವ ಕಾರ್ಯ­ಕ್ರಮಗಳನ್ನು ಹಮ್ಮಿಕೊಂಡಿತ್ತು.  ಮರಗಿಡ­ಗಳನ್ನು ನೆಟ್ಟುಬಿಟ್ಟರೆ ಸಾಲದು.  ಅದೇಕೆ ಅವುಗಳು “ಆಕಾಲ ಮೃತ್ಯು”ಗೆ ಒಳಗಾದವು ಎನ್ನುವುದರ  ವಿಶ್ಲೇಷಣೆಯೂ ಬೇಕು.ಮೈಸೂರಿನಂತಹ ನಗರಗಳನ್ನೇ ನೋಡಿ. ಅರಣ್ಯ ಇಲಾಖೆಗೆ ಸೇರಿದ ನರ್ಸರಿಯೊಂದು, ಸಿಟಿ ಒಳಗೆ ಇದೆ. ಆದರೆ ಇಲ್ಲಿ  ಸಸಿಗಳನ್ನು ಕೊಂಡುಕೊಳ್ಳುವಂತಿಲ್ಲ. ನರ್ಸರಿಯಿಂದ  ಅತಿ ದೂರದಲ್ಲಿರುವ ಅರಣ್ಯ ಭವನಕ್ಕೆ ಹೋಗಿ ಯಾವ ಯಾವ ಗಿಡಗಳು ಬೇಕೋ ಅವಕ್ಕೆ ಹಣಕೊಟ್ಟು, ಬರೆಯಿಸಿಕೊಂಡು ಬಂದು, ಹಣ­ಕಟ್ಟಿದ ರಸೀತಿಯನ್ನು ನರ್ಸರಿಯಲ್ಲಿ  ತೋರಿ­ಸಿದರೆ ಮಾತ್ರ ಗಿಡಗಳನ್ನು ಕೊಂಡುಕೊಳ್ಳ­ಬ­ಹುದು.ಗಿಡಗಳ ಅಂದ ಚೆಂದ ನೋಡಿ ಮನಸ್ಸು ಬದಲಾಯಿಸಿ ಹೆಚ್ಚಿಗೆ ಇನ್ನೆರಡು ಗಿಡಗಳನ್ನು  ಕೊಂಡುಕೊಳ್ಳೋಣವೆಂದರೆ ಆಗು­ವು­ದಿಲ್ಲ. ಪುನಃ ಅರಣ್ಯ ಭವನಕ್ಕೇ ಹೋಗಿ ಹಣ ಪಾವತಿಸಬೇಕು. ಈ ಹೊಸ ಹೊಸ ಕಾನೂನು­ಗಳನ್ನು ಯಾಕಾಗಿ ಮಾಡುತ್ತಾರೆಂದು ಕೇಳಿದರೆ ಅಲ್ಲಿ ನಡೆಯುತ್ತಿದ್ದ  ಭೃಷ್ಟಾಚಾರವೇ ಇದಕ್ಕೆಲ್ಲ ಕಾರಣವೆಂಬುದು ಗೊತ್ತಾಗುತ್ತದೆ. ಇಂತಹ ಪರಿಸ್ಥಿತಿ ಇರುವ ತನಕ ಯಾರೂ ಗಿಡ ಮರಗಳನ್ನು ಬೆಳೆಸುವ ಗೋಜಿಗೆ ಹೋಗುವುದಿಲ್ಲ.ನಮ್ಮ ರಾಜ್ಯದ ಬಹುಪಾಲು ಸಮುದ್ರ ತೀರವಿಲ್ಲದ ಒಳನಾಡುಗಳು.  ಚೆನ್ನೈನಂತಹ ನಗರಗಳಲ್ಲಿ ಸೆಖೆ ಅತಿಯಾಗಿದ್ದರೂ, ಸಾಮಾನ್ಯ ಜನರಿಗೂ ಎಟುಕುವಂತೆ ಪ್ರಕೃತಿದತ್ತ ಸಮುದ್ರ ತೀರ ಇದೆ. ಇದಕ್ಕೆ ಯಾರೂ ಹಣ ಕೊಡಬೇ­ಕಾಗಿಲ್ಲ. ಚೆನ್ನೈ ನಗರದ ಮರೀನಾ ಬೀಚ್‌ನಲ್ಲಿ ನೂರಾರು  ಮರಗಳು ಇದ್ದವಂತೆ.  ೫೦ರ ದಶಕದಲ್ಲಿ ಕಾಂಗ್ರೆಸ್‌ನ   ಭಕ್ತವತ್ಸಲಂ ಅವರ ಸರ್ಕಾರ ಇದ್ದಾಗ ಪ್ರೇಮಿಗಳು ಕೈ ಕೈ ಹಿಡಿದು­ಕೊಂಡು ಓಡಾಡುತ್ತಾರೆಂಬ  ಕಾರಣ ಇಟ್ಟುಕೊಂಡು ಮರಗಳನ್ನೆಲ್ಲ ಕಡಿದುಹಾ­ಕಿದ್ದರಂತೆ.ಮಡಿವಂತರನ್ನು ಮೆಚ್ಚಿಸಲು ಹೋಗಿ ಆದದ್ದಾದರೂ ಏನು? ರಾಜಕಾರಣಿಗಳ, ಸಿನಿಮಾ ನಟರ ದೊಡ್ಡ ದೊಡ್ಡ ಪ್ರತಿಮೆಗಳು ಕಣ್ಣು ಕುಕ್ಕುವ ಹಾಗೆ ಸಮುದ್ರ ತೀರದಲ್ಲಿ ಎದ್ದು ನಿಂತಿವೆ. ಆದರೆ ಇತ್ತೀಚಿಗೆ ತಮಿಳು ನಾಡು ಮುಖ್ಯ­ಮಂತ್ರಿ ಜಯಲಲಿತಾ ಅವರು ಕೂಡ ಬದಲಾವಣೆಗೆ ಅವಕಾಶ ಮಾಡಿಕೊಡು­ತ್ತಿದ್ದಾರೆ. ಅವರ ಹುಟ್ಟು ಹಬ್ಬದ ಪ್ರಯುಕ್ತ  ಸುಮಾರು ಎರಡು ಲಕ್ಷದಷ್ಟು ಗಿಡ ಮರಗಳನ್ನು ನೆಡೆಸಿದ್ದಾರೆ. ಹೊಸ ಹೊಸ ನಗರಗಳನ್ನು ಅಭಿವೃದ್ಧಿ ಮಾಡುವಾಗ, ಬಡಾವಣೆಗಳನ್ನು ಮಾಡುವ ಮೊದಲೇ ಉದ್ಯಾನಗಳಿಗೆಂದು ಒಂದಿಷ್ಟು ಜಾಗವನ್ನು ಮೀಸಲಿಡಬಾರದೆ? ಏಷ್ಯಾ ಖಂಡದ ಯಾವ ದೇಶಗಳಿಗಾದರೂ ಹೋಗಿ ನೋಡಿ.  ನಮ್ಮ ದೇಶದಷ್ಟು ಹೊಲಸು ಎಲ್ಲೂ ಕಾಣುವುದಿಲ್ಲ. ಅದು ತೀರ ಬಡತನದಲ್ಲಿರುವ  ಕಾಂಬೋಡಿಯ ಇರಬಹುದು,   ಮ್ಯಾನ್ಮಾರ್‌ ಇರಬಹುದು ಅಥವಾ  ಶ್ರೀಲಂಕಾ ಇರಬಹುದು. ಎಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಬಹಿರ್ದೆ­ಸೆಗೆ ಹೋಗುವುದನ್ನು ಕಾಣುವುದಿಲ್ಲ.ಅದ­ರಲ್ಲೂ  ಶ್ರೀಲಂಕಾದವರ ಶುಚಿತ್ವ, ಸೌಂದರ್ಯ ಪ್ರಜ್ಞೆ  ಮೆಚ್ಚಲೇಬೇಕಾದದ್ದು. ತಮ್ಮ ಪರಿಸರ­ದಲ್ಲಿ ಸುಲಭವಾಗಿ ಬೆಳೆಯಬಹುದಾದ ಗಿಡ­ಮರ­ಗಳನ್ನು ಬೆಳೆಸಿ ಸಾರ್ವಜನಿಕ ಸ್ಥಳಗಳನ್ನು ಅಂದವಾಗಿ ಇಟ್ಟುಕೊಳ್ಳುತ್ತಾರೆ. ದೇಶದಾದ್ಯಂತ ಹಲವಾರು