ಸೋಮವಾರ, ಏಪ್ರಿಲ್ 19, 2021
32 °C

ಹಾಂಕಾಂಗ್ ಮೋಹದಲ್ಲಿ ಚೀನಾ

ಮೇರಿ ಜೋಸೆಫ್ Updated:

ಅಕ್ಷರ ಗಾತ್ರ : | |

ಇದು ಇಷ್ಟೊಂದು ದೊಡ್ಡ ಸಮಸ್ಯೆಯಾಗುತ್ತದೆ ಎಂದು ಮೊದಲೇ ಗೊತ್ತಿದ್ದಿದ್ದರೆ ಬಹುಶಃ ಹಾಂಕಾಂಗ್ ಸರ್ಕಾರ ಅದಕ್ಕೊಂದು ಕಡಿವಾಣ ಹಾಕುತ್ತಿತ್ತೋ ಏನೋ? ಆದರೆ ಹಾಗಾಗಲಿಲ್ಲ. ವರ್ಷದಿಂದ ವರ್ಷಕ್ಕೆ ಸಮಸ್ಯೆ ಉಲ್ಬಣಿಸುತ್ತಲೇ ಹೋಯಿತು.ಚೀನಾದಿಂದ ಗಡಿ ದಾಟಿ ಬರುವ ಗರ್ಭಿಣಿಯರು ತಮ್ಮ ಅಸ್ತಿತ್ವಕ್ಕೇ ಧಕ್ಕೆ ತರುತ್ತಿದ್ದಾರೆ ಎಂದು ತಿಳಿದಾಗಲಂತೂ ಹಾಂಕಾಂಗ್ ನಾಗರಿಕರಿಗೆ ಪ್ರತಿಭಟನೆಯಲ್ಲದೆ ಬೇರೆ ದಾರಿ ಕಾಣಲಿಲ್ಲ. ಹೌದು, ಭವಿಷ್ಯವನ್ನು ಮುಂದಾಗಿಯೇ ತಿಳಿಯಲು ಯಾರಿಗೂ ಸಾಧ್ಯವಿಲ್ಲವಲ್ಲ. ಹಾಂಕಾಂಗ್‌ನಲ್ಲಿ ಸಂಭವಿಸಿದ್ದೂ ಅದೇ. ಒಂದೆಡೆ ಮೂಲ ಚೀನಾದೊಂದಿಗೆ ಬಾಂಧವ್ಯದ ಕೊಂಡಿ ಕಳಚಿಕೊಳ್ಳಲೂ ಆಗದು, ಇನ್ನೊಂದೆಡೆ ಅಸಮಾಧಾನದ ಬೇಗೆಯಲ್ಲಿ ಕುದಿಯುತ್ತಿರುವ ಸ್ಥಳೀಯರಿಗೆ ನ್ಯಾಯ ಒದಗಿಸಿಕೊಡದೇ ಇರಲೂ ಆಗದು. ಹಾಗಾಗಿ ಹಾಂಕಾಂಗ್‌ನದು ಈಗ ಅಡಕತ್ತರಿಯಲ್ಲಿ ಸಿಲುಕಿದ ಅವಸ್ಥೆ.ಇವೆಲ್ಲವೂ ಆರಂಭವಾದದ್ದು ತೀರಾ ಇತ್ತೀಚೆಗೆ. ಬ್ರಿಟಿಷ್ ಕಾಲೊನಿಯಾಗಿದ್ದ ಹಾಂಕಾಂಗ್, ಸ್ವಾತಂತ್ರ್ಯ ಪಡೆದು 1997ರಲ್ಲಿ ಮೂಲ ಚೀನಾದೊಂದಿಗೆ ಸೇರಿಕೊಂಡಿತು. ಹಾಂಕಾಂಗ್ ಸಂವಿಧಾನವಾದ `ಬೇಸಿಕ್ ಲಾ~ ನಿಯಮದಂತೆ ಆ ನೆಲದಲ್ಲಿ ಹುಟ್ಟುವ ಯಾವುದೇ ಮಗು ಅಲ್ಲಿನ ಪೌರತ್ವ ಪಡೆಯಲು ಅರ್ಹತೆ ಹೊಂದುವುದು ಮಾತ್ರವಲ್ಲ, 12 ವರ್ಷಗಳ ಉಚಿತ ವಿದ್ಯಾಭ್ಯಾಸಕ್ಕೂ ಅರ್ಹವಾಗುತ್ತದೆ.ಜೊತೆಗೆ ಸ್ವಚ್ಛಂದವಾಗಿ ವಿಶ್ವದ ಯಾವುದೇ ಭಾಗಕ್ಕೆ ಸಂಚರಿಸಲು ಪಾಸ್‌ಪೋರ್ಟ್ ಪಡೆಯುವುದೂ ಹಾಂಕಾಂಗ್‌ನಲ್ಲಿ ಸುಲಭ. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹಾಂಕಾಂಗ್ ತೋರುತ್ತಿರುವ ಕಾಳಜಿ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಕೂಡ ಮೆಚ್ಚುಗೆಯ ಮಾತನ್ನಾಡಿದೆ. ಇವೆಲ್ಲವುಗಳಿಂದ ಆಕರ್ಷಿತರಾದ ನೆರೆಯ ಚೀನಾದ ಗರ್ಭಿಣಿಯರು ಹೆರಿಗೆಗೆಂದು ಹಾಂಕಾಂಗ್‌ನತ್ತ ಧಾವಿಸತೊಡಗಿದರು.ಇದರೊಂದಿಗೆ `ಒಂದು ಕುಟುಂಬಕ್ಕೆ ಒಂದೇ ಮಗು~ ಎಂಬ ಚೀನಾ ಸರ್ಕಾರದ ಧೋರಣೆಯಿಂದಲೂ ಬೇಸತ್ತ ಅನೇಕ ಶ್ರೀಮಂತ ಕುಟುಂಬಗಳು ಮಕ್ಕಳನ್ನು ಹೆರಲು ಹಾಂಕಾಂಗ್‌ನತ್ತ ಮುಖ ಮಾಡತೊಡಗಿದವು. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಆಗಮಿಸುತ್ತಿದ್ದ ಈ ಗರ್ಭಿಣಿಯರು ಹಾಂಕಾಂಗ್ ಸರ್ಕಾರಕ್ಕೆ ಅಷ್ಟೇನೂ ತಲೆನೋವಾಗಿ ಕಾಡಿರಲಿಲ್ಲ. ತಾಯ್ತನದ ಮಧುರ ಅನುಭವವನ್ನು ಸವಿಯಲು ತಮ್ಮ ನೆಲಕ್ಕೆ ಕಾಲಿರಿಸುವ ಇವರಿಗೆ ಸರ್ಕಾರ ಮಾತ್ರವಲ್ಲದೆ ಸ್ಥಳೀಯರೂ ಔದಾರ್ಯ ತೋರಿದರು. ಆದರೆ ವರ್ಷಗಳು ಕಳೆದಂತೆ ಈ ಸಂಖ್ಯೆಯಲ್ಲಿ ಅತೀವ ಹೆಚ್ಚಳ ಕಂಡುಬರತೊಡಗಿತು. ಹೆರಿಗೆಗೆ ತಿಂಗಳುಗಳ ಮೊದಲೇ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಕಾಯ್ದಿರಿಸಿಕೊಳ್ಳುವ ಈ ಗರ್ಭಿಣಿಯರಿಗೇ ಹಾಂಕಾಂಗ್ ಆಸ್ಪತ್ರೆಗಳು ಹೆಚ್ಚು ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದವು. ಇದೀಗ ಈ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ ಸ್ಥಳೀಯ ಆಸ್ಪತ್ರೆಗಳಲ್ಲಿ ಸ್ಥಳೀಯ ಗರ್ಭಿಣಿಯರಿಗೇ ಹಾಸಿಗೆಗಳು ದೊರಕದಷ್ಟು ಬೃಹದಾಕಾರವಾಗಿ ಬೆಳೆದಿದೆ.2000ದಲ್ಲಿ ಕೇವಲ 709 ಇದ್ದ ಗರ್ಭಿಣಿಯರ ಸಂಖ್ಯೆ 2011ರಲ್ಲಿ 33,499ಕ್ಕೆ ಬಂದು ತಲುಪಿದೆ. 2010ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಸುಮಾರು 88,000ದಷ್ಟು ಹೆರಿಗೆಗಳಲ್ಲಿ ಶೇ 45ರಷ್ಟು ಚೀನಾ ಮಹಿಳೆಯರದ್ದೇ ಆಗಿದ್ದವು. ಕಳೆದ ವರ್ಷ ನಡೆದ ಪ್ರತಿ ಹತ್ತು ಜನನದಲ್ಲಿ ನಾಲ್ಕು ಶಿಶುಗಳು ಚೀನಾ ಮೂಲದವು ಎಂದು