ಭಾನುವಾರ, ಏಪ್ರಿಲ್ 11, 2021
28 °C

ಹುಲ್ಲಿನ ಗೆಳೆಯರು

ಡಿ.ಕೆ. ರಮೇಶ್ Updated:

ಅಕ್ಷರ ಗಾತ್ರ : | |

`ಪರಿಸರ ಉಳಿಸಬೇಕೆ? ಹಾಗಿದ್ದರೆ ಗಿಡಮರ ನೆಡಬೇಡಿ!~ ಇದೇನು ವಿಚಿತ್ರ ಅನ್ನಿಸುವುದುಂಟು. ಆದರೆ ತಿಪಟೂರಿನ ಇಬ್ಬರು ಗೆಳೆಯರಿಗೆ ಮಾತ್ರ ನಿತ್ಯ ಹಾಗೆ ಹೇಳುವುದೇ ಕಾಯಕ. ಸ್ಥಳೀಯ ಪರಿಸರಕ್ಕೆ ಒಗ್ಗದ ಸಸ್ಯಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಅವರಿಗೆ ಸದಾ ಆತಂಕ.ನಿಸರ್ಗ ಉಳಿಯುವುದು ಯುವ ಪೀಳಿಗೆಯಿಂದ ಮಾತ್ರ ಎಂದು ನಂಬಿರುವ ಅವರು ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. `ಮೈತ್ರಯ~ ಪರಿಸರ ಅಧ್ಯಯನ ಕೇಂದ್ರವನ್ನು ಕಟ್ಟಿಕೊಂಡು ಹಸಿರಿನ ಉಳಿವಿಗೆ ಶ್ರಮಿಸುತ್ತಿದ್ದಾರೆ. ಅಮೃತಮಹಲ್ ಹುಲ್ಲುಗಾವಲುಗಳ ರಕ್ಷಣೆಗೆ ಹೋರಾಟ ನಡೆಸುತ್ತಿದ್ದಾರೆ.

 

ಅಷ್ಟೇ ಅಲ್ಲ ಸುತ್ತಲಿನ ಊರುಗಳಲ್ಲಿ ವನ್ಯಮೃಗಗಳು ಪತ್ತೆಯಾದರೆ ಅಥವಾ ಯಾರೋ ಮರ ಕಡಿಯುತ್ತಿದ್ದರೆ ತಕ್ಷಣ ಇವರಿಗೆ ಬುಲಾವ್ ಬರುತ್ತದೆ. ಅಲ್ಲಿಗೆ ಆ ಜೀವಗಳು ಉಳಿದವೆಂದೇ ಲೆಕ್ಕ.

ಮೊದಲ ಎಸಳು

ಅದೆಲ್ಲ ಶುರುವಾಗಿದ್ದು ಹೀಗೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದ ಮನೋಹರ್ ಪಟೇಲ್ ಬದುಕಿನ ಹುಡುಕಾಟದಲ್ಲಿದ್ದರು. ಮುಂಬೈ, ಅಹಮದಾಬಾದ್‌ಗಳಲ್ಲಿ ಕಾಯಕ ಮಾಡಿ ದೆಹಲಿಯಲ್ಲಿ ನೆಲೆಯೂರಿದ್ದರು. ಕೈ ತುಂಬ ಸಂಬಳವಿದ್ದರೂ ತೃಪ್ತಿ ನೀಡದ ಕೆಲಸ. ಬದುಕೆಂದರೆ ಇಷ್ಟೇ ಅಲ್ಲ ಎಂಬ ಭಾವ. ಆಗ ಅವರಿಗೆ ಇದ್ದದ್ದು ಎರಡೇ ಆಯ್ಕೆ. ಎಲ್ಲರಂತೆ ದುಡಿಯುತ್ತ ಸಂಬಳ ಎಣಿಸುವುದು ಇಲ್ಲವೇ ಹೊಸ ದಾರಿ ಕಂಡುಕೊಳ್ಳುವುದು.ಮನೋಹರರ ಕನಸುಗಳಿಗೆ ರೆಕ್ಕೆ ಪುಕ್ಕ ಮೂಡಿಸಿದ್ದು ಅವರ ಹಳೆಯ ಗೆಳೆಯ ಶ್ರಿಕಾಂತ್ ಕೆಳಹಟ್ಟಿ. ಆ ಹೊತ್ತಿಗಾಗಲೇ ತೆರಿಗೆ ಸಲಹೆಗಾರನಾಗಿ ವೃತ್ತಿ ಬದುಕು ಆರಂಭಿಸಿದ್ದರು ಶ್ರೀಕಾಂತ್. ಅಲ್ಲಿಂದ ಮುಂದೆ ಮನೋಹರ್ ಯೋಚಿಸಲಿಲ್ಲ.1

