ಭಾನುವಾರ, ಮಾರ್ಚ್ 7, 2021
20 °C

ಹಾಸನದಲ್ಲಿ ಕುಸಿದ ಗೆಲುವಿನ ಅಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನದಲ್ಲಿ ಕುಸಿದ ಗೆಲುವಿನ ಅಂತರ

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಈ ಬಾರಿಯ ಜಯ ಅಷ್ಟೊಂದು ಸಮಾಧಾನ ತರು­ವಂಥದ್ದಲ್ಲ. ಜೆಡಿಎಸ್‌ನ ಭದ್ರಕೋಟೆ­ಯಾಗಿರುವ ಹಾಸನದಲ್ಲಿ ಅವರ ಗೆಲುವಿನ ಅಂತರ ಗಮನಾರ್ಹವಾಗಿ ಕುಸಿದಿದೆ.ಹಾಗೆ ನೋಡಿದರೆ ಈ ಬಾರಿಯ ಲೋಕಸಭಾ ಚುನಾವಣೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳಿಗೆ ಹಲವು ಪಾಠಗಳನ್ನು ಕಲಿಸಿದೆ.

ಈ ಕ್ಷೇತ್ರದಿಂದ ದೇವೇಗೌಡರು ಆರು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಐದು ಬಾರಿ ಗೆದ್ದಿದ್ದಾರೆ. 1991ರಲ್ಲಿ ಇಲ್ಲಿಂದ ಅವರು ಮೊದಲ ಗೆಲುವು ದಾಖಲಿಸಿದ್ದರು. ಆಗ ಶ್ರೀಕಂಠಯ್ಯ ಅವರನ್ನು ಕೇವಲ 3,191 ಮತಗಳಿಂದ ಸೋಲಿಸಿದ್ದರು. ಆದರೆ, 1998ರಲ್ಲಿ ಗೆಲುವಿನ ಅಂತರವನ್ನು 31ಸಾವಿರಕ್ಕೆ ಏರಿಸಿದ್ದರು. 1999ರಲ್ಲಿ ಪುಟ್ಟಸ್ವಾಮಿ ಗೌಡರ ವಿರುದ್ಧ 1.41 ಲಕ್ಷ ಮತಗಳ ಅಂತರದಿಂದ ಸೋತರು.

