ಭಾನುವಾರ, ಜನವರಿ 19, 2020
22 °C

ಹುಬ್ಬಳ್ಳಿ: ಕರ್ನಾಟಕ ಉತ್ತರ ಪ್ರಾಂತ ಹಿಂದೂ ಶಕ್ತಿ ಸಂಗಮ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ತಾರಿಹಾಳದ ಬೈಪಾಸ್ ಹತ್ತಿರ 140 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ವಿಜಯನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕರ್ನಾಟಕ ಉತ್ತರ ಪ್ರಾಂತದ ಬೃಹತ್ ಸಮಾವೇಶ `ಹಿಂದೂ ಶಕ್ತಿ ಸಂಗಮ~ ಶುಕ್ರವಾರದಿಂದ ಆರಂಭವಾಗಲಿದೆ.ಹಾವೇರಿಯಿಂದ ಬೀದರ್, ಬೆಳಗಾವಿವರೆಗಿನ 13 ಜಿಲ್ಲೆಗಳ 25,000ಕ್ಕೂ ಅಧಿಕ ಸ್ವಯಂಸೇವಕರು ಮೂರು ದಿನಗಳ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಅಭೂತಪೂರ್ವ ಭದ್ರತಾ ವ್ಯವಸ್ಥೆಯನ್ನೂ ಮಾಡಲಾಗಿದೆ. 4,500 ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

 

ನಗರದ ಬಹುತೇಕ ಎಲ್ಲ ಬೀದಿಗಳಲ್ಲಿ ಹಾರಾಡುತ್ತಿರುವ ಭಗವಾಧ್ವಜಗಳು ಇಡೀ ವಾಣಿಜ್ಯನಗರಿಗೆ ಕೇಸರಿ ಬಣ್ಣವನ್ನು ಬಳಿದಿವೆ. ಪ್ರಮುಖ ರಸ್ತೆಗಳಲ್ಲಿ ದೊಡ್ಡ, ದೊಡ್ಡ ಸ್ವಾಗತ ಕಮಾನುಗಳು ಎದ್ದಿವೆ.ಉತ್ತರ ಕರ್ನಾಟಕದಲ್ಲಿ ಮೊದಲ ಸಲ ಇಂತಹ ಬೃಹತ್ ಸಮ್ಮೇಳನ ನಡೆಯುತ್ತಿದ್ದು, ಶಿಬಿರದಲ್ಲೇ ಸ್ವಯಂಸೇವಕರು ವಾಸ್ತವ್ಯ ಹೂಡಲಿದ್ದು ಸುಮಾರು 2,000 ಡೇರೆಗಳನ್ನು ಹಾಕಲಾಗಿದೆ. ಬೌದ್ಧಿಕ ಮಂಟಪ, ಪಾಕಶಾಲೆ, ಸ್ನಾನಘಟ್ಟ, ಕೃತಕ ಕೆರೆ, ವಿಶಾಲವಾದ ರಸ್ತೆ, ವಿದ್ಯುತ್ ದೀಪ ಸೇರಿ ಮೂರು ದಿನಗಳಿಗೆ ಬೇಕಾದ ಎಲ್ಲ ಸೌಲಭ್ಯವನ್ನು ಶಿಬಿರದಲ್ಲೇ ಕಲ್ಪಿಸಲಾಗಿದೆ.ಶಿಬಿರದ ಮಧ್ಯದಲ್ಲಿ ಕೇಂದ್ರ ವಲಯವಾದ `ವಿದ್ಯಾರಣ್ಯನಗರ~ವನ್ನು ನಿರ್ಮಿಸಲಾಗಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಎಲ್ಲ ಆರ್‌ಎಸ್‌ಎಸ್ ಪ್ರಮುಖರು ಇಲ್ಲಿಯೇ ತಂಗಲಿದ್ದಾರೆ. 1.25 ಲಕ್ಷ ಶೇಂಗಾ ಹೋಳಿಗೆ, 2.5 ಲಕ್ಷ ಜೋಳದ ರೊಟ್ಟಿಗಳನ್ನು ಕಾರ್ಯಕರ್ತರು ಮನೆ-ಮನೆಗಳಿಂದ ಸಂಗ್ರಹಿಸಿ ತಂದಿದ್ದಾರೆ.ಪ್ರತಿದಿನ ಎರಡು ಬೌದ್ಧಿಕ ಬೈಠಕ್‌ಗಳು ಮತ್ತು ಶಾರೀರಿಕ ವ್ಯಾಯಾಮ ಶಿಬಿರದ ದಿನಚರಿಯಲ್ಲಿ ಸೇರಿವೆ.

