ಶುಕ್ರವಾರ, ಜೂನ್ 25, 2021
22 °C
ಲಸಿಕೆ ಆಮದು ಮಾಡಿಕೊಳ್ಳಲು ಸರ್ಕಾರಕ್ಕೆ ಆಸ್ಪತ್ರೆಗಳಿಂದ ಒತ್ತಾಯ

ಹಾವು ಕಡಿತಕ್ಕೆ ಔಷಧ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧದ ಕೊರತೆಯಿರುವುದರಿಂದ ತೀವ್ರ ತೊಂದರೆ­­­ಯಾಗುತ್ತಿದೆ. ಇದರಿಂದ, ಲಸಿಕೆಯನ್ನು ಆಮದು ಮಾಡಿ­ಕೊಳ್ಳು­ವಂತೆ ಕೆಲವು ಆಸ್ಪತ್ರೆಗಳು ಸರ್ಕಾರ­ವನ್ನು ಒತ್ತಾಯಿಸಿವೆ.ಬೇಸಿಗೆಯಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚಾಗುತ್ತವೆ. ಆದರೆ, ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಎದು­ರಾಗಿದೆ. ಪೀಣ್ಯ ಬಳಿಯ ಆಂದ್ರಹಳ್ಳಿ­ಯಲ್ಲಿ­­ರುವ ವಿದ್ಯಮಾನ್ಯ­ನಗರದ ಮರಿಯಂ ದಹಾ (48) ಅವರಿಗೆ ಮಂಗಳ­­ವಾರ ಉದ್ಯಾನ­ದಲ್ಲಿ ಮಂಡಲದ ಹಾವು ಕಚ್ಚಿದೆ. ಕೂಡಲೇ ಅವರನ್ನು ನಾಗರ­ಬಾವಿಯ ಯುನಿಟಿ ಲೈಫ್‌ಲೈನ್‌ ಆಸ್ಪತ್ರೆಗೆ ದಾಖ­ಲಿಸ­ಲಾಗಿದೆ. ಆದರೆ, ಆಸ್ಪತ್ರೆ­ಯಲ್ಲಿ ಹಾವು ಕಡಿತಕ್ಕೆ ಔಷಧ ಇಲ್ಲ­ದಿರು­ವುದರಿಂದ ಅವರನ್ನು ಪೆನೇ­ಶಿಯಾ ಆಸ್ಪತ್ರೆಗೆ ಕೊಂಡೊಯ್ಯ­ಲಾ­ಯಿತು. ಆದರೆ, ಅಲ್ಲಿಯೂ ಔಷಧ ಲಭ್ಯ­ವಿಲ್ಲ­­ದ್ದರಿಂದ ಅವರು ಮಂಗಳವಾರ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.ಈ ಆಸ್ಪತ್ರೆಗಳಿಗೆ ತಿಂಗಳಿಗೆ ಎರಡಾ­ದರೂ ಹಾವು ಕಡಿತದ ಪ್ರಕರಣಗಳು ಬರು­ತ್ತವೆ. ಆದರೆ, ಕಳೆದ ಆರು ತಿಂಗಳಿ­ನಿಂದ ಈ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧ ಲಭ್ಯವಿಲ್ಲ.ಹಾವು ಕಡಿತದ ಔಷಧದ ಕೊರತೆಯ ಕುರಿತು ಬಂದಿರುವ ದೂರುಗಳನ್ನು ಆಧರಿಸಿ, ‘ಪ್ರಜಾವಾಣಿ’ ವರದಿಗಾರರು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಔಷಧ ಮಳಿಗೆ ಹಾಗೂ ತುರ್ತು ಚಿಕಿತ್ಸಾ ವಿಭಾಗದಲ್ಲಿ ವಿಚಾರಿಸಿದಾಗ ಆಸ್ಪತ್ರೆಯಲ್ಲಿ ಹಾವು ಕಡಿತದ ಔಷಧ ಇಲ್ಲದಿರುವ ವಿಷಯ ತಿಳಿಯಿತು.‘ತುರ್ತು ಸಂದರ್ಭದಲ್ಲಿ ಸೇಂಟ್‌ ಜಾನ್ಸ್‌ ಆಸ್ಪತ್ರೆಯಿಂದ ಔಷಧಿಯನ್ನು ತರಿಸಿ­­ಕೊಳ್ಳುತ್ತೇವೆ’ ಎಂದು ವಿಕ್ಟೋ­ರಿಯಾ ಆಸ್ಪತ್ರೆಯ ಕರ್ತವ್ಯನಿರತ ವೈದ್ಯ­ರೊಬ್ಬರು ಹೇಳಿದರು. ಆದರೆ, ವಿಕ್ಟೋ­ರಿಯಾ ಆಸ್ಪತ್ರೆಯ ವೈದ್ಯಕೀಯ ಸೂಪ­ರಿಂಟೆ­ಂ­ಡೆಂಟ್‌ ಪಿ.ಕೆ.ದೇವ್‌ದಾಸ್‌, ‘ಆಸ್ಪತ್ರೆಯಲ್ಲಿ ಹಾವು ಕಡಿತಕ್ಕೆ ಔಷಧಿ ಲಭ್ಯವಿದೆ’ ಎಂದು ಸಮರ್ಥಿಸಿಕೊಂಡರು.ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಕೇಂದ್ರಗಳಿಗೆ ಔಷಧ ಪೂರೈಸುವ ಕರ್ನಾಟಕ ರಾಜ್ಯ ಔಷಧ ಸಂಗ್ರಹ ಮತ್ತು ಪೂರೈಕೆ ಸಂಸ್ಥೆಯ (ಕೆಎಸ್‌ಡಿಎಲ್‌ಡಬ್ಲ್ಯುಎಸ್‌) ಅಧಿ­ಕಾರಿಗಳು ಹಾವು ಕಡಿತದ ಔಷಧ ಇಲ್ಲದಿರುವುದನ್ನು ಒಪ್ಪಿಕೊಳ್ಳುತ್ತಾರೆ.‘ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧದ ಕೊರತೆಯಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಔಷಧ ಆಮದು ಮಾಡಿ­ಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡ­ಲಾಗಿದೆ. ಆದಷ್ಟು ಬೇಗ ಔಷಧ ಬರ­ಬಹುದೆಂಬ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ಕೆಎಸ್‌ಡಿಎಲ್‌ಡಬ್ಲ್ಯುಎಸ್‌ ಮುಖ್ಯ ಮೇಲ್ವಿಚಾರಕ ಡಾ.ಶ್ರೀಧರ್‌­ಮೂರ್ತಿ.ಹಾವಿನ ಕಡಿತದ ಔಷಧ ತಯಾರಿಕೆಗೆ ಹಾವುಗಳ ವಿಷವನ್ನೇ ಬಳಸುವುದರಿಂದ ಹಾವು­ಗಳ ಸಂಕುಲಕ್ಕೆ ಇದು ಮಾರಕ­ವಾ­ಗಿದೆ. ಹೀಗಾಗಿ ಈ ಔಷಧ ತಯಾರಿಕೆ­ಯನ್ನೇ ನಿಲ್ಲಿಸಬೇಕು ಎಂದು ಪ್ರಾಣಿ ಹಕ್ಕು­ಗಳ ರಕ್ಷಣಾ ಸಂಸ್ಥೆಯು ಸುಪ್ರೀಂ ಕೋರ್ಟ್‌­­ನಲ್ಲಿ ಅರ್ಜಿ ಸಲ್ಲಿಸಿದೆ.ಪುಣೆಯ ಸೆರಮ್‌ ಇನ್‌ಸ್ಟಿಟ್ಯೂಟ್‌, ಹೈದ­­ರಾ­­ಬಾದ್‌ನ ವಿನ್ಸ್‌ ಬಯೋಟೆಕ್‌, ಮುಂಬೈನ ಹಾಫ್‌ಕಿನ್ಸ್‌ ಇನ್‌ಸ್ಟಿಟ್ಯೂಟ್‌ ಕಂಪೆನಿ­ಗಳು ಈ ಔಷಧ ತಯಾರಿಕೆಯಲ್ಲಿ ತೊಡಗಿವೆ.‘ನಾವಿರುವ ಸ್ಥಳದಲ್ಲಿ ಹಾವುಗಳ ಸಂಖ್ಯೆ ಹೆಚ್ಚಾಗಿದೆ. ಹಾವು ಕಚ್ಚಿದಾಗ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ಸಾಧ್ಯವಿಲ್ಲ. ಹಾವು ಕಡಿತಕ್ಕೆ ಆದಷ್ಟು ಬೇಗ ಚಿಕಿತ್ಸೆ ದೊರೆ­­ಯಬೇಕು. ಹತ್ತಿರದ ಆಸ್ಪತ್ರೆಗಳಲ್ಲಿ ಹಾವಿನ ಕಡಿತಕ್ಕೆ ಔಷಧ ಲಭ್ಯವಿದೆಯೇ ಎಂಬ ಬಗ್ಗೆ ಇತ್ತೀಚೆಗೆ ಕೆಲ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ಔಷಧ ಲಭ್ಯ­ವಿದಿರುವುದು ಗೊತ್ತಾಯಿತು’ ಎಂದು ಉತ್ತರಹಳ್ಳಿ ನಿವಾಸಿ ನೀತು ಶರ್ಮಾ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.