ಬುಧವಾರ, ಮೇ 18, 2022
24 °C

ಹೂಳು ತುಂಬಿದ ಕೆರೆ: ಕುಸಿದ ಅಂತರ್ಜಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಹೆಚ್ಚಿನ ಕೆರೆಗಳು ಸರಿಯಾದ ನಿರ್ವಹಣೆಯಿಲ್ಲದೆ ಸೊರಗಿವೆ. ಬಹುತೇಕ ಕೆರೆಯಲ್ಲಿ ಹೂಳು ತುಂಬಿದ್ದರಿಂದ ಅಂತರ್ಜಲ ಮಟ್ಟವು ಗಣನೀಯ ಪ್ರಮಾಣದಲ್ಲಿ ಕುಸಿತವಾಗಿದೆ. ಕಳೆದ ವರ್ಷದ ಬರಗಾಲದ ಹೊಡೆತಕ್ಕೆ ಹಾಗೂ ಪ್ರಸಕ್ತ ಸಾಲಿನಲ್ಲಿ ಮಳೆ ಇನ್ನೂ ಬಾರದೆ ಇರುವುದರಿಂದ ಹೂಳು ತುಂಬಿದ ಕೆರೆಗಳು ಒಣಗಿ ಅಂಗಳವಾಗಿವೆ.ಮಹತ್ವಕಾಂಕ್ಷೆ ಯೋಜನೆಯಾದ ಉದ್ಯೋಗ ಖಾತರಿಯನ್ನು ಸಮರ್ಪಕವಾಗಿ ಇಂತಹ ಕೆರೆಗಳ ಅಭಿವೃದ್ಧಿ ಯೋಜನೆಗೆ ಸದ್ಬಳಕೆ ಮಾಡಿಕೊಳ್ಳಲು ವಿಫಲ ಅವಕಾಶ ಇದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಗ್ರಾಮಸ್ಥರ ಅಸಡ್ಡೆಯಿಂದ ಕೆರೆಗಳು ಅವನತಿಯ ಅಂಚಿಗೆ ತಲುಪಿವೆ. ಪ್ರತಿವರ್ಷ ಸರ್ಕಾರ ಕೆರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ.  ಆದರೆ ಅನುಷ್ಠಾನ ಮಾತ್ರ ದಾಖಲೆಗಳಲ್ಲಿ ಉಳಿದುಕೊಂಡಿದ್ದು ಅದು ಅನ್ಯರ ಪಾಲಾಗುತ್ತಿದೆ ಎನ್ನುತ್ತಾರೆ ರೈತ ಸಂಗಪ್ಪ ಖಾನಾಪುರ.ತಾಲ್ಲೂಕಿನ ಶಹಾಪುರ ಹೋಬಳಿ ವ್ಯಾಪ್ತಿಯಲ್ಲಿ 565 ಎಕರೆ ಕೆರೆ, ಗೋಗಿ 420, ದೋರನಹಳ್ಳಿ 935, ವಡಿಗೇರಾ 259, ಹೈಯ್ಯಾಳ 172 ಎಕರೆ ಕೆರೆ ಹೀಗೆ ಒಟ್ಟು 2,358 ಎಕರೆ ಪ್ರದೇಶವಿದೆ. ಅದರಲ್ಲಿ ಬಹುಮುಖ್ಯವಾಗಿರುವುದು ಶಹಾಪುರ- ಯಾದಗಿರಿ ರಾಜ್ಯ ಹೆದ್ದಾರಿ ಬಾಗಿಲಿಗೆ ಇರುವ ಗುಂಡಳ್ಳಿ ಕೆರೆ. ಇದು 99ಎಕರೆ 2ಗುಂಟೆ ವಿಸ್ತಿರ್ಣ ಇದೆ. ಅದರಂತೆ ಖಾನಾಪೂರ ಕೆರೆ 231 ಎಕರೆ ವಿಶಾಲವಾಗಿದೆ. ಇವೆರಡು ಹೆದ್ದಾರಿಗೆ ಹೊಂದಿಕೊಂಡಿದ್ದು ಅದರ ಸುತ್ತಮುತ್ತಲು ಸ್ವಚ್ಛತೆ ಹಾಗೂ ಸುರಕ್ಷತೆ ಕ್ರಮಗಳನ್ನು ತೆಗೆದುಕೊಂಡು.ಅದರ ಸುತ್ತಲು ಸಸಿಗಳನ್ನು ನೆಟ್ಟು ಪ್ರವಾಸಿ ತಾಣವನ್ನಾಗಿ ರೂಪಿಸಲು ಅವಕಾಶವಿದೆ. ದೋಣಿ ವಿಹಾರದ ಜೊತೆಗೆ ಈಜಕೋಳವನ್ನು ನಿರ್ಮಿಸಲು ಸಾಧ್ಯ ಎನ್ನುತ್ತಾರೆ ಮಲ್ಲಯ್ಯ ಪೊಲಂಪಲ್ಲಿ.ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆ ಪೋಲಾದ ನೀರು ನೆರವಾಗಿ ಕೆರೆಗಳಿಗೆ ಬಂದು ಸಂಗ್ರಹವಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ತ್ವರಿತವಾಗಿ ಕಾಲುವೆ ನೀರು ಸ್ಥಗಿತಗೊಳಿಸಿದ್ದರಿಂದ ಕೆರೆಗಳಿಗೆ ನೀರು ಸಂಗ್ರಹದ ಬರವು ಎದುರಾಗಿದೆ. ಬೇಸಿಗೆಯಲ್ಲಿ ಹೂಳು ತುಂಬಿದ ಕೆರೆಯ ಮಣ್ಣನ್ನು ತ್ವರಿತವಾಗಿ ಸ್ಥಳಾಂತರಗೊಳಿಸಿದರೆ ಹೆಚ್ಚು ಅನುಕೂಲವಾತ್ತಿತ್ತು ಎನ್ನುವುದು ರೈತರ ಅನಿಸಿಕೆ.ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಹಾಕಿದರೆ ಉತ್ತಮ ಫಸಲು ಬೆಳೆಯಬಹುದು. ಅಲ್ಲದೆ ರಾಸಾಯನಿಕ ಗೊಬ್ಬರದಿಂದ ದೂರ ಉಳಿಯಲು ಸಾಧ್ಯ.ಹೂಳು ತೆಗೆಯುವುದರಿಂದ ಕೆರೆಯ ನೀರು ಹೆಚ್ಚು ಸಂಗ್ರಹಿಸಲು ಅನುಕೂಲವಾಗುತ್ತದೆ. ಅಂತರ್ಜಲಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುವುದು. ಕೆರೆಯಲ್ಲಿ ಮೀನು ಸಾಕುವುದರಿಂದ ಹಲವಾರು ಜನರಿಗೆ ಉದ್ಯೋಗ ನೀಡಿದಂತೆ ಆಗುತ್ತದೆ ಎನ್ನುವುದು ರೈತ ಹಣಮಂತ ಗೋನಾಲ ಅನಿಸಿಕೆ.ಕೊನೆ ಪಕ್ಷ ಗುಂಡಳ್ಳಿ ಹಾಗೂ ಖಾನಾಪೂರ ಕೆರೆಗಳ ಅಭಿವೃದ್ಧಿಯತ್ತ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನ ನೀಡಬೇಕೆಂದು ನಿಸರ್ಗ ಸಂಸ್ಥೆ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.