ಗುರುವಾರ , ಮೇ 6, 2021
23 °C

ಹಳ್ಳಿಗಾಡಿನಲ್ಲೂ ಕರಗದ ಆಕರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಗ ಮಲ್ಲಿಗೆಯ ಕಂಪು ಪಸರಿಸುವ ಸಮಯ. ವಸಂತ ಮಾಸದಲ್ಲಿ ಮಲ್ಲಿಗೆ ಹೂಗಳ ಜೊತೆಗೆ ಮಹತ್ವ ಪಡೆಯುವ ಉತ್ಸವ ಕರಗ. ಸಾವಿರಾರು ವರ್ಷಗಳ ಹಿಂದೆ ನಡೆಯಿತೆನ್ನಲಾದ ಮಹಾಭಾರತ ಯುದ್ಧದಲ್ಲಿ ಹದಿನೆಂಟು ದಿನಗಳ ಕಾಲ ಪಾಂಡವರು- ಕೌರವರು ಹೋರಾಡಿದರೆಂದು ನಮ್ಮ ಮಹಾ ಕಾವ್ಯಗಳು ಬಣ್ಣಿಸುತ್ತವೆ. ಈ ಯುದ್ಧದ ಪ್ರತಿಧ್ವನಿಯೇ ಕರಗ. ಯುದ್ಧದ ಅವಧಿ 18 ದಿನಗಳಾದರೆ ಕರಗ ಆಚರಣೆ 7 ರಿಂದ 9 ದಿನ ಇರುತ್ತದೆ.ಪ್ರಸ್ತುತ ನಾವು ನೋಡುತ್ತಿರುವ ಕರಗ ಉತ್ಸವಕ್ಕೆ 3-4 ಶತಮಾನದ ಇತಿಹಾಸವಿದೆ. ಹೈದರಾಲಿ, ಟಿಪ್ಪು ಆಡಳಿತ ಕಾಲದಲ್ಲಿ ಕನ್ನಡನಾಡಿನಲ್ಲಿ ತೋಟಗಾರಿಕೆ ನಡೆಸಲು ತಮಿಳುನಾಡಿನಿಂದ ವಲಸೆ ಬಂದ ವಹ್ನಿ ಕುಲಸ್ಥರೊಂದಿಗೆ (ತಿಗಳರು) ಈ ಕರಗವೂ ಕರ್ನಾಟಕವನ್ನು ಪ್ರವೇಶಿಸಿತು. ಹೀಗಾಗಿಯೇ ತಮಿಳುನಾಡಿಗೆ ಹೊಂದಿಕೊಂಡಂತಿರುವ ಗಡಿ ಜಿಲ್ಲೆಗಳಲ್ಲಿ ಮಾತ್ರ ಕರಗದ ಸಂಪ್ರದಾಯವಿದೆ.ತರಕಾರಿ ಹಾಗೂ ಹೂವಿನ ತೋಟಗಳನ್ನು ಬೆಳೆಸಿ ಜೋಪಾನ ಮಾಡಿದ ವಹ್ನಿ ಕುಲಸ್ಥರು ವಸಂತ ಋತುವಿನ ಚೈತ್ರ ಮಾಸದಲ್ಲಿ ತಮ್ಮ ಕುಲ ದೇವತೆ ದ್ರೌಪದಿ ದೇವಿ ಹೆಸರಿನಲ್ಲಿ ಆಚರಿಸುವ ಉತ್ಸವವೇ ಕರಗ ಮಹೋತ್ಸವ.ಕರಗದ ಆಚರಣೆ ಬಗ್ಗೆ ಸ್ವಾರಸ್ಯಕರ ಕಥೆಗಳಿವೆ. ಅಜ್ಞಾತವಾಸದಲ್ಲಿದ್ದ ಪಾಂಡವರು ದ್ರೌಪದಿಯನ್ನು ಗೆದ್ದಾಗ ಆಕೆ ತನ್ನ ತಲೆ ಮೇಲೆ ಕಳಸ ಧರಿಸಿದ್ದಳು. ಇದರ ನೆನಪಲ್ಲೆೀ ಕರಗ ಉತ್ಸವ ಜರುಗುತ್ತಿದೆ ಎಂಬುದು ಒಂದು ನಂಬಿಕೆ. ಇನ್ನೊಂದು ಕಥೆಯಂತೆ ರಾಜ್ಯಭಾರ ಮುಗಿಸಿದ ಪಾಂಡವರು ಸ್ವರ್ಗಾರೋಹಣಕ್ಕೆ ಹೊರಟಾಗ ದ್ರೌಪದಿ ಸ್ಮೃತಿ ತಪ್ಪಿ ಬೀಳುತ್ತಾಳೆ.