ಹಾಂಕಾಂಗ್ ಸರ್ಕಾರ ಬಹಿರಂಗಪಡಿಸಿದೆ. ಚೀನಾ ಜನರ ಆರ್ಥಿಕ ಮಟ್ಟದಲ್ಲಿನ ಏರಿಕೆ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ. ಆರಂಭದಲ್ಲಿ ಇದೊಂದು ಸಾಧಾರಣ ವಿಷಯ ಎಂದು ತಣ್ಣಗೆ ಕುಳಿತಿದ್ದ ಹಾಕಾಂಗ್ ಮಂದಿ, ಬರಬರುತ್ತಾ ಇದು ತಮ್ಮ ಅಸ್ತಿತ್ವಕ್ಕೇ ಮಾರಕವಾಗುತ್ತಿದೆ ಎಂದಾಗ ಬೀದಿಗಿಳಿದರು. ತಮ್ಮ ನೆಲಕ್ಕೆ ಕಾಲಿರಿಸುವ ಚೀನೀಯರನ್ನು `ಮಿಡತೆ~ಗಳೆಂದು ಅಡ್ಡ ಹೆಸರಿಟ್ಟು ಕರೆಯತೊಡಗಿದರು. ಹೊರಗಿನವರಿಗೆ ಆರೋಗ್ಯ ಸೇವೆ ನೀಡುವುದರಿಂದ ಸ್ಥಳೀಯರಿಗೆ ಸಂಪನ್ಮೂಲಗಳ ಕೊರತೆ ಕಾಡಲಾರಂಭಿಸಿತು. ಬ್ರಿಟಿಷರಿಂದ ಮುಕ್ತಿಗೊಂಡ 15 ವರ್ಷಗಳ ಬಳಿಕವೂ ನೆರೆಯ ರಾಷ್ಟ್ರಗಳ ಹಿಡಿತದಿಂದ ತಾವಿನ್ನೂ ಪಾರಾಗಿಲ್ಲ ಎಂಬ ಅಂಶ ಅವರಲ್ಲಿ ಇನ್ನಷ್ಟು ಆಕ್ರೋಶವನ್ನು ಮೂಡಿಸಿದೆ.ಇವಿಷ್ಟೇ ಅಲ್ಲ, ಹೀಗೆ ದೇಶಕ್ಕೆ ಬರುವ ಗರ್ಭಿಣಿಯರು, ಪೌರತ್ವ ಪಡೆದು ಇಲ್ಲಿಯೇ ನೆಲೆಸುವ ಚೀನಾ ಮಂದಿ, ಪ್ರವಾಸಿಗರು ಇವರೆಲ್ಲರಿಂದ ಹಾಂಕಾಂಗ್‌ನಲ್ಲಿ ಎಲ್ಲವೂ ದುಬಾರಿಯಾಗಿದೆ. ಅಪಾರ್ಟ್‌ಮೆಂಟ್‌ಗಳ ಬೆಲೆಯಂತೂ ಗಗನಕ್ಕೇರಿದೆ ಎಂಬ ಸಿಟ್ಟೂ ಸ್ಥಳೀಯರಿಗಿದೆ. ಆದರೆ ಎಷ್ಟೇ ಪ್ರತಿಭಟನೆ ನಡೆಯಲಿ ಚೀನೀ ಮಹಿಳೆಯರು ಮಾತ್ರ ಇದು ತಮಗೆ ಸಂಬಂಧಿಸಿದ ವಿಷಯವೇ ಅಲ್ಲ ಎಂಬಂತೆ ಮಗುಮ್ಮಾಗಿದ್ದಾರೆ. `ನಾವು ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಲ್ಲಿಗೆ ಹೆರಿಗೆಗಾಗಿ ಬರುತ್ತಿದ್ದೇವೆ. ಜೊತೆಗೆ ಚೀನಾಕ್ಕೆ ಹೋಲಿಸಿದರೆ ಹಾಂಕಾಂಗ್‌ನಲ್ಲಿ ವಿದ್ಯಾಭ್ಯಾಸದ ಗುಣಮಟ್ಟ ಚೆನ್ನಾಗಿದೆ. ಹೀಗೆ ನಾವು ಬರುವುದರಿಂದ ಇಲ್ಲಿನ ಜನ ಬೇಸರಗೊಂಡಿದ್ದಾರೆ ಎನ್ನುವುದು ನಮಗೆ ತಿಳಿದಿದೆ. ಆದರೆ ಕಾನೂನಿನ ಪ್ರಕಾರ ಇದು ನ್ಯಾಯಸಮ್ಮತವಾಗಿರುವುದರಿಂದ ನಾವು ಬಂದೇ ಬರುತ್ತೇವೆ~ ಎಂದು ಖಂಡತುಂಡವಾಗಿ ಹೇಳುತ್ತಾರೆ.ವಿಮರ್ಶಕರ ಅಭಿಪ್ರಾಯ