ದೆಹಲಿಯಿಂದ ತಿಪಟೂರಿಗೆ ಅವರ ಕಾರ್ಯಕ್ಷೇತ್ರ ಬದಲಾಯಿತು. ಹೊಟ್ಟಪಾಡಿಗೆ ತೋಟ ನೋಡಿಕೊಳ್ಳುತ್ತ `ಹೊಸ ಕೆಲಸ~ ಆರಂಭಿಸಿದರು. ಮೊದಲಿಗೆ ನಡೆದದ್ದು ಚನ್ನರಾಯಪಟ್ಟಣ ತಾಲ್ಲೂಕಿನ ಅಣತಿ ಗ್ರಾಮದ ಶಾಲಾ ಮಕ್ಕಳಿಂದ ಗಿಡ ನೆಡಿಸುವ ಕಾರ್ಯಕ್ರಮ.ಅಷ್ಟು ಹೊತ್ತಿಗಾಗಲೇ ತಿಪಟೂರು ತಾಲ್ಲೂಕಿನ ಕೊನೆಹಳ್ಳಿ ಬಳಿಯ ಬಿದಿರಮ್ಮನಗುಡಿ ಹುಲ್ಲುಗಾವಲಿನಲ್ಲಿ ಕೃಷ್ಣಮೃಗಗಳು ನಶಿಸುತ್ತಿರುವುದು ಇಬ್ಬರ ಅರಿವಿಗೆ ಬಂದಿತ್ತು. ಆಗ ಅವರ ತಲೆಯಲ್ಲಿದ್ದದ್ದು ಒಂದೇ ಯೋಚನೆ. ಹುಲ್ಲುಗಾವಲನ್ನು ದೊಡ್ಡ ಕಾಡು ಮಾಡಿಬಿಡುವುದು!ಆ ಮೂಲಕ ಕೃಷ್ಣಮೃಗಗಳನ್ನು ಉಳಿಸುವುದು. ಈ ಉತ್ಸಾಹದಲ್ಲಿಯೇ ಅಲ್ಲಿ ಒಂದಷ್ಟು ಗಿಡ ನೆಟ್ಟದ್ದುಂಟು. ಆದರೆ ಅದು ತಪ್ಪು ಎಂದು ತಿಳಿಯಲು ಬಹಳ ಸಮಯ ಹಿಡಿಯಲಿಲ್ಲ.ಮೈಸೂರಿನ `ಮ್ಯಾನ್~ (ಮೈಸೂರು ಅಮೆಚ್ಯೂರ್ ನ್ಯಾಚುರಲಿಸ್ಟ್ಸ್) ಸಂಸ್ಥೆಯ ಮನು ಗಿಡ ನೆಡುವುದರಿಂದ ಹುಲ್ಲುಗಾವಲಿನ ಜೈವಿಕ ಸಮತೋಲನ ಹಾಳಾಗುತ್ತದೆ ಎಂಬುದನ್ನು ವಿವರಿಸಿದರು. ಅಲ್ಲಿಂದ ಮುಂದೆ ಇಬ್ಬರದೂ ಎಚ್ಚರಿಕೆಯ ನಡಿಗೆ.`ಮ್ಯಾನ್~ ಸಂಸ್ಥೆಯಿಂದ 1357 ಎಕರೆ ವಿಸ್ತೀರ್ಣದ ಹುಲ್ಲುಗಾವಲಿನ ಅಧ್ಯಯನ ಮೊದಲುಗೊಂಡಿತು. ಮೂರು ದಿನಗಳ ಅಧ್ಯಯನದ ಬಳಿಕ 237 ಸಸ್ಯ ಪ್ರಬೇಧ, 70 ಬಗೆಯ ಪಕ್ಷಿಗಳು, 40 ಚಿಟ್ಟೆ ಪ್ರಭೇದ ಹಾಗೂ 247 ಕೃಷ್ಣಮೃಗಗಳಿರುವುದು ಪತ್ತೆಯಾಯಿತು. ಆ ಅಧ್ಯಯನದ ಹೊತ್ತಿಗೆ ಅದು ಅಮೃತಮಹಲ್ ಹೋರಿಗಳ ಸಂರಕ್ಷಣೆಗೆ ಹೈದರಾಲಿ, ಟಿಪ್ಪುಸುಲ್ತಾನ್ ಕಾಲದಲ್ಲಿ ರೂಪುಗೊಂಡ ಅರೆ ಶುಷ್ಕ ಹುಲ್ಲುಗಾವಲುಗಳಲ್ಲಿ ಇದೂ ಒಂದೆಂಬುದು ತಿಳಿದು ಬಂತು.ಅಲ್ಲಿ ನಡೆಯುತ್ತಿದ್ದ ಕೃಷ್ಣಮೃಗಗಳ ಬೇಟೆ ತಪ್ಪಿಸುವ `ಹೆಚ್ಚುವರಿ~ ಹೊಣೆಯನ್ನೂ ಅವರು ಹೊತ್ತರು. ಬೇಟೆಯಷ್ಟೇ ಅಲ್ಲದೆ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ನೀರಿನ ಸೆಲೆಗಳ ದುರ್ಬಳಕೆಯಿಂದ ಹುಲ್ಲುಗಾವಲನ್ನು ತಪ್ಪಿಸಬೇಕಿತ್ತು. ಆದರೆ ಅದು ಇಬ್ಬರಿಂದ ಆಗದ ಕೆಲಸ. ಹಾಗಾಗಿ ಉತ್ಸಾಹಿಗಳ ಪಡೆ ಹುಟ್ಟುಹಾಕುವ ಚಿಂತನೆ ಮೊಳೆಯಿತು. ಹೀಗೆ ಹುಟ್ಟಿಕೊಂಡ ಆ ಯುವ ಸಮುದಾಯದ ಹೆಸರೇ `ಮೈತ್ರಯ ಪರಿಸರ ಮತ್ತು ಗ್ರಾಮೀಣ ಅಧ್ಯಯನ ಕೇಂದ್ರ~.