ಗುರುವಾರ , ಮೇ 13, 2021
25 °C
ಸಮಾಜ ಕಲ್ಯಾಣ ಸಚಿವ ಆಂಜನೇಯ ಇಂಗಿತ

ಹಾಸ್ಟೆಲ್ ನಿರ್ವಹಣೆಗೆ ಪ್ರತ್ಯೇಕ ವಿಭಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗವೊಂದನ್ನು ಅಸ್ತಿತ್ವಕ್ಕೆ ತರುವ ಉದ್ದೇಶವಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.ಶನಿವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಇಲಾಖೆಯ ವ್ಯಾಪ್ತಿಯಲ್ಲಿ 338 ವಸತಿ ಶಾಲೆಗಳು ಮತ್ತು 1,966 ವಿದ್ಯಾರ್ಥಿ ನಿಲಯಗಳು ಇವೆ. ಅವುಗಳ ಕಾರ್ಯನಿರ್ವಹಣೆಗೆ ವ್ಯವಸ್ಥಿತ ಚೌಕಟ್ಟು ನೀಡುವ ಉದ್ದೇಶದಿಂದ ಇಲಾಖೆಯಲ್ಲಿ ಹೊಸ ವಿಭಾಗವನ್ನು ಸ್ಥಾಪಿಸಲಾಗುವುದು. ಅವುಗಳ ಸಮಸ್ಯೆಗೆ ತಕ್ಷಣದಲ್ಲಿ ಪರಿಹಾರ ಒದಗಿಸಲು ಈ ವಿಭಾಗ ಕೆಲಸ ಮಾಡಲಿದೆ ಎಂದರು.ಇಲಾಖೆಯ ವ್ಯಾಪ್ತಿಯಲ್ಲಿರುವ 2,304 ಸಂಸ್ಥೆಗಳಲ್ಲಿ 2.30 ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಅವಕ0ಕಾಶವಿದೆ. ಸದ್ಯ ಈ ಸಂಸ್ಥೆಗಳಲ್ಲಿ 1.93 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇನ್ನೂ 37 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬಹುದು. ಆದರೆ, ಈ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳೂ ಇವೆ. ಅವುಗಳ ಪರಿಹಾರಕ್ಕಾಗಿ ಪ್ರತ್ಯೇಕ ವಿಭಾಗವೊಂದನ್ನು ಅಸ್ತಿತ್ವಕ್ಕೆ ತರುವ ಅಗತ್ಯವಿದೆ ಎಂದರು.

ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿನ ಸಮಸ್ಯೆಗೆ ತುರ್ತು ಪರಿಹಾರ ಒದಗಿಸುವುದಕ್ಕಾಗಿ ಸಹಾಯವಾಣಿ ಸ್ಥಾಪಿಸಲಾಗುವುದು. ಶಾಲೆ ಅಥವಾ ವಿದ್ಯಾರ್ಥಿ ನಿಲಯದಲ್ಲಿ ಸಮಸ್ಯೆಗಳಿದ್ದರೆ ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆಮಾಡಿ ದೂರು ನೀಡಬಹುದು. ತಕ್ಷಣವೇ ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿ, ಪರಿಹಾರ ಒದಗಿಸಲಾಗುವುದು ಎಂದರು.ಸಮೀಕ್ಷೆಗೆ ಚಿಂತನೆ: ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳನ್ನು ಗುರುತಿಸಲು ಕಂದಾಯ ದಾಖಲೆಗಳ ಆಧಾರದಲ್ಲಿ ಸಮೀಕ್ಷೆ ಕೈಗೊಳ್ಳುವ ಚಿಂತನೆ ನಡೆದಿದೆ. ಕಂದಾಯ ಇಲಾಖೆಯ ಪಹಣಿ ಆಧಾರದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗುರುತಿಸಲಾಗುವುದು. ನಂತರ ಅವರಿಗೆ ಹಂತಹಂತವಾಗಿ ಕೊಳವೆ ಬಾವಿ ಮಂಜೂರು ಮಾಡಲಾಗುವುದು ಎಂದು ಹೇಳಿದರು.2002ರಿಂದ 2012ರವರೆಗೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ನಿಗಮಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಸಣ್ಣ ಹಿಡುವಳಿದಾರರ ಜಮೀನಿನಲ್ಲಿ ಕೊರೆದಿರುವ 31 ಸಾವಿರ ಕೊಳವೆ ಬಾವಿಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಈ ಎಲ್ಲಾ ಕೊಳವೆ ಬಾವಿಗಳಿಗೂ ಒಂದೇ ಬಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆ ಯೋಚಿಸಿದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.