ಈ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡಬೇಕೆಂದಿದ್ದರೆ ಚೀನಾದ ಗರ್ಭಿಣಿಯರಿಗೆ ನಿಷೇಧ ಹೇರಬೇಕೆನ್ನುವುದು ಸರ್ಕಾರಿ ಅಧಿಕಾರಿಗಳ ಬಯಕೆ. ಆದರೆ ಇಂಥ ಕ್ರಮ ಇನ್ನಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ ಎಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಹುಟ್ಟುವ ಮಗುವಿಗೆ ಪೌರತ್ವ ನೀಡುವ ಕಾನೂನನ್ನೇ  ನಿಷೇಧಿಸುವುದು ಇದಕ್ಕಿರುವ ಒಂದೇ ಪರಿಹಾರ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಇದೂ ಸಹ ಅಸಾಧ್ಯದ ಮಾತು.ಏಕೆಂದರೆ ಹೀಗೆ ಮಾಡಲು ನೆಲದ ಮೂಲ ಕಾನೂನನ್ನೇ ಬದಲಾಯಿಸಿ ಬರೆಯಬೇಕು ಎಂದು ಕಾನೂನು ಪರಿಣತರು ವಿಶ್ಲೇಷಿಸುತ್ತಾರೆ.

`ಹಾಂಕಾಂಗ್ ಚೀನಾದೊಂದಿಗೆ ರಾಜಕೀಯವಾಗಿ, ಆರ್ಥಿಕವಾಗಿ, ಚಾರಿತ್ರಿಕವಾಗಿ ತಳಕು ಹಾಕಿಕೊಂಡಿದ್ದರೂ ಮೌಲ್ಯಗಳ ವಿಚಾರದಲ್ಲಿ ಎರಡಕ್ಕೂ ಭಾರಿ ಅಂತರವಿದೆ. ಉಭಯ ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ವೈರುಧ್ಯವೇ ಈ ಎಲ್ಲ ಒತ್ತಡಕ್ಕೆ ಕಾರಣವಾಗಿದ್ದು, ಸರ್ಕಾರದ ನೀತಿಗಳನ್ನು ಕೂಡಲೇ ಸರಿಪಡಿಸುವ ಅಗತ್ಯವಿದೆ~ ಎಂದು ಹಾಂಕಾಂಗ್ ವಿಶ್ವವಿದ್ಯಾಲಯದ ರಾಜಕೀಯ ಶಾಸ್ತ್ರ ವಿಭಾಗದ ಪ್ರೊ. ಲ್ಯಾಮ್ ವಾಯ್ ಮ್ಯಾನ್ ಅಭಿಪ್ರಾಯಪಡುತ್ತಾರೆ.`ಎಲ್ಲಿಯವರೆಗೆ ಹಾಂಕಾಂಗ್ ಉತ್ತಮ ವೈದ್ಯಕೀಯ ನೆರವು ನೀಡುತ್ತದೋ ಅಲ್ಲಿಯವರೆಗೆ ಅಲ್ಲಿನ ಅಧಿಕಾರಿಗಳಿಗೆ ಈ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಿಲ್ಲ~ ಎಂದು ಬೀಜಿಂಗ್‌ನ ರೆನ್‌ಮಿನ್ ವಿಶ್ವವಿದ್ಯಾಲಯದ ಪ್ರೊ. ಫೆಂಗ್ ಯೂಜುನ್ ಹೇಳುತ್ತಾರೆ.ಪರಿಹಾರ ಕಾಣದ ಸಮಸ್ಯೆ

