ಶುಕ್ರವಾರ, ಮೇ 20, 2022
19 °C

ಹಸಿರು ಮನೆಯಲ್ಲಿ ದೊಣ್ಣೆ ಮೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎ ಮತ್ತು ಸಿ ಅನ್ನಾಂಗಗಳು, ಖನಿಜ, ಲವಣಾಂಶಗಳು ಹೇರಳವಾಗಿರುವ ದೊಣ್ಣೆ ಮೆಣಸಿನಕಾಯಿ ಹೆಚ್ಚು ಜನರಿಗೆ ಪ್ರಿಯವಾದ ತರಕಾರಿ. ಹಸಿರು, ಹಳದಿ ಮತ್ತು ಕೆಂಪು ಬಣ್ಣಗಳ ದೊಣ್ಣೆ ಮೆಣಸಿನಕಾಯಿಗಳಿಗೆ ನಗರ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚು.

 

ಹೀಗಾಗಿ ಅದೀಗ ವಾಣಿಜ್ಯ ಬೆಳೆ. ವ್ಯವಸ್ಥಿತವಾಗಿ ಬೆಳೆದು ಹೆಚ್ಚು ಆದಾಯ ಗಳಿಸಲು ಸಾಧ್ಯವಿದೆ. ಅದಕ್ಕಾಗಿ ನಗರ ಪ್ರದೇಶಗಳ ಸುತ್ತಲಿನ ರೈತರು ಈಗ ದೊಣ್ಣೆ ಮೆಣಸಿನಕಾಯಿ ಬೆಳೆಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ.ಗುಣಮಟ್ಟದ ದೊಣ್ಣೆ ಮೆಣಸಿನಕಾಯಿಗೆ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ರಫ್ತು ಮಾರುಕಟ್ಟೆಗಳಲ್ಲೂ ಭಾರಿ ಬೇಡಿಕೆ ಇದೆ. ರಫ್ತು ಗುಣ ಮಟ್ಟದ ಮೆಣಸಿನಕಾಯಿ ಬೆಳೆದ ರೈತರಿಗೆ ಸಾಕಷ್ಟು ಲಾಭ ಸಿಗುತ್ತದೆ. ಇವನ್ನು ಹಸಿರು ಮನೆಯಲ್ಲಿ ಬೆಳೆದು ಉತ್ತಮ ಇಳುವರಿ ಪಡೆಯಲು ಸಾಧ್ಯವಿದೆ. ಹಸಿರು ಮನೆಯ ಹೊರಗೆ ದೊಣ್ಣೆ ಮೆಣಸಿನಕಾಯಿ ಬೆಳೆಯಲು ಸಾಧ್ಯವಿದೆ. ಆದರೆ ಅವು ದೇಶೀಯ ಮಾರುಕಟ್ಟೆಗೆ ಸೀಮಿತ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಹಸಿರು ಮನೆಯಲ್ಲಿ ಮೆಣಸಿನಕಾಯಿಗೆ ಬೇಕಾದ ಉಷ್ಣತೆಯನ್ನು ಕಾಪಾಡಿಕೊಂಡು ಉತ್ತಮ ಇಳುವರಿ ಪಡೆಯುವ ಬೇಸಾಯ ತಂತ್ರಜ್ಞಾನವನ್ನು ಅಭಿವೃದ್ಧಿ ಮಾಡಿದ್ದಾರೆ.   ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದರೆ ಎಕರೆಗೆ 8 ರಿಂದ 12 ಟನ್ ಇಳುವರಿ ಪಡೆಯಬಹುದು. ಆದರೆ ಹಸಿರು ಮನೆಯಲ್ಲಿ ಸಂರಕ್ಷಿತ ವಾತಾವರಣದಲ್ಲಿ (ಸುಧಾರಿತ ತಂತ್ರಜ್ಞಾನದ ಹಸಿರು ಮನೆ ಅಥವಾ ಪಾಲಿಹೌಸ್ ಮತ್ತು ನೆರಳುಪರದೆ ಮನೆ ಅಥವಾ ನೆಟ್‌ಹೌಸ್) ಬೆಳೆದರೆ ಎಕರೆಗೆ 35-40 ಟನ್ ಹಸಿರು ಬಣ್ಣದ ದೊಣ್ಣೆಮೆಣಸು ಸಿಗುತ್ತದೆ. ಕೆಂಪು, ಹಳದಿ ಬಣ್ಣದ ದೊಣ್ಣೆ ಮೆಣಸಿನಕಾಯಿ ಆದರೆ 8-10 ತಿಂಗಳ ಅವಧಿಯಲ್ಲಿ ಸರಿಸುಮಾರು ಇಷ್ಟೇ ಇಳುವರಿ ಕೊಡುತ್ತದೆ. ಹಸಿರು ಮನೆಯಲ್ಲಿ ಬೆಳೆಗೆ ಬೇಕಾದ ಉಷ್ಣಾಂಶ ಇರುವಂತೆ ಮಾಡಿ ಮಳೆ ಮತ್ತು ಗಾಳಿಯಿಂದ ಕಾಪಾಡುವುದರ ಜತೆಗೆ ಕೀಟ ಹಾಗೂ ರೋಗಗಳ ಬಾಧೆಯಿಂದ ರಕ್ಷಿಸಬಹುದು. ಹೀಗೆ ಮಾಡಿದರೆ ಇಳುವರಿ ಮತ್ತು ಗುಣಮಟ್ಟ ಹೆಚ್ಚುತ್ತದೆ. ಹಸಿರು ಮನೆಯಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಹಸಿರು ಮೆಣಸಿನಕಾಯಿ ಬೆಳೆಯಬಹುದು.  ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಈಗಾಗಲೇ ಅನೇಕ ಪ್ರಯೋಗಗಳನ್ನು ಮಾಡಿದೆ. ರೈತರಿಗಾಗಿ ಪ್ರಾತ್ಯಕ್ಷಿಕೆಗಳನ್ನು ನಡೆಸಿದೆ. ಅನೇಕ ರೈತರು ಈ ಬೇಸಾಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ದೊಣ್ಣೆ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.ಇದನ್ನು ರೈತರಿಗೆ ತಲುಪಿಸಲು ನಬಾರ್ಡ್ ಸಹಯೋಗದೊಂದಿಗೆ ಹಿರಿಯ ವಿಜ್ಞಾನಿ ಡಾ.ಬಿ.ಬಾಲಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ  ತಂತ್ರಜ್ಞಾನ ವರ್ಗಾವಣೆ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.ಇದರಡಿ 50ಕ್ಕೂ ಹೆಚ್ಚು ಸಂರಕ್ಷಿತ ವಾತಾವರಣ ಘಟಕಗಳಲ್ಲಿ ಸುಮಾರು 25 ಹೆಕ್ಟೇರ್ ಪ್ರದೇಶಗಳಲ್ಲಿ ರೈತರು ದೊಣ್ಣೆ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ. ಹಸಿರು ಮನೆಗಳಲ್ಲಿ ಬೆಳೆಯಲು ಹೆಚ್ಚಿನ ಬಂಡವಾಳ ಬೇಕಾಗುವುದರಿಂದ ಸರ್ಕಾರ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿವೆ.ಹೊಸ ಬೇಸಾಯ ತಂತ್ರಜ್ಞಾನ ಬಳಸಿಕೊಂಡು ದೊಣ್ಣೆ ಮೆಣಸಿನಕಾಯಿ ಬೆಳೆಯಲು ಮುಂದೆ ಬರುವ ರೈತರಿಗೆ ಅಗತ್ಯ ಮಾರ್ಗದರ್ಶನ, ಸಾಗುವಳಿಯ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾರುಕಟ್ಟೆ ಸಂಪರ್ಕ ದೊರಕಿಸಿ ಕೊಡಲು ಸಂಸ್ಥೆಯ ವಿಜ್ಞಾನಿಗಳು ಸಿದ್ಧರಿದ್ದಾರೆ.ಇದರ ಪ್ರಯೋಜನವನ್ನು  ರೈತರು ಪಡೆಯಬಹುದು.    ಇನ್ನಷ್ಟು ಮಾಹಿತಿ ಬೇಕಿದ್ದವರು ಸಂಸ್ಥೆಯ ನಿರ್ದೇಶಕರನ್ನು 080 2846 6420 ಅಥವಾ ಯೋಜನೆಯ ಹಿರಿಯ ವಿಜ್ಞಾನಿ ಡಾ. ಬಿ. ಬಾಲಕೃಷ್ಣ ಅವರನ್ನು 94489 28197 ಸಂಖ್ಯೆ ಮೂಲಕ ಸಂಪರ್ಕಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.