ಶುಕ್ರವಾರ, ಜನವರಿ 27, 2023
19 °C

ಹಾಕಿ:ಎಂಇಜಿಗೆ ಮಣಿದ ಆರ್ಮಿ ಗ್ರೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ:ಎಂಇಜಿಗೆ ಮಣಿದ ಆರ್ಮಿ ಗ್ರೀನ್

ಬೆಂಗಳೂರು: ಎಂಇಜಿ ತಂಡದವರು ಇಲ್ಲಿ ನಡೆಯುತ್ತಿರುವ ಕೆಎಸ್‌ಎಚ್‌ಎ ಆಶ್ರಯದ ‘ಓಜೋನ್ ಗ್ರೂಪ್’ ಪ್ರಾಯೋಜಿತ ರಾಜ್ಯ ಸೂಪರ್ ಡಿವಿಷನ್ ಹಾಕಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಗೆಲುವು ಪಡೆದರು.ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಂಇಜಿ 3-2 ಗೋಲುಗಳಿಂದ ಆರ್ಮಿ ಗ್ರೀನ್ ತಂಡವನ್ನು ಮಣಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು 2-2 ಗೋಲುಗಳ ಸಮಬಲ ಸಾಧಿಸಿದ್ದವು. ಆದರೆ ದ್ವಿತಿಯಾರ್ಧದಲ್ಲಿ ಎಂಇಜಿ ತಂಡದ ಮುತ್ತಣ್ಣ 65ನೇ ನಿಮಿಷದಲ್ಲಿ ಗಳಿಸಿದ ಒಂದು ಗೋಲು ತಂಡಕ್ಕೆ ಗೆಲುವು ತಂದುಕೊಟ್ಟಿತು. ವಿಜಯಿ ತಂಡದ ಉಳಿದ ಗೋಲುಗಳನ್ನು ಪೂವಣ್ಣ (11) ಹಾಗೂ ಸಹಾಯ್ ಜಯಶೀಲನ್ (27) ಗಳಿಸಿದರು. ಆರ್ಮಿ ಗ್ರೀನ್ ತಂಡದ ಜಗೀರ್ ಸಿಂಗ್ ಹಾಗೂ ಪ್ರಭಾಕರ್ ಕ್ರಮವಾಗಿ 15 ಹಾಗೂ 29ನೇ ನಿಮಿಷದಲ್ಲಿ ಗೋಲು ತಂದಿತ್ತರು.ಇನ್ನೊಂದು ಪಂದ್ಯದಲ್ಲಿ ಆರ್ಮಿ ರೆಡ್ ತಂಡ 2-1ಗೋಲುಗಳಿಂದ ಎಸ್‌ಎಐ ತಂಡವನ್ನು ಮಣಿಸಿತು. ತಂಡದ ಎಸ್. ಅರ್ಮುಗಮ್ (11) ಹಾಗೂ ಎಂ.ಸಿ. ಸಿಂಗ್ (48) ಗೋಲು ತಂದಿತ್ತರೆ, ಎಸ್‌ಎಐ ತಂಡದ ಏಕೈಕ ಗೋಲನ್ನು ಎಂ.ಜಿ ಪೂಣಚ್ಚ 63ನೇ ನಿಮಿಷದಲ್ಲಿ ಗಳಿಸಿದರು.ಪೋರ್ಟಿಸ್ ತಂಡ 3-0 ಗೋಲುಗಳಿಂದ ನಾಮಧಾರಿ ಇಲೆವನ್ ತಂಡವನ್ನು ಸುಲಭವಾಗಿ ಸೋಲಿಸಿತು. ದಿವಾಕರ್‌ರಾಮ್  (40, 54ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿದರೆ, ಇನ್ನೊಂದು ಗೋಲನ್ನು ದಮನ್‌ದೀಪ್ ಸಿಂಗ್ (60) ಗಳಿಸಿದರು.ನಾಲ್ಕನೇ ಪಂದ್ಯದಲ್ಲಿ ಬಿಪಿಸಿಎಲ್ 6-2 ಗೋಲುಗಳಿಂದ ಏರ್ ಇಂಡಿಯಾ ತಂಡದ ಎದುರು ಸುಲಭ ಗೆಲುವು ಪಡೆಯಿತು. ಅಮರ್ ಅಯ್ಯಮ್ಮ (19 ಹಾಗೂ 23), ಜರ್ನೈಲ್ ಸಿಂಗ್ (10 ಮತ್ತು 56), ಹರಿಪ್ರಸಾದ್ (61) ಹಾಗೂ ಕರಮ್‌ಜಿತ್ ಸಿಂಗ್ (64) ಗೋಲು ಗಳಿಸಿ ಬಿಪಿಸಿಎಲ್ ತಂಡದ ಗೆಲುವಿಗೆ ಕಾರಣರಾದರು. ವಿಕ್ರಮ್ ಪಿಳ್ಳೆ (1) ಹಾಗೂ ಲೆನ್ ಅಯ್ಯಪ್ಪ (32) ಏರ್ ಇಂಡಿಯಾ ಪರ ಚೆಂಡನ್ನು ಗುರಿ ಸೇರಿಸಿದರು.ಗುರುವಾರ ಎಎಸ್‌ಸಿ-ಎಂಇಜಿ ಹಾಗೂ ಐಒಸಿಎಲ್-ಬಿಪಿಸಿಎಲ್ ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.