ಉದ್ಯಾನಗಳನ್ನು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಬೌದ್ಧ ದೇವಾಲಯಗಳ ಸುತ್ತ ಮುತ್ತ  ಹೆಮ್ಮರಗಳಿಂದ ಕೂಡಿದ ಪ್ರಶಾಂತ­ವಾದ ವಾತಾವರಣ ಇರುತ್ತದೆ. ಬೌದ್ಧಾಲಯ­ಗಳು ಎಲ್ಲಿದ್ದರೂ ಸರಿ, ಅಲ್ಲಿ ಶುಚಿತ್ವ, ಸೌಂದರ್ಯ ಮನೆ ಮಾಡಿರುತ್ತದೆ. ಅಲ್ಲಿ ಧ್ಯಾನಕ್ಕೆ ಪ್ರಾಧಾನ್ಯವಿರುವುದರಿಂದ ನಮ್ಮ ಹಿಂದೂ ದೇವಾಲಯಗಳಂತೆ  ಗಜಿಬಿಜಿ ಇಲ್ಲದೆ ಭಕ್ತಾದಿ­ಗಳೂ ಮೌನವನ್ನು ಕಾಪಾಡುತ್ತಾರೆ.ನೀರಿನ ಬವಣೆ ಹೆಚ್ಚಾಗಿ ಇಲ್ಲದಿರುವ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂ­ರಿ­ನಂತಹ  ಕೆಲವು ಜಿಲ್ಲೆಗಳನ್ನು ಬಿಟ್ಟರೆ, ರಾಜ್ಯದ ಇತರ  ಜಿಲ್ಲೆಗಳ ವಾತಾವರಣದಲ್ಲಿ ತೇವಾಂಶದ ಕೊರತೆ ಇರುವುದು ಗಿಡ ಮರಗಳ ಬೆಳವಣಿಗೆಗೆ ಅಷ್ಟೊಂದು ಸಹಕಾರಿಯಾಗಿಲ್ಲ. ಆದ್ದರಿಂದಲೇ ನಾವು ನಮ್ಮ ಈ ತೇವಾಂಶ ಇಲ್ಲದ ವಾತಾವರಣದಲ್ಲಿ ಮರ ಗಿಡಗಳನ್ನು ಹೇಗೆ ಬೆಳೆಯಬಹುದು , ಯಾವ ಯಾವ ತಳಿಗಳು ಈ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತವೆ ಎನ್ನುವು­ದನ್ನು ಸರಿಯಾಗಿ ಅರ್ಥ ಮಾಡಿಕೊಂಡೇ ಗಿಡ ಮರಗಳನ್ನು ನೆಡುವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇ­ಕಾ­ಗುತ್ತದೆ. ದೊಡ್ಡ ನಗರಗಳಲ್ಲಿ ಈಗ ಯಾರೂ ಸಸಿ­ಗಳನ್ನು ನೆಟ್ಟು ಅವುಗಳನ್ನು ಪ್ರಾಣಿಗಳಿಂದ ರಕ್ಷಣೆಮಾಡಿ, ಮರಗಳಾಗುವುದಕ್ಕೆ ಕಾಯುತ್ತಾ ಕೂರುವುದಿಲ್ಲ. ಮರಗಳನ್ನು ಎಲ್ಲಿಯೋ ಬೆಳೆಸಿ, ಅವು ದೊಡ್ಡದಾದ ಮೇಲೆ ಲಾರಿಗಳಲ್ಲಿ ತಂದು ಎಲ್ಲೆಲ್ಲಿ ಬೇಕೋ ಅಲ್ಲಿ ಇಟ್ಟು ಬೆಳೆಸುತ್ತಾರೆ.  