ಆಕೆ ಅಸು ನೀಗಿದಳೆಂದು ತಪ್ಪಾಗಿ ಭಾವಿಸಿದ ಪಾಂಡವರು ಮುಂದೆ ಸಾಗುತ್ತಾರೆ. ಆದರೆ ದ್ರೌಪದಿಗೆ ಎಚ್ಚರವಾದಾಗ ಆಕೆಯ ಮುಂದೆ ತಿಮಿರಾಸುರ ಎಂಬ ರಾಕ್ಷಸ ನಿಂತಿರುತ್ತಾನೆ. ಆಗ ಆಕೆ ಆದಿಶಕ್ತಿ ಅವತಾರ ಎತ್ತಿ ರಾಕ್ಷಸನನ್ನು ಸಂಹರಿಸುತ್ತಾಳೆ. ಈ ಪ್ರಸಂಗಗಳ ನೆನಪಿನಲ್ಲಿ ಕರಗ ಶಕ್ತುತ್ಸವ ನಡೆಯುತ್ತ ಬಂದಿದೆ ಎಂಬುದು ಜನರ ನಂಬಿಕೆ.ಬದಲಾಗದ ರಿವಾಜು

ಕಾರಣ ಏನೇ ಆಗಿರಲಿ, ಕಾಲ ಬದಲಾವಣೆಯಾದರೂ ಅನೇಕ ರೀತಿ ರಿವಾಜುಗಳು ಬಂದರೂ ಕರಗ ಮಾತ್ರ ಸಾಂಪ್ರದಾಯಿಕ ವಿಧಿವಿಧಾನಗಳಂತೆ ನಡೆದುಕೊಂಡು ಬರುತ್ತಿದೆ. ಕೆಲವು ಆಚರಣೆಗಳು ಈಗಲೂ ಗೌಪ್ಯತೆಯಿಂದ ನಡೆಯುವುದು ನಿಂತಿಲ್ಲ. ಶ್ರೀ ಧರ್ಮರಾಯನ ಗುಡಿ, ಎಲ್ಲಮ್ಮ ದೇವರ ಆಲಯ, ರೇಣುಕಾಂಬ ದೇವಸ್ಥಾನ, ದ್ರೌಪತಮ್ಮನ ಗುಡಿಗಳ ಆಶ್ರಯದಲ್ಲಿ ಕರಗ ನಡೆಯುತ್ತದೆ. ಬಹುತೇಕ ಎಲ್ಲೆಡೆ ಇದನ್ನು ದ್ರೌಪದಿ ಕರಗವೆಂದೇ ಕರೆಯುವುದು ರೂಢಿ.ಇದು ವಹ್ನಿ ಕುಲದವರ ಉತ್ಸವವಾದರೂ ಜಾತಿ-ಮತ ಭೇದವಿಲ್ಲದೆ ಶ್ರದ್ಧೆ - ಭಕ್ತಿ ಗೌರವಗಳಿಂದ ಎಲ್ಲ ಜನಾಂಗದವರೂ ಆಚರಿಸುತ್ತಾರೆ.  ಇಂದಿಗೂ ಇದು ಜನಪ್ರಿಯ ಹಬ್ಬ. ಸೌಹಾರ್ದತೆ, ಸಹಬಾಳ್ವೆ, ಸಾಮರಸ್ಯ ಸಾರುತ್ತ ಬೆಂಗಳೂರು ಸೇರಿದಂತೆ ಸಣ್ಣ ಪುಟ್ಟ ಊರುಗಳಲ್ಲಿ ಇನ್ನೂ ಜೀವಂತಿಕೆ ಉಳಿಸಿಕೊಂಡಿದೆ.ದ್ರೌಪದಮ್ಮನ ಕರಗ ಬಹು ಹಿಂದಿನಿಂದಲೂ ಆಚರಣೆಯಲ್ಲಿದೆ. ಸ್ತ್ರೀ ದೇವತಾರಾಧನೆಯಾದರೂ ವಹ್ನಿಕುಲದ ಗಂಡಸರೇ ಸ್ತ್ರೀ ವೇಷ ಧರಿಸಿ ಭಾಗವಹಿಸುತ್ತಾರೆ.ಹಿಂದೆ ಸಾಮಾನ್ಯವಾಗಿ ಒಂದು ಊರಲ್ಲಿ ಒಂದೇ ಕರಗ ನಡೆಯುತ್ತಿತ್ತು. ಆದರೆ ಈಗೀಗ ಗ್ರಾಮ ದೇವತೆಗಳ ಹೆಸರಲ್ಲಿ ಕರಗ ಸಂಪ್ರದಾಯವನ್ನು ವಹ್ನಿಕುಲಕ್ಕೆ ಸೇರದವರೂ ಆರಂಭಿಸಿದ್ದಾರೆ. ಒಂದೇ ಊರಿನಲ್ಲಿ ಒಂದಕ್ಕಿಂತ ಹೆಚ್ಚು ದ್ರೌಪದಮ್ಮನ ಕರಗ ನಡೆಯುತ್ತಿರುವ ನಿದರ್ಶನಗಳೂ ಇವೆ.