ಗರ್ಭಿಣಿಯರು ಮಾತ್ರವಲ್ಲ, ಕಳೆದ ವರ್ಷ ಶಾಪಿಂಗ್‌ಗಾಗಿ, ಎಲೆಕ್ಟ್ರಾನಿಕ್ ವಸ್ತುಗಳು, ಆಭರಣ ಹಾಗೂ ಐಷಾರಾಮಿ ವಸ್ತುಗಳ ಖರೀದಿಗಾಗಿ ಸುಮಾರು 28 ದಶಲಕ್ಷ ಚೀನೀಯರು ಹಾಂಕಾಂಗ್‌ಗೆ ಭೇಟಿ ನೀಡುವ ಮೂಲಕ ಅಲ್ಲಿನ ಆರ್ಥಿಕತೆಗೆ ಉತ್ತಮ ಕೊಡುಗೆ ನೀಡಿದ್ದರು. 2011ರಲ್ಲಿ ದೇಶಕ್ಕೆ ಭೇಟಿ ನೀಡಿದ ಒಟ್ಟು 41.9 ದಶಲಕ್ಷ ಪ್ರವಾಸಿಗರಲ್ಲಿ 28 ದಶಲಕ್ಷಕ್ಕೂ ಹೆಚ್ಚು ಮಂದಿ ಚೀನಾದವರಾಗಿದ್ದಾರೆ ಎಂದು ಹಾಂಕಾಂಗ್ ಪ್ರವಾಸೋದ್ಯಮ ಇಲಾಖೆಯ ಅಂಕಿ ಅಂಶಗಳು ತಿಳಿಸುತ್ತವೆ. ಈಗಂತೂ ಚೀನಾದ ಗರ್ಭಿಣಿಯರಿಂದಲೂ ಆದಾಯ ಹೆಚ್ಚಾಗುತ್ತಿರುವುದರಿಂದ ಅವರ ಮೇಲೆ ನಿಷೇಧ ಹೇರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಇಷ್ಟೇ ಅಲ್ಲದೆ ನಗರದ ಆರ್ಥಿಕತೆಯೂ ಚೀನಾದ ಮೇಲೆ ಅವಲಂಬಿತ ಆಗಿರುವುದರಿಂದ ನಿಷೇಧ ಹೇರಿದರೆ ಆರ್ಥಿಕತೆಗೆ ಭಾರಿ ಪೆಟ್ಟು ಬೀಳುತ್ತದೆ ಎಂದು ಹಾಂಕಾಂಗ್‌ನ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.ಚೀನಾದಿಂದಲೂ ಕಡಿವಾಣ


ಹಾಂಕಾಂಗ್ ಸಮಸ್ಯೆಯ ಪರಿಹಾರಕ್ಕೆ ಚೀನಾ ಕೂಡ ಮುಂದಾಗಿದೆ. `ಒಂದೇ ಮಗು~ ಎನ್ನುವ ತನ್ನ ನೆಲದ ಕಾನೂನನ್ನು ಮೀರಿದವರಿಗೆ ಶಿಕ್ಷೆ ವಿಧಿಸುವುದಾಗಿ  ಚೀನಾದ ಕುಟುಂಬ ಯೋಜನಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಗಡಿಗಳಲ್ಲಿ ತೀವ್ರ ತಪಾಸಣೆ ಏರ್ಪಡಿಸಿದರೂ ಚೀನಾದ ಏಜೆಂಟರು ಅಕ್ರಮವಾಗಿ ಗರ್ಭಿಣಿಯರನ್ನು ಸಾಗಿಸಿ ಹಾಂಕಾಂಗ್‌ನಲ್ಲಿ ರಹಸ್ಯವಾಗಿ ಆಶ್ರಯ ನೀಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.`ಏನೇ ಆಗಲಿ, ಮನೆ ಹೊತ್ತಿ ಉರಿಯುವಾಗ ಬಾವಿ ತೋಡಿದಂತಾಗಿದೆ ಈಗ ಹಾಂಕಾಂಗ್‌ನ ಪರಿಸ್ಥಿತಿ. ಅದಕ್ಕೇ ಮುಂದಿನ ವರ್ಷದಿಂದ ನಮ್ಮ ದೇಶದಲ್ಲಿ ಹುಟ್ಟುವ ಇಂತಹ ಮಕ್ಕಳಿಗೆ ಶಾಶ್ವತ ಪೌರತ್ವ ದೊರೆಯದಂತೆ ಕ್ರಮ ಕೈಗೊಳ್ಳುತ್ತೇವೆ~ ಎಂದು ನೂತನವಾಗಿ ಆಯ್ಕೆಯಾದ ಚೀಫ್ ಎಕ್ಸಿಕ್ಯುಟಿವ್ ಲಿಯಾಂಗ್ ಚುನ್-ಯಿಂಗ್ ಎಚ್ಚರಿಸಿದ್ದಾರೆ. ಆದರೆ ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸುವ ಬಗ್ಗೆ ಮಾತ್ರ ಅವರು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.ಎರಡು ಆಡಳಿತ