ದಕ್ಷಿಣ ಕೊರಿಯಾ ದೇಶದ ನನ್ನ ಅನುಭವ ಒಂದನ್ನು ಹೇಳಬೇಕೆನ್ನಿಸುತ್ತಿದೆ. ಆ ದೇಶದ ರಾಜಧಾನಿಯಾದ ಸೋಲ್ ನಗರದಲ್ಲಿ ನಾನು ಒಂದು ವರ್ಷ ಇದ್ದೆ. ಎಂಬತ್ತರ ದಶಕದಲ್ಲಿ  ಉದಾರೀ­ಕರಣ, ನಗರೀಕರಣ ಮತ್ತು ದೇಶವನ್ನು    ರಫ್ತು ಆಧಾರಿತ ಅರ್ಥ ವ್ಯವಸ್ಥೆಯನ್ನಾಗಿ ಪರಿವರ್ತಿಸಲು  ಹಳ್ಳಿಯ ಜನ­ರನ್ನು ಬಲವಂತ­ವಾಗಿ ಹಳ್ಳಿಗಳಿಂದ ನಗರಗಳಿಗೆ ಹೊರದೂಡ­ಲಾಗಿ ದೇಶದ ಕಾಲು ಭಾಗ ಜನರು ಸೋಲ್ ಸಿಟಿಯಲ್ಲೇ ಇದ್ದಾರೆ. ಆದರೆ ಅವರ ಪುಣ್ಯ, ದೇಶದ  ಶೇ ೭೦ರಷ್ಟು ಭಾಗ ಬೆಟ್ಟಗುಡ್ಡ­ಗಳಾಗಿದ್ದು ಅಲ್ಲಿಗೆ ಚಾರಣ ಹೋಗುವವರ ಅದೂ ವಯಸ್ಕರ ಸಂಖ್ಯೆ ಬಹಳಷ್ಟು ಇದೆ.ಆದರೆ ಬೆಟ್ಟಕ್ಕೆ ವ್ಯಾಯಾಮಕ್ಕೆ  ಬರುವ ವಯಸ್ಕರು  ಹಾ, ಹೂ ಎಂದೆಲ್ಲ ಶಬ್ದ ಮಾಡುತಿದ್ದದ್ದು  ಕೇಳಿ ಹೆದರಿಕೆ ಆಗುತ್ತಿತ್ತು. ಕೇಳಿದಾಗ ತಿಳಿದಿದ್ದು ನಗರೀಕರಣ ಮತ್ತು ಜನದಟ್ಟಣೆಯಿಂದ ಜನರು ಅತೀ ಒತ್ತಡಕ್ಕೆ ಒಳಗಾಗುತ್ತಾರಂತೆ. ಅದ್ದರಿಂದ ಹಾ, ಹೂ ಎಂದೆಲ್ಲ ಕಿರಿಚಾಡಿ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರಂತೆ. ಎಂಬತ್ತರ ದಶಕದಲ್ಲಿ ಕೊರಿಯಾ ಎಷ್ಟೊಂದು ನಗರೀಕರಣಕ್ಕೆ ಒಳಗಾ­ಗಿತ್ತೆಂದರೆ, ಸೋಲ್ ಮಧ್ಯ ಹರಿಯುವ ಒಂದು ಸಣ್ಣ  ನದಿಯನ್ನೇ ಮುಚ್ಚಿ ಹಾಕಿಬಿಟ್ಟಿತ್ತು ಅಲ್ಲಿಯ ಸರ್ಕಾರ.೨೦೦೪ರಲ್ಲಿ ಮತ್ತೆ ಹಾಕಿದ ಸಿಮೆಂಟು ಒಡೆದು, ನದಿಯನ್ನು  ಹರಿಯುವಂತೆ ಮಾಡಲು ಶತ ಪ್ರಯತ್ನ ಮಾಡಿದ್ದು ಈಗ ಆ ನದಿ ಹರಿಯುತ್ತಾ ಇದೆ.  