ಭಾನುವಾರ, ಜನವರಿ 19, 2020
27 °C
ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಉಪ ಸಮಿತಿಗಳ ನೇಮಕಕ್ಕೆ ಆಕ್ಷೇಪ

ಹಿರಿತನ ಕಡೆಗಣನೆ: ರಾಮಲಿಂಗಾರೆಡ್ಡಿ ಅಸಮಾಧಾನ

ಪ್ರಜಾವಾಣಿ ವಾರ್ತೆ/ ವಿ.ಎಸ್‌.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಡಳಿತ ಸುಧಾರಣೆ ಕುರಿತು ಪರಿಶೀಲನೆ ನಡೆಸಿ, ಶಿಫಾರಸುಗಳನ್ನು ನೀಡಲು ನೇಮಕಗೊಂಡಿರುವ ಕಾನೂನು ಸಚಿವ ಟಿ.ಬಿ.ಜಯ­ಚಂದ್ರ ನೇತೃತ್ವದ ಸಮಿತಿಯು ಉಪ ಸಮಿತಿಗಳ ರಚನೆಯಲ್ಲಿ ಹಿರಿತನಕ್ಕೆ ಮಾನ್ಯತೆ ನೀಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.ವಸತಿ, ಇಂಧನ, ಲೋಕೋಪಯೋಗಿ, ಸಾರಿಗೆ ಮತ್ತು ಪ್ರವಾಸೋದ್ಯಮ ಇಲಾಖೆಗಳನ್ನು ಒಳ­ಗೊಂಡ ಮೂಲಭೂತ ಸೌಕರ್ಯ ಅಭಿವೃದ್ಧಿ ಉಪ ಸಮಿತಿಗೆ ಡಾ.ಎಚ್‌.ಸಿ.ಮಹದೇವಪ್ಪ ಅವ­ರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನಿರ್ಧಾರ­ಕ್ಕೆ ಪರೋಕ್ಷವಾಗಿ ಆಕ್ಷೇಪ ಎತ್ತಿರುವ ಸಾರಿಗೆ ಸಚಿವರು, ‘ನಾನು ಹಿರಿಯ ಸಚಿವನೋ? ಅಥವಾ ಕಿರಿಯ ಸಚಿವನೋ? ಎಂಬುದನ್ನು ತಿಳಿಸಿ’ ಎಂದು ಜಯಚಂದ್ರ ಅವರಿಗೆ ಪತ್ರ ಬರೆದು ಪ್ರಶ್ನಿಸಿದ್ದಾರೆ.ಪತ್ರ ತಂದ ಇಕ್ಕಟ್ಟು: ನ.19ರಂದು ರಾಮಲಿಂಗಾ ರೆಡ್ಡಿ ಅವರಿಗೆ ಪತ್ರ ಬರೆದ ಕಾನೂನು ಸಚಿವರು, ಆಡಳಿತ ಸುಧಾರಣೆಗೆ ತಮ್ಮ ನೇತೃತ್ವದಲ್ಲಿ ಮುಖ್ಯಮಂತ್ರಿಯವರು ಸಮಿತಿ ರಚಿಸಿರುವ ವಿಷಯವನ್ನು ತಿಳಿಸಿ­ದ್ದರು. ಈ ಸಮಿತಿ­ಯು ನ.11ರಂದು ಸಭೆ ನಡೆಸಿ ಆರು ಉಪ ಸಮಿತಿ­ಗಳನ್ನು ರಚಿಸಿರುವುದನ್ನೂ ಗಮನಕ್ಕೆ ತಂದಿದ್ದರು.‘ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಲೋಕೋಪಯೋಗಿ ಸಚಿವರು ಸದ್ಯದಲ್ಲೇ ಸಭೆ ಕರೆಯಲಿದ್ದಾರೆ. ಇಲಾಖೆಯ ಕಾರ್ಯದರ್ಶಿಯೊಂದಿಗೆ ಸಭೆಗೆ ಹಾಜರಾಗಿ ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿ ಸಹಕರಿಸಬೇಕು’ ಎಂದು ಜಯಚಂದ್ರ ಅವರು ಪತ್ರದಲ್ಲಿ ಕೋರಿದ್ದರು.ಪತ್ರದ ಮೂಲಕವೇ ಅಸಮಾಧಾನ: ಕಾನೂನು ಸಚಿವರು ನ.11ರಂದು ಬರೆದ ಪತ್ರಕ್ಕೆ ಸಾರಿಗೆ ಸಚಿವರು ನ.30ರಂದು ಪತ್ರದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ‘ಆರು ಹಿರಿಯ ಸಚಿವರ ಅಧ್ಯಕ್ಷತೆಯಲ್ಲಿ ಉಪ ಸಮಿತಿಗಳನ್ನು ರಚಿಸಲಾಗಿದೆ’ ಎಂದು ಜಯಚಂದ್ರ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ‘ಹಿರಿತನ’ದ ವಿಷಯವನ್ನೇ ಮುಂದಿಟ್ಟುಕೊಂಡು ರಾಮಲಿಂಗಾ ರೆಡ್ಡಿ ಅವರು ಅಸಮಾಧಾನ ಹೊರಹಾಕಿದ್ದಾರೆ.‘ನಾನು 1989ರಿಂದ ಆರು ಬಾರಿ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದು, ನಾಲ್ಕು ಬಾರಿ ವಿವಿಧ ಇಲಾಖೆಗಳ ಸಚಿವ ಸ್ಥಾನದ ಹುದ್ದೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದ್ದರಿಂದ ನಾನು ಹಿರಿಯ ಸಚಿವನೋ ಅಥವಾ ಕಿರಿಯ ಸಚಿವನೋ ಎಂಬುದನ್ನು ತಿಳಿಸಿ’ ಎಂದು ರೆಡ್ಡಿ ಅವರು ಜಯಚಂದ್ರ ಅವರಿಗೆ ಬರೆದ ಪತ್ರದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.ನಡೆಯದ ಸಭೆ: ರಾಮಲಿಂಗಾ ರೆಡ್ಡಿ ಅವರು ಬರೆದಿರುವ ಪತ್ರ ಜಯಚಂದ್ರ ನೇತೃತ್ವದ ಸಮಿತಿಯನ್ನು ತುಸು ಇಕ್ಕಟ್ಟಿಗೆ ಸಿಲುಕಿಸಿದೆ. ತಿಂಗಳ ಆರಂಭದಲ್ಲೇ ಸಭೆ ನಡೆಸಿ, ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಮಿತಿ ಯೋಚಿಸಿತ್ತು. ಆದರೆ, ಈವರೆಗೂ ಸಮಿತಿಯ ಸಭೆ ನಡೆದಿಲ್ಲ. ರೆಡ್ಡಿ ಅವರ ಪತ್ರವೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.ಸರ್ಕಾರದ ಕಾರ್ಯಕ್ರಮಗಳ ಜಾರಿ ಹಾಗೂ ವಿವಿಧ ಇಲಾಖೆಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಸುಧಾರಣೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ, ಶಿಫಾರಸುಗಳನ್ನು ಸಲ್ಲಿಸುವುದಕ್ಕಾಗಿ ಜಯಚಂದ್ರ ನೇತೃತ್ವದಲ್ಲಿ ಸಮಿತಿ ರಚಿಸಿ ಮುಖ್ಯಮಂತ್ರಿಯವರು ಆದೇಶ ಹೊರಡಿಸಿದ್ದರು.ಶಾಸಕರಾದ ಡಾ.ಕೆ.ಸುಧಾಕರ್‌, ಪ್ರಮೋದ್‌ ಮಧ್ವರಾಜ್, ಪ್ರಿಯಾಂಕ ಎಂ. ಖರ್ಗೆ, ಕೆ.ಬಿ.ಪ್ರಸನ್ನಕುಮಾರ್, ಎಂ.ಪಿ.ರವೀಂದ್ರ, ಭೂಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ವಿ.ಪೊನ್ನುರಾಜ್‌ ಮತ್ತು ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರ್‌.ಮನೋಜ್‌ ಅವರನ್ನು ಈ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ನವೆಂಬರ್‌ 11ರಂದು ಮೊದಲ ಸಭೆ ನಡೆಸಿದ್ದ ಈ ಸಮಿತಿ 44 ಇಲಾಖೆಗಳನ್ನು ಅವುಗಳ ಸ್ವರೂಪ ಮತ್ತು ಕಾರ್ಯನಿರ್ವಹಣೆಯ ಆಧಾರದಲ್ಲಿ ಆರು ಗುಂಪುಗಳನ್ನಾಗಿ ವಿಂಗಡಣೆ ಮಾಡಿತ್ತು. ಈ ಗುಂಪುಗಳಿಗೆ ಸಂಬಂಧಿಸಿದಂತೆ ಸಮಿತಿಗೆ ಸಲಹೆ ನೀಡಲು ಆರು ಉಪ ಸಮಿತಿಗಳನ್ನು ರಚಿಸಲಾಗಿತ್ತು.ಒಂದು ಉಪ ಸಮಿತಿಗೆ ಜಯಚಂದ್ರ ಅವರೇ ಅಧ್ಯಕ್ಷರು. ಉಳಿದಂತೆ ಗೃಹ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಎಸ್‌.ಆರ್‌.ಪಾಟೀಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಎಚ್‌.ಕೆ.ಪಾಟೀಲ ಅವರನ್ನು ಒಂದೊಂದು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಪ್ರತಿಕ್ರಿಯಿಸಿ (+)