ಹಾಂಕಾಂಗ್ 155 ವರ್ಷಗಳ ಕಾಲ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತ್ತು. 1997ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಚೀನಾಕ್ಕೆ ಮರಳಿ ಸೇರ್ಪಡೆಗೊಂಡಿತು. ಆದರೆ ಅದು `ಒಂದು ದೇಶ, ಎರಡು ಆಡಳಿತ~ ವ್ಯವಸ್ಥೆ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಹಾಂಕಾಂಗ್ ವಿಶೇಷ ಆಡಳಿತ ವಲಯವಾದ್ದರಿಂದ, ವಿದೇಶಾಂಗ ವ್ಯವಹಾರ ಮತ್ತು ರಕ್ಷಣೆ ಹೊರತುಪಡಿಸಿ ಉಳಿದೆಲ್ಲ ವಿಷಯಗಳಲ್ಲೂ ಸಂಪೂರ್ಣ ಸ್ವಾಯತ್ತತೆಯನ್ನು ಅನುಭವಿಸುತ್ತಿದೆ.ಕೋಟಾ ಸಂಪ್ರದಾಯ

ಹೆರಿಗೆಯ ಉದ್ದೇಶದಿಂದಲೇ ಚೀನಾಗೆ ಬರುವ ಗರ್ಭಿಣಿಯರ ಸಂಖ್ಯೆಗೆ ಕಡಿವಾಣ ಹಾಕಲು ಕೋಟಾ ವ್ಯವಸ್ಥೆ ಏರ್ಪಡಿಸಬೇಕೆಂಬ ಭಾರೀ ಒತ್ತಡ ಸ್ಥಳೀಯರಿಂದ ಕೇಳಿಬಂದ ಹಿನ್ನೆಲೆಯಲ್ಲಿ, ಹಾಂಕಾಂಗ್ ಆರೋಗ್ಯ ಪ್ರಾಧಿಕಾರ ಅದನ್ನು ಜಾರಿಗೆ ತರಲು ನಿರ್ಧರಿಸಿತು. ಅದರಂತೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಕೇವಲ 3,400 ಮಹಿಳೆಯರಿಗೆ ಮಾತ್ರ ಹೆರಿಗೆಗೆ ಅವಕಾಶ ಕಲ್ಪಿಸಲಾಯಿತು. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ಕಳೆದ ವರ್ಷ ಮಿತಿಮೀರಿ ಹೆರಿಗೆಗಳು ನಡೆದವು. ಗಡಿ ದಾಟಿ ಬರುವ ಗರ್ಭಿಣಿಯರು ಹೆರಿಗೆಯ ಕೊನೇ ಕ್ಷಣಗಳಲ್ಲಿ ಆಸ್ಪತ್ರೆಯ ತುರ್ತು ವಾರ್ಡ್‌ಗಳನ್ನು ಆಸರೆಯಾಗಿ ಇಟ್ಟುಕೊಳುತ್ತಿದ್ದಾರೆ. ಹೀಗೆ ಕಳೆದ ವರ್ಷ ಸುಮಾರು 1600ರಷ್ಟು ಹೆರಿಗೆಗಳು ತುರ್ತು ಚಿಕಿತ್ಸಾ ಕೊಠಡಿಯಲ್ಲಿ ನಡೆದಿವೆ. ಇದು ಆಘಾತಕಾರಿ ಬೆಳವಣಿಗೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಜನನ ಪ್ರವಾಸೋದ್ಯಮ!

