ಶನಿವಾರ, ಜೂನ್ 19, 2021
23 °C

ಹಾಕಿಯಲ್ಲಿ ಹೊಸ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಗೊಂದಲದ ಗೂಡಾಗಿದ್ದ ಹಾಕಿ ಆಡಳಿತದಲ್ಲಿ ಇದೀಗ ನಿಖರವಾದ ದಾರಿಯೊಂದು ಗೋಚರವಾಗಿದೆ. ಇಂತಹ ದಾರಿಯಲ್ಲಿ ಸಾಗಬೇಕೆಂದು ಹಾಕಿ ಆಡಳಿತಗಾರರಿಗೆ ಸರ್ಕಾರವೇ ಸ್ಪಷ್ಟ ಸೂಚನೆ ನೀಡಿದೆ. ಕೇಂದ್ರ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯು ಹಾಕಿ ಇಂಡಿಯಾಕ್ಕೆ ‘ರಾಷ್ಟ್ರೀಯ ಕ್ರೀಡಾ ಫೆಡರೇಷನ್‌’ನ ಮಾನ್ಯತೆ ನೀಡಿ ಆದೇಶ ಹೊರಡಿಸಿದೆ. ಇದು ಸ್ವಾಗತಾರ್ಹ.ಇದರಿಂದ ದೇಶದ ಹಾಕಿಗೆ ಸಂಬಂಧಿ­ಸಿದಂತೆ ಇದ್ದ ಅನಿಶ್ಚಿತತೆ  ದೂರವಾಗಲಿದೆ. ಭಾರತ ಹಾಕಿ ಫೆಡರೇಷನ್‌ ಒಳಗಿನ ಕಿತ್ತಾಟದಿಂದ ಕ್ರೀಡೆಯ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿ­ಣಾಮ ಉಂಟಾಗಿತ್ತು. ಹೀಗಾಗಿ 2008ರಲ್ಲಿ ಭಾರತ ಒಲಿಂಪಿಕ್‌ ಸಂಸ್ಥೆಯು ಭಾರತ ಹಾಕಿ ಫೆಡರೇಷನ್‌ ಅನ್ನು ಅಮಾನತು­ಗೊಳಿಸಿತ್ತು. ಫೆಡರೇಷನ್‌ ನಲ್ಲಿಯೇ ಇನ್ನೊಂದು ಬಣದ ಧ್ವನಿ ಆಗ ಸದ್ದು ಮಾಡಿತ್ತು. ಹಾಕಿ ಚಟು­ವಟಿಕೆಗಳನ್ನು ನಡೆಸಿಕೊಂಡು ಹೋಗಲು ಆ ದಿನಗಳಲ್ಲೇ ಐಒಎ, ತಾತ್ಕಾಲಿಕ ಸಮಿತಿಯೊಂದನ್ನು ನೇಮಕ ಮಾಡಿತ್ತು.ಹೀಗಾಗಿ ಕೇಂದ್ರ ಸರ್ಕಾರವೂ ಭಾರತ ಹಾಕಿ ಫೆಡರೇಷನನ್ನು ಅಮಾನತಿ ನಲ್ಲಿಟ್ಟಿತ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಆತಂಕ ವ್ಯಕ್ತಪಡಿಸಿತ್ತು. ಹೀಗಾಗಿ 2009ರಲ್ಲಿ ಹಾಕಿ ಇಂಡಿಯಾ ಎಂಬ ‘ಬಣ’ಕ್ಕೆ ಕೇಂದ್ರ ಸರ್ಕಾರ ಷರತ್ತುಬದ್ಧ ಮಾನ್ಯತೆ ನೀಡಿ, ಹಾಕಿ ಚಟುವಟಿಕೆ ನಡೆಸಲು ಅನುಮತಿ ನೀಡಿತ್ತು. ಈ ಎಲ್ಲಾ ಗೊಂದಲಗಳ ನಡುವೆಯೇ ಎರಡು ವರ್ಷ­ಗಳ ಹಿಂದೆ ನಡೆದ ಲಂಡನ್‌ ಒಲಿಂಪಿಕ್ಸ್‌ಗೆ ತಂಡವನ್ನೂ ಕಳುಹಿಸಲಾಗಿತ್ತು. ಅಂದು ಆಡಳಿತಕ್ಕೆ ಸಂಬಂಧಿಸಿದ ಕಿತ್ತಾಟದಲ್ಲಿ ನಿಜಕ್ಕೂ ಹಾಕಿ ಸೊರಗಿತ್ತು. ಭಾರತ ತಂಡ ಲಂಡನ್‌ನಲ್ಲಿ ಕೊನೆಯ ಸ್ಥಾನಕ್ಕಿಳಿದಿತ್ತು.