ವಿಚಿತ್ರ ಎಂದರೆ  ಈಗ ಜನರು ಸೋಲ್ ನಗರ ಬಿಟ್ಟು ಹಳ್ಳಿಗಳಿಗೆ ಹೋಗಿ ನೆಲಸುವುದಕ್ಕೆ ಏನೇನೋ ಸಬ್ಸಿಡಿಗಳನ್ನು, ಸೌಲಭ್ಯಗಳನ್ನೂ ಕೊರಿಯಾ ಸರ್ಕಾರ ಕೊಡು­ತ್ತದೆ! ನಮ್ಮ ಜನರು ಈ ಸ್ಥಿತಿ ತಲುಪ­ಬಾರದೆಂದರೆ ಸರ್ಕಾರ ಈ ಬಗ್ಗೆ ಚಿಂತನೆ ಮಾಡಲೇಬೇಕಾಗಿದೆ.ಸ್ವೀಡನ್ ಮತ್ತು ಇತರ ಸ್ಕ್ಯಾಂಡಿನೇವಿಯಾ ದೇಶಗಳಲ್ಲಿ ಸರ್ಕಾರಗಳು  ಕಾರ್ಮಿಕರಿಗೆ ಬಳಸಲು ಎಂದು ಒಂದಿಷ್ಟು ಸ್ಥಳಗಳನ್ನು ಕೊಟ್ಟಿವೆ. ಅವು ದೊಡ್ಡ ನಗರಗಳಿಗೆ ಹತ್ತಿರವಾಗಿವೆ. ಅಲ್ಲಿ ಕಾರ್ಮಿಕ ಕುಟುಂಬಗಳು ವಾರಕ್ಕೊಂದು ಸಲವಾದರೂ ಹೋಗಿ, ಟೆಂಟ್ ಗಳನ್ನು  ಹಾಕಿಕೊಂಡು ಇದ್ದು ಬರುತ್ತಾರೆ.  ಆದರೆ ಈ ಜಾಗಗಳಲ್ಲಿ  ಶಾಶ್ವತ ಮನೆಗಳನ್ನು ಕಟ್ಟಿಕೊಳ್ಳುವಂತೆ ಇಲ್ಲ. ಈ ಸ್ಥಳಗಳಲ್ಲಿ ಅವರು ಒಂದಿಷ್ಟು ತರಕಾರಿಗಳನ್ನು ಬೆಳೆದುಕೊಳ್ಳಲು ಅವಕಾಶವೂ ಇದೆ.  ಎಲ್ಲ ಮನುಷ್ಯರೂ ನಿಸರ್ಗಕ್ಕೆ ಹತ್ತಿರವಿರುವುದನ್ನು ಬಯಸುತ್ತಾರೆ ಮತ್ತು ಅದು ಅವರ ಹಕ್ಕು ಎಂಬುದನ್ನು ಅಲ್ಲಿಯ ಸಂವಿಧಾನ ಒಪ್ಪಿಕೊಂಡಿದೆ. ಅದಕ್ಕಾ­ಗಿಯೇ ಸ್ಕ್ಯಾಂಡಿನೇವಿಯಾ ದೇಶಗಳಲ್ಲಿ all  men’s right ಎಂಬ ಕಾನೂನು ಇದೆ. ಅದರ ಪ್ರಕಾರ ಯಾವ ಶ್ರೀಸಾಮಾನ್ಯನಿಗೂ ಇನ್ನೊಬ್ಬರ ಆಸ್ತಿಯೊಳಗೆ ಹೋಗುವ ಹಕ್ಕು ಇದೆ.ಅಲ್ಲಿ ಅವರು ತಿರುಗಾಡಬಹುದು ಕೂತುಕೊಂಡು ಊಟ ಮಾಡಬಹುದು, ಸುಂದರವಾದ, ಪ್ರಶಾಂತವಾಗಿರುವ  ಪರಿಸರದಲ್ಲಿ ಕಾಲ ಕಳೆಯಬಹುದು. ಆದರೆ ತೋಟದ ಮಾಲೀಕರು ಬೆಳೆದ ಹಣ್ಣು, ತರಕಾರಿಗಳನ್ನು ಮುಟ್ಟ­ಬಾರದು. ಕಾಡು ಹಣ್ಣುಗಳನ್ನು ಬೇಕಾದರೆ ಕಿತ್ತು ಕೊಳ್ಳಬಹುದು. ಇಂತಹ ಕಾನೂನುಗಳು ನಮ್ಮಂತಹ ತೀರ ಅಸಮಾನತೆ ಇರುವ ದೇಶದಲ್ಲಿ ಏನೆಂದರೂ ಜಾರಿಗೆ ತರಲು ಆಗುವು­ದಿಲ್ಲ.  