ಮೊದಮೊದಲು ಬಿದರಮ್ಮನಗುಡಿ ಕಾವಲಿನಿಂದ `ಮೈತ್ರಯ~ ಚಟುವಟಿಕೆಗಳು ಆರಂಭವಾದವು. ಸುತ್ತಲಿನ ಏಳೆಂಟು ಹಳ್ಳಿಗಳ ಜನರನ್ನು ಒಗ್ಗೂಡಿಸಿ ಕಾವಲಿನ ಮಹತ್ವ ತಿಳಿಸುವ ಕೆಲಸ ನಡೆಯಿತು. ಆರಂಭದಲ್ಲಿ ಇವರ ಶ್ರಮಕ್ಕೆ ದೊರೆತ ಪ್ರೋತ್ಸಾಹ ಕಡಿಮೆ.ಆದರೆ, ಜನರನ್ನು ಸೆಳೆಯಲೇ ಬೇಕಿತ್ತು. ಸಂಜೆಹೊತ್ತು ಸಿನಿಮಾ ತೋರಿಸುವ ಆಸೆ ಹುಟ್ಟಿಸಿದ್ದು ಫಲ ನೀಡಿತು. ಸಿನಿಮಾ ನೋಡಲು ಬಂದ ಮಂದಿ ಕಾವಲಿನ ಕಥೆ ಕೇಳಿದರು. ಕೃಷ್ಣಮೃಗಗಳ ವ್ಯಥೆ ಕಂಡು ಮರುಗಿದರು. ಕೈಲಿದ್ದ ಪುಡಿಗಾಸು ಕೊಟ್ಟು ಬೆನ್ನು ತಟ್ಟಿದರು.ಇವರ ಕೆಲಸವನ್ನು ಸರ್ಕಾರದ ಮಟ್ಟದಲ್ಲಿ ಬೆಂಬಲಿಸಿದ್ದು ಅರಣ್ಯ ಇಲಾಖೆ ಹಾಗೂ ಪಶ್ಚಿಮಘಟ್ಟ ಕಾರ್ಯಪಡೆ. ಈ ಪ್ರೋತ್ಸಾಹದ ಫಲವಾಗಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರವೊಂದನ್ನು ಏರ್ಪಡಿಸಲಾಯಿತು. ಪರಿಸರ ತಜ್ಞರು, ಪಕ್ಷಿಪ್ರೇಮಿಗಳು ಅಷ್ಟೇ ಅಲ್ಲದೆ ಹುಲ್ಲಿನ ಪರಿಣತರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ನಾಟಕ, ಸಾಕ್ಷ್ಯಚಿತ್ರಗಳ ಮೂಲಕವೂ ಜ್ಞಾನ ಪ್ರಸಾರ ಮಾಡಲಾಯಿತು.ಮೈತ್ರಯದ ಸದಸ್ಯರ ಸಂಖ್ಯೆಯೇನೊ ಹೆಚ್ಚಿತ್ತು ನಿಜ. ಆದರೆ, ಅವರಾರೂ ಪರಿಸರದ ವಿಷಯದಲ್ಲಿ ಪರಿಣತರಾಗಿರಲಿಲ್ಲ. ದಿಢೀರನೆ ಸಮಸ್ಯೆ ಉದ್ಭವಿಸದರೆ ಅದನ್ನು ನಿವಾರಿಸುವುದು ಹೇಗೆಂಬುದು ಪ್ರಶ್ನೆಯಾಗಿಯೇ ಉಳಿದಿತ್ತು. ಹೀಗಾಗಿ ಮೂರ‌್ನಾಲ್ಕು ಕಾಲೇಜುಗಳ ವಿದ್ಯಾರ್ಥಿಗಳೂ ಸೇರಿದಂತೆ ಸಮುದಾಯದ ಹತ್ತು ಸದಸ್ಯರಿಗೆ ವಿಶೇಷ ತರಬೇತಿ ಕೊಡಿಸಲಾಯಿತು.ನಂತರ ಅಮೃತಮಹಲ್ ಹುಲ್ಲುಗಾವಲುಗಳನ್ನು ಉಳಿಸಿಕೊಳ್ಳುವ ಉದ್ದೆೀಶದಿಂದ ರಾಜ್ಯ ಮಟ್ಟದ ಎರಡನೆಯ ಜೀವವೈವಿಧ್ಯತೆ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತ ಕಾರ್ಯಾಗಾರ ಆರಂಭಿಸಿತು `ಮೈತ್ರಯ~.