ಈಚಿನ ದಿನಗಳಲ್ಲಿ ದ್ರೌಪದಮ್ಮ ಮಾತ್ರವಲ್ಲದೆ ಬೇರೆ ಬೇರೆ ಶಕ್ತಿದೇವತೆಗಳ ಹೆಸರಿನಲ್ಲಿ ಕರಗ ಉತ್ಸವಗಳೂ  ನಡೆಯುತ್ತಿವೆ. ಗ್ರಾಮ ದೇವತೆಗಳಾದ ಮುತ್ಯಾಲಮ್ಮ, ಮುತ್ತು ಮಾರಿಯಮ್ಮ, ಕಾವೇರಿಯಮ್ಮ, ಯಲ್ಲಮ್ಮ, ಏಳ ಮುಂದಮ್ಮ (ಶ್ರೀ ಚಾಮುಂಡೇಶ್ವರಿ), ಓಂ ಶಕ್ತಿ ಅಮ್ಮ ಹೆಸರಿನ ಕರಗ ಉತ್ಸವಗಳೂ ಗಮನ ಸೆಳೆಯುತ್ತವೆ.ದೇವತೆಗಳ ಹೆಸರುಗಳು  ಬೇರೆಯಾದರೂ ಕಳಶಾಕಾರದ ಕರಗ, ಮಲ್ಲಿಗೆ ಹೂವಿನ ಅಲಂಕಾರ ಮಾತ್ರ ಎಲ್ಲ ಕಡೆ ಸಾಮಾನ್ಯ. ದ್ರೌಪದಮ್ಮನ ವೇಷ ಧರಿಸುವವರು ಅರಿಶಿನ ಬಣ್ಣ ಸೀರೆ ಮತ್ತು ರವಿಕೆ ಉಟ್ಟರೆ, ಓಂ ಶಕ್ತಿ ಕರಗ ಹೊರುವವರು ಕೆಂಪು ಪೋಷಾಕು ಧರಿಸುತ್ತಾರೆ. ದ್ರೌಪದಮ್ಮನ ಕೈಯಲ್ಲಿ ಬೆತ್ತದ ಕೋಲು ಅಲಂಕೃತ ಬಾಕು ಸಿಡಿದರೆ, ಒಂ ಶಕ್ತಿ ಕೈಯಲ್ಲಿ ಬೇವಿನ  ಎಲೆ, ನಿಂಬೆ ಹಣ್ಣು ನೋಡ ಸಿಗುತ್ತದೆ. ಕಳಶದಲ್ಲಿ ಆಯಾ ದೇವತೆಗಳ ಲೋಹದ ಪ್ರತಿಕೃತಿ ಇರುವುದೂ ಉಂಟು.ಬಹು ಹಿಂದಿನಿಂದಲೂ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಆವರಣವೇ ಕರಗ ಉತ್ಸವದ ಕೇಂದ್ರ ಸ್ಥಳ. ಸಂಪ್ರದಾಯದಂತೆ ಧ್ವಜಾರೋಹಣದೊಂದಿಗೆ ಪಾರಂಪರಿಕ ಚಾಲನೆ. ಶಾಸ್ತ್ರೋಕ್ತವಾಗಿ ಧ್ವಜಸ್ತಂಭ ನಿಲ್ಲಿಸಿದ ದಿನವೇ ವೀರಕುಮಾರರು ಖಡ್ಗಗಳನ್ನು, ವೀರ ಚಾಟಿಯನ್ನು ಹಿಡಿದು ದ್ರೌಪದಿಯ ರಕ್ಷಣೆಗೆ ನಿಲ್ಲುವ ಕಂಕಣ ತೊಡುತ್ತಾರೆ.  ಹಿಂದೆಲ್ಲ ತಮಟೆಗಾರರ ಮೂಲಕ ಕರಗದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವುದು ರೂಢಿಯಲ್ಲಿತ್ತು.  ಈಗ ಪ್ರಚಾರವನ್ನು ಕರಪತ್ರ, ಪತ್ರಿಕಾ ಜಾಹೀರಾತು, ಟೆಲಿವಿಷನ್ ಮೂಲಕವೂ ಮಾಡಲಾಗುತ್ತಿದೆ.ಕಟ್ಟುನಿಟ್ಟು ಸಂಪ್ರದಾಯ

