ಮಂಗಳವಾರ, ಮೇ 24, 2022
25 °C

ಹಾಜಿಮ್ ಈಜಿಪ್ಟ್ ಹೊಸ ಪ್ರಧಾನಿ

ಹಾಜಿಮ್ ಎಲ್-ಬೆಬ್ಲೊವಿ Updated:

ಅಕ್ಷರ ಗಾತ್ರ : | |

ಕೈರೊ (ಪಿಟಿಐ): ಆರ್ಥಿಕ ಉದಾರವಾದಿ ಹಾಗೂ ಈಜಿಪ್ಟ್‌ನ ಮಾಜಿ ಹಣಕಾಸು ಸಚಿವ ಹಾಜಿಮ್ ಎಲ್-ಬೆಬ್ಲೊವಿ ಅವರನ್ನು ದೇಶದ ಹೊಸ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿದೆ.ದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹಾರವಾಗಲು ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಸುವುದಾಗಿ ಹಂಗಾಮಿ ಅಧ್ಯಕ್ಷರಾಗಿರುವ ಅದ್ಲಿ ಮನ್ಸೌರ್ ಈಗಾಗಲೇ ಘೋಷಿಸಿದ್ದು, ಈ ದಿಸೆಯಲ್ಲಿ ಹೊಸ ಪ್ರಧಾನಿಯನ್ನು ನೇಮಕ ಮಾಡಿದ್ದಾರೆ ಎಂದು ರಾಷ್ಟ್ರಪತಿಯವರ ವಕ್ತಾರ ಅಹ್ಮದ್ ಎಲ್-ಮಸ್ಲೊಮನಿ ತಿಳಿಸಿದ್ದಾರೆ.ಪ್ರಧಾನಿ ನೇಮಕದ ಜತೆಯಲ್ಲೇ ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಎಲ್-ಬರದೆಯಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಂಸದೀಯ ಹಾಗೂ ಅಧ್ಯಕ್ಷೀಯ ಚುನಾವಣೆಯನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ರೂಪಿಸುವಲ್ಲಿ ತಮಗಿರುವ ಅಧಿಕಾರಗಳನ್ನು ಸೀಮಿತಗೊಳಿಸಲಾಗಿದೆ ಎಂದು ಅದ್ಲಿ ಮನ್ಸೌರ್ ಮಂಗಳವಾರ ರಾತ್ರಿ ಘೋಷಿಸಿದ ತರುವಾಯ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ.ಈ ನೇಮಕದಿಂದಾಗಿ ಹೊಸ ಸರ್ಕಾರದಲ್ಲಿಯ ಅತ್ಯುನ್ನತ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ. ನೂತನ ಪ್ರಧಾನಿ ಹಾಜಿಮ್ ಈಜಿಪ್ಟ್‌ನ ಸಾಮಾಜಿಕ ಪ್ರಜಾಸತ್ತಾತ್ಮಕ ಪಕ್ಷದ ಸಂಸ್ಥಾಪಕ ಸದಸ್ಯರಾಗಿದ್ದು ಈ ಹಿಂದಿನ ಎಸ್ಸಾಮ್ ಷರೀಫ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. 1995ರಿಂದ 2000 ರ ಅವಧಿಯಲ್ಲಿ ವಿಶ್ವಸಂಸ್ಥೆಯಲ್ಲಿ ಆಧೀನ ಕಾರ್ಯದರ್ಶಿಯಾಗಿಯೂ ಹಾಜೀಮ್ ಸೇವೆ ಸಲ್ಲಿಸಿದ್ದಾರೆ.ಮುಸ್ಲಿಂ  ಮುಖಂಡರ ಬಂಧನಕ್ಕೆ ಸರ್ಕಾರ ಆದೇಶ

ಈಜಿಪ್ಟಿನ ಮಧ್ಯಂತರ ಸರ್ಕಾರವು ಮುಸ್ಲಿಂ ಬ್ರದರ್‌ಹುಡ್ ಪಕ್ಷದ ಮುಖ್ಯಸ್ಥ ಸೇರಿದಂತೆ ಪ್ರಮುಖ ಮುಸ್ಲಿಂ ಮುಖಂಡರನ್ನು ಬಂಧಿಸಲು ಬುಧವಾರ ಆದೇಶಿಸಿದೆ.

ರಾಷ್ಟ್ರದ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರ ಬಂಧನದ ಹಿನ್ನೆಲೆಯಲ್ಲಿ ಸೇನೆ ಮತ್ತು ಮೊರ್ಸಿ ಬೆಂಬಲಿಗರ ನಡುವೆ ಈಚೆಗೆ ಹಿಂಸಾಚಾರ ನಡೆದಿತ್ತು. ಈ ಸಂದರ್ಭದಲ್ಲಿ 51 ಮಂದಿ ಸಾವನ್ನಪ್ಪಿದ್ದರು. ಈ ಹಿಂಸಾಚಾರಕ್ಕೆ ಕಾರಣರಾದ ಮುಸ್ಲಿಂ ಮುಖಂಡರನ್ನು ಬಂಧಿಸುವಂತೆ ಆದೇಶ ಹೊರಡಿಸಲಾಗಿದೆ.ಮುಸ್ಲಿಂ ಬ್ರದರ್‌ಹುಡ್ ಚಳವಳಿಯ ಮುಖಂಡರಾದ ಮೊಹಮ್ಮದ್ ಬದಿ ಮತ್ತು ಮೊಹಮ್ಮದ್ ಇಜ್ಜಾತ್ ಅವರನ್ನು ಬಂಧಿಸಲು ವಾರೆಂಟ್ ಹೊರಡಿಸಲಾಗಿದೆ ಎಂದು ಅಲ್ಲಿನ ಸಾಮಾನ್ಯ ಪ್ರಾಸಿಕ್ಯೂಟರ್ ಕಚೇರಿ ಮೂಲಗಳು ತಿಳಿಸಿವೆ.ಸೋಮವಾರ ನಡೆದ ಹಿಂಸಾಚಾರ ಘಟನೆಯಲ್ಲಿ ಮೊಹಮ್ಮದ್ ಬದಿ ಪ್ರಮುಖ ಆರೋಪಿಯಾಗಿದ್ದಾರೆ. ಈ ನಡುವೆ ಈಜಿಪ್ಪಿನ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ; ಅವರಿಗೆ ಸೂಕ್ತ ಸೌಲಭ್ಯಗಳನ್ನೂ ನೀಡಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.