`ಕಾವಲು~ಗಾರರು!

ಕಾರ್ಯಾಗಾರದಿಂದ ಸ್ಫೂರ್ತಿ ಪಡೆದ ಮನೋಹರ್ ಮತ್ತು ಶ್ರೀಕಾಂತ್ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಅಮೃತಮಹಲ್ ಹುಲ್ಲುಗಾವಲುಗಳನ್ನು ಅರಸುತ್ತಾ ಹೊರಟರು.ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ಮೂವತ್ತು ಹುಲ್ಲುಗಾವಲುಗಳ ಅಧ್ಯಯನ ನಡೆಸಿದರು. ಸುಮಾರು ಒಂದೂವರೆ ವರ್ಷಗಳ ಕಾಲ ಈ ಅಧ್ಯಯನ ಸಾಗಿತು. ಋತುಮಾನಕ್ಕೆ ತಕ್ಕಂತೆ ಪ್ರತ್ಯೇಕ ಹುಲ್ಲುಗಾವಲುಗಳಿದ್ದುದನ್ನು ಗಮನಿಸಿದ ತಂಡ ಕೇವಲ 1298 ರಾಸಿನ ತಳಿಗಳಿರುವುದನ್ನು ಪತ್ತೆ ಹಚ್ಚಿತು.ಒಂದು ಕಾಲಕ್ಕೆ ನಾಲ್ಕು ಲಕ್ಷ ಎಕರೆಯಷ್ಟಿದ್ದ ಹುಲ್ಲುಗಾವಲುಗಳ ವಿಸ್ತೀರ್ಣ ಈಗ ಕೇವಲ 65 ಸಾವಿರ ಎಕರೆಗೆ ಕುಸಿದಿರುವುದನ್ನು ಗುರುತಿಸಿತು. ಅಲ್ಲದೆ ಹುಲ್ಲುಗಾವಲುಗಳನ್ನು ಆಶ್ರಯಿಸಿರುವ ಖಗಮೃಗಗಳ ಗಣತಿ ಕಾರ್ಯ ಕೂಡ ನಡೆಯಿತು. ರಾಜ್ಯದ ಒಟ್ಟಾರೆ ಅಮೃತಮಹಲ್ ಹುಲ್ಲುಗಾವಲುಗಳಲ್ಲಿ ಶೇ 45.58 ಭಾಗ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿತು.

