ಇರುವುದು ಹದಿನೈದು ಗುಂಟೆ ಜಮೀನು. ಉತ್ತಿ ಬಿತ್ತಿದರೂ ಬರುವ ಫಸಲು, ಮಾಡಿದ ಖರ್ಚಿಗೂ ಸರಿಹೊಂದಿಸಲಾಗದು. ಹಾಕಿದ ಶ್ರಮಕ್ಕೆ ಬೆಲೆಸಿಗುವುದಿಲ್ಲ. ಮತ್ತೇನು ಮಾಡುವುದು? ಪಾಳು ಬಿಡಲು ಮನಸ್ಸಿಲ್ಲ. ಸಿಕ್ಕಿದ್ದಷ್ಟು ಸಿಗಲಿ ಬೇರೆಯವರಿಗೆ ಲಾವಣಿ ನೀಡುವುದು. ಬಂದ ಬೆಳೆಯಲ್ಲಿ ಅರ್ಧ ಬೆಳೆದವರಿಗೆ, ಇನ್ನರ್ಧ ನಮಗೆ. ಹತ್ತಾರು ವರ್ಷಗಳಿಂದ ಈ ಕ್ರಮ ಅನುಸರಿಸುತ್ತಿದ್ದರು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹಾಲಿವಾಣ ಗ್ರಾಮದ ಮೀನಾಕ್ಷಿ ಮುರಡಪ್ಳರ್.

ಇತ್ತೀಚೆಗೆ ಇವರು ತಮ್ಮ ಮನೋಭಾವ ಬದಲಿಸಿಕೊಂಡಿದ್ದಾರೆ. ಸಣ್ಣ ಹಿಡುವಳಿಯಲ್ಲೇ ಹೆಚ್ಚು ಆದಾಯ ಗಳಿಸಬೇಕೆಂದು ಚಿಂತಿಸಿ ಕಾರ್ಯರೂಪಕ್ಕಿಳಿದಿದ್ದಾರೆ.

ಆರಂಭದಲ್ಲಿ ತರಕಾರಿ ಕೃಷಿ ಯಾಕೆ ಮಾಡಬಾರದು ಎಂದುಕೊಂಡರು. ಬೆಂಡೆ, ಚವಳಿ, ಟೊಮೆಟೊ, ಬದನೆ ಮುಂತಾದವುಗಳನ್ನು ಬೆಳೆದರು. ಇಳುವರಿ ಉತ್ತಮವಾಗಿ ಬಂತು. ಬೆಲೆ ಕೈ ಕೊಟ್ಟಿದ್ದರಿಂದ ಈ ಕೃಷಿ ಲಾಭದಾಯಕ ಎನಿಸಲಿಲ್ಲ. ಬದಲಿಗೆ ಚೆಂಡು ಹೂವಿನ ಕೃಷಿಗೆ ಮುಂದಾದರು. ರಾಣೆಬೆನ್ನೂರು ತಾಲ್ಲೂಕಿನ ಹಲುವಾಗಲು ಹರಬಿ ಗ್ರಾಮದಿಂದ 300 ಚೆಂಡು ಹೂವಿನ ಗಿಡ ಖರೀದಿಸಿ 2/20ಅಡಿ ಅಂತರದಲ್ಲಿ ನಾಟಿ ಮಾಡಿದರು. ನಾಟಿ ಮಾಡಿದ ಒಂದು ತಿಂಗಳ ಅವಧಿಯಲ್ಲೇ ಹೂವು ಕೊಯ್ಲಿಗೆ ಆರಂಭವಾಯಿತು. ಹಬ್ಬದ ದಿನಗಳಲ್ಲಿ ಮನೆ ಬಾಗಿಲಲ್ಲಿಯೇ ಹೂ ಮಾರಾಟವಾಯಿತು. 300 ಗಿಡಗಳಿಂದ ₨ 25ಸಾವಿರದವರೆಗೂ ಆದಾಯ ಕೈ ಸೇರಿತು. ಮೂರು ತಿಂಗಳ ಅವಧಿಯಲ್ಲಿ ಪ್ರಥಮ ಪ್ರಯತ್ನದಲ್ಲೇ ಹಿಂದೆಂದೂ ಗಳಿಸಿಕೊಳ್ಳದ ಆದಾಯ ಸಿಕ್ಕಿದ್ದು ಮೀನಾಕ್ಷಿಯವರಿಗೆ ಹೂವಿನ ಕೃಷಿಯಲ್ಲಿ ಭರವಸೆ ಮೂಡಿಸಿತು.

ನಂತರದಲ್ಲಿ ಚೆಂಡು ಹೂವಿನ ಕೃಷಿ ಕೈ ಬಿಟ್ಟು ಸೇವಂತಿಗೆ ಹೂವಿನ ಕೃಷಿ ಮಾಡಲು ಮನಸ್ಸು ಮಾಡಿದರು. ಹರಪನಹಳ್ಳಿ ಯಿಂದ ಬಣ್ಣದ ಸೇವಂತಿಗೆ ಸಸಿಗಳನ್ನು ಕೊಂಡು ತಂದರು. 2.50/2.50 ಅಡಿ ಅಂತರದಲ್ಲಿ 150 ಸಸಿಗಳನ್ನು ನಾಟಿ ಮಾಡಿ ದರು. ಒಂದೂವರೆ ತಿಂಗಳಿಂದ ಇಳುವರಿ ಆರಂಭವಾಯಿತು.

ಆರಂಭದಲ್ಲಿ ದಿನಕ್ಕೆ 5–8 ಕೆ.ಜಿ ಹೂವು ಸಿಗುತ್ತಿತ್ತು. ವಾರಕ್ಕೆ 100 ರಿಂದ 125 ಕೆ.ಜಿ ಹೂವು ಸಿಗುತ್ತಿದೆ. ಹೂವನ್ನು ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುವುದು ಲಾಭದಾಯಕವೆನಿಸಲಿಲ್ಲ. ಬದಲಿಗೆ ಮಾಲೆ ಮಾಡಿ ಮಾರಿದರೆ ಹೇಗೆ? ಚಿಂತಿಸಿದರು. ಕೊಯ್ಲು ಮಾಡಿದ ಅರ್ಧ ಭಾಗ ಹೂವನ್ನು ಮಾಲೆ ಮಾಡಿಯೂ, ಉಳಿದ ಅರ್ಧ ಭಾಗವನ್ನು ಬಿಡಿಹೂವಿನಂತೆಯೂ ಮಾರಾಟ ಮಾಡಿದರು. ಮಾಲೆಗೆ ಹೆಚ್ಚಿನ ದರ ಸಿಗತೊಡಗಿತು. ಲಾಭದಾಯಕ ಎನ್ನಿಸತೊಡಗಿತು. ಬಿಡಿ ಹೂವು ಮಾರಾಟ ಕೈ ಬಿಟ್ಟರು. ಮಾಲೆ ಮಾಡುವುದನ್ನೇ ರೂಢಿಸಿಕೊಂಡರು.

ಬಿಡಿ ಹೂ ಕೆ.ಜಿಗೆ ₨ 15 ಸಿಗುತ್ತದೆ. ಒಂದು ಕೆ.ಜಿ ಹೂವನ್ನು ಮಾಲೆ ಮಾಡಲು ಬಳಸಿದರೆ, ಐದು ಮಾಲೆ ಮಾಡಬಹುದು. ಒಂದು ಮಾಲೆಗೆ 15–20 ರೂಪಾಯಿ ಸಿಗುತ್ತದೆ. ಹದಿನೈದು ರೂಪಾಯಿಯಂತೆ ಲೆಕ್ಕ ಹಾಕಿದರೂ ಕೆ.ಜಿಗೆ 75 ರೂಪಾಯಿ ಸಿಕ್ಕಿದ ಹಾಗಾಯಿತು. ದಿನಕ್ಕೆ ಎಷ್ಟು ಹೂಮಾಲೆ ಬೇಕೆಂಬುದು ಹಿಂದಿನ ದಿನವೇ ಲೆಕ್ಕ ಸಿಕ್ಕಿರುತ್ತದೆ. ಖರೀದಿದಾರರು ಮೊದಲ ದಿನವೇ ಸಂಪರ್ಕಿಸಿ ಬೇಡಿಕೆ ಸಲ್ಲಿಸಿರುತ್ತಾರೆ. ಹಬ್ಬ ಹರಿದಿನಗಳಲ್ಲಿ ಬೇಡಿಕೆ ವಿಪರೀತವಿರುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತಗಳಿಗೆ ಇವರು ತಲೆಕೆಡಿಸಿಕೊಂಡಿಲ್ಲ.

ಬೀಜ ಉತ್ಪಾದನೆ
ದಿನಕ್ಕೆ ಮಾಲೆ ತಯಾರಿಗೆ ಬೇಕಾದಷ್ಟು ಮಾತ್ರ ಹೂಗಳನ್ನು ಕೊಯ್ಲು ಮಾಡುತ್ತಾರೆ. ಉಳಿದ ಹೂವುಗಳನ್ನು ಗಿಡದಲ್ಲೇ ಒಣಗಲು ಬಿಡುತ್ತಾರೆ. ಬಿಸಿಲಲ್ಲಿ ಒಣಗಿದ ಹೂವಿನ ದಳ ಉದುರತೊಡಗುತ್ತದೆ. ಪೂರ್ತಿ ದಳ ಉದುರಿದ ನಂತರ ಉಳಿದಿರುವ ತುಂಬುಗಳನ್ನು ಕೊಯ್ಲು ಮಾಡುತ್ತಾರೆ. ಇದನ್ನು ನಲವತ್ತು ದಿನಗಳ ಕಾಲ ಬಿಸಿಲಲ್ಲಿ ಒಣಗಿಸುತ್ತಾರೆ. ಚೆನ್ನಾಗಿ ಒಣಗಿದ ಸೇವಂತಿಗೆ ಹೂವಿನ ತುಂಬುಗಳನ್ನು ನಯವಾದ ಮಣೆಯ ಮೇಲೆ ರಾಶಿ ಹಾಕಿ ಕಟ್ಟಿಗೆಯ ತುಂಡು ಅಥವಾ ಚಿಕ್ಕದಾದ ಮಣೆಯ ಸಹಾಯದಿಂದ ಮೃದುವಾಗಿ ಉಜ್ಜುತ್ತಾರೆ. ಗರಿ ಗರಿಯಾಗಿರುವ ತುಂಬುಗಳು ಪುಡಿಯಾಗುತ್ತವೆ. ಪುಡಿಯಾದ ಚಿಕ್ಕ ಚಿಕ್ಕ ತುಂಬುಗಳೇ ಬೀಜಗಳು.

ಬೀಜಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಒಂದು ಸೇರು ಬೀಜಕ್ಕೆ 400 ರೂಪಾಯಿಯಂತೆ ಮಾರಾಟ ಮಾಡಿದ್ದಾರೆ. ಇದುವರೆಗೆ ಐದು ಸೇರು ಬೀಜಗಳನ್ನು ಮಾರಾಟ ಮಾಡಿದ್ದಾರೆ. ರಾಣೆಬೆನ್ನೂರು ತಾಲ್ಲೂಕಿನಿಂದ ಬರುವ ವ್ಯಾಪಾರಸ್ಥರು ಬೀಜವನ್ನು ಖರೀದಿಸಿ ಹೋಗುತ್ತಾರೆ. ಇನ್ನೂ 4–5 ಸೇರು ಬೀಜಗಳು ಇವರಲ್ಲಿ ಮಾರಾಟಕ್ಕೆ ಲಭ್ಯವಿದೆ.

ದಳ ಉದುರಿದ ಸೇವಂತಿಗೆ ತುಂಬುಗಳನ್ನು ಕೊಯ್ಲು ಮಾಡಿದ ನಂತರ 40 ದಿನ ಒಣಗಲು ಬಿಡಬೇಕು. ಕಡಿಮೆ ಅವಧಿಯಲ್ಲಿ ಒಣಗಿದ ಬೀಜಗಳಾದಲ್ಲಿ ಗಿಡ ಹುಟ್ಟಿ ಬೆಳೆಯುತ್ತಾದರೂ ಇಳುವರಿಯಲ್ಲಿ ಕುಂಠಿತವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆರಂಭದ ದಿನಗಳಲ್ಲಿ ಬೀಜ ತಯಾರಿಯ ಬಗ್ಗೆ ಮಾಹಿತಿ ಇರಲಿಲ್ಲ. ಕೊಯ್ಲು ಮಾಡದೇ ಬಾಕಿ ಉಳಿದ ಹೂಗಳು ಅನವಶ್ಯಕ ವ್ಯರ್ಥವಾಗುತ್ತಿತ್ತು. ಧಾರವಾಡ ಕೃಷಿ ಮೇಳದಲ್ಲಿ ಭಾಗವಹಿಸಿ ಅಲ್ಲಿ ಬೀಜೋತ್ಪಾದನೆ ಬಗ್ಗೆ ಮಾಹಿತಿ ಕಲೆ ಹಾಕಿ ಅನುಷ್ಠಾನಕ್ಕಿಳಿದು ಯಶಸ್ವಿಯಾದರು. ಆರಂಭದಲ್ಲಿ ತಾವು ತಯಾರಿಸಿದ ಬೀಜಗಳನ್ನು ಬಿತ್ತಿ ಉತ್ತಮ ಇಳುವರಿ ಪಡೆದು ದೃಢೀಕರಿಸಿಕೊಂಡ ನಂತರವೇ ಮಾರುಕಟ್ಟೆಗೆ ಕಳುಹಿಸಲು ಆರಂಭಿಸಿದ್ದಾರೆ.

ದೀರ್ಘ ಇಳುವರಿಯ ಗುಟ್ಟು
ಸೇವಂತಿಗೆ ಕೃಷಿ ನಿರ್ವಹಣೆಯನ್ನು ಸಾಮಾನ್ಯ ರೀತಿಯಲ್ಲಿ ಮಾಡಿದಲ್ಲಿ 7–8 ತಿಂಗಳವರೆಗೆ ಇಳುವರಿ ಪಡೆಯಬಹುದು. ಆದರೆ ವಿಶೇಷ ಕಾಳಜಿ ವಹಿಸಿದ್ದಲ್ಲಿ 10 ರಿಂದ 12 ತಿಂಗಳವರೆಗೆ ಹೂವು ಪಡೆಯಬಹುದು ಎನ್ನುತ್ತಾರೆ. ಇವರ ತೋಟದಲ್ಲಿ ಎಂಟು ತಿಂಗಳ ಗಿಡಗಳಿದ್ದು, ಭರ್ತಿ ಹೂವಿನಿಂದ ತುಂಬಿಕೊಂಡಿವೆ. ಇದರಲ್ಲಿ ಇನ್ನೂ 3ರಿಂದ 4 ತಿಂಗಳು ಹೂವನ್ನು ಪಡೆಯಬಹುದು ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಮೀನಾಕ್ಷಿಯವರ ಪತಿ ಸಿದ್ದೇಶ್ ಮುರುಡಪ್ಳರ್. ಸೇವಂತಿಗೆ ಕೃಷಿ ಉತ್ತಮ ಆದಾಯ ಗಳಿಸಿಕೊಟ್ಟಿದೆ. ಕೆಲಸಕ್ಕೆ ಕೂಲಿಗಳನ್ನು ಆಶ್ರಯಿಸದೆ ತಾವೇ ದುಡಿಯುತ್ತಾರೆ. ಅಲ್ಪ ಜಮೀನಿನಲ್ಲಿಯೇ ಲಾಭಗಳಿಸಿ ಸ್ವಾವಲಂಬಿಯಾಗಿರುವ ಇವರ ಕೃಷಿ ಕ್ರಮದ ಬಗ್ಗೆ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಿ: 97432 33162.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.