ಬುಧವಾರ, ಏಪ್ರಿಲ್ 21, 2021
33 °C

ಹಳ್ಳಿಮಕ್ಕಳ ವ್ಯಾಸಂಗದ ಸಮಯ ಸಂಚಾರಕ್ಕೆ ವ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿತಾಳ: ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿ ಮಾಡಿವೆ ಆದಾಗ್ಯೂ ಮೂಲ ಸೌಕರ್ಯಗಳಿಂದ ವಂಚಿತವಾದ ಅನೇಕ ಹಳ್ಳಿಗಳಲ್ಲಿ ಶಾಲೆಗೆ ಹೋಗಲು ಮಕ್ಕಳು ನಿರಂತರವಾಗಿ ಪರದಾಡುತ್ತಾರೆ.ಮಸ್ಕಿ ವಿಧಾನಸಭೆ ಕ್ಷೇತ್ರ ಅಮೀನಗಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚಾಪುರ, ನೆಲಕೊಳ ಮತ್ತು ಯತಗಲ್ ಗ್ರಾಮದ 50-60ಕ್ಕೂ ಹೆಚ್ಚಿನ ಮಕ್ಕಳು 6-8 ಕಿ.ಮೀ. ದೂರದ ಅಮೀನಗಡ ಗ್ರಾಮದ ಶಾಲೆಗೆ ಕಾಲ್ನಡಿಗೆಯಲ್ಲಿ ಬಂದು ಹೋಗುವುದು ಅನಿವಾರ್ಯವಾಗಿದೆ. 1ರಿಂದ5ನೇ ತರಗತಿ ವಿದ್ಯಾಭ್ಯಾಸವನ್ನು ಸ್ವಂತ ಗ್ರಾಮದಲ್ಲಿ ಪೂರೈಸಿ 8ನೇ ತರಗತಿವರೆಗೆ ಅಮೀನಗಡ ಗ್ರಾಮದ ಸರ್ಕಾರಿ ಶಾಲೆಯನ್ನು ಸೇರುವ 10 ವರ್ಷದ ಬಾಲಕರು ಮತ್ತು ಬಾಲಕಿಯರು ಪ್ರತಿನಿತ್ಯ ಅಂದಾಜು 15ಕಿ.ಮೀ. ಕಾಲ್ನಡಿಗೆ ಮಾಡುತ್ತಾರೆ.ಬೆಳಿಗ್ಗೆ ಶಾಲೆಯ ಸಮಯಕ್ಕಿಂತ ಒಂದು ಗಂಟೆ ಮುಂಚೆ ಮನೆಯನ್ನು ಬಿಡುವ ಮಕ್ಕಳು ಶಾಲೆ ಬಿಟ್ಟ ನಂತರ ಒಂದು ಗಂಟೆ ತಡವಾಗಿ ಮನೆ ಸೇರುತ್ತವೆ ಹೀಗಾಗಿ ಮಕ್ಕಳಿಗೆ ಅಭ್ಯಾಸ ಮಾಡಲು ಸಮಯವೇ ಸಿಗುವುದಿಲ್ಲ. ಕಲ್ಲು ಎಸೆಯುತ್ತ, ಓಡುತ್ತಾ, ವಿವಿಧ ಚೇಷ್ಟೆಗಳನ್ನು ಮಾಡಿ ತುಂಟಾಟದಿಂದ ರಸ್ತೆ ಕ್ರಮಿಸುವ ಮಕ್ಕಳಿಗೆ ದೈಹಿಕವಾಗಿ ಪರಿಶ್ರಮ ಎನಿಸದಿದ್ದರೂ ಪ್ರತಿದಿನ ಎರಡು ಮೂರು ಗಂಟೆಗಳ ಸಮಯವನ್ನು ರಸ್ತೆಯಲ್ಲಿಯೇ ಕಳೆಯುವ ಮಕ್ಕಳು ಶಾಲೆಗೆ ಬಂದು ಹೋಗುತ್ತವೆ ಮಾತ್ರ.ಪಟ್ಟಣಗಳಲ್ಲಿ ಮನೆಯ ಕೂಗಳೆತಲ್ಲಿರುವ ಶಾಲೆಗಳಿಗೆ ಸೇರಿದ ಮಕ್ಕಳನ್ನೂ ಪಾಲಕರು ಬೈಕ್‌ಗಳ ಮೇಲೆ ಬಿಟ್ಟು ಹೋಗುವುದು ಕರೆದುಕೊಂಡು ಬರುವುದು ಅದಕ್ಕಾಗಿ ಗಂಟೆಗಟ್ಟಲೇ ಕಾಯುವುದನ್ನು ನಾವು ಕಾಣುತ್ತೇವೆ ಆದರೆ ಅದೇ ವಯಸ್ಸಿನ ಹಳ್ಳಿಯ ಬಡ ಮಕ್ಕಳಿಗೆ ಈ ಭಾಗ್ಯ ಇಲ್ಲ. ಮುಖ್ಯ ರಸ್ತೆಯಲ್ಲಿರುವ ಅನೇಕ ಹಳ್ಳಿಗಳ ಮಕ್ಕಳು ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಪಟ್ಟಣಕ್ಕೆ ತೆರಳುತ್ತಾರೆ ಅವರಿಗೆ ಬಸ್ ಸೌಲಭ್ಯ ಹಾಗೂ ರಿಯಾಯಿತಿ ದರದಲ್ಲಿ ಪಾಸ್ ಸೌಲಭ್ಯವಿರುತ್ತದೆ ಹಳ್ಳಿಯಿಂದ ಪ್ರಾಥಮಿಕ ಶಿಕ್ಷಣಕ್ಕೆ ಬರುವ ಮಕ್ಕಳಿಗೆ ಯಾವುದೇ ಸೌಲಭ್ಯಗಳು ಇಲ್ಲದಿರುವುದು ವಿಪರ್ಯಾಸವೇ ಸರಿ.ಬಿಸಿಯೂಟ ಯೋಜನೆ ಮತ್ತು 8ನೇ ತರಗತಿ ಮ್ಕಕಳಿಗೆ ಸೈಕಲ್ ವಿತರಣೆ ಮುಂತಾದ ಯೋಜನೆಗಳನ್ನು ಜಾರಿ ಮಾಡಿದ ಸರ್ಕಾರಗಳು ಮೂಲ ಸೌಲಭ್ಯಗಳಿಂದ ವಂಚಿತವಾದ ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಪರದಾಡುತ್ತಿರುವ ಮಕ್ಕಳಿಗೆ ಸೌಲಭ್ಯ ಕಲ್ಪಿಸಬೇಕಾದ ಜಾವಾಬ್ದಾರಿಯನ್ನು ನೆನಪಿಸಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.