 

ಅಧ್ಯಯನದ ಸಮಯದಲ್ಲಿ ಒಟ್ಟು 40 ಹುಲ್ಲಿನ ಪ್ರಬೇಧಗಳಿರುವುದು, ಅವುಗಳಲ್ಲಿ ಸುಮಾರು 30ರಷ್ಟು ಹುಲ್ಲಿನ ಪ್ರಬೇಧಗಳು ದೇಸಿ ತಳಿಗಳಾಗಿರುವುದು ಕಂಡು ಬಂತು.ಕಾಡುಹಂಚಿಹುಲ್ಲು, ದೊಡ್ಡಹಂಚಿ ಹುಲ್ಲು, ಕಾಮಹಂಚಿ ಹುಲ್ಲು, ಗರಿಕೆ, ಜಡಿ ಹುಲ್ಲು, ಕಾಡು ಸಣ್ಣಹಾರಕ ಹುಲ್ಲು, ನೀರುಹತ್ತಿ ಹುಲ್ಲು, ಗಂಟುಕಾಸಿನ ಹುಲ್ಲು ಇವುಗಳಲ್ಲಿ ಪ್ರಮುಖವಾದುವು.ಮೈತ್ರಯ ನೀಡಿರುವ ವರದಿಯನ್ನು ಪಶ್ಚಿಮಘಟ್ಟ ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿದ್ದು ಈ ಹುಲ್ಲುಗಾವಲುಗಳ ಉಳಿವಿಗೆ ಹಲವು ಶಿಫಾರಸುಗಳನ್ನು ಮಾಡಿದೆ. ಶಿಫಾರಸಿನ ಮುಖ್ಯಾಂಶಗಳು ಹೀಗಿವೆ: ಅಮೃತಮಹಲ್ ಹುಲ್ಲುಗಾವಲುಗಳ ಸಂರಕ್ಷಣೆಗೆ ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾಯ್ದೆ ರೂಪುಗೊಳ್ಳಬೇಕು.