ಹಸೀ ಕರಗ, ದೀಪದಾರತಿ, ಧರ್ಮರಾಯನ ವಿವಾಹ, ಹೂವಿನ ಕರಗ, ಅಗ್ನಿಕುಂಡ ಪ್ರವೇಶ, ಗಾವು ಸಿಗಿಯುವುದು, ವಸಂತೋತ್ಸವ ಇವೆಲ್ಲ ಕರಗದ ಪ್ರಮುಖ ಘಟ್ಟಗಳು. ದ್ರೌಪದಮ್ಮ ಕರಗದಲ್ಲಿ ದಿನಗಳು ಸ್ವಲ್ಪ ಅದಲು ಬದಲಾದರೂ ಧಾರ್ಮಿಕ ಆಚರಣೆಗಳೆಲ್ಲಾ ಕಡ್ಡಾಯ. ಕರಗ ಪೂಜಾರಿ, ವೀರ ಕುಮಾರರು, ಮಹಾಭಾರತ ಪಠಣ ಮಾಡುವವರು ಸಂಪ್ರದಾಯಗಳನ್ನು  ಅನುಸರಿಸಲೇಬೇಕು.ಕರಗಕ್ಕೂ ತಮಟೆಗಳಿಗೂ ಅವಿನಾಭಾವ ಸಂಬಂಧ. ತಮಟೆ ವಾದನವಿಲ್ಲದೆ ಕರಗಕ್ಕೆ ಕಳೆ ಕಟ್ಟುವುದಿಲ್ಲ ಎನ್ನುವುದುಂಟು. ಆದರೆ ಕೆಲವು ಕಡೆಗಳಲ್ಲಿ ಗೋವಿಂದ ಎಂಬ ಸ್ಮರಣೆ ಜೊತೆಗೆ ಗಂಟೆ ಬಾರಿಸುವುದು, ಶಂಖ ಊದುವುದು, ಪುಟ್ಟ ಜಾಗಟೆ ವಾದ್ಯ ನುಡಿಸುವುದು, ಚೌಕಗಳಲ್ಲಿ ನಾದಸ್ವರ, ಬ್ಯಾಂಡ್ ತಂಡಗಳ ವಾದನಕ್ಕೆ ಹೆಜ್ಜೆ ಹಾಕುವುದೂ ಆರಂಭವಾಗಿದೆ. ಈಚೆಗೆ ಪ್ರಚಲಿತ ಚಲನಚಿತ್ರ ಗೀತೆಗಳಿಗೆ ಕರಗ ಪೂಜಾರಿ ನರ್ತಿಸುವುದೂ ಇದೆ.ವೀರಕುಮಾರರ ಅಲಗು ಸೇವೆ ಕರಗ ಉತ್ಸವದ ಗುರುತಿಸಲೇಬೇಕಾದ ಸಂಪ್ರದಾಯ. ದ್ರೌಪದಿಯ ರಕ್ಷಣೆಗೆ ನಿಂತ ವೀರಕುಮಾರರು ಖಡ್ಗ ಝಳಪಿಸುವುದೇ ರೋಚಕ. ಎಲ್ಲಾ ಊರುಗಳಲ್ಲಿ ಕರಗ ಉತ್ಸವ ಮಸೀದಿ, ದರ್ಗಾಗಳಿಗೆ ಭೇಟಿ ಕೊಡುವುದು ಸಂಪ್ರದಾಯ. ಕೆಲವು ಗುಡಿ ಆವರಣದಲ್ಲಿ ಗೋರಿ ಪ್ರತಿಕೃತಿ ಇರುವುದೂ ಉಂಟು.

 

ಬೆಂಗಳೂರಿನ ಮಸ್ತಾನ್ ಸಾಬ್ ದರ್ಗಾದಲ್ಲಿ ಕರಗ ಪೂಜೆ ಸ್ವೀಕರಿಸುವ ಪದ್ಧತಿಯಿದೆ. ಇಂದಿನ ಒತ್ತಡದ ದಿನಗಳಲ್ಲಿ ಮನಸ್ಸಿಗೆ ಸಂತೋಷಕೊಡುವ ಧಾರ್ಮಿಕ ಉತ್ಸವಗಳಲ್ಲಿ ಕರಗವೂ ಒಂದು. ಬೆಂಗಳೂರು ಮಹಾನಗರದ್ಲ್ಲಲಿ ಜನಪ್ರಿಯವಾಗಿರುವ ಕರಗ, ಗ್ರಾಮೀಣ ಭಾಗಗಳಲ್ಲಿ ಇನ್ನೂ ಜನಾಕರ್ಷಣೆ ಉಳಿಸಿಕೊಂಡಿದೆ. 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.