ಶನಿವಾರ 28ರಂದು ಪಥ ಸಂಚಲನ ನಡೆಯಲಿದ್ದು, 25,000ಕ್ಕೂ ಅಧಿಕ ಸ್ವಯಂಸೇವಕರು ನಗರದ ಮೂರು ಕಡೆಗಳಿಂದ ಮೆರವಣಿಗೆಯಲ್ಲಿ ಕಿತ್ತೂರು ಚನ್ನಮ್ಮ ಸರ್ಕಲ್ ಮೂಲಕ ನೆಹರು ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. `ಯುಗದೃಷ್ಟಿ~ ಪ್ರದರ್ಶಿನಿಯನ್ನೂ ಶಿಬಿರ ಸ್ಥಳದಲ್ಲಿ ಆರಂಭಿಸಲಾಗಿದ್ದು, ಬೆಂಗಳೂರಿನ `ಧಾತು~ ತಂಡ ಪ್ರತಿದಿನ `ವಿಜಯನಗರ ವೈಭವ~ ಬೊಂಬೆಯಾಟವನ್ನು ಪ್ರದರ್ಶನ ಮಾಡಲಿದೆ. ಆರ್‌ಎಸ್‌ಎಸ್ ಬೆಳವಣಿಗೆ ಕುರಿತ ಸಾಕ್ಷ್ಯಚಿತ್ರವನ್ನೂ ತೋರಿಸಲಾಗುತ್ತದೆ.ರಾಜ್ಯದ ಬಿಜೆಪಿ ಸಚಿವರು, ಸಂಸದರು ಮತ್ತು ಶಾಸಕರು ಶಿಬಿರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸಚಿವ ಜಗದೀಶ ಶೆಟ್ಟರ ಮತ್ತು ಸಂಸದ ಪ್ರಹ್ಲಾದ ಜೋಶಿ ಸ್ವಯಂಸೇವಕರಾಗಿ ಮೂರೂ ದಿನ ಶಿಬಿರದಲ್ಲೇ ತಂಗಲಿದ್ದಾರೆ. ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಪಕ್ಷದ ಹಿರಿಯ ಮುಖಂಡರೂ ಶಿಬಿರಕ್ಕೆ ಭೇಟಿ ನೀಡಲಿದ್ದಾರೆ.ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸೇರಿದಂತೆ ಸುಮಾರು 200 ಸಾಧು-ಸಂತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದೂಗಳಲ್ಲಿ ಆತ್ಮವಿಶ್ವಾಸವನ್ನು ತುಂಬುವುದು ಮತ್ತು ದೇಶ ಜಾಗೃತಿಯನ್ನು ಮೂಡಿಸುವುದು ಸಮಾವೇಶದ ಉದ್ದೇಶ ಎಂದು ಸಂಘ ಪರಿವಾರದ ಮುಖಂಡರು ಹೇಳುತ್ತಿದ್ದರೂ, ಉನ್ನತ ಮಟ್ಟದ ಬೌದ್ಧಿಕ ಬೈಠಕ್‌ನಲ್ಲಿ ದೇಶ ಮತ್ತು ರಾಜ್ಯದ ರಾಜಕೀಯ ಸನ್ನಿವೇಶವೂ ಚರ್ಚೆಗೆ ಒಳಗಾಗಲಿದೆ ಎನ್ನಲಾಗಿದೆ. ಭ್ರಷ್ಟಾಚಾರ ಹಾಗೂ ಬಿಜೆಪಿ ವರ್ಚಸ್ಸನ್ನು ಒರೆಗೆ ಹಚ್ಚುವ ಯತ್ನಗಳು ನಡೆಯಲಿವೆ.ಭ್ರಷ್ಟಾಚಾರದಿಂದ ಪಕ್ಷಕ್ಕೆ ಮಸಿ ಬಳಿದ ಮುಖಂಡರಿಗೆ ವಿಶೇಷ `ಪಾಠ~ಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.ಶಿಬಿರವನ್ನು ಶುಕ್ರವಾರ ಬೆಳಿಗ್ಗೆ 10.45ಕ್ಕೆ ಆರ್‌ಎಸ್‌ಎಸ್ ಸರಕಾರ್ಯವಾಹ ಸುರೇಶ (ಭಯ್ಯಾಜಿ) ಜೋಶಿ ಉದ್ಘಾಟಿಸಲಿದ್ದು, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.  ಭಾನುವಾರ 29ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಕ್ಷಿಪಣಿ ತಜ್ಞ ವಿ.ಜೆ. ಸುಂದರಮ್, ಮೋಹನ್ ಭಾಗವತ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)