 

ಕಾವಲುಗಳ ಪುನರ್ ಸಮೀಕ್ಷೆ, ಪ್ರತಿ ಹುಲ್ಲುಗಾವಲಿನ ಜೈವಿಕ ವ್ಯವಸ್ಥೆಯ ಸಂರಕ್ಷಣೆ. ಹುಲ್ಲುಗಾವಲುಗಳ ಉಳಿವಿಗೆ ವಿರುದ್ಧವಾಗಿರುವ ಯಾವುದೇ ಕಾಯ್ದೆ, ಆದೇಶಗಳನ್ನು ಹಿಂಪಡೆಯುವುದು ಇತ್ಯಾದಿ. ಅಮೃತಮಹಲ್ ಹುಲ್ಲುಗಾವಲುಗಳ ರಕ್ಷಣೆ ಕುರಿತಂತೆ ಸರ್ಕಾರಕ್ಕೆ ನೀಡಲಾದ ಪ್ರಥಮ ವರದಿ ಇದು ಎನ್ನುತ್ತಾರೆ ಮನೋಹರ್.

ನಡೆಮುಂದೆ...

ಇವರ ಹೋರಾಟದ ಫಲವಾಗಿ ತಿಪಟೂರಿನ ಬಿದಿರಮ್ಮನಗುಡಿ ಕಾವಲಿಗೆ ಅರಣ್ಯ ಇಲಾಖೆ ಕಾವಲುಗಾರರನ್ನು ನೇಮಿಸಿದೆ. ಇದರಿಂದ ಕೃಷ್ಣಮೃಗಗಳ ಬೇಟೆ ಸಾಕಷ್ಟು ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿ ಅಮೃತಮಹಲ್ ಹುಲ್ಲುಗಾವಲೊಂದು ದೊಡ್ಡ ಯೋಜನೆಗೆ ಬಲಿಯಾಗುತ್ತಿದ್ದುದನ್ನು ತಪ್ಪಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಸಹಾಯ ಪಡೆದು ಇಂಥ ಅನೇಕ ಅಕ್ರಮಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದ ಕುರಿತಂತೆ ತಿಪಟೂರಿನ ಕಾನೂನು ಪರಿಣತರಿಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಹಸಿರು ಕಾನೂನು ಕುರಿತು ಅರಿವು ಮೂಡಿಸಲಾಗಿದೆ. ಇಬ್ಬರೂ ನಡೆಸಿರುವ ಬೀಜ ಜಾಥಾಗಳಿಗಂತೂ ಲೆಕ್ಕವೇ ಇಲ್ಲ.ದೇಸಿ ಹುಲ್ಲಿನ ತಳಿ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿ ದೇಶದ ಎಲ್ಲಾ ಹುಲ್ಲಿನ ತಳಿಗಳನ್ನು ಬೆಳೆಯುವ ಕನಸು ಇವರದು. ಆ ಮೂಲಕ ದೇಸಿ ರಾಸುಗಳಿಗೆ ಒಗ್ಗದ ಹೈಬ್ರಿಡ್ ಹುಲ್ಲಿನ ಬಳಕೆ ನಿಯಂತ್ರಿಸಬಹುದು ಎನ್ನುತ್ತಾರೆ ಶ್ರೀಕಾಂತ್.ರಾಜ್ಯದ ಎಲ್ಲಾ ಹುಲ್ಲುಗಾವಲುಗಳನ್ನು ಅರಣ್ಯ ಕಾಯ್ದೆ ವ್ಯಾಪ್ತಿಗೆ ತರಬೇಕು ಎನ್ನುವ ಕನಸಿನೊಂದಿಗೆ ಹೋರಾಟ ನಡೆಸುತ್ತಿರುವ ಇಬ್ಬರೂ ದೇಶದ ಪ್ರಮುಖ ಹುಲ್ಲುಗಾವಲುಗಳನ್ನು ರಾಷ್ಟ್ರೀಯ ಹುಲ್ಲುಗಾವಲುಗಳಾಗಿ ಘೋಷಿಸಬೇಕು ಎಂಬ ಕಳಕಳಿ ಉಳ್ಳವರು. ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ನಾಗರಿಕರು ಮುಂದಾಗಿದ್ದಲ್ಲಿ ಅದಕ್ಕೆ `ಹಸಿರು ತಿಪಟೂರು~ ಕಾರ್ಯಕ್ರಮ ಕೂಡ ಒಂದು ಕಾರಣ. ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಿದ ಸಂಸ್ಥೆಗಳಲ್ಲಿ `ಮೈತ್ರಯ~ ಕೂಡ ಒಂದು.ಕೇಂದ್ರ ಸರ್ಕಾರ ನಡೆಸಿದ ಹುಲಿ ಗಣತಿ ಹಾಗೂ ಮಧುಗಿರಿ ತಾಲ್ಲೂಕು ಮೈದನಹಳ್ಳಿಯ ಜಯಮಂಗಲಿ ಕೃಷ್ಣಮೃಗ ಧಾಮದಲ್ಲಿ ನಡೆದ ಗಣತಿ ಕಾರ್ಯದಲ್ಲಿ ಇಬ್ಬರೂ ಸಕ್ರಿಯವಾಗಿ ಭಾಗಿ. ಮೈದನಹಳ್ಳಿಗೆ ಹೋಲಿಸಿದರೆ ಬಿದಿರಮ್ಮನಗುಡಿ ಹುಲ್ಲುಗಾವಲಿನಲ್ಲಿ ಕೃಷ್ಣಮೃಗಗಳ ಸಂಖ್ಯೆ ಹೆಚ್ಚಿರುವುದರಿಂದ ಇದನ್ನು ಕೂಡ ಸಂರಕ್ಷಣಾ ತಾಣವಾಗಿ ಮಾರ್ಪಡಿಸಬೇಕು ಎಂಬ ಅಹವಾಲಿನೊಂದಿಗೆ ಇವರ ಹೋರಾಟ ಮುಂದುವರಿದಿದೆ. ಅಭಯ ಹಸ್ತ