ಚೀನಾದ ಗಡಿ ದಾಟಿ ಹೆರಿಗೆಗೆಂದು ನೂರಾರು ಸಂಖ್ಯೆಯ ಗರ್ಭಿಣಿಯರು ಹಾಂಕಾಂಗ್‌ಗೆ ಬರುವುದರಿಂದ ಇದೀಗ ಈ ಎರಡೂ ಕಡೆ `ಜನನ ಪ್ರವಾಸೋದ್ಯಮ~ ಎಂಬ ಹೊಸ ಶಾಖೆ ಅತಿ ವೇಗದಲ್ಲಿ ಬೆಳೆಯುತ್ತಿದೆ.ಗರ್ಭಿಣಿಯರನ್ನು ಹಾಂಕಾಂಗ್‌ಗೆ ಕರೆದುಕೊಂಡು ಹೋಗುವುದು, ಅಲ್ಲಿ  ಹೆರಿಗೆ ಮುಗಿದ ಬಳಿಕ ಅವರನ್ನು ಹಿಂತಿರುಗಿ ಕರೆದುಕೊಂಡು ಬರುವ ಮಧ್ಯವರ್ತಿಗಳಾಗಿ ಹಲವಾರು ಏಜೆಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಗರ್ಭಿಣಿಯರು ಯಾವ ಹೋಟೆಲ್‌ನಲ್ಲಿ ತಂಗುತ್ತಾರೆ ಎನ್ನುವುದರ ಮೇಲೆ ಪ್ಯಾಕೇಜ್ ದರ ನಿಗದಿಯಾಗುತ್ತದೆ. ಒಂದು ಪ್ಯಾಕೇಜ್‌ಗೆ ಸಾವಿರ ಯುವಾನ್‌ನಿಂದ ಇಪ್ಪತ್ತು ಸಾವಿರ ಯುವಾನ್‌ವರೆಗೂ ಹಣ ನಿಗದಿಪಡಿಸಲಾಗುತ್ತದೆ. ಚೀನಾದ ಶ್ರೀಮಂತ ಪ್ರದೇಶವಾದ ಗಾವುಂಗ್‌ಡಾಂಗ್, ಬೀಜಿಂಗ್ ಮತ್ತು ಶಾಂಘೈ ಪ್ರಾಂತ್ಯದಿಂದ ಹೆಚ್ಚಿನವರು ಇಂತಹ ಪ್ಯಾಕೇಜ್‌ಗಳನ್ನು ಆರಿಸಿಕೊಳ್ಳುತ್ತಾರೆ. ಇದೇ ವೇಳೆ `ಜನನ ಪ್ರವಾಸೋದ್ಯಮ~ದ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ ಎಷ್ಟೋ ಪ್ರಕರಣಗಳು ನಡೆದಿವೆ.

ಅಮೆರಿಕದಲ್ಲೂ...

ಹಾಂಕಾಂಗ್‌ನಂತೆ ಅಮೆರಿಕದಲ್ಲೂ ಅಲ್ಲಿ ಹುಟ್ಟಿದ ಮಗುವಿಗೆ ಅಲ್ಲಿನ ಪೌರತ್ವ ಸಹಜವಾಗಿಯೇ ದೊರೆಯುತ್ತದೆ. ಹಾಗಾಗಿ ಚೀನಾದ ಶ್ರೀಮಂತ ವರ್ಗದ ಮೊದಲ ಆದ್ಯತೆ ಅಮೆರಿಕವಾದರೆ, ಎರಡನೇ ಆದ್ಯತೆ ಏಳು ದಶಲಕ್ಷ ಜನಸಂಖ್ಯೆ ಇರುವ ಹಾಂಕಾಂಗ್. ಜೊತೆಗೆ ಬ್ರಿಟಿಷ್ ಕಾಲೊನಿಯಾಗಿದ್ದರಿಂದ ಹಾಂಕಾಂಗ್‌ನಲ್ಲಿ ಈಗಲೂ ಕಾನೂನು, ವಿದ್ಯಾಭ್ಯಾಸ ಪದ್ಧತಿ ಎಲ್ಲವೂ ಬ್ರಿಟನ್ ಮಾದರಿಯಲ್ಲಿಯೇ ಇದೆ. ಹೀಗಾಗಿ ಮಕ್ಕಳ ಉತ್ತಮ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಚೀನಾ ಮಹಿಳೆಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಹಾಂಕಾಂಗ್‌ಗೆ ಆಗಮಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.