ಇಂತಹ ಸಂದಿಗ್ಧದಲ್ಲಿ ಉಭಯ ಬಣಗಳ ನಡುವಣ ಸಂಘರ್ಷ ನ್ಯಾಯಾ­ಲಯದ ಮೆಟ್ಟಿಲೇರಿತು. ಇಂತಹ ಗೊಂದಲಗಳೆಲ್ಲಾ ಅಂತ್ಯಗೊಳ್ಳಲೆಂಬುದು ಇಡೀ ದೇಶದ ಹಾಕಿ ಪ್ರಿಯರೆಲ್ಲರ ಅಭಿಲಾಷೆಯಾಗಿತ್ತು. ಹಾಕಿ ಇಂಡಿಯಾ ಸಂಸ್ಥೆಯು ತನಗೆ ಸಿಕ್ಕಿದ ಅವಕಾಶದಲ್ಲಿ ರಾಷ್ಟ್ರೀಯ ಸೀನಿಯರ್‌ ಮತ್ತು ಜೂನಿಯರ್‌ ವಿಭಾಗಗಳಲ್ಲಿ ಸ್ಪರ್ಧಾಕೂಟಗಳನ್ನು ವ್ಯವಸ್ಥಿತವಾಗಿ ಸಂಘ­ಟಿಸಿತು. ಒಲಿಂಪಿಕ್‌ ಅರ್ಹತಾ ಸುತ್ತು, ಜೂನಿಯರ್‌ ವಿಶ್ವಕಪ್‌ಗಳಂತಹ ಪ್ರಮುಖ ಟೂರ್ನಿಗಳನ್ನೂ ಆಯೋಜಿಸಿತು. ಪ್ರಸಕ್ತ 27 ಸದಸ್ಯ ಸಂಸ್ಥೆಗಳು, 19 ಸಹ ಸದಸ್ಯ ಸಂಸ್ಥೆಗಳನ್ನು ಹೊಂದಿರುವ ಹಾಕಿ ಇಂಡಿಯಾ, ಆಡಳಿತ ಮತ್ತು ಸಂಘಟನೆಗೆ ಸಂಬಂಧಿಸಿದಂತೆ ತಾನು ಸಮರ್ಥ ಎಂಬುದನ್ನು ಸಾಬೀತು­ಪಡಿಸಿದೆ.ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಹಾಕಿಯನ್ನು ಹಿಂದಿನ ಭವ್ಯ ಪರಂಪರೆಯ ಹಾದಿಯಲ್ಲಿ ಕೊಂಡೊಯ್ಯಲು ಇದೀಗ ಹಾಕಿ ಇಂಡಿಯಾಕ್ಕೆ ಮುಕ್ತ ಅವಕಾಶ ಸಿಕ್ಕಿದೆ. ಸರ್ಕಾರ ನೀಡಿದ ಈ ರಹದಾರಿ­ಯನ್ನು ಸವಾಲು ಎಂದು ಪರಿಗಣಿಸಿ ಹಾಕಿ ಇಂಡಿಯಾ ಮುಂದಡಿ ಇಡ­ಬೇಕಿದೆ. ಒಲಿಂಪಿಕ್ಸ್‌ನಲ್ಲಿ ಭಾರತ ಹಿಂದೆ ಎಂಟು ಸಲ ಬಂಗಾರದ ಸಾಧನೆ ಮಾಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ದಶಕಗಳ ಹಿಂದೆ ದೇಶದಾದ್ಯಂತ ಅಪಾರ ಜನಪ್ರಿಯತೆ ಹೊಂದಿದ್ದ ಈ ಕ್ರೀಡೆಯಲ್ಲಿ ಭಾರತ ಮತ್ತೆ ವಿಶ್ವದ ಅಗ್ರಶ್ರೇಣಿಗೆ ಏರಬೇಕಿದೆ. ಇನ್ನು ಮುಂದೆ ಹಾಕಿ ಫೆಡರೇಷನ್‌ನಲ್ಲಿ ದುರಾ­ಡಳಿತ, ಆಂತರಿಕ ವಿವಾದಗಳು ಉಂಟಾಗದಂತೆ ನೋಡಿಕೊಳ್ಳಬೇಕಿದೆ.ದೇಶದ ಮೂಲೆ ಮೂಲೆಗಳಲ್ಲಿಯೂ ಪ್ರತಿಭಾನ್ವೇಷಣೆ ನಡೆಯಬೇಕಿದೆ. ಇಲ್ಲಿನ ತಂಡಗಳನ್ನು ಆಗಿಂದಾಗ್ಗೆ ವಿದೇಶಗಳಿಗೆ ಕಳುಹಿಸಿ ಪ್ರಬಲ ತಂಡಗಳೊಂದಿಗೆ ಆಡಿಸಬೇಕಿದೆ. ಮುಂದಿನ ಒಲಿಂಪಿಕ್ಸ್‌ ವೇಳೆಗೆ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಇಂತಹ ಕನಸುಗಳೊಂದಿಗೆ ಹಾಕಿ ಆಡಳಿತಗಾರರು ಮುಂದಿನ ದಿನಗಳಲ್ಲಿ ಸಮರೋಪಾದಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.