ನಡುರಾತ್ರಿ ಕಳೆದಿದೆ. ಫೋನ್ ರಿಂಗಣಿಸುತ್ತಿದೆ. `ಚಿರತೆ ಬಂದಿದೆ~ ಅತ್ತಲಿಂದ ಭಯಭೀತ ದನಿ. ಶ್ರೀಕಾಂತ್ ಹಾಗೂ ಮನೋಹರ್ ಅಣಿಯಾಗುತ್ತಿದ್ದಾರೆ. ಅಲ್ಲಿರುವುದು ಚಿರತೆಯಲ್ಲ, ಅದರ ಮರಿ. ಅದನ್ನೇ ದೊಡ್ಡ ಚಿರತೆಯೆಂದು ಭ್ರಮಿಸಿ ಭಯಭೀತರಾದವರನ್ನು ಸಮಾಧಾನ ಮಾಡುವುದು ಸಾಹಸದ ಕೆಲಸ. ಎಲ್ಲಿ ಹಳ್ಳಿಗರು ಚಿರತೆಯನ್ನು ಕೊಂದು ಬಿಟ್ಟಾರೋ ಎಂಬ ಆತಂಕ ಒಂದೆಡೆ. ಚಿರತೆಯ ದಾಳಿಯಿಂದ ಜನರನ್ನು ಪಾರು ಮಾಡುವುದು ಹೇಗೆ ಎಂಬ ಸಮಸ್ಯೆ ಇನ್ನೊಂದು ಕಡೆ. ಇಂಥ ಸಂದರ್ಭಗಳಲ್ಲಿ ಜನರಿಗೆ ಧೈರ್ಯ ತುಂಬುವುದು ಮುಖ್ಯ. ಆ ಕೆಲಸವನ್ನು ಇಬ್ಬರೂ ಮಾಡುತ್ತಿದ್ದಾರೆ. ವನ್ಯಮೃಗಗಳ ಹಾವಳಿ ನಡೆದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಕರಪತ್ರಗಳನ್ನು ಹಂಚುತ್ತಾರೆ. ಅರಣ್ಯ ಇಲಾಖೆಯೂ ಇದಕ್ಕೆ ಸಹಕಾರ ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.