ಆ ನಂತರದ ಎರಡು ಚುನಾವಣೆ­ಗಳಲ್ಲೂ ದೇವೇಗೌಡರು ಗೆದ್ದಿದ್ದು ಮಾತ್ರವಲ್ಲದೆ, ಪ್ರತಿ ಚುನಾವಣೆಯಲ್ಲಿ ಗೆಲು­ವಿನ ಅಂತರ ಹೆಚ್ಚಿಸುತ್ತಲೇ ಹೋಗಿದ್ದಾರೆ. 2009ರಲ್ಲಿ ಹನುಮೇ­ಗೌಡ (ಬಿಜೆಪಿ) ವಿರುದ್ಧ 2.91 ಲಕ್ಷ ಮತಗಳ ಅಂತರದಿಂದ ಗೆದ್ದು ಹೊಸ ದಾಖಲೆ ನಿರ್ಮಿಸಿದರು. ಈ ಕ್ಷೇತ್ರದ ಮೇಲೆ ಅವರು ಎಷ್ಟು ಹಿಡಿತ ಸಾಧಿಸಿ­ದ್ದಾರೆ ಎಂಬುದಕ್ಕೆ 2009ರ ಚುನಾವಣೆ ಸಾಕ್ಷಿಯಾಗಿತ್ತು.ಆದರೆ, ಈ ಬಾರಿ ಗೆಲುವಿನ ಅಂತರ ಒಂದು ಲಕ್ಷ ಮತಗಳಿಗೆ ಇಳಿದಿದೆ. ಇದು ಒಂದು ಆತಂಕದ ವಿಚಾರವಾದರೆ, ದೇವೇಗೌಡರು ಪಡೆದ ಒಟ್ಟಾರೆ ಮತಗಳ ಸಂಖ್ಯೆಯೂ ಜೆಡಿಎಸ್‌ನ ಚಿಂತೆಗೆ ಕಾರಣವಾಗಿದೆ. ದೇವೇಗೌಡರು 2009ರ ಚುನಾವಣೆಯಲ್ಲಿ 4,96,­426 ಮತ ಪಡೆದಿದ್ದರೆ ಈ ಬಾರಿ 5,09,841 ಮತ ಪಡೆದಿದ್ದಾರೆ. ಏರಿಕೆ ಆಗಿರುವುದು 13,415 ಮತಗಳು ಮಾತ್ರ. ಮಾಜಿ ಪ್ರಧಾನಿ ಎಂಬ ಕಾರಣ ಮತ್ತು ಕೊನೆಯ ಚುನಾವಣೆ ಎಂಬ ಇನ್ನೊಂದು ಕಾರಣಕ್ಕೆ ದೇವೇಗೌಡರು ಭಾರಿ ಗೆಲುವು ಸಾಧಿಸುತ್ತಾರೆ ಎಂಬ ಜೆಡಿ­­ಎಸ್‌ ನಾಯಕರ ನಿರೀಕ್ಷೆ ಹುಸಿಯಾಗಿದೆ.‘ಕೊನೆಯ ಚುನಾವಣೆ ಎಂಬ ಕಾರ­ಣಕ್ಕೆ ದೇವೇಗೌಡರು ಅನುಕಂಪದ ಮತ­ಗಳನ್ನು ಪಡೆದಿದ್ದಾರೆ. ಆದರೆ, ನಿಜವಾಗಿ ನಾನೇ ಗೆದ್ದಿದ್ದೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಎ. ಮಂಜು ಹೇಳಿದ್ದಾರೆ. ‘ಕಾಂಗ್ರೆಸ್‌ನ ಕೆಲವು ಮುಖಂಡರು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ದೇವೇಗೌಡರ ಸೋಲು ಅಸಾಧ್ಯವಾ­ಗಿರಲಿಲ್ಲ’ ಎಂದು ಈಗ ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ.ಜೆಡಿಎಸ್‌ಗೆ ಜಿಲ್ಲೆಯಲ್ಲಿ ಬಲಿಷ್ಠ­ವಾದ ಜಾಲವಿದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಲ್ಲಾ ಪಂಚಾಯಿತಿವರೆಗೆ, ಡೇರಿಯಿಂದ ಆರಂಭಿಸಿ ಬಹುತೇಕ ಎಲ್ಲ ಸ್ವಸಹಾಯ ಸಂಘಗಳವರೆಗೆ ಎಲ್ಲ ಹಂತದಲ್ಲೂ ಜೆಡಿಎಸ್‌ ಅಧಿಕಾರ ಹೊಂದಿದೆ. ಯಾವುದೇ ಪಕ್ಷ ಇಲ್ಲಿ ಗೆಲುವು ಸಾಧಿಸಬೇಕಾದರೆ ಮೊದಲು ಈ ಜಾಲವನ್ನು ಭೇದಿಸಬೇಕು. ಆದರೆ, ಕಾಂಗ್ರೆಸ್‌ಗೆ ಜಿಲ್ಲೆಯಲ್ಲಿ ಮತದಾರರು ಮತ್ತು ಮುಖಂಡರು ಮಾತ್ರ ಇದ್ದಾರೆ. ಅವರಿಬ್ಬರ ಮಧ್ಯದಲ್ಲಿ ಕೊಂಡಿಯಂತೆ ಇರಬೇಕಾದ ಕಾರ್ಯಕರ್ತರ ಕೊರತೆ ಇದೆ. ಸಾರ್ವಜನಿಕ ಸಮಾರಂಭಗಳಲ್ಲೇ ದೇವೇಗೌಡ ಮತ್ತು ರೇವಣ್ಣ ಅವರನ್ನು ಹಾಡಿ ಹೊಗಳುವ ಮೂಲಕ ಚುನಾ­ವಣೆಗೂ ಮೊದಲೇ ಕಾಂಗ್ರೆಸ್‌ ನಾಯ­ಕರು ಕಾರ್ಯಕರ್ತರ ಆತ್ಮ­ವಿಶ್ವಾಸ ಕುಗ್ಗಿಸುವ ಕೆಲಸವನ್ನು ಮಾಡಿದ್ದರು.ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್‌ನಲ್ಲಿ ಪ್ರತಿಯೊಬ್ಬರೂ ನಾಯಕರೇ ಆಗಿದ್ದಾರೆ. ಈ ಕಾರಣದಿಂದಾಗಿ ಹೈಕಮಾಂಡ್‌ ಕೊಟ್ಟ ‘ಸಂಪನ್ಮೂಲ’ವನ್ನು ಜನರ ತನಕ  ತಲುಪಿಸಲು ಸಾಧ್ಯವಾಗಲಿಲ್ಲ. ಮೂರು–ನಾಲ್ಕು ಹೋಬಳಿಗಳಲ್ಲಿ ಕಾಂಗ್ರೆಸ್‌ ಮುಖಂಡರೇ ಒಳ ಆಟ ಆಡಿದ್ದಾರೆ ಎಂಬುದು ಈಗ ಪಕ್ಷದ ನಾಯಕರಿಗೆ ಸ್ಪಷ್ಟವಾಗಿದೆ.ಆದರೆ, ಬಹುತೇಕ ನಾಯಕರು ದ್ವೇಷ, ಸ್ವಾರ್ಥ, ಅಸೂಯೆಗಳನ್ನು ಬಿಟ್ಟು ಅಭ್ಯರ್ಥಿ ಪರವಾಗಿ ದುಡಿದಿದ್ದಾರೆ ಎಂಬುದೂ ನಿಜ. ಇದರಿಂದಾಗಿ ಜೆಡಿಎಸ್‌ ಪಾಳಯದಲ್ಲಿ ಸ್ವಲ್ಪ ನಡುಕ ಹುಟ್ಟಿತ್ತು. ಗೆಲುವು ಸಾಧ್ಯವಾಗದಿದ್ದರೂ ದೇವೇಗೌಡರ ಗೆಲುವಿನ ಅಂತರವನ್ನು ಕುಗ್ಗಿಸಲು ಕಾಂಗ್ರೆಸ್‌ಗೆ ಈ ಬಾರಿ ಸಾಧ್ಯವಾಗಿದೆ.ಕಾಂಗ್ರೆಸ್‌ ಹೊಡೆತ ಈ ಬಾರಿ ಜೆಡಿಎಸ್‌ ಕೋಟೆಯಲ್ಲಿ ಸಣ್ಣ ಬಿರುಕು ಮೂಡಿ­ಸಿದ್ದು ನಿಜ. ಸದ್ಯದಲ್ಲೇ ಬರಲಿರುವ ಜಿಲ್ಲಾ ಪಂಚಾಯಿತಿ ಚುನಾ­ವಣೆಯಲ್ಲಿ ಈ ಕೋಟೆಯನ್ನು ಇನ್ನಷ್ಟು ದುರ್ಬಲಗೊಳಿಸುತ್ತೇವೆ ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿ­ದ್ದಾರೆ. ಆದರೆ, ಅದು ಅಷ್ಟು ಸುಲಭ­ವಲ್ಲ ಎಂಬುದೂ ಕಾಂಗ್ರೆಸ್‌ಗೆ ಗೊತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.