ಗುರುವಾರ , ಜೂನ್ 24, 2021
23 °C

ಹಾಳುಕೊಂಪೆಯಾದ ವಸತಿ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಗ್ರಾಮದಲ್ಲಿರುವ ಕೃಷಿ ಇಲಾಖೆಗೆ ಸೇರಿರುವ ವಸತಿ ಕಟ್ಟಡ ವಾಸ್ತವ್ಯ ನಿರ್ವಹಣೆ ಇಲ್ಲದೆ ಅನಾಥವಾಗಿದೆ. ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ ಕಟ್ಟಡದಲ್ಲಿ ಸಂಬಂಧಿಸಿದ ಅಧಿಕಾರಿಗಳು ವಾಸವಿರದ ಕಾರಣ ಕಟ್ಟಡ ಹಾಳು ಕೊಂಪೆಯಂತಾಗಿದೆ.



ಕೃಷಿ ಇಲಾಖೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಾಮ ಸಹಾಯಕರ (ಈಗ ಸಹಾಯಕ ಕೃಷಿ ಅಧಿಕಾರಿ) ಕಚೇರಿ ಹಾಗೂ ನಿವಾಸಕ್ಕಾಗಿ ಈ ರೀತಿಯ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿದೆ. ಗ್ರಾಮ ಸಹಾಯಕರು ತಮ್ಮ ಅಧಿಕಾರ ವ್ಯಾಪ್ತಿಯ ಗ್ರಾಮದಲ್ಲೇ ವಾಸವಿದ್ದು, ರೈತರಿಗೆ ಕೃಷಿಯ ಬಗ್ಗೆ ಮಾರ್ಗದರ್ಶನ ಹಾಗೂ ಬೆಳೆಗಳ ಬಗ್ಗೆ ಮಾಹಿತಿ ನೀಡಬೇಕೆಂಬುದು ಇಲಾಖೆಯ ಉದ್ದೇಶ.



ಸರ್ಕಾರದ ಸದುದ್ದೇಶ ಮಾತ್ರ ನಾಗರಗಾಳಿ ಕೃಷಿ ಇಲಾಖೆಯ ಕಟ್ಟಡದ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. `ಇಲಾಖೆಗೆ ಸಂಬಂಧಿಸಿದ ಯಾವ ಅಧಿಕಾರಿಯೂ ಇತ್ತ ಬರುವುದು ವಿರಳವಾದ ಕಾರಣ ಈ ಕಟ್ಟಡ ಅನಾಥವಾಗಿದೆ~ ಎಂದು ನಾಗರಗಾಳಿ ಗ್ರಾಮಸ್ಥರು ದೂರಿದ್ದಾರೆ.



`ತಾಲ್ಲೂಕಿನಾದ್ಯಂತ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು, ನಾಗರಗಾಳಿ ವಿಭಾಗದ್ಲ್ಲಲೂ ಗ್ರಾಮ ಸಹಾಯಕ ಹುದ್ದೆ ಖಾಲಿ ಇದೆ. ಈಗ ಲೋಂಡಾದಲ್ಲಿರುವ ಗ್ರಾಮ ಸಹಾಯಕರೇ ನಾಗರಗಾಳಿಯನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕಟ್ಟಡದಲ್ಲಿ ಯಾರೂ ವಾಸವಾಗಿಲ್ಲ~ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ನಾರಾಯಣ ಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.



`ನಾಗರಗಾಳಿಗೆ ಗ್ರಾಮ ಸಹಾಯಕರನ್ನು ನೇಮಕ ಮಾಡಿ ಆತ ಈ ಕಟ್ಟಡದಲ್ಲಿ ವಾಸವಾಗಿರುವಂತೆ ನೋಡಿಕೊಳ್ಳಲಿ ಅಥವಾ  ನಿರ್ವಹಣೆಯಿಲ್ಲದ ಕಾರಣ ಹಾಳು ಕೊಂಪೆಯಾಗಿರುವ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸಲಿ~  ಎಂದು ನಾಗರಗಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ವಾಯ್ ದೇಸಾಯಿ ಆಗ್ರಹಿಸಿದ್ದಾರೆ.



`ಕೃಷಿ ಇಲಾಖೆ ಈ ಕಟ್ಟಡವನ್ನು ಪಂಚಾಯಿತಿಗೆ ನೀಡಿದರೆ ಇದನ್ನು ಅಂಗನವಾಡಿ ಅಥವಾ ಗ್ರಂಥಾಲಯಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಿಂದ ಗ್ರಾಮಸ್ಥರಿಗೆ ಸಹಾಯವಾಗುತ್ತದೆ~ ಎಂದು ಪಿಡಿಒ ಬಾಲರಾಜ ಭಜಂತ್ರಿ ತಿಳಿಸಿದ್ದಾರೆ.  ಕಾರಣ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಯೋಚಿಸಿ ಕೂಡಲೇ ಕೃಷಿ ಇಲಾಖೆಯ  ಈ ಕಟ್ಟಡಕ್ಕೆ ಒಂದು ಕಾಯಕಲ್ಪ ನೀಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.