ಅದಲ್ಲದೆ ನಮ್ಮಲ್ಲಿರುವ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಆ ದೇಶಗಳು ನಿರ್ಜನ ಪ್ರದೇಶಗಳೆಂದೇ ಹೇಳಬಹುದು.ಇತ್ತೀಚಿಗೆ  ಥಾಯ್ಲೆಂಡ್, ಕೊರಿಯಾ ದೇಶದ ನಗರಗಳಲ್ಲಿರುವ ಕಡು ಬಡವರಿಗೆ ಒಂದಿಷ್ಟು ತರಕಾರಿ ಬೆಳೆಸುವುದಕ್ಕೆ ಜಾಗ ಕೊಡು­ವುದೂ ಆರಂಭವಾಗಿದೆ. ಇಂತಹ ಕಾರ್ಯ­­ಕ್ರಮಗಳನ್ನು ಅನುಷ್ಠಾನಕ್ಕೆ ತರಲು ನಮ್ಮ ನಗರ­ಗಳಲ್ಲೂ ಸಾಧ್ಯವಿದೆ. ಯಾವ ತೋಟ ಮಾಡಲಿ, ಉದ್ಯಾನಗಳನ್ನು ನಿರ್ಮಿಸಲಿ, ಕಳೆಗಳನ್ನು ನಿಯಂತ್ರಣ ಮಾಡುವುದು ಕಷ್ಟ. ಆದ್ದರಿಂದಲೇ ಇಂಗ್ಲೆಂಡ್‌ನ ಸಸ್ಯ ವಿಜ್ಞಾನಿಗಳು, ಪರಿಸರ­ವಾದಿಗಳು ಹೊಸ ಮಾರ್ಗಗಳನ್ನು ಕಂಡು­ಕೊಂಡಿ­ದ್ದಾರೆ.ಯಾವ ಯಾವ ಕಳೆಗಿಡ­ಗಳನ್ನು ಸೊಪ್ಪಿನ ತರಕಾರಿಗಳಾಗಿ ಬಳಸಬಹುದು ಎಂಬು­ದನ್ನು ಕಂಡುಕೊಂಡು  ಅಂತಹ ಗಿಡಗ­ಳನ್ನು, ಕಳೆ ನಾಶಕಗಳನ್ನು ಬಳಸದೇ ತಮ್ಮ ಕೈ ತೋಟ­ಗಳಲ್ಲಿ. ಉದ್ಯಾನಗಳಲ್ಲಿ  ಉಳಿಸಿಕೊ­ಳ್ಳುತ್ತಾರೆ. ನಾವೂ ಇಂತಹ ಕಡಿಮೆ ಖರ್ಚಿನಲ್ಲಿ ಬೆಳೆಯಬಹು­ದಾದ, ನಮ್ಮ ವಾತಾವರಣಕ್ಕೆ ಒಗ್ಗುವ, ಸ್ವಲ್ಪವೇ ನೀರು ಬೇಡುವ ಗಿಡ ಮರ­ಗಳನ್ನು ಬೆಳೆಸುವಲ್ಲಿ ಮುಂದಾದರೆ ನಿಜವಾ­ಗಲೂ ನಮ್ಮ ನಗರಗಳನ್ನೂ, ಹಳ್ಳಿಗಳನ್ನೂ  ಸುಂದರಗೊಳಿಸ­ಬಹುದು. ನಿರುದ್ಯೋಗಿಗಳಿಗೆ ಕೆಲಸ ಕೊಡುವ ಕಾರ್ಯವೂ, ಜೊತೆಗೆ ಪರಿಸರ ಬೆಳೆಸುವ ಕಾರ್ಯವೂ ಒಟ್ಟಿಗೇ ಮಾಡಬಹುದು.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರತಿಕ್ರಿಯಿಸಿ (+)