ಭಾನುವಾರ, ಏಪ್ರಿಲ್ 18, 2021
31 °C

ಹಾಡು ಹಗಲಲ್ಲೇ ಹುಲಿಗಳ ಸಂಚಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಆಗಿನ್ನೂ ಮಟಮಟ ಮಧ್ಯಾಹ್ನ, ಹಾಡು ಹಗಲಿನಲ್ಲೇ ನಗರದಲ್ಲಿ ಹುಲಿಗಳು ರಾಜಾರೋಷವಾಗಿ ಸಂಚರಿಸುತ್ತಿವೆ! ಗಲ್ಲಿ ಗಲ್ಲಿಯಲ್ಲಿ ಹುಲಿಗಳ ದರ್ಶನವಾದರೂ ಸಾರ್ವಜನಿಕರು, ಮಕ್ಕಳು ಬೆಚ್ಚಿಬೀಳಲಿಲ್ಲ, ಬದಲಾಗಿ ಬಿದ್ದು ಬಿದ್ದು ನಕ್ಕರು, ಯಾಕೆ ಗೊತ್ತಾ ಅವೆಲ್ಲ ವೇಷಧಾರಿ ಹುಲಿಗಳು!!ಹೋಳಿ ಹುಣ್ಣಿಮೆಗೆ ನಾಲ್ಕು ದಿನಗಳ ಮೊದಲು ನಗರದಲ್ಲಿ ಹುಲಿ ವೇಷಧಾರಿಗಳು ಅಂಗಡಿ, ಮನೆಗಳ ಮುಂದೆ ಕುಣಿದು ಜನರಿಗೆ ಮನರಂಜನೆ ನೀಡುತ್ತಾರೆ. ಹೀಗಾಗಿ ಮಂಗಳವಾರದಿಂದ ಪೇಟೆಯಲ್ಲಿ ಎರಡು ಕಾಲಿನ ಹುಲಿಗಳ ಸಂಚಾರ ಜೋರಾಗಿದೆ. ಹಲಗೆ ಬಡಿತದೊಂದಿಗೆ ಹುಲಿ ವೇಷಧಾರಿಗಳು ರಸ್ತೆಯಲ್ಲಿ ಕುಣಿಯುತ್ತ ಸಾಗುತ್ತ ಅಂಗಡಿಕಾರರು ಕೊಟ್ಟ ಖುಷಿಯ ಹಣವನ್ನು ಸ್ವೀಕರಿಸುತ್ತಾರೆ. ಹಳ್ಳಿಗಳಲ್ಲಿ ಹುಲಿ ವೇಷಧಾರಿಗಳ ತಂಡ ಪ್ರತಿ ಮನೆಯ ಮುಂದೆ ಕುಣಿತದ ಪ್ರದರ್ಶನ ನೀಡುತ್ತದೆ. ಹುಲಿ ವೇಷಧಾರಿ ಜೊತೆ ಹಲಗೆ ಬಡಿಯುವವರು, ಒಬ್ಬ ಬಂದೂಕುಧಾರಿ ಇರುತ್ತಾರೆ.

 

ಅವರನ್ನು ಪ್ರೋತ್ಸಾಹಿಸಲು ಮಕ್ಕಳ ದಂಡು ಅವರ ಜೊತೆ ಸಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮೆ ಈ ಆಚರಣೆ ತಾಲ್ಲೂಕಿನಲ್ಲಿ ಸಂಭ್ರಮದಿಂದ ನಡೆಯುತ್ತದೆ. ಮಾರಿಕಾಂಬಾ ಜಾತ್ರೆ ನಡೆಯುವ ವರ್ಷ ಹುಲಿವೇಷ, ಬೇಡರ ವೇಷ, ಹೋಳಿ ಹುಣ್ಣಿಮೆ ಆಚರಣೆ ಇರುವುದಿಲ್ಲ. ಹುಲಿ ವೇಷಧಾರಿ ವೇಷ ತೊಟ್ಟುಕೊಳ್ಳುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ನಿಂಬೆಹಣ್ಣು ಮಂತ್ರಿಸಿಕೊಂಡು ಬರಬೇಕು. ವೇಷ ಕಟ್ಟಿದ ನಂತರ ಮನೆಯ ಹಿರಿಯ ಆತನಿಗೆ ಮಾಲೆ ಹಾಕಬೇಕು, ಅಂದಾಗ ಮಾತ್ರ ಆತ ಕುಣಿಯಲು ಅನುಮತಿ ಪಡೆದಂತೆ.ಹಳ್ಳಿಗಳಲ್ಲಿ ಇಂದಿಗೂ ಹುಲಿಯನ್ನು ದೇವರೆಂದು ಪೂಜಿಸುತ್ತಾರೆ. ವರ್ಷಕೊಮ್ಮೆ ಹುಲಿ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಅದಕ್ಕೇ ಇರಬೇಕು ಹುಲಿ ವೇಷಧಾರಿಗೂ ಪವಿತ್ರ ಸ್ಥಾನವಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಇವೆಲ್ಲ ಆಚರಣೆಗಳು ಬದಲಾಗಿವೆ.ನಗರದ ಚೌಕಿಮಠ, ವೀರಭದ್ರಗಲ್ಲಿ, ಸಿಂಪಿಗಲ್ಲಿ, ದೇವಿಕೆರೆ ವೃತ್ತಗಳಲ್ಲಿ ರತಿ-ಮನ್ಮಥರ ವಿಗ್ರಹ ಸ್ಥಾಪನೆ ಮಾಡಲಾಗಿದೆ. ಮಂಗಳವಾರದಿಂದ ಮಾ.18ರ ತನಕ ನಗರದಲ್ಲಿ ಪ್ರತಿ ರಾತ್ರಿ ಬೇಡರ ವೇಷದ ಕುಣಿತ ನಡೆಯುತ್ತದೆ. ಮಾ.19ರಂದು ಹೋಳಿ ಹುಣ್ಣಿಮೆಯ ದಿನ ಜಾನಪದ ಕಲೆಗೆ ತೆರೆ ಬೀಳುತ್ತದೆ.                 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.