ಭಾನುವಾರ, ಮೇ 22, 2022
21 °C

ಹೀರೊಯಿನ್‌ಗಳ ಚುಡಾಯಿಸಿದ ಹೀರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀರೊಯಿನ್‌ಗಳ ಚುಡಾಯಿಸಿದ ಹೀರೊ

ಬಾಲಿವುಡ್ ಹೀರೊಯಿನ್‌ಗಳನ್ನು  ಅಷ್ಟು ಸಲುಭದಲ್ಲಿ ಕೆಣಕುವುದು ಸಾಧ್ಯವೇ? ಅವರ ಬಳಿ ತೆರಳಲು ಅಂತಹ ‘ಹೀರೊ’ನೇ ಬರಬೇಕು ತಾನೇ? ಅಷ್ಟಕ್ಕೂ ಒಬ್ಬ ನಟಿಯನ್ನ ಕೈವಶ ಮಾಡಿಕೊಳ್ಳಲಿಕ್ಕೆ ಅದೆಷ್ಟು ವರ್ಷ ಆಕೆಯ ಸುತ್ತ ಸುತ್ತಬೇಕು ಎಂಬುದರ ಕಷ್ಟವನ್ನು ಬಲ್ಲವರಷ್ಟೇ ಬಲ್ಲರು. ಆದರೆ, ಈ ‘ಹೀರೊ’ ಇದ್ದಾನಲ್ಲ, ಆತ ಯಾವುದೇ ಸದ್ದು ಗದ್ದಲ ಇಲ್ಲದೆ, ಗಾಸಿಪ್‌ಗೆ ಅವಕಾಶ ಕೊಡದೆ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಅವರಂತಹ ಬ್ಯೂಟಿ ಕ್ವೀನ್‌ಗಳನ್ನೇ ದಂಗಾಗಿಸಿಬಿಟ್ಟಿದ್ದಾನೆ. ಇವನಿಗೆ ಹೇಳಬೇಡವೇ ಶಹಬ್ಬಾಸ್?ಯಾರೀ ಹೀರೊ ಎಂಬ ಕುತೂಹಲವೇ? ಆತ ಬೇರಾರೂ ಅಲ್ಲ, ಆದಾಯ ತೆರಿಗೆ ಅಧಿಕಾರಿಗಳ ಕೈಯಲ್ಲಿ ಇರುವ ಹಳದಿ ಗಾತ್ರದ ಸಣ್ಣ ಸ್ಯೂಟ್‌ಕೇಸ್!  ಇದೊಂದು ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ. ಕಂಪ್ಯೂಟರ್‌ಗಳಿಂದ ಕ್ಷಣ ಮಾತ್ರದಲ್ಲಿ ಬೃಹತ್ ಗಾತ್ರದ ಮಾಹಿತಿಗಳನ್ನು ಪ್ರತಿ ಮಾಡಬಲ್ಲ ತಂತ್ರಜ್ಞ.ಆದಾಯ ತೆರಿಗೆ ಇಲಾಖೆ ಈಚೆಗೆ ಖರೀದಿಸಿದ ಮಹತ್ವದ ಸಾಧನ ಇದು. ಅದಕ್ಕೆ ಪ್ರೀತಿಯಿಂದ ಅಧಿಕಾರಿಗಳು ಇಟ್ಟಿರುವ ಹೆಸರು ‘ಹೀರೊ’.ಕಂಪ್ಯೂಟರ್‌ಗಳಲ್ಲಿ ಇರುವ ದಾಖಲೆಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ಮುದ್ರಿಸುವ ಕೆಲಸವನ್ನು ಇದು ಮಾಡುತ್ತದೆ. ಈಚೆಗೆ ಅಧಿಕಾರಿಗಳು ಮುಂಬೈನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರ ಮನೆಗಳ ಮೇಲೆ ದಾಳಿ ನಡೆಸಿದಾಗ ಜತೆಗೆ ‘ಹೀರೊ’ನನ್ನೂ ಕರೆದೊಯ್ದಿದ್ದರು. ಅಲ್ಲಿ ಅವರಿಗೆ ಮಹತ್ವದ ದಾಖಲೆಗಳು ಈ ‘ಹೀರೊನಿಂದಾಗಿ ಪತ್ತೆಯಾದವು. ‘ಆದಾಯ ತೆರಿಗೆ ಇಲಾಖೆಯ ನಿರೀಕ್ಷೆಗೆ ತಕ್ಕಂತೆ ಈ ಪ್ರಯೋಗಾಲಯ ಕೆಲಸ ಮಾಡುತ್ತಿದೆ. ಅಧಿಕ ಮೌಲ್ಯದ ಶೋಧನಾ ಕಾರ್ಯಗಳಲ್ಲೆಲ್ಲ ಇಲಾಖೆ ಇದನ್ನು ಹೆಚ್ಚಾಗಿ ಬಳಸುತ್ತಿದೆ’ ಎಂದು ಇಲಾಖೆಯ ಮೂಲಗಳು ತಿಳಿಸುತ್ತವೆ.ಫೊರೆನ್ಸಿಕ್ ರಿಕವರಿ ಆಫ್ ಎವಿಡೆನ್ಸ್ ಡಿವೈಸ್ ಡಿಮಿನುಟಿವ್ ಇಂಟರೊಗೇಷನ್ ಯೂನಿಟ್ (FREDDIE) ಎಂಬುದು ಈ ಪುಟ್ಟ ಸೂಟ್‌ಕೇಸ್ ಪ್ರಯೋಗಾಲಯದ ಹೆಸರು. ತೆರಿಗೆ ವಂಚಕರು ಹತ್ತಾರು ವಿಧದಲ್ಲಿ ತೆರಿಗೆ ವಂಚನೆಯ ದಾರಿ ಕಂಡುಕೊಂಡಿದ್ದಾರೆ.ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುವ ಸೂಚನೆ ಸಿಕ್ಕಿದ ತಕ್ಷಣ ಎಲ್ಲಾ ಕಡತಗಳನ್ನೂ ಕಂಪ್ಯೂಟರ್‌ನಿಂದ ತೆಗೆದು ಹಾಕುವ ‘ಲಾಜಿಕ್ ಬಾಂಬ್’ನಂತಹ ಅತ್ಯಾಧುನಿಕ ಸಾಫ್ಟ್‌ವೇರ್ ತಂತ್ರಜ್ಞಾನ ಬಳಸಿಕೊಂಡು ಅಧಿಕಾರಿಗಳಿಗೆ ವಂಚಿಸುವುದನ್ನು ರೂಢಿಸಿಕೊಂಡಿದ್ದಾರೆ. ಅಂತಹ ವಂಚಕರಿಗೇ ಬ್ರಹ್ಮಾಸ್ತ್ರ ರೂಪದಲ್ಲಿ ಈ ‘ಹೀರೊ’ ಎದುರಾಗಿದೆ. ಇದೂ ಒಂದು ಸುಧಾರಿತ ಸಾಫ್ಟ್‌ವೇರ್ ಆಧಾರಿತ ಪ್ರಯೋಗಾಲಯ. ಆದಾಯ ತೆರಿಗೆ ಅಧಿಕಾರಿಗಳು ಕೇವಲ ‘ಹೀರೊ’ನನ್ನು ಮಾತ್ರ ಕೊಂಡೊಯ್ಯುವುದಿಲ್ಲ. ಜತೆಗೆ ಹಾರ್ಡ್ ಡ್ರೈವ್‌ಗಳ ಇಮೇಜಿಂಗ್ ಮಾಡಲು ಮತ್ತು ಕ್ಲೋನಿಂಗ್ ಮಾಡಲು ಪ್ರಿ-ವೈಪ್ಡ್ ಡಿಸ್ಕ್‌ಗಳನ್ನು, ಕಂಪ್ಯೂಟರ್ ಹಾರ್ಡ್ ಡಿಸ್ಕ್‌ಗಳನ್ನು ನೋಡುವುದಕ್ಕೆ ಅನುಕೂಲವಾಗುವ ಸಂಚಾರಿ ಲ್ಯಾಬ್‌ಗಳು, ವಿಶೇಷವಾಗಿ ಕೋಟಿಂಗ್ ಮಾಡಲಾದ ಬ್ಯಾಗ್‌ಗಳು, ಹಗ್ಗಗಳು ಮತ್ತು ಲೇಬಲ್‌ಗಳನ್ನೂ ಕೊಂಡೊಯ್ಯುತ್ತಾರೆ. ಮಹತ್ವದ ಅಂಶಗಳು ಗೊತ್ತಾದ ತಕ್ಷಣ ತಮ್ಮ ದೊಡ್ಡ ಪ್ರಯೋಗಾ ಲಯಗಳಿಗೆ ಕೊಂಡೊಯ್ದು ಮಾಹಿತಿ ಪಡೆಯುವ ಕೆಲಸ ಮಾಡುತ್ತಾರೆ. ಪ್ರಿಯಾಂಕಾ ಚೋಪ್ರಾ ಮನೆಯಲ್ಲಿ ಲೆಕ್ಕಕ್ಕೆ ಸಿಗದ ್ಙ 6 ಕೋಟಿ  ಹುಡುಕಿ ಕೊಟ್ಟದ್ದು ಈ ‘ಹೀರೊ’ನೇ